ಹಿಂದಿಯಲ್ಲಿ ಎಂಬಿಬಿಎಸ್‌ ಎಂಬುದು ಧೂರ್ತತನವೇ ಹೊರತು ಬೇರೇನಲ್ಲ

ರಾಜಾರಾಂ ತಲ್ಲೂರ

ವೈದ್ಯಕೀಯ ಶಿಕ್ಷಣ ಭಾರತೀಯ ಭಾಷೆಗಳಲ್ಲಿ ಬೇಕು ಎಂಬುದಕ್ಕೆ ಮೊದಲ ವಕೀಲಿಕೆ ನನ್ನದೇ ಇದೆ. ಈ ಬಗ್ಗೆ ಆರು ವರ್ಷಗಳ ಹಿಂದೆ, ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವರಲ್ಲಿ (ಆಗ ಡಾ. ಶರಣ ಪ್ರಕಾಶ್ ಪಾಟೀಲರು), ಸಮಾರಂಭವೊಂದರಲ್ಲಿ ಪ್ರಸ್ತಾಪಿಸಿದ್ದನ್ನು ಇಲ್ಲೇ ಹಿಂದೊಮ್ಮೆ ದಾಖಲಿಸಿದ್ದೆ.

ಈಗ ಮಧ್ಯಪ್ರದೇಶದಲ್ಲಿ, ಏಕಾಏಕಿ ಹಿಂದಿಯಲ್ಲಿ ಎಂಬಿಬಿಎಸ್ ಪಠ್ಯಪುಸ್ತಕಗಳು ಹೊರಬಂದಿರುವ ಬಗ್ಗೆ, ಹಿಂದಿ ಮಾಧ್ಯಮದಲ್ಲೇ ವೈದ್ಯಕೀಯ ಶಿಕ್ಷಣ ಆರಂಭಿಸಿರುವ ಬಗ್ಗೆ ವರದಿಗಳು ಬಂದಿವೆ. ಇದನ್ನು ರಾಜಭಾಷೆಯ “ಬುಲ್ಲಿಯಿಂಗ್” ಎಂಬುದಕ್ಕಿಂತ ಸೌಮ್ಯವಾದ ಪದದಿಂದ ಟೀಕಿಸುವುದು ಕಷ್ಟ.

ಕಳೆದ ಇಪ್ಪತ್ತು ವರ್ಷಗಳಿಂದ, ಭಾರತದ ಹತ್ತು ಪ್ರಮುಖ ಭಾಷೆಗಳಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದ ಸಂಗತಿಗಳ ಭಾಷಾಂತರ ಮತ್ತು ದಾಖಲೀಕರಣದಂತಹ ಚಟುವಟಿಕೆಗಳಲ್ಲೇ ತೊಡಗಿಕೊಂಡಿರುವ ನನಗೆ, ಈ ಎಲ್ಲ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದ “ಶಬ್ದಭಂಡಾರ” ಎಷ್ಟು ಶ್ರೀಮಂತ, ತಳಮಟ್ಟದ ವಾಸ್ತವಗಳೇನು ಎಂಬುದರ ಸ್ಥೂಲ ಚಿತ್ರಣ ಇದೆ. ಜೊತೆಗೆ, ಈ ಎಲ್ಲ ಭಾಷೆಗಳ ನೂರಕ್ಕೂ ಮಿಕ್ಕಿ ಅನುಭವಿ, ಸಮರ್ಥ ಅನುವಾದಕರ ಜೊತೆ ಸತತ ಸಂಪರ್ಕ-ಸಂವಹನದಲ್ಲಿ-ದಾಖಲೀಕರಣದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ, ಭಾರತೀಯ ಭಾಷೆಗಳನ್ನು ವೈದ್ಯಕೀಯ ಕ್ಷೇತ್ರಕ್ಕೆ ಅಳವಡಿಸುವಲ್ಲಿ ಇರುವ ಸವಾಲುಗಳ ಚಿತ್ರಣವೂ (ಕನ್ನಡದ ಮಟ್ಟಿಗೆ ಅನುಭವವೂ) ಸುಮಾರಿಗೆ ಚೆನ್ನಾಗಿದೆ.

ಬುದ್ಧಿ ಶುದ್ಧ ಇರುವ ಯಾರೇ ಆದರೂ ಇಂತಹದೊಂದು ಪ್ರಯತ್ನ ಮಾಡಲಾರಂಭಿಸುವಾಗ, ಭಾರತದ ಎಲ್ಲ ಪ್ರಮುಖ ಭಾಷೆಗಳನ್ನು (ಕನಿಷ್ಠ 10 ಪ್ರಮುಖ ಭಾಷೆಗಳು) ಒಟ್ಟು ಸೇರಿಸಿ, ಸಮಾನಾಂತರವಾಗಿ ಕಾರ್ಯಾರಂಭ ಮಾಡಬೇಕಿತ್ತು. ಈ ಭಾಷೆಗಳು ಎದುರಿಸಬಹುದಾದ ಸಮಾನ ಮತ್ತು ಭಾಷಾ ನಿರ್ದಿಷ್ಟವಾದ ಸವಾಲುಗಳನ್ನು ಗುರುತಿಸಿ, ಸಮಗ್ರವಾಗಿ ಕಾರ್ಯಾಚರಿಸಲು ಕಾಲಬದ್ಧವಾದ ಯೋಜನೆಯೊಂದನ್ನು ರೂಪಿಸಬೇಕಿತ್ತು.

ವೈದ್ಯವಿಜ್ಞಾನಕ್ಕೆ ಭಾರತೀಯ ಭಾಷೆಗಳಲ್ಲಿ ಇರುವ ದೊಡ್ಡ ಸವಾಲುಗಳಲ್ಲಿ ಮುಖ್ಯವಾದುದು ಎಂದರೆ ಇಂಗ್ಲೀಷಿನಲ್ಲಿ ಈಗಾಗಲೇ ಇರುವ ಆರೋಗ್ಯ ಸಂಬಂಧಿ ಪದಗಳ “ಸ್ಟಾಂಡರ್ಡೈಸೇಷನ್” ಭಾರತೀಯ ಭಾಷೆಗಳಲ್ಲಿ ಇಲ್ಲದಿರುವುದು. ಇದು ಮತ್ತು ಇಂತಹ ಅಸಂಖ್ಯ ಮೂಲಭೂತವಾದ, ಸವಾಲಾಗಬಹುದಾದ ಅಂಶಗಳನ್ನು ಗುರುತಿಸಿ ಸರಿಪಡಿಸಿಕೊಳ್ಳದೇ, ವೈದ್ಯಕೀಯ ವಿಜ್ಞಾನಕ್ಕೆ ಭಾರತೀಯ ಭಾಷೆಗಳನ್ನು ತುರುಕಿದರೆ, ನಾವು ಭಾಷೆ ಮತ್ತು ವೈದ್ಯಕೀಯ ಕೌಶಲಗಳೆರಡನ್ನೂ ಮುಂದಿನ ತಲೆಮಾರಿನ ಹೊತ್ತಿಗೆ ಕಳೆದುಕೊಳ್ಳುವುದು ಖಚಿತ.

ಭಾಷೆಗಳನ್ನು, ಆ ಮೂಲಕ ದೇಶದ ವೈವಿದ್ಯಮಯ ಸಾಮಾಜಿಕ ಸಾಂಸ್ಕೃತಿಕ ಬದುಕನ್ನು ಈ ರೀತಿಯ ರಾಜಕೀಯ ಆಕ್ರಮಣಗಳಿಂದ ಕಾಪಾಡಿಕೊಳ್ಳುವುದಕ್ಕೂ ಒಂದು ಸ್ಪಷ್ಟ ಕಾರ್ಯಯೋಜನೆ ಅಗತ್ಯವಿದೆ.

Donate Janashakthi Media

Leave a Reply

Your email address will not be published. Required fields are marked *