ಬೆಂಗಳೂರು: ದೇಶದ ರಕ್ಷಣಾ ಪಡೆಯ ಭೂಸೇನೆ, ವಾಯುಪಡೆ ಮತ್ತು ನೌಕಪಡೆಯಲ್ಲಿ ಲಕ್ಷಾಂತರ ಉದ್ಯೋಗಗಳಿದ್ದರೂ ಅಲ್ಲಿನ ಎಲ್ಲ ಪರೀಕ್ಷೆಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲೇ ನಡೆಯುತ್ತವೆ. ದೇಶದ ಉಳಿದ ಭಾಷೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇದೀಗ ‘ಅಗ್ನಿವೀರ’ರಾಗಲು ಕೂಡ ಅಂಗ್ಲ, ಹಿಂದಿಯಲ್ಲಿ ಇರುವ ಪ್ರಶ್ನೆಪತ್ರಿಕೆಗಳು ಕನ್ನಡಿಗರ ಸೇನೆ ಸೇರ್ಪಡೆಗೆ ಅಡ್ಡಿಯಾಗಿವೆ.
ಭಾರತೀಯ ಸೈನ್ಯದ ಮೂರು ಪಡೆಗಳ ಉನ್ನತ ಅಧಿಕಾರಿಯ ಸ್ಥಾನಗಳಿಗೆ ಏರಬೇಕಾದರೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತರಬೇತಿಯನ್ನು ಪೂರ್ಣಗೊಳಿಸಬೇಕು. ಎನ್‌ಡಿಎ ಪ್ರವೇಶ ಪರೀಕ್ಷೆ ಪದವಿ ಪೂರ್ವ ಅಥವಾ ತತ್ಸಮಾನ ವಿದ್ಯಾರ್ಹತೆಯ ಆಧಾರದಲ್ಲಿ ನಡೆದರೆ, ಐಎಂಎಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.
ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಆಧಾರದಲ್ಲಿ ಸೈನ್ಯ ಪ್ರವೇಶಿಸಿ ಗರಿಷ್ಠ 14 ವರ್ಷ ಸೇವೆ ಸಲ್ಲಿಸಬಹುದು. ಕಾಯಂ ನೇಮಕಾತಿ ಬಯಸಿದರೆ ಅದಕ್ಕೂ ಅವಕಾಶ ಇದೆ. ಆದರೆ ಭಾರತದ ಸೇನೆಯಲ್ಲಿ ಸೇನಾಧಿಕಾರಿಗಳಾಗಲು ಇರುವ ಎಲ್ಲ ಅರ್ಹತಾ ಪರೀಕ್ಷೆಗಳು ಅಂಗ್ಲ ಅಥವಾ ಹಿಂದಿ ಭಾಷೆಯಲ್ಲೇ ನಡೆಯುತ್ತವೆ.
ಸೈನ್ಯದಲ್ಲಿ ಕೆಳ ಹಂತದಲ್ಲಿನ ಸೈನಿಕರು, ತಾಂತ್ರಿಕ, ತಾಂತ್ರಿಕೇತರ ನೇಮಕಾತಿ ನಡೆಸಲು ‘ಅಗ್ನಿಪಥ’ ಯೋಜನೆಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದಾಗ ಪ್ರಾದೇಶಿಕ ಭಾಷೆಗಳಲ್ಲಿಯೂ ಪರೀಕ್ಷೆ ಬರೆಯುವ ಅವಕಾಶ ಸಿಗಲಿದೆ ಎಂದು ಗ್ರಾಮೀಣ ಭಾಗದ ಅಭ್ಯರ್ಥಿಗಳು ತಮ್ಮ ತಮ್ಮ ಭಾಷೆಗಳಲ್ಲಿ ಪರೀಕ್ಷೆ ಬರೆದು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಸೇರ್ಪಡೆ ಆಗಬಹುದು ಎಂಬ ನಿರೀಕ್ಷೆ ಹುಟ್ಟಿತ್ತು. ಆದರೆ ಇತ್ತೀಚೆಗೆ ನಡೆದ ಅಗ್ನಿಪಥ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲೆ ನಡೆದಿವೆ.
ಎಸ್‌ಎಸ್‌ಎಲ್‌ಸಿ ಅಥವಾ ಪದವಿ ಪೂರ್ವ ವಿದ್ಯಾರ್ಹತೆಯ ಮಾನದಂಡದಲ್ಲಿ ಅಗ್ನಿಪಥ ಯೋಜನೆ ಜಾರಿಗೊಂಡಿದೆ. ಕನ್ನಡ ಸೇರಿದಂತೆ ಭಾಷಾ ಮಾಧ್ಯಮದಲ್ಲಿ ಅಧ್ಯಯನ ನಡೆಸಿರುವ ಅಭ್ಯರ್ಥಿಗಳಿಗೆ ಹಿಂದಿ ಅಥವಾ ಇಂಗ್ಲೀಷ್‌ನ ಹಿಡಿತ ಇರುವುದಿಲ್ಲ. ಇದರಿಂದಾಗಿ ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದರೂ ಲಿಖಿತ ಪರೀಕ್ಷೆಯಲ್ಲಿ ಅನುತ್ತಿರ್ಣಗೊಳ್ಳುವ ಸಾಧ್ಯತೆಯಿದೆ.
ರಕ್ಷಣಾ ಇಲಾಖೆಯ ಪ್ರಕಾರ ಸೇನೆಯ ಎಲ್ಲ ನೇಮಕಾತಿಗಳು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲೇ ನಡೆಯುತ್ತದೆ. ಸೈನ್ಯ ಸೇರಿದ ಮೇಲೆ ವಿವಿಧ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಸ್ಪಷ್ಟಸಂವಹನ ಅಗತ್ಯ. ನಮ್ಮಲ್ಲಿ ಹಿರಿಯ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಸೈನಿಕರ ಜೊತೆ ಹಿಂದಿಯಲ್ಲೇ ಸಂವಹನ ನಡೆಸುತ್ತಾರೆ. ಹಾಗೆಯೇ ಬ್ಯಾಂಕಿಂಗ್, ರೈಲ್ವೇ ರೀತಿ ನಮ್ಮದು ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಸಂಸ್ಥೆಯಲ್ಲ. ಆದ್ದರಿಂದ ನಾವು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಸಂವಹನ ನಡೆಸಿದರೆ ಜನಸಾಮಾನ್ಯರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾರೆ.
ಸೈನ್ಯದ ಎನ್‌ಡಿಎ ಪರೀಕ್ಷೆ ತಯಾರಿಗೆ ಖಾಸಗಿ ತರಬೇತಿ ಕೇಂದ್ರಗಳು ಹಲವು ಇವೆ. ಆದರೆ ಈಗ ‘ಅಗ್ನಿಪಥ’ ಯೋಜನೆ ಜಾರಿಯಿಂದಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಖಾಸಗಿ ಕೇಂದ್ರಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಆನ್‌ಲೈನ್ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಈಗಾಗಲೇ ಕೆಲವು ಕಡೆಗಳಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಇಂಗ್ಲಿಷ್, ಹಿಂದಿಯಲ್ಲಿ ಪರೀಕ್ಷೆ ಬರೆಯುವ ತರಬೇತಿ ನೀಡಲಾಗುತ್ತಿದೆ. ಸಾವಿರಾರು ರೂಪಾಯಿ ತೆತ್ತು ವಿದ್ಯಾರ್ಥಿಗಳು ತರಗತಿಗೆ ಸೇರಿರುತ್ತಾರೆ. ಆದರೆ, ಅವರ ಮಾತೃ ಭಾಷೆ ಆಯ್ಕೆಯಲ್ಲಿ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ.