‘ಹಿಂದಿ-ಭಾರತ’ದ ಕರೆ ಈಗೇಕೆ? : ಡಾ.ಜಿ.ಎನ್.ದೇವಿ

ಸಂಗ್ರಹಾನುವಾದ: ಟಿ.ಸುರೇಂದ್ರ ರಾವ್

ರಾಜ್ಯಗಳ ನಾಗರಿಕರು ಪರಸ್ಪರ ಮಾತಾಡುವಾಗ ಅದು ಭಾರತದ ಭಾಷೆಯಲ್ಲಿರಬೇಕು, ಹಿಂದಿಯನ್ನು ಇಂಗ್ಲಿಷಿಗೆ ಪರ್ಯಾಯವಾಗಿ ಸ್ವೀಕರಿಸಲಾಗಿದೆ  ಎಂದು ಭಾರತದ ಗೃಹಸಚಿವರು ಹೇಳಿರುವುದಾಗಿ ವರದಿಯಾಗಿದೆ. ಅಮಿತ್ ಶಾ ಹಠಾತ್ತಾಗಿ ಈ ಹಿಂದಿ-ಭಾರತ ಘೋಷಣೆ ನೀಡಿರುವುದೇಕೆ? ಇದನ್ನು ವಿಶ್ಲೇಷಿಸಿರುವ ಪ್ರಖಾತ ಭಾಷಾಶಾಸ್ತ್ರಜ್ಷ, ಮತ್ತು ‘ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯ’ (ಭಾರತದ ಜನತಾ ಭಾಷಾ ಸರ್ವೆ)ಯ ಮುಖ್ಯ ಸಂಪಾದಕರೂ  ಆಗಿರುವ ಡಾ.ಜಿ.ಎನ್.ದೇವಿಯವರು ಇದು ಬಿಜೆಪಿಯ ಬಹುಸಂಖ್ಯಾತವಾದೀ ಲೆಕ್ಕಾಚಾರದ ಭಾಗವಂತೂ ಆಗಿರಲಾರದು ಎನ್ನುತ್ತಾರೆ. ಏಕೆಂದರೆ 2011 ರ ಜನಗಣತಿಯ ಪ್ರಕಾರ, ಒಟ್ಟು ಜನಸಂಖ್ಯೆಯ ಶೇಕಡಾ 69 ರಷ್ಟು ಜನರು ಹಿಂದಿಯೇತರರಾಗಿದ್ದಾರೆ. ಬಹುಶಃ ಮುಂಬರುವ 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಭಾಷಾಂಧತೆಯನ್ನು ಬಿತ್ತುವ ಮೂಲಕ ಅಧಿಕಾರ ಹಿಡಿಯಬೇಕೆಂಬ ತಂತ್ರದ ಭಾಗವಾಗಿರಬಹುದು  ಇದು ಎಂದು ‘ದಿ ಹಿಂದು’ ಪತ್ರಿಕೆಯಲ್ಲಿ ಎಪ್ರಿಲ್ 14ರಂದು ಪ್ರಕಟವಾಗಿರುವ ಲೇಖನದಲ್ಲಿ ಅವರು ವಿಶ್ಲೇಷಿಸುತ್ತಾರೆ.

ಪ್ರಾಚೀನ ಕಾಲದಿಂದಲೂ ಭಾಷಾ ಭಿನ್ನತೆಯ ಬಗ್ಗೆ ಸೂಕ್ಷ್ಮ ಸಂವೇದನೆ ದ್ರಾವಿಡ ಸ್ವಂತಿಕೆಯ ಮಾತ್ರವಲ್ಲ, ಪ್ರತಿಯೊಂದು ಭಾರತೀಯ ಭಾಷೆಯ ಸಂದರ್ಭದಲ್ಲೂ ಸ್ವಂತಿಕೆಯ ಒಂದು ಗುರುತಾಗಿದೆ. ನಿಜ, ಇದನ್ನು ಕುರಿತಂತೆ 2000 ವರ್ಷಗಳ ಹಿಂದಿನ ತಮಿಳು ಕೃತಿ ‘ತೋಳ್ಕಪ್ಪಿಯಂ’ ಬಗ್ಗೆಯಾಗಲೀ, ಒಂಭತ್ತು ಶತಮಾನಗಳ ಹಿಂದಿನ ಗುಜರಾತದ ಕೃತಿ ‘ದೇಸೀನಾಮಮಾಲಾ’ದ ಬಗ್ಗೆಯಾಗಲೀ ಈಗಿನ ಭಾರತೀಯನೊಬ್ಬನಿಗೆ ಗೊತ್ತಿರಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಭಾರತ ಸರ್ಕಾರದ ಗೃಹ ಸಚಿವರಾಗಿರುವವರಿಗೆ ಏಳು ದಶಕಗಳ ಹಿಂದೆ ನಮ್ಮ ಗಣರಾಜ್ಯ ಅಂಗೀಕರಿಸಿದ ‘ಸಂವಿಧಾನ’ದ ಬಗ್ಗೆ ತಿಳಿದಿರಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆಯೇ?

ನಮ್ಮ ಸಂವಿಧಾನವು ಎರಡು ಅಂಶಗಳನ್ನು ಬಹಳ ಸ್ಪಷ್ಟವಾಗಿ ನಿರೂಪಿಸಿದೆ. ಒಂದು, ‘ಭಾರತವು ರಾಜ್ಯಗಳ ಒಂದು ಸಂಘ’ ಮತ್ತು ಎರಡನೆಯದು, ರಾಜ್ಯಗಳ ನಡುವೆ ವ್ಯವಹರಿಸಲು ಸಂವಿಧಾನ ಅಂಗೀಕರಿಸುವಾಗ ಬಳಕೆಯಲ್ಲಿದ್ದ ಭಾಷೆಯು ಅಧಿಕೃತ ಭಾಷೆಯಾಗಬೇಕು. ಈಗಿರುವ ಇಂಗ್ಲಿಷ್ ಭಾಷೆಯ ಸ್ಥಾನವನ್ನು ಹಿಂದಿ ಭಾಷೆಯು ಅಲಂಕರಿಸಬೇಕಾದರೆ ‘ಎರಡು ಅಥವಾ ಮೂರು ರಾಜ್ಯಗಳು ಆ ಬದಲಾವಣೆಗೆ ಒಪ್ಪಬೇಕು’ ಎಂಬ ಕಟ್ಟಳೆಯನ್ನು ಭಾಷೆಗೆ ಸಂಬಂಧಪಟ್ಟ ಪರಿಚ್ಛೇದಗಳು ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲದಂತೆ ಹೇಳಿವೆ. ಭಾಷೆಗೆ ಸಂಬಂಧಪಟ್ಟ ನಿಬಂಧನೆಗಳನ್ನು ರಕ್ಷಿಸಲು ಮೂವತ್ತು ಸದಸ್ಯರ ಸಮಿತಿಯೊಂದನ್ನು ರಚಿಸಬೇಕು, ಅದರಲ್ಲಿ ಇಪ್ಪತ್ತು ಸದಸ್ಯರು ಸಂಸತ್ತಿನಿಂದ ಮತ್ತು ಹತ್ತು ಜನರು ರಾಜ್ಯ ವಿಧಾನಸಭೆಗಳಿಂದ ಇರಬೇಕು.

ಭಾಷೆಯನ್ನು ಒಂದು ವಿಷಯವಾಗಿ ಎರಡು ಸಚಿವಾಲಯಗಳ – ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಗೃಹ ಸಚಿವಾಲಯಗಳ – ನಡುವೆ ಹಂಚಿರುವುದನ್ನೂ ವಿಶದಪಡಿಸಿದ ಸಂವಿಧಾನವು ಆ ಸಮಿತಿಯ ಕಾರ್ಯಭಾರ ಹಾಗೂ ವ್ಯಾಪ್ತಿಯನ್ನು ನಿಗದಿಪಡಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಭಾಷೆಗೆ ಸಂಬಂಧಪಟ್ಟಂತೆ ಶಿಕ್ಷಣ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡಬೇಕು; ಹಾಗೆಯೇ ಗೃಹ ಸಚಿವಾಲಯವು ‘ಸಂಘ’ದೊಂದಿಗೆ ರಾಜ್ಯಗಳ ಸಂಬಂಧಗಳನ್ನು ರಕ್ಷಿಸುವ, ಭಾಷಾ ಅಲ್ಪಸಂಖ್ಯಾತರ ಭಾಷಿಕ ಹಕ್ಕುಗಳನ್ನು ಕಾಪಾಡುವ ಮತ್ತು ಹಿಂದಿಯನ್ನು ಉತ್ತೇಜಿಸುವ ಕಾರ್ಯನಿರ್ವಹಿಸಬೇಕು. ಹೀಗೆ ಕಾರ್ಯಭಾರವನ್ನು ಹಂಚುವಾಗ ‘ಇತರ ಭಾಷೆಗಳೊಂದಿಗೆ ಹಸ್ತಕ್ಷೇಪವಿಲ್ಲದೆ’ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ.

ಭಾಷಾ ಬೆಳವಣಿಗೆಯ ಮಾಹಿತಿ

ಗೃಹ ಸಚಿವಾಲಯ ಮತ್ತು ಹಿಂದಿ ಭಾಷಾ ಸಮಿತಿಯ ಮುಂದೆ ಎರಡು ಬಹುಮಹತ್ವದ ಪ್ರಶ್ನೆಗಳಿವೆ: ಕಳೆದ ಏಳು ದಶಕಗಳಲ್ಲಿ ಹಿಂದಿ ಯಾವುದೇ ಬೆಳವಣಿಗೆಯನ್ನು ಕಂಡಿದೆಯೇ? ಕಂಡಿದರೆ, ಈ ಬೆಳವಣಿಗೆ ಇತರ ಭಾಷೆಗಳ ಬೆಳವಣಿಗೆಯಲ್ಲಿ ಹಸ್ತಕ್ಷೇಪ ಮಾಡಿದೆಯೇ? ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ಜನಗಣತಿ ಮಾಡುವಾಗ ಜನರ ಆಡುಭಾಷೆಯ ವಿವರಗಳನ್ನು ಪಡೆಯಲಾಗುತ್ತದೆ. 1991, 2001 ಮತ್ತು 2011 ಹೀಗೆ ಮೂರು ಜನಗಣತಿಯನ್ನು ಪರಿಗಣಿಸಿದಾಗ, ಹಿಂದಿ ಭಾಷೆಯನ್ನು ಹೊರತುಪಡಿಸಿದರೆ ಉಳಿದ ಪ್ರಮುಖ ಭಾಷೆಗಳಾದ ಬಾಂಗ್ಲಾ, ತೆಲುಗು, ಮರಾಠಿ, ಮುಂತಾದವುಗಳು ಅವುಗಳ ಜನಸಂಖ್ಯಾ ಬೆಳವಣಿಗೆಗೆ ಹೋಲಿಸಿದಾಗ ಇಳಿಮುಖ ಅನುಭವಿಸಿವೆ. ದೇಶದಲ್ಲಿ ಈಗ ಬದುಕುಳಿದಿರುವ ಅತ್ಯಂತ ಪ್ರಾಚೀನ ಭಾಷೆಯಾಗಿರುವ ತಮಿಳು ಮಾತಾಡುವವರ ಪ್ರಮಾಣ ಕೂಡ ಇಳಿಮುಖದಲ್ಲಿದೆ. 2011 ರ ಜನಗಣತಿಯ ಪ್ರಕಾರ ಕೈಗೆತ್ತಿಕೊಂಡರೆ, ಹಿಂದಿ ಭಾಷಿಕರ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ 43.63%. 1971ರಲ್ಲಿ ಇದು 36.99% ಇತ್ತು. ಹಿಂದಿಯ ನಂತರ ಅತಿ ಹೆಚ್ಚು ಪ್ರಮಾಣದಲ್ಲಿರುವ ಬಾಂಗ್ಲಾ ಭಾಷಿಕರ ಸಂಖ್ಯೆ 1991ರಲ್ಲಿ 8.3% ಇದ್ದದ್ದು, 2001ರಲ್ಲಿ 8.11%ಕ್ಕೆ ಮತ್ತು 2011ರಲ್ಲಿ 8.03%ಕ್ಕೆ ಇಳಿಯಿತು. ಮೂರನೇ ಸ್ಥಾನದಲ್ಲಿರುವ ತೆಲುಗಿನದ್ದೂ ಮತ್ತು ಇತರ ಭಾಷೆಗಳದ್ದೂ ಇದೇ ಅನುಭವ. ದೇಶದ ಅತೀ ಪ್ರಾಚೀನ ಆಡುಭಾಷೆ ತಮಿಳಿಗಾದರೂ ಗೃಹ ಸಚಿವಾಲಯ ಹೆಚ್ಚಿನ ಗಮನ ನೀಡಬೇಕಾಗಿತ್ತು. ಜನಗಣತಿ ಪ್ರಕಾರ ತಮಿಳು ಭಾಷಿಕರ ಪ್ರಮಾಣ 6.32%(1991), 5.91%(2001) ಮತ್ತು 5.7%(2011). ಸಂವಿಧಾನದ ಎಂಟನೇ ಪರಿಶಿಷ್ಟ(ಷೆಡ್ಯೂಲ್)ದಲ್ಲಿರುವ ಭಾಷೆಗಳ ಪರಿಸ್ಥಿತಿ – ಹಿಂದಿ ಮತ್ತು ಸಂಸ್ಕೃತವನ್ನು ಮತ್ತು ಬಹುಶಃ ಸ್ವಲ್ಪವೇ ಮಟ್ಟಿಗೆ ಗುಜರಾತಿಯನ್ನು ಹೊರತುಪಡಿಸಿದರೆ – ಹದಗೆಟ್ಟಿರುವುದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಹಿಂದಿ ಭಾಷಾ ಉತ್ತೇಜನಕ್ಕಾಗಿ ಇರುವ ಸಂಸದೀಯ ಸಮಿತಿಯು ಹಿಂದಿಯನ್ನು ಹೊರತುಪಡಿಸಿ ಇತರ ಭಾರತೀಯ ಭಾಷೆಗಳ ಅವನತಿಯ ಕುರಿತು ಆತಂಕ ವ್ಯಕ್ತಪಡಿಸಬೇಕಿತ್ತು. ಒಂಭತ್ತನೇ ಶತಮಾನಕ್ಕೆ ಮುಂಚೆಯೇ ಒಂದು ಜೀವಂತ ಭಾಷೆಯಾಗಿರದ ಸಂಸ್ಕೃತ ಭಾಷೆಯ ಬೆಳವಣಿಗೆಯ ಕೊರತೆಯ ಕುರಿತು ಕೂಡ ಸಮಿತಿ ಕಾಳಜಿ ವಹಿಸಿಲ್ಲ.

ಹಿಂದಿ ಬೆಳವಣಿಗೆಯ ಕತೆಯೂ ಮಿಥ್ಯೆ

ಉಳಿದೆಲ್ಲಾ ಭಾಷೆಗಳು ಅವನತಿ ಹೊಂದುತ್ತಿರಬೇಕಾದರೆ, ಹಿಂದಿ ಭಾಷೆ ಮಾತ್ರ ಹೇಗೆ ಬೆಳೆಯುತ್ತಿದೆ ಎಂಬ ಸಂಶಯ ಸಹಜವಾಗಿಯೇ ಹುಟ್ಟುತ್ತದೆ. 2011 ರ ಜನಗಣತಿ ಪ್ರಕಾರ 52.83 ಕೋಟಿ ಜನರು ಹಿಂದಿ ಮಾತನಾಡುತ್ತಾರೆ. ಈ ಹಿಂದಿ ಮಾತನಾಡುವವರ ಸಂಖ್ಯೆಯಲ್ಲಿ ‘ಹಿಂದಿ’ ಭಾಷಿಕರು ಮಾತ್ರವಲ್ಲ, ಭೋಜ್‌ಪುರಿ, ಪವಾರಿ, ಮುಂತಾದ 50 ಭಾಷೆಗಳನ್ನಾಡುವವರನ್ನೂ ಸೇರಿಸಲಾಗಿದೆ. ಭೋಜ್‌ಪುರೀ ಭಾಷಿಕರ ಸಂಖ್ಯೆ 5 ಕೋಟಿ ಮಾತ್ರವಲ್ಲ, ಸಿನೆಮಾ, ಸಾಹಿತ್ಯ, ಪತ್ರಿಕೆಗಳು, ಹಾಡುಗಳು ಮಂತಾದವುಗಳಲ್ಲಿ ಅದು ಹೆಚ್ಚು-ಹೆಚ್ಚಾಗಿ ಕಾಣಿಸುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಛತ್ತೀಸ್‌ಘರ್, ರಾಜಾಸ್ತಾನ್ ಮತ್ತು ಝಾರ್ಖಂಡ್ ರಾಜ್ಯಗಳ ಭಾಷೆಗಳೂ ಅವುಗಳದ್ದೇ ಆದ ಪ್ರತ್ಯೇಕ ಅಸ್ತಿತ್ವ ಹೊಂದಿದ್ದು ಕೋಟ್ಯಾಂತರ ಸಂಖ್ಯೆಯ ಭಾಷಿಕರು ಇದ್ದಾರೆ. ಅವರನ್ನು ‘ಹಿಂದಿ ಭಾಷಿಕ’ರೆಂದು ಪರಿಗಣಿಸಲಾಗಿದೆ.

ಆದ್ದರಿಂದ ಹಿಂದಿಯ ಬೆಳವಣಿಗೆಯ ಕತೆಯೂ ಒಂದು ಮಿಥ್ಯೆಯೇ. ಜನಗಣತಿಯಲ್ಲಿ ಈ ಭಾಷೆಗಳನ್ನು ‘ಹಿಂದಿ’ ಪಟ್ಟಿಯಲ್ಲಿ ಸೇರಿಸದೇ ಇದ್ದಿದ್ದರೆ, ನಿಜವಾದ ಹಿಂದಿ ಭಾಷಿಕರಾಗಿ ಉಳಿಯುವುದು ಕೇವಲ 39 ಕೋಟಿಯಷ್ಟೆ, ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಕೇವಲ 32%! ಹಿಂದಿ ಭಾಷಿಕರ ಸಂಖ್ಯೆಯ ಬಗ್ಗೆ ಸಂಸದೀಯ ಸಮಿತಿಯು ಹೆಚ್ಚು ವಾಸ್ತವಿಕ ಅಂಶಗಳನ್ನು ಪರಿಗಣಿಸಲು ಸಾಧ್ಯವಾಗಬೇಕಿತ್ತು.

ಇತರ ಭಾಷೆಗಳೂ ಬೆಳಗುತ್ತಿವೆ

ಇತರ ಸಣ್ಣ ದೊಡ್ಡ ಭಾಷೆಗಳಂತೆಯೇ ಹಿಂದಿ ಕೂಡ ಒಂದು ಸುಂದರ ಮತ್ತು ಶ್ರೀಮಂತ ಭಾಷೆ ಎನ್ನುವ ಬಗ್ಗೆ ಯಾರದ್ದೂ ತಕರಾರಿಲ್ಲ. ಹಿಂದಿ ಸಿನಿಮಾಗಳು ದೇಶಕ್ಕೆ ಒಳ್ಳೆಯ ಹೆಸರು ಹಾಗೂ ಹಣವನ್ನೂ ತಂದುಕೊಟ್ಟಿವೆ. ಆದರೆ ಸಂವಿಧಾನದ ಎಂಟನೇ ಪರಿಶಿಷ್ಟದಲ್ಲಿರುವ ಇತರ ಭಾಷೆಗಳಿಗಿಂತ ಹಿಂದಿ ಬಹಳ ಇತ್ತೀಚಿನದು ಎಂಬುದು ಕೂಡ ನಿಜ.

ನಿಜ ಹೇಳಬೇಕೆಂದರೆ, ತಮಿಳು, ಕನ್ನಡ, ಕಾಶ್ಮೀರಿ, ಮರಾಠಿ, ಒರಿಯಾ, ಸಿಂಧಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳು ಇನ್ನೂ ದೀರ್ಘಕಾಲದ ಇತಿಹಾಸ ಹೊಂದಿವೆ. ಜ್ಞಾನವ್ಯಾಪ್ತಿಯಲ್ಲಿ ಕೂಡ ತಮಿಳು, ಕನ್ನಡ, ಬಾಂಗ್ಲಾ ಹಾಗೂ ಮರಾಠಿ ಭಾಷೆಗಳು ಹಿಂದಿ ಭಾಷೆಗಿಂತ ಹೆಚ್ಚು ಬೆಳಗುತ್ತವೆ. ಯಾವುದೇ ಭಾಷೆ ನಿಧಾನವಾಗಿ ವಿಕಾಸಗೊಳ್ಳುತ್ತದೆ, ಅದನ್ನು ಒಂದು ಸುಗ್ರೀವಾಜ್ಞೆ ಹೊರಡಿಸಿ ಬಲವಂತವಾಗಿ ಬೆಳೆಸಲು ಆಗುವುದಿಲ್ಲ.

ಕಳಪೆ ಅರ್ಥಶಾಸ್ತ್ರ, ಅಸಂಬದ್ಧ ಭಾಷಾಶಾಸ್ತ್ರ

ಹಿಂದಿ ಭಾಷೆಯ ಇತಿಹಾಸ, ಭಾರತದ ಬಹುಭಾಷಾ ಪರಂಪರೆ, ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ವಿವಿಧ ರಾಜ್ಯಗಳಲ್ಲಿನ ಭಾಷಾ ಸೂಕ್ಷö್ಮತೆ ಹಾಗೂ ಸಂವೇದನೆಗಳು ಸಂಸದೀಯ ಸಮಿತಿ ಮತ್ತು ಅಧಿಕೃತ ಭಾಷಾ ಸಮಿತಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕಿತ್ತು. ಭಾಷಾ ವಾಸ್ತವತೆಯನ್ನು ಈ ಸಮಿತಿಗಳು ಒಪ್ಪುವಂತೆ ಮಾಡಬೇಕಿತ್ತು. ನಿಜ ಸ್ಥಿತಿ ಹೀಗಿರುವಾಗ, ಗೃಹ ಸಚಿವ ಅಮಿತ್ ಶಾ ಹಠಾತ್ತಾಗಿ ಹಿಂದಿ-ಭಾರತ ಎಂಬ ಘೋಷಣೆ ನೀಡುವ ಅಗತ್ಯವೇನಿತ್ತು? ಪ್ರಾಯಶಃ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತವೂ ಅಲ್ಲ, ಅಥವಾ ಭಾರತೀಯ ಜನತಾ ಪಕ್ಷದ ಹಿಂದಿ-ಹಿಂದು ರಾಷ್ಟ್ರೀಯತೆಯೂ ಅಲ್ಲ. ಹಾಗೂ ಅದು ಬಿಜೆಪಿಯ ಬಹುಸಂಖ್ಯಾತವಾದೀ ಪ್ರಜಾಪ್ರಭುತ್ವದ ಆಲೋಚನೆಯೂ ಆಗಿರಲಾರದು. ಏಕೆಂದರೆ 2011 ರ ಜನಗಣತಿಯು ಹೊರಹಾಕಿದ ಅಂಕಿಅಂಶಗಳ ಪ್ರಕಾರ 52 ಕೋಟಿ ಹಿಂದಿ ಭಾಷಿಕರು 121 ಕೋಟಿ ಒಟ್ಟು ಜನಸಂಖ್ಯೆಯಲ್ಲಿ ಭಾಷಾ ಬಹುಸಂಖ್ಯಾತರೂ ಅಲ್ಲ. ವಾಸ್ತವವಾಗಿ 2011 ರ ಜನಗಣತಿಯ ಪ್ರಕಾರವೇ ಒಟ್ಟು ಜನಸಂಖ್ಯೆಯ ಶೇಕಡಾ 69 ರಷ್ಟು ಜನರು ಹಿಂದಿಯೇತರರಾಗಿದ್ದಾರೆ.

ಸತ್ಯ ಸಂಗತಿ ಏನೆಂದರೆ ಭಾರತದ ಯುವಜನರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿರುವ ಹಿಂದಿ ಪ್ರದೇಶದ ಯುವಜನರ ಅತೃಪ್ತಿಗೆ ಮುಲಾಮು ಹಚ್ಚುವ ತಂತ್ರದ ಭಾಗವಾಗಿ ಅಮಿತ್ ಶಾ ಆ ನುಡಿಮುತ್ತುಗಳನ್ನು ಉದುರಿಸಿರಬೇಕು. ಮುಂಬರುವ 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಭಾಷಾಂಧತೆಯನ್ನು ಬಿತ್ತುವ ಮೂಲಕ ಅಧಿಕಾರ ಹಿಡಿಯಬೇಕೆಂಬ ದುರಾಸೆಯ ಭಾಗವಾಗಿದೆ ಅವರ ಮಾತುಗಳು. ಭಾರತದ ಸುಭದ್ರತೆಗೆ ಪಾಕಿಸ್ತಾನ ಅಪಾಯ ಎಂದು ಬಿಂಬಿಸಿ ಹಿಂದೂಗಳ ಮತಪಡೆಯುವ ತಂತ್ರ ಈ ಬಾರಿ ಉಪಯೋಗಕ್ಕೆ ಬರಲಾರದು ಎಂದೆನಿಸಿರಬೇಕು. ಆದರೆ ಅವರಿಗೆ ಗೊತ್ತಿರಬೇಕು ಇಂಗ್ಲಿಷ್ ಭಾಷೆಯ ವಿರುದ್ಧ ದೇಶವಿರೋಧಿ ಭಾವನೆಗಳನ್ನು ಸೃಷ್ಟಿಸಿ ಹಿಂದಿ ಭಾಷಿಕರನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯುವ ತಂತ್ರ ಕೂಡ ಫಲಿಸಲಾರದು. ಅದೊಂದು ತೀರ ಕಳಪೆಯ ಅರ್ಥಶಾಸ್ತ್ರವಾಗುತ್ತದೆ ಹಾಗೂ ಅಸಂಗತ ಭಾಷಾಶಾಸ್ತ್ರವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದು ಒಕ್ಕೂಟ ವಿರೋಧಿ ರಾಜಕೀಯವಾಗುತ್ತದೆ. ಭಾರತಕ್ಕೆ ಇವೆಲ್ಲಾ ಬೇಕೇನು?

ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

Donate Janashakthi Media

Leave a Reply

Your email address will not be published. Required fields are marked *