ಹಿಜಾಬ್ ಪ್ರಕರಣ: ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ತಾರಕ್ಕೇರಿದ್ದು, ಹಿಜಾಬ್ ನಿಷೇಧವನ್ನು  ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟಿನ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿರುವ ಪ್ರತ್ಯೇಕ 6 ರಿಟ್ ಅರ್ಜಿಗಳು ಹಾಗೂ 18 ಮಧ್ಯಂತರ ಅರ್ಜಿಗಳ ವಿಚಾರಣೆ ಇಂದು ಮಧ್ಯಾಹ್ನ ಮುಂದುವರೆಯಿತು.

ಇಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ತಮ್ಮ ವಾದ ಮಂಡಿಸಿದರು. ದೇಶ-ವಿದೇಶಗಳ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಕಾಮತ್ ವಾದ ಮಂಡಿಸಿದ್ದು ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೇಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ ಮತ್ತೆ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ವಿಚಾರಣೆಯಲ್ಲಿ ವಾದಿಸಲಾದ ಕೆಲ ಪ್ರಮುಖ ಅಂಶಗಳು

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ವಿಚಾರಣೆ ಹೈಕೋರ್ಟ್​ನಲ್ಲಿ ಇಂದು ಮುಂದುವರೆಯಿತು. ಈ ಸಂದರ್ಭದಲ್ಲಿ ಇನ್ನೂ ಕೆಲ ವಕೀಲರಿಂದ ವಾದಮಂಡನೆಗೆ ಅವಕಾಶಕ್ಕೆ ಮನವಿ ಮಾಡಿಕೊಂಡರು. ಉರ್ದು ಶಾಲೆಗಳಿಗೂ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ಮೊಹಮ್ಮದ್ ತಾಹೀರ್ ವಾದ ಮಂಡಿಸಿದರು. ಅದಕ್ಕೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಅವರು ನೀವು ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿಲ್ಲ ಸೂಕ್ತ ಅರ್ಜಿ ಸಲ್ಲಿಸಲು ಸಲಹೆ ನೀಡಿದರು.

ತಾಹೀರ್ ವಾದಕ್ಕೆ ಅಡ್ವೊಕೆಟ್ ಜನರಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಅರ್ಜಿ ಸಲ್ಲಿಸದೇ ವಾದಮಂಡಿಸುವುದು ಸರಿಯಲ್ಲ ಎಂದರು. ಅರ್ಜಿ ಸಲ್ಲಿಸಿದರೆ ನಾವು ಅದಕ್ಕೆ ಆಕ್ಷೇಪ ಸಲ್ಲಿಸುತ್ತೇವೆ ಎಂದು ಎಜಿ ಪ್ರಭುಲಿಂಗ್ ನಾವದಗಿ ಹೇಳಿದ್ದಾರೆ.

ಮೂರನೇ ದಿನವೂ ಅರ್ಜಿದಾರ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಪಬ್ಲಿಕ್ ಆರ್ಡರ್ ಅಂದರೆ ಸಾರ್ವಜನಿಕ ಸುವ್ಯವಸ್ಥೆ ಎಂದೇ ಅರ್ಥ. ಕನ್ನಡದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದು ಶಬ್ದಕೋಶದಲ್ಲಿದೆ ಎಂದು ಹೇಳಿದ್ದಾರೆ. ಸರ್ಕಾರಿ ಆದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದಿದೆ. ಸಂವಿಧಾನದ 25(1) ವಿಧಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದಿದೆ. ಹೀಗಾಗಿ ಅದೇ ಅರ್ಥವನ್ನು ಸರ್ಕಾರಿ ಆದೇಶದಲ್ಲೂ ಅರ್ಥೈಸಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಯಲ್ಲಿ ಸಂವಿಧಾನ ಪ್ರಕಟಿಸಿದೆ. ಅದರಲ್ಲೂ ಪಬ್ಲಿಕ್ ಆರ್ಡರ್ ಎಂದರೆ ಸಾರ್ವಜನಿಕ ಸುವ್ಯವಸ್ಥೆ, ಸರ್ಕಾರಿ ಆದೇಶದಲ್ಲೂ ಅದನ್ನೇ ಹೇಳಲಾಗಿದೆ ಎಂದು ವಾದಿಸಿದರು.

ಸತೀ ಪದ್ದತಿ, ದೇವದಾಸಿ ಪದ್ದತಿ, ನರಬಲಿಯಂತಹ ಸಂಪ್ರದಾಯಗಳನ್ನು ನಿರ್ಬಂಧಿಸಬಹುದು. ಆದರೆ ಧರ್ಮದಲ್ಲಿ ಕಡ್ಡಾಯ ಆಚರಣೆಗಳನ್ನು ನಿರ್ಬಂಧಿಸಲಾಗದು. ಕೆಲ ವಕೀಲರು ಹಣೆಯಲ್ಲಿ ನಾಮ ಇಡುತ್ತಾರೆ, ಇದನ್ನು ಧಾರ್ಮಿಕ ಆಚರಣೆ ಎಂಬುದಕ್ಕಿಂತ ವೈಯಕ್ತಿಕ ವಿಶ್ವಾಸ ಎನ್ನಬಹುದು. ಸಂವಿಧಾನ ರಚನಾಕಾರರು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನೂ ಗುರುತಿಸಿದ್ದಾರೆ. ಶಿಕ್ಷಣದ ಕಾಯ್ದೆ ಆಧರಿಸಿ ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳಲಾಗದು ಎಂದು ದೇವದತ್ ಕಾಮತ್ ವಾದ ಮಂಡನೆ ಮಾಡಿದರು.

ದೇವದತ್‌ ಕಾಮತ್‌ ಅವರು ಕೆಲ ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿ ತಮ್ಮ ವಾದವನ್ನು ಮಂಡಿಸಿದರು.

ಹಿಜಾಬ್ ಧರಿಸಿದ ಒಂದೇ ಕಾರಣಕ್ಕೆ ತರಗತಿಯೊಳಗೆ ಬಿಡುತ್ತಿಲ್ಲ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ನಿಬಂಧನೆಗಳಿಲ್ಲ ಎನ್ನುವ ಕಾಮತ್​ರ ವಾದಕ್ಕೆ, ಆದರೆ, ಧಾರ್ಮಿಕ ಸ್ವಾತಂತ್ರ್ಯ 25(1) ಶುರುವಾಗುವುದೇ ನಿಬಂಧನೆಗಳಿಂದ  ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿದರು. ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ತೆರಳುತ್ತಾರೆ. ಹೆಚ್ಚುವರಿಯಾಗಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಮುಂದುವರಿಸಬಾರದು ಎಂದು ದೇವದತ್ ವಾದಮಂಡನೆ ಮಾಡಿದರು.

ಒಬ್ಬಳೇ ವಿದ್ಯಾರ್ಥಿನಿಯಿಂದ ಎರಡು ಅರ್ಜಿ

ವಿಚಾರಣೆ ಮಧ್ಯದಲ್ಲಿ ನ್ಯಾಯಾಲಯದ ಗಮನ ಸೆಳೆದೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಓರ್ವ ವಿದ್ಯಾರ್ಥಿನಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ. ಹಾಗೆಯೇ, ನ್ಯಾಯಾಲಯದ ಅಮೂಲ್ಯ ಸಮಯವೂ ವ್ಯರ್ಥವಾಗಲಿದೆ ಎಂದು ತಿಳಿಸಿದರು.

ಆದರೆ ಯುವತಿ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. ಅದೇ ಪ್ರಕರಣಕ್ಕೆ ಸಂಬಂಧಿಸಿ ರವಿವರ್ಮಕುಮಾರ್ ವಾದಿಸಿದರು.

ಮೊದಲನೇ ಅರ್ಜಿ ಹಿಂಪಡೆಯಲು ಹೈಕೋರ್ಟ್ ಅನುಮತಿ ನೀಡಿದ್ದು, ರವಿವರ್ಮಕುಮಾರ್ ವಾದಮಂಡನೆ ಮಾಡಿದರು. ಯುವತಿಯ ಎರಡನೇ ಅರ್ಜಿ ಸಂಬಂಧ ರವಿವರ್ಮಕುಮಾರ್ ವಾದಿಸಿದರು. ಕರ್ನಾಟಕ ಸರ್ಕಾರದ ಸಮವಸ್ತ್ರ ಆದೇಶವನ್ನು ಓದಿದ ಅವರು ಸರ್ಕಾರ ಸಮವಸ್ತ್ರ ನೀತಿ ಬಗ್ಗೆ ಉನ್ನತ ಸಮಿತಿ ರಚಿಸಿದೆ, ವರದಿ ಬರುವವರೆಗೂ ಈಗಿರುವಂತೆ ಸಮವಸ್ತ್ರ ಪಾಲಿಸಲು ಸೂಚನೆ ನೀಡಿದೆ. ಸರ್ಕಾರ ಸಮವಸ್ತ್ರ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಸರ್ಕಾರ ಯಾವುದೇ ಸಮವಸ್ತ್ರ ಸಂಹಿತೆ ರೂಪಿಸಿಲ್ಲ. ಸಮವಸ್ತ್ರ ನೀತಿ ಬಗ್ಗೆ ನಿರ್ಧರಿಸಲು ಉನ್ನತ ಸಮಿತಿಯನ್ನಷ್ಟೇ ರಚಿಸಿದೆ ಎಂದು ವಾದ ಮಂಡಿಸಿದರು.

ನಾನು ಸುವ್ಯವಸ್ಥೆಯ ವಿವಾದಕ್ಕೆ ಹೋಗುವುದಿಲ್ಲ, ಇದು ಅವ್ಯವಸ್ಥೆ. ಸರ್ಕಾರ ಸಮವಸ್ತ್ರಕ್ಕಾಗಿಯೇ ಉನ್ನತ ಸಮಿತಿ ರಚಿಸಿದೆ. ಹೀಗಾಗಿ ಸಮವಸ್ತ್ರ ಧರಿಸಬೇಕು ಎಂಬುದೇ ಅರ್ಥಹೀನ. ಸಮವಸ್ತ್ರ ಸಂಹಿತೆ ರಚಿಸದೇ ಸಮವಸ್ತ್ರಕ್ಕೆ ಸೂಚಿಸುವುದು ಸರಿಯಲ್ಲ. ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ. ಸಮಾನತೆ, ಸಾಮರಸ್ಯಕ್ಕೆ ಧಕ್ಕೆಯಾಗುವ ಬಟ್ಟೆ ನಾವು ಧರಿಸುತ್ತಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್​ಗಳ ವಿವರಣೆಯನ್ನು ವಕೀಲರು ನೀಡುತ್ತಿದ್ದಾರೆ ಎಂದು ಮತ್ತೆ ಸರ್ಕಾರದ ಆದೇಶವನ್ನು ರವಿವರ್ಮಕುಮಾರ್ ಓದಿದರು.

Donate Janashakthi Media

Leave a Reply

Your email address will not be published. Required fields are marked *