ಬೆಂಗಳೂರು: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ತ್ರಿಸದಸ್ಯ ಪೀಠದಲ್ಲಿ ಇಂದು ನಡೆಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ವಿಸ್ತೃತ ಪೀಠ ವಿಚಾರಣೆ ನಡೆಸಿದರು.
ಅರ್ಜಿ ವಿಚಾರಣೆಯಲ್ಲಿ ಇಂದು ಸರ್ಕಾರದ ಪರ ಎಜಿ ನಾವದಗಿ ವಾದ ಮಂಡನೆ ಮಾಡಿದರು. ನಿನ್ನೆ ಅರ್ಜಿದಾರರಪರ ವಾದ ಮಂಡನೆಯಾಗಿದ್ದು, ಇಂದು ಸರ್ಕಾರದ ಪರ ವಾದ ಮಂಡನೆ ಮಾಡಿದರು. ತರಗತಿಗಳಲ್ಲಿ ಹಿಜಾಬ್ ನಿರ್ಬಂಧ ವಿಚಾರವಾಗಿ ಹೈಕೋರ್ಟ್ ಪೂರ್ಣಪೀಠದಲ್ಲಿ ವಿಚಾರಣೆಯಲ್ಲಿ ಹಿರಿಯ ವಕೀಲ ಎ.ಎಂ. ಧರ್ ವಾದಮಂಡನೆ ಮಾಡಿದರು.
ಹೊಸದಾಗಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಸೋಮವಾರ ನಿಮ್ಮ ಅರ್ಜಿ ವಿಚಾರಣೆಗೆ ಸ್ವೀಕರಿಸುತ್ತೇವೆ ಎಂದು ಮುಖ್ಯನ್ಯಾಯಮೂರ್ತಿ ಹೇಳಿದ್ದಾರೆ. ವಕೀಲ ರಹಮತುಲ್ಲಾ ಕೊತ್ವಾಲ್ ವಾದ ಮಂಡಿಸಲಿದ್ದು, ನಿನ್ನೆ ನನ್ನ ಪಿಐಎಲ್ ವಜಾಗೊಂಡಿತ್ತು, ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದೇನೆ, ದಯಮಾಡಿ ಅದರ ವಿಚಾರಣೆ ನಡೆಸಲು ಮನವಿ ಮಾಡಿದ್ದಾರೆ. ಅದನ್ನೂ ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಮೂರು ಹೊಸ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಹೊಸ ಅರ್ಜಿಗಳಿಗೆ 10 ನಿಮಿಷವಷ್ಟೇ ಸಮಯ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ದುಪಟ್ಟಾವನ್ನು ಹಿಜಾಬ್ ನಂತರ ಬಳಸಲು ಅನುಮತಿ ಕೋರಿಕೆ ಈ ಅರ್ಜಿ ಸಂಬಂಧ ವಿಚಾರಣೆ ನಡೆಸಲು ಹಿರಿಯ ವಕೀಲ ರವಿವರ್ಮಕುಮಾರ್ ಮನವಿ ಮಾಡಿಕೊಂಡರು. ಯೂಟ್ಯೂಬ್ ಲೈವ್ನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮನವಿ ಮಾಡಿದ್ದು, ರಾಜ್ಯಾದ್ಯಾಂತ ಯೂಟ್ಯೂಬ್ ನಿಂದ ಸಮಸ್ಯೆ ಆಗುತ್ತಿದೆ ಎಂದು ರವಿವರ್ಮಕುಮಾರ್ ಮನವಿ ಮಾಡಿದರು.
- 2013ರಲ್ಲೇ ಸಮವಸ್ತ್ರದ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆಯೇ ಎಂದು ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು.
- ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಎಜಿ ಪ್ರಭುಲಿಂಗ ನಾವದಗಿ, ಕಾಲೇಜು ಅಭಿವೃದ್ಧಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಶಾಸಕರಲ್ಲದೇ ಉಪನ್ಯಾಸಕರು, ವಿದ್ಯಾರ್ಥಿಗಳು, ಪ.ಪಂ, ಪ.ಜಾತಿಗೆ ಸೇರಿದ ವ್ಯಕ್ತಿಗಳಿರುತ್ತಾರೆ ಎಂದು ಉತ್ತರಿಸಿದರು.
- 2018ರಲ್ಲಿ ಹೆಣ್ಣುಮಕ್ಕಳಿಗೆ ವಸ್ತ್ರ ಸಂಹಿತೆ ರೂಪಿಸಿದೆ. ಡಿಸೆಂಬರ್ 2021ರವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಉಡುಪಿಯ ಪಿಯು ಕಾಲೇಜು ವಿದ್ಯಾರ್ಥಿನಿಯರ ಕಾಲೇಜಾಗಿದೆ. ಡಿಸೆಂಬರ್ 2021ರಲ್ಲಿ ಹಿಜಾಬ್ ಧರಿಸಿ ಬರುವುದಾಗಿ ಕೆಲವು ವಿದ್ಯಾರ್ಥಿನಿಯರು ಮನವಿ ಮಾಡಿದರು. ನಂತರ ಜನವರಿ 1, 2022ರಂದು ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಸೇರಿತು ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.
- ಸಹೋದರತ್ವ ಭಾವನೆ ಇರಲೆಂದು ಸಮವಸ್ತ್ರ. ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಲೆಂದು ಸಮವಸ್ತ್ರ ಸಂಹಿತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ನಡಾವಳಿಯಲ್ಲಿ ಇದೆ. 1985ರಿಂದಲೂ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ.
- ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ನಂತರ, ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ, ಕಾಲೇಜಿನಲ್ಲಿ ಪ್ರತಿಭಟನೆ ಮುಂದುರೆಯಿತು ಎಂದು ಪ್ರಭುಲಿಂಗ ನಾವದಗಿ ವಾದ.
ನಾವು ಹಿಜಾಬ್ ವಿಚಾರವನ್ನೂ ಕಾಲೇಜು ಅಭಿವೃದ್ಧಿ ಸಮಿತಿಗೆ ನೀಡಿದ್ದೇವೆ ಎಂದು ಎಜಿ ವಾದ ಮಂಡನೆಗೆ, ಒಂದು ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಅನುಮತಿ ನೀಡಬಹುದು. ಹಿಜಾಬ್‌ಗೆ ಅನುಮತಿ ನೀಡಿದರೆ ನಿಮ್ಮ ಆಕ್ಷೇಪವಿಲ್ಲವೇ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ. ಅಂತಹ ದೂರುಗಳು ಬಂದರೆ ಸರ್ಕಾರ ಪರಿಗಣಿಸಲಿದೆ ಎಂದು ಎಜಿ ನಾವದಗಿ ಹೇಳಿದರು. ಸಾವಿರಾರು ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಬಗ್ಗೆ ಸರ್ಕಾರ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸಮವಸ್ತ್ರ ನಿರ್ಧಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡಿದ್ದೇವೆ ಎಂದು ಹೇಳಿದ್ದೀರಿ, ಇನ್ನೊಂದು ಕಡೆ ಸರ್ಕಾರ ಉನ್ನತ ಸಮಿತಿ ರಚನೆ ಮಾಡುತ್ತೇವೆ ಎಂದು ಹೇಳುತ್ತೀರಿ. ಇದು ವಿರೋಧಾಭಾಸ ಹೇಳಿಕೆಯಲ್ಲವೇ? ಸರ್ಕಾರಕ್ಕೆ ಇದರ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಕಾಯ್ದೆ ಜಾರಿಗೆ ತರಲಾಯಿತು. ಕಾಯ್ದೆಯ ನಿಯಮ 11ರಲ್ಲಿ ಸಮವಸ್ತ್ರ ಸಂಹಿತೆ ಇದೆ. ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆಗೆ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಶಾಲೆಗಳಿಗೆ ನಿರ್ವಹಣಾ ಸಮಿತಿ ಇದೆ. ಆದರೆ ಕಾಲೇಜಿನಲ್ಲಿ ನಿರ್ವಹಣಾ ಸಮಿತಿ ಇರುವುದಿಲ್ಲ. 2014ರಿಂದಲೂ ಕಾಲೇಜು ಅಭಿವೃದ್ಧಿ ಸಮಿತಿಗಳಿವೆ ಎಂದು ಎಜಿ ವಾದ ಮಂಡನೆ.
ಶಿಕ್ಷಣ ಕಾಯ್ದೆ ಸೆಕ್ಷನ್ 133ರಡಿ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರವಿದ್ದು, ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಸಮಾಜದ ಎಲ್ಲ ವರ್ಗದ ಪ್ರತಿನಿಧಿಗಳಿದ್ದಾರೆ ಎಂದು ಎಜಿ ವಾದ ಮಂಡಿಸಿದರು. ಆಗ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಮೂಲಕ ಸಮಿತಿಗೆ ಅನುಮತಿಸಬಹುದೇ ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದರು.
ಅಧೀನ ಕಾರ್ಯದರ್ಶಿ ಸಚಿವರ ಅನುಮೋದನೆ ನಂತರವೇ ಆದೇಶ ಹೊರಡಿಸುತ್ತಾರೆ. ಹೀಗಾಗಿ ಇದನ್ನು ಸರ್ಕಾರದ ಆದೇಶ ಎಂದು ಪರಿಗಣಿಸಬಹುದು ಎಂದು ಎಜಿ ನಾವದಗಿ ಹೇಳಿದ್ದಾರೆ.
ಸರ್ಕಾರದ ಕಾರ್ಯನಿರ್ವಹಣೆ ನಿಯಮದಡಿ ಆದೇಶ ಹೊರಡಿಸಬಹುದೇ? ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಬಹುದೇ ಪರಿಶೀಲಿಸಿ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು.
ಆಗ ನಾನು ಮೂಲ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡುತ್ತೇನೆ. ಸಾಮಾನ್ಯವಾಗಿ ಸರ್ಕಾರದ ಕಾರ್ಯನಿರ್ವಹಣೆ ನಿಯಮದಡಿಯೇ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಎಜಿ ಹೇಳಿದ್ದಾರೆ.
ಒಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ? ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ? ರಾಜ್ಯ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ.
ಈ ಪಕ್ಷ ಆ ಪಕ್ಷ ಎಂದು ಹೇಳುತ್ತಿಲ್ಲ. ಶಾಸಕ ಅಧ್ಯಕ್ಷರಾದರೆ ಉಳಿದ ಸದಸ್ಯರ ಕಥೆಯೇನು. ಕಾಫಿ ಟೀ ಕುಡಿಯುವುದಲ್ಲದೇ ಅಡಳಿತದಲ್ಲೂ ಭಾಗವಹಿಸಲು ಸಾಧ್ಯವೇ. ರಾಜ್ಯ ಸರ್ಕಾರಕ್ಕೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ.
ಇದು ಖಂಡಿತಾ ಚಿಂತಿಸಬೇಕಾದ, ಚರ್ಚಿಸಬೇಕಾದ ವಿಚಾರವಾಗಿದೆ ಎಂದು ಎಜಿ ಹೇಳಿದ್ದಾರೆ.
ಸಮಿತಿಯ ಸದಸ್ಯರನ್ನು ಯಾರು ನೇಮಿಸುತ್ತಾರೆ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ. ಸಮವಸ್ತ್ರದ ವಿಚಾರವಾಗಿ ಇದರ ಮೊದಲು ಯಾವುದೇ ವಿವಾದ ಆಗಿರಲಿಲ್ಲ. ಯಾವುದೇ ವಿದ್ಯಾರ್ಥಿಗಳೂ ದೂರು ನೀಡಿರಲಿಲ್ಲ ಎಂದು ಎಜಿ ಉತ್ತರಿಸಿದ್ದಾರೆ.
ಆತ್ಮಸಾಕ್ಷಿ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂ ತೀರ್ಪಿದೆ. ಕೆಲವರಿಗೆ ಯಾವುದೇ ಶಕ್ತಿಯ ಬಗ್ಗೆಯೇ ನಂಬಿಕೆ ಇರದಿರಬಹುದು. ದೇವರಿಲ್ಲ ಎಂಬ ಭಾವನೆಗೆ ಸಂವಿಧಾನದಲ್ಲಿ ಸ್ಥಾನವಿದೆ ಎಂದು ಎಜಿ ವಾದಿಸಿದರು.
ಉರ್ದು ಶಾಲೆಗಳಲ್ಲೂ ಹಿಜಾಬ್ ನಿರ್ಬಂಧಿಸಲಾಗುತ್ತಿದೆ. ಡಿಗ್ರಿ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಲಾಗಿದೆ. ಸರ್ಕಾರದ ನಿರ್ಬಂಧದಿಂದಲೇ ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿದೆ. ಕಾಲೇಜು ಗೇಟಿನೊಳಗೇ ಹಿಜಾಬ್ ಬಿಡುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಅರ್ಜಿದಾರರ ಪರ ಮೊಹಮ್ಮದ್ ತಾಹೀರ್ ವಾದ ಮಂಡಿಸಿದ್ದಾರೆ.
ಈ ಬಗ್ಗೆ ದಾಖಲೆಗಳೊಂದಿಗೆ ಲಿಖಿತವಾಗಿ ಮಾಹಿತಿ ನೀಡಲಿ, ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದು ಎಜಿ ಪ್ರತಿಕ್ರಿಯೆ ನೀಡಿದ್ದಾರೆ.
ಹೈಕೋರ್ಟ್ ಆದೇಶದ ಹೆಸರಲ್ಲಿ ಹಿಜಾಬ್ ನಿರ್ಬಂಧಿಸಲಾಗುತ್ತಿದೆ ಎಂದು ಮೊಹಮ್ಮದ್ ತಾಹೀರ್ ಹೇಳಿದ್ದಾರೆ.
ನೀವು ಅಗತ್ಯ ಮಾಹಿತಿ ನೀಡಿದರೆ ಎಜಿ ಗಮನಹರಿಸುತ್ತಾರೆ. ಸೂಕ್ತ ಅರ್ಜಿ ಸಲ್ಲಿಸದೇ ನಿರ್ದೇಶನ ನೀಡುವುದು ಹೇಗೆ ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದ್ದು, ವಿಚಾರಣೆ ಫೆಬ್ರವರಿ 21 , ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.