ಹಿಜಾಬ್ ಪ್ರಕರಣದ ವಿಚಾರಣೆ ನಾಳೆ ಮಧ್ಯಾಹ್ನಕ್ಕೆ ಮುಂದೂಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಹಿಜಾಬ್ ವಿವಾದ ಸಂಬಂಧಿಸಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಾಳೆ (ಫೆಬ್ರವರಿ 9) ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ಸರ್ಕಾರ ಹಾಗೂ ಮಧ್ಯಂತರ ಅರ್ಜಿದಾರರ ವಾದವನ್ನು ಹೈಕೋರ್ಟ್ ಆಲಿಸಲಿದೆ.

ಉಡುಪಿಯ ಸರ್ಕಾರಿ ಪಿಯು ಕಾಲೇಜು ಮತ್ತು ಕುಂದಾಪುರದ ಭಂಡಾರ್ಕರ್ ಕಲಾ ಹಾಗೂ ವಿಜ್ಞಾನ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುತ್ತಿರುವ ಪ್ರಕರಣದ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಪ್ರತ್ಯೇಕ ಮನವಿಗಳ ವಿಚಾರಣೆ ನಾಳೆಗೆ ಮುಂದೂಡಿದೆ.

ಏಕ ಸದಸ್ಯ ಪೀಠದ ನ್ಯಾಯಮೂರ್ತಿ ದೀಕ್ಷಿತ್ ಆರಂಭದಲ್ಲಿ ಅರ್ಜಿಯ ವಿಚಾರಣೆ ಆರಂಭಿಸಿ, ಎಲ್ಲ ರೀತಿಯ ಭಾವನೆಗಳನ್ನು ಬದಿಗೆ ಸರಿಸೋಣ. ಸಂವಿಧಾನದ ಮೇಲೆ ನಾನು ತೆಗೆದುಕೊಂಡಿರುವ ಪ್ರಮಾಣದಂತೆ ನಡೆದುಕೊಳ್ಳಲಿದ್ದೇನೆ. ಬೇರೆಲ್ಲಾ ಪ್ರಶ್ನೆಗಳನ್ನು ಹೊರಗಿರಿಸಿ, ಸಂವಿಧಾನ ಏನು ಹೇಳುತ್ತದೆಯೋ ಅದರಂತೆ ನಡೆಯೋಣ. ಸಂವಿಧಾನವು ನನಗೆ ಭಗವದ್ಗೀತೆಗಿಂತ ಹೆಚ್ಚು ಎಂದು ಹೇಳಿದರು.

ಕಲಾಪದ ದಿನದಂತ್ಯಕ್ಕೆ ತಲುಪಿದಾಗ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಪ್ರಕರಣದ ವಿಚಾರಣೆ ಮಧ್ಯಂತರದಲ್ಲಿರುವಾಗ ಧರಣಿ ಮತ್ತು ಕಾನೂನು, ಸುವ್ಯವಸ್ಥೆ ಸಮಸ್ಯೆ ಉಂಟಾಗಿದೆ ಎಂಬ ವಿಷಯವನ್ನು ನನ್ನ ಗಮನಕ್ಕೆ ತರಲಾಗಿದೆ. ಹೀಗಾಗಿ, ಯಾವುದೇ ತೆರನಾದ ಧರಣಿ, ಪ್ರತಿಭಟನೆಗೆ ಯಾರೂ ಇಳಿಯದಂತೆ ನಿರ್ಬಂಧ ವಿಧಿಸಿ ಮಧ್ಯಂತರ ನಿರ್ದೇಶನ ನೀಡಬೇಕು” ಎಂದು ಪೀಠಕ್ಕೆ ಕೋರಿದರು.

ಇದಕ್ಕೆ ಪೀಠವು “ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ವಿನಂತಿ ಮಾಡುತ್ತೇವೆ. ಜನರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಜನರು ಅದನ್ನು ಆಚರಣೆಗೆ ತರುತ್ತಾರೆ ಎಂದು ಭಾವಿಸಿದ್ದೇವೆ” ಎಂದು ಆದೇಶಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದ ಸಂಪ್ರದಾಯ. ನಮ್ಮ ಮೊದಲ ಕೋರಿಕೆ, ಶಿರವಸ್ತ್ರ ಅಥವಾ ಹಿಜಾಬ್ ಧರಿಸುವುದು. ಪವಿತ್ರ ಕುರಾನ್ ಪ್ರಕಾರ ಇದು ಇಸ್ಲಾಂ ಧರ್ಮದ ಅಗತ್ಯ ಭಾಗವಾಗಿದೆ ಎಂದು ಹೇಳಿದರು.

ಹಿಜಾಬ್ ಕಾನೂನು ವ್ಯವಸ್ಥೆಯ ವಿಷಯವೇ ಆದರೆ ಅವರು ಹಿಜಾಬ್ ಧರಿಸಿ ಶಾಲೆಗೆ ಬರುವಾಗ ಮಾತ್ರವೇ ಏಕೆ ಸಮಸ್ಯೆಯಾಗುತ್ತದೆ. ಹೊರಗಡೆ ಇರುವಾಗ ಏಕೆ ಸಮಸ್ಯೆಯಾಗುವುದಿಲ್ಲ ಎಂದು ಪ್ರಶ್ನಿಸಿದ ವಕೀಲರು, ಯಾವುದೇ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕಾನೂನು ಸುವ್ಯವಸ್ಥೆ ಎಂದು ಹೇಳಬಹುದು. ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಸರ್ಕಾರವು ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸಬಹುದು. ಜೊಳ್ಳಿನಿಂದ ಕಾಳನ್ನು ಬೇರ್ಪಡಿಸುವುದನ್ನು ನ್ಯಾಯಾಲಯ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ತೀರ್ಪು ಆಧರಿಸಿ ಹೊರಡಿಸಲಾಗಿದ್ದು, ಇದು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ್ದಲ್ಲ. ಇದನ್ನು ಹಿಜಾಬ್ ನಿಷೇಧಕ್ಕೆ ಬಳಸಲಾಗದು. ಕೇರಳ ಹೈಕೋರ್ಟ್ ತೀರ್ಪು ಖಾಸಗಿ ಅಲ್ಪಸಂಖ್ಯಾತ ಸಂಸ್ಥೆಗೆ ಸೀಮಿತವಾಗಿದ್ದು, ಅದು ಸರ್ಕಾರಿ ಸಂಸ್ಥೆಯಾಗಿರಲಿಲ್ಲ. ಹೀಗಾಗಿ, ಕೇರಳ ಹೈಕೋರ್ಟ್ ತೀರ್ಪು ಇಲ್ಲಿಗೆ ಅನ್ವಯಿಸದು ಎಂದು ಕಾಮತ್ ವಾದ ಮಂಡಿಸಿದರು.

ಅಂತಿಮವಾಗಿ, ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ವಿನಂತಿಸಿದ ನ್ಯಾಯಮೂರ್ತಿ, ಜನರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಜನರು ಅದನ್ನು ಆಚರಣೆಗೆ ತರುತ್ತಾರೆ ಎಂದು ಭಾವಿಸಿರುವುದಾಗಿ ಹೇಳಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.

Donate Janashakthi Media

Leave a Reply

Your email address will not be published. Required fields are marked *