ಹಿಜಾಬ್ ಮತ್ತು ಗಂಡಾಳಿಕೆಯ ಧರ್ಮಸಂಕಟಗಳು

ಡಾ.ಕೆ.ಷರೀಫಾ

ಮಾನವ ಚರಿತ್ರೆಯಲ್ಲಿ ಹಲವಾರು ಸಾಮಾಜಿಕ, ರಾಜಕೀಯ ಬದಲಾವಣೆಗಳೊಂದಿಗೆ ಈ ಸಮಾಜ ಬೆಳೆದು ಬಂದಿದೆ. ಆದರೆ ಅದು ಹೆಣ್ಣಿನ ಮೇಲೆ ಬಿಗಿಯಾದ ರೀತಿ ರಿವಾಜುಗಳನ್ನು ಹೇರಿ ಮತ್ತೆ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ಸಮಾಜದಲ್ಲಿ ಹಲವಾರು ಬದಲಾವಣೆಗಳು, ವ್ಶೆಜ್ಞಾನಿಕ ಪರಿವರ್ತನೆಗಳಾದವು. ಸಮಾಜ ಆ ಪರಿವರ್ತನೆಗಳನ್ನು ಸ್ವೀಕರಿಸುತ್ತದೆ. ಆದರೆ ಹೆಣ್ಣನ್ನು, ಆಸ್ತಿಯನ್ನು, ಆರ್ಥಿಕತೆಯನ್ನು ಮಾತ್ರ ಯಾವತ್ತೂ ತನ್ನ ಹಿಡಿತದಲ್ಲಿಯೇ ಇಟ್ಟುಕೊಳ್ಳ ಬಯಸುತ್ತದೆ… ಇಸ್ಲಾಂ ಹುಟ್ಟಿದಾಗ ಅಷ್ಟೊಂದು ಕಠೋರವಾಗಿಲ್ಲದ ಕಟ್ಟಳೆಗಳು ಇಸ್ಲಾಮಿನ ಪುನರುತ್ಥಾನದ ಕಾಲದಲ್ಲಿ ವಿಪರೀತವಾಗಿ ಕಾಣಿಸಿಕೊಳ್ಳುತ್ತಿವೆ. ಒಂದು ಕಡೆ ಮುಸ್ಲಿಂ ಮೂಲಭೂತವಾದ ಅವಳ ಪ್ರಗತಿಗೆ ಮುಳುವಾಗಿದ್ದರೆ, ಭಾರತದ ಮುಸ್ಲಿಂ ಮಹಿಳೆಗೆ ಮಹಿಳೆಯಾಗಿರುವ ಕಾರಣಕ್ಕೇನೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿದೆ.

ಗಂಡಾಳಿಕೆಯ ಧರ್ಮ ಸಂಕಟಗಳು ನಮಗೆ ಎದುರಾಗುತ್ತಲೇ ಇರುತ್ತವೆ. ಗಂಡಾಳಿಕೆಯ ನಡೆಗಳ ಒಳಗಿನ ಬದಲಾವಣೆಗಳು, ವಿಧವಿಧವಾದ ಪರಿಗಳು ನಮ್ಮ ಅರಿವಿಗೆ ಬರುವುದೇ ಇಲ್ಲ. ಅವು ಧರ್ಮಗಳ ಒಳಗಿನಿಂದಲೇ ನುಸುಳಿ ಬರುವ ಇಬ್ಬಾಯ್ ಖಡ್ಗಗಳು. ಮಹಿಳೆಗೆ ಆತ್ಮವಿಶ್ವಾಸದ ಪರಿಸರವೊಂದು ದಕ್ಕಿದರೆ ಸಾಕು, ಪುಟಿದೇಳುವ ಅವಳನ್ನು ವಿವಿಧ ಕಾರಣಗಳಿಗಾಗಿ ಚಿವುಟಿ ಹಾಕಲಾಗುತ್ತಿದೆ. ಯಾರು ಏನು ಉಣ್ಣಬೇಕು, ಯಾವ ವಸ್ತ್ರ ತೊಡಬೇಕು, ಯಾರ ಜೊತೆ ಸ್ನೇಹ ಮಾಡಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು ಎಂಬುದರ ವಿವರಗಳು ಅವರವರ ಧರ್ಮದ ಪ್ರಯೋಗಶಾಲೆಯಲ್ಲಿ ಸಿಧ್ಧವಾಗಿ ಬರುತ್ತಿವೆ. ನಮ್ಮ ಅಡುಗೆ ಮನೆಗಳಲ್ಲಿ ಯಾವ ಅಡುಗೆ ಮಾಡಬೇಕು ಯಾವುದನ್ನು ಬಿಡಬೇಕು ಎಂಬ ಮೆನು ಕೂಡ ಈಗ ಮನುವೇ ನಿರ್ಧರಿಸುವ ಕಾಲಘಟ್ಟ ಇದಾಗಿದೆ.

ಶಾಲೆ, ಕಾಲೇಜುಗಳಿಗೆ ಹೋಗುವ ಹುಡುಗಿಯರು ಸೀರೆ ಧರಿಸಬೇಕೇ?, ಪಂಜಾಬಿ ತೊಡಬೇಕೆ, ಹೂ ಮುಡಿಯಬೇಕೆ, ಬಳೆ ತೊಡಬೇಕೆ, ಜೀನ್ಸ್‌ ಉಡಬೇಕೆ ಬೇಡವೇ, ಕುಂಕುಮ ಇಡಬೇಕೆ ಬೇಡವೇ ಇದೆಲ್ಲ ಅವರದೇ ತೀರ್ಮಾನ. ಅವಳಿಗಿಷ್ಟವಾದುದ್ದನ್ನು  ಉಣ್ಣುವಂತಿಲ್ಲ, ಉಡುವಂತಿಲ್ಲ, ಎಲ್ಲವೂ ಗಂಡಸರದೇ ತೀರ್ಮಾನ. ಅದರ ಒಳನೇಯ್ಗೆಯಲ್ಲಿ ಹೆಣ್ಣಿಗೆ ಸುತ್ತಿ ಸುತ್ತಿ ಸಾಯಿಸುತ್ತಿರುವ ಕಣ್ಣಿಗೆ ಕಾಣದ ಗಂಡಾಳಿಕೆಯ ರಾಜಕಾರಣದಲ್ಲಿ ಧಾರ್ಮಿಕ ಕುರುಹುಗಳು ಮುನ್ನೆಲೆಗೆ ಬರುತ್ತವೆ. ಮಾನವ ಚರಿತ್ರೆಯಲ್ಲಿ ಹಲವಾರು ಸಾಮಾಜಿಕ, ರಾಜಕೀಯ ಬದಲಾವಣೆಗಳೊಂದಿಗೆ ಈ ಸಮಾಜ ಬೆಳೆದು ಬಂದಿದೆ. ಆದರೆ ಅದು ಹೆಣ್ಣಿನ ಮೇಲೆ ಬಿಗಿಯಾದ ರೀತಿ ರಿವಾಜುಗಳನ್ನು ಹೇರಿ ಮತ್ತೆ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ಸಮಾಜದಲ್ಲಿ ಹಲವಾರು ಬದಲಾವಣೆಗಳು, ವ್ಶೆಜ್ಞಾನಿಕ ಪರಿವರ್ತನೆಗಳಾದವು. ಸಮಾಜ ಆ ಪರಿವರ್ತನೆಗಳನ್ನು ಸ್ವೀಕರಿಸುತ್ತದೆ. ಆದರೆ ಹೆಣ್ಣನ್ನು, ಆಸ್ತಿಯನ್ನು, ಆರ್ಥಿಕತೆಯನ್ನು ಮಾತ್ರ ಯಾವತ್ತೂ ತನ್ನ ಹಿಡಿತದಲ್ಲಿಯೇ ಇಟ್ಟುಕೊಳ್ಳ ಬಯಸುತ್ತದೆ.

ಮಹಿಳೆಯರು ತಮ್ಮ ತಮ್ಮ ಧರ್ಮದ ಕಟ್ಟಳೆಯಂತೆ, ಹಿಜಾಬ್, ಬುರ್ಖಾ, ನಖಾಬ್, ಘೋಂಘಟ್, ತಲೆ ಮೇಲೆ ಸೆರಗು ಹಾಕುವಂತೆ ಪುರುಷರೂ ಸಹ ತಮ್ಮ ತಮ್ಮ ಧರ್ಮಗಳ ನಿಯಮದಂತೆ, ಟೋಪಿ, ಪೇಠಾ, ರುಮಾಲು, ಶಲ್ಯ, ಪಗಡಿ, ಸಿಖರ ಪೇಟಾ, ಮುಸಲ್ಮಾನ ಪುರುಷರ ನಮಾಜಿನ ಟೋಪಿ, ಗಾಂಧೀ ಟೋಪಿ, ರೈತನ ಶಲ್ಯ, ರುಮಾಲು, ಪಕ್ಷಗಳ ಟೋಪಿಗಳು ಹೀಗೆ ತರಹೇವಾರಿ ತಲೆ ಮುಚ್ಚುವ ಪದ್ಧತಿಗಳು ನಮ್ಮಲ್ಲಿ ಜಾರಿಯಿವೆ. ಅದನ್ನೆಲ್ಲಾ ಬಿಟ್ಟು ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಹಿಜಾಬಿನ ಸುತ್ತ ನಡೆಯುತ್ತಿರುವ ರಾಜಕಾರಣ ಬಹಳ ಬೇಸರವಾಗುತ್ತದೆ. ಮೂಲ ಇಸ್ಲಾಂ ಹುಟ್ಟಿದ್ದು ಅರಬ್ ದೇಶದ ಮರುಭೂಮಿಯಲ್ಲಿ. ಯಾವದೇ ಧರ್ಮ ತಾನು  ಹುಟ್ಟಿದ ಕಾಲಘಟ್ಟದ ಜಾರಿಯಿದ್ದ ಸಾಮಾಜಿಕ ವಿಧಿ ವಿಧಾನಗಳನ್ನು ರೂಪಿಸಿಕೊಳ್ಳುತ್ತದೆ. ಆಗಿನ ಪುರಾತನ ಇರಾನಿನಲ್ಲಿ ರೋಮನ್ನರ ಗ್ರೀಕರ ಮತ್ತು ಅರೇಬಿಯನ್ನರ ಬುಡಕಟ್ಟುಗಳಿದ್ದವು. ಇಸ್ಲಾಂ ಹುಟ್ಟಿದ್ದು ಏಳನೇ ಶತಮಾನದಲ್ಲಿ ಇಂದಿಗೂ ನಾವು ಮುಸಲ್ಮಾನರ ಬದುಕಿನಲ್ಲಿ ಆಗಿನ ಮರುಭೂಮಿಯಲ್ಲಿ ವಾಸವಿದ್ದ ಬುಡಕಟ್ಟುಗಳಾದ ಹಾಶಿಂ, ಖುರೈಶಿ ಬುಡಕಟ್ಟುಗಳ, ಮತ್ತು ಆಗಿನ ಮರುಭೂಮಿಯ ಗುರುತುಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಇಸ್ಲಾಂ ಹುಟ್ಟಿದಾಗ ಅನೇಕ ಬುಡಕಟ್ಟುಗಳಲ್ಲಿ ಹರಿದು ಹಂಚಿ ಹೋಗಿದ್ದ ಸಮುದಾಯವನ್ನು ಒಂದು ಧರ್ಮದ ಕಕ್ಷೆಗೆ ತರಲು ಪೈಗಂಬರು ಪ್ರಯತ್ನಿಸಿದರು. ಆಗ ಮಹಿಳೆಯರಿಗೆ ಸೂಚಿಸಿದಂತೆಯೇ ಪುರುಷರಿಗೂ ಉಡುಪನ್ನು ನಿರ್ದೆಶಿಸಿದರು. ಕುರಾನಿನ 4ನೇ ಅಧ್ಯಾಯದ ಸೂರ: ಅನ್ನಿಸಾದಲ್ಲಿ ಪೈಗಂಬರರು ಹೇಳುತ್ತಾರೆ. “ಮಹಿಳೆ ತನ್ನ ಮುಖ, ಮುಂಗೈ, ಮುಂಗಾಲುಗಳನ್ನು ಹೊರತುಪಡಿಸಿ ದೇಹದ ಇನ್ನಿತರೇ ಅಂಗಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕೆಂದು” ಹೇಳಿದರು. ಆಗಿನ ಕಾಲದಲ್ಲಿ ಅರೇಬಿಯಾದಲ್ಲಿ ಜನಿಸಿದ ಹೆಣ್ಣು ಶಿಶುವನ್ನು ಜೀವಂತ ಹುಗಿದು ಕೊಲ್ಲುವ ಪದ್ಧತಿ ಜಾರಿಯಿತ್ತು. ಪೈಗಂಬರರು ಅದನ್ನೆಲ್ಲಾ ನಿಲ್ಲಿಸುತ್ತಾರೆ. ಹೆಣ್ಣುಮಗುವಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಕೊಡಿಸುತ್ತಾರೆ.

ಮುಸ್ಲಿಂ ಪುರುಷರೂ ಸಹ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಅದು ಜಾರದಂತೆ ಹುರಿಯಿಂದ ಕಟ್ಟಿರುತ್ತಾರೆ. ಇದು ಹೆಣ್ಣುಮಕ್ಕಳು ಹಾಕುವ ಹಿಜಾಬ್‌ಗೆ ಸಮನಾದ ವಸ್ತ್ರವಾಗಿರುತ್ತದೆ. ಮರುಭೂಮಿಯ ಬಿಸಿಲು ಝಳ ತಡೆಯದೇ ಈ ರೀತಿಯ ತಲೆಗವಸು ಹಾಕಿರುತ್ತಾರೆ. ಮರುಭೂಮಿಯಲ್ಲಿ ಬಿಸಿಲ ಝಳದೊಂದಿಗೆ ರೊಯ್ಯನೆ ಬೀಸುವ ತೇವವಿಲ್ಲದ ಬಿಸೀ ಗಾಳಿ, ಹಸಿರೇ ಕಾಣದ ಮರಳುಗಾಡಿನಲ್ಲಿ ಹಾರಿ ಬರುವ ಮರಳಿನ ಕಣಗಳಂದಲೂ ರಕ್ಷಣೆ ಪಡೆಯಲು ಅರಬರು ತಲೆಗವಸು ಹಾಕುತ್ತಿದ್ದರು. ಬಿಸಿಲು ಜಾಸ್ತಿಯಿರುವ ಪ್ರದೇಶಗಳಲ್ಲಿ ಚಳಿಯೂ ಹೆಚ್ಚಾಗಿಯೇ ಇರುತ್ತದೆ. ಕೊರೆಯುವ ಚಳಿ, ಬೀಸುವ ಮರಳ ಗಾಳಿ, ಭಯಂಕರ ಬಿಸಿಲ ಝಳ ತಡೆಯಲು ಅವರು ಹೀಗೆ ಉಡುಪು ಧರಿಸುತ್ತಿದ್ದರು. ಅರಬ್ ಮತ್ತು ಅಫಘಾನಿಸ್ತಾನಗಳಲಿ ಈಗಲೂ ಬುರ್ಖಾ ಕಡ್ಡಾಯವಾಗಿ ಧರಿಸಲೇಬೆಕೆಂಬ ನಿಯಮವಿದೆ.

ಸಾದತ್ ಹಸನ್ ಮಾಂಟೋರವರ ಪ್ರಕಾರ “ಧರ್ಮ ಹೃದಯದಿಂದ ಹೊರಟು ನೆತ್ತಿಗೇರಿದಾಗ ನಂಜಾಗುತ್ತದೆ” ಎಂದು ಹೇಳುತ್ತಾರೆ. ಯಾವುದೇ ಧರ್ಮವಿರಲಿ ಅದು ನಂಜು ತಲೆಗೇರಿದಾಗ ಹಲವಾರು ವಿಪರೀತದ ಘಟನೆಗಳು ಜರುಗುತ್ತವೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಬುರ್ಖಾ ಧರಿಸದ ಕಾರಣಕ್ಕಾಗಿಯೇ ಪಾಕಿಸ್ತಾನದಲ್ಲಿ ಮಂತ್ರಿಯಾಗಿದ್ದ ಮಹಿಳೆಯನ್ನು ಮತ್ತು ಬೆನಜೀರ್ ಭುಟ್ಟೋ ರವರನ್ನು ಗುಂಡು ಹಾರಿಸಿ ಕೊಲ್ಲುತ್ತಾರೆ. ಇರಾನಿನ ಶಾಂತಿ ಪಾರಿತೋಷಕ ವಿಜೇತೆ ಶಿರೀನ್ ಇಬಾದಿ ಅಲ್ಲಿನ ಕೋರ್ಟ್‌ಗಳಲ್ಲಿ ಜಡ್ಜ್ ಆಗುವುದನ್ನು ನಿಷೇಧಿಸಲಾಯಿತು. ಶಿಕ್ಷಣಕ್ಕಾಗಿ ಹೋರಾಡಿದ ಮಲಾಲಾಳನ್ನೂ ಸಹ ತಾಲಿಬಾನಿಗಳ ಗುಂಡು ಬಲಿಪಡೆಯಬಹುದಾಗಿತ್ತು. ಆದರೆ ಕೊಂಚದರಲ್ಲಿಯೇ ಮಲಾಲಾ ಬದುಕುಳಿದು ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿರುವುದು ಈಗ ಇತಿಹಾಸ.

ಇಸ್ಲಾಂ ಹುಟ್ಟಿದಾಗ ಅಷ್ಟೊಂದು ಕಠೋರವಾಗಿಲ್ಲದ ಈ ಕಟ್ಟಳೆಗಳು ಇಸ್ಲಾಮಿನ ಪುನರುತ್ಥಾನದ ಕಾಲದಲ್ಲಿ ವಿಪರೀತವಾಗಿ ಕಾಣಿಸಿಕೊಳ್ಳುತ್ತಿವೆ. ಒಂದು ಕಡೆ ಮುಸ್ಲಿಂ ಮೂಲಭೂತವಾದ ಅವಳ ಪ್ರಗತಿಗೆ ಮುಳುವಾಗಿದ್ದರೆ, ಭಾರತದ ಮುಸ್ಲಿಂ ಮಹಿಳೆಗೆ ಮಹಿಳೆಯಾಗಿರುವ ಕಾರಣಕ್ಕೇನೆ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಮೇ 28, 2014ರಂದು ಎರಡು ಸುದ್ದಿಗಳು ಪ್ರಕಟವಾಗಿದ್ದವು. ಲಾಹೋರಿನಲ್ಲಿ ತಾನು ಇಷ್ಟ ಪಟ್ಟವನನ್ನು ತನ್ನ ಕುಟುಂಬದ ಇಚ್ಚೆಗೆ ವಿರುದ್ಧವಾಗಿ ಮದುವೆಯಾದ ಫರ್ಜಾನಾಳನ್ನು ಕೋರ್ಟಿನ ಆವರಣದಲ್ಲಿಯೇ 3 ಜನ ಸೋದರರು ಇಟ್ಟಿಗೆಗಳಿಂದ ಹೊಡೆದು ಅವಳನ್ನು ಸಾಯಿಸುತ್ತಾರೆ. ಅದೇ ರೀತಿ ಕರ್ನಾಟಕದ ಹಾವೇರಿಯ ರಟ್ಟಿಹಳ್ಳಿಯ ಆಶಾ (26)ಳನ್ನು ಅವಳ ಪಾಲಕರು ಮತ್ತು ಸಹೋದರರು ಸೇರಿ ಬೆಂಕಿ ಹಚ್ಚಿ ಸುಟ್ಟು ಸಾಯಿಸುತ್ತಾರೆ. ಮೇ 4, 2022ರಂದು ತೆಲಂಗಾಣದ ವಿಖಾರಾಬಾದ್ ಜಿಲ್ಲೆಯ ಮಾರೆಪಲ್ಲಿ ಗ್ರಾಮದ ಮಾಳ ಸಮುದಾಯಕ್ಕೆ ಸೇರಿದ ನಾಗರಾಜು ಮತ್ತು ಆಶ್ರಿನ್ ಸುಲ್ತಾನಾ ಮದುವೆಯಾಗಿ ವಾಸಿಸುತ್ತಿದ್ದುದನ್ನು ಸಹಿಸದ ಹುಡುಗಿಯ ಸಹೋದರ ಹಾಡು ಹಗಲೇ, ನಡುಬೀದಿಯಲ್ಲಿಯೇ ನಾಗರಾಜನನ್ನು ಕೊಚ್ಚಿ ಕೊಲೆ ಮಾಡುತ್ತಾರೆ. ಎಲ್ಲಿಯವರೆಗೆ ಜಾತಿಭೂತದ ಕಾಟವಿದೆಯೋ ಅಲ್ಲಿಯವರೆಗೂ ದೇಶ ಶಾಂತಿಯ ತೋಟವಾಗದು. ಕುವೆಂಪು ಹೇಳುತ್ತಿದ್ದರು ದೇಶವು “ಸರ್ವ ಜನಾಂಗದ ಶಾಂತಿಯ ತೋಟ”ವಾಗಬೇಕೆಂದು. ಈಗಿನ ಬೆಳವಣೆಗೆಗಳು ಮತ್ತು ಕಲುಷಿತ ಸಾಮಾಜಿಕ ವಾತಾವರಣ, ಹಾಗೂ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ದಿಗಿಲು ಹುಟ್ಟಿಸುತ್ತಿವೆ. ಸೌಹಾರ್ದದ ನಮ್ಮ ಬದುಕನ್ನು ಆಣಕಿಸುವಂತಿವೆ. ಪೂರ್ವಗ್ರಹ ಪೀಡಿತ ಸಮಾಜ ನೋಡಿ ತಲ್ಲಣಿಸಿದ್ದೇನೆ. ಈ ದೇಶದ ಭವಿಷ್ಯ ನೆನೆದರೆ ಭಯವಾಗುತ್ತಿದೆ. ಕೋಮುವಾದೀ ರಾಜಕಾರಣವು ಒಂದು ಕಡೆ ಬಹುತ್ವದ ನೆಲೆಗಳನ್ನು ನಾಶಪಡಿಸುತ್ತಿದೆ. ಮತ್ತೋಂದು ಕಡೆ ಹೆಣ್ಣಿನ ಅಸ್ಮಿತೆಯನ್ನು ಅವಳ ಚಹರೆಗಳನ್ನು ಕುಬ್ಜ ಮಾಡಿ, ಅದನ್ನು ಅಧಿಕೃತಗೊಳಿಸಿ ಇದುವೇ ಅಧಿಕೃತ ಧರ್ಮವೆಂದು ನಂಬಿಸುತ್ತದೆ.

ಇಷ್ಟು ದಿನ ಕರೋನಾ ವೈರಸ್, ಓಮಿಕ್ರಾನ್ ವೈರಸ್ ನ ಹಾವಳಿ ಸಹಿಸಿದೆವು. ಒಂದನೇ ಅಲೆ, ಎರಡನೇ ಅಲೆ. ಮೂರನೇ ಅಲೆಯೂ ಮುಗಿಯಿತು ಅನ್ನುವಷ್ಟರಲ್ಲಿ ಕೇಸರಿ ವೈರಸ್ ಬಂದು ಒಕ್ಕರಿಸಿದೆ ನಮ್ಮ ರಾಜ್ಯದಲ್ಲಿ. ಕೇಸರಿ ವೈರಸ್ ಬಂದ ನಂತರ ಎಲ್ಲಾ ವೈರಸಗಳು ಕಾಣೆಯಾಗಿವೆ. ಮನುಷ್ಯತ್ವವನ್ನೇ ಕಳೆದುಕೊಳ್ಳುವಂತೆ ವರ್ತಿಸುತ್ತಿವೆ. ಹಿಜಾಬ್ ಹಿಡಿದು ಹಿಂಡುತ್ತಿವೆ. ಎಷ್ಟು ದಿನ ಅಂತ ನಿಮ್ಮ ಹಿಂಸೆ ಸಹಿಸುವುದು. ಚೂರಾದ್ರೂ ಮನುಷ್ಯಾರಾಗಿರಿ. ಮನಷ್ಯತ್ವದ ನಡೆ ನೀಡುವಷ್ಟು ಸುಖ ಮತ್ತು ಹಿತ ಕೋಮುವಾದಿ ನಡೆಯಲ್ಲಿಲ್ಲ. ಭಾರತದಲ್ಲಿ ಕೋಮುವಾದವು ತೀವ್ರವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮವು ಇನ್ನಷ್ಟು ಮೂಲಭೂತವಾದದ ಕಡೆಗೆ ವಾಲುತ್ತಿದೆ. ಇದರ ಪರಿಣಾಮ ಹಿಂದೂ ಮತ್ತು ಮುಸ್ಲಿಂ ಮಹಿಳೆಯರ ಮೇಲೆ ಧಾರ್ಮಿಕ ಕಟ್ಟಳೆಗಳು ಬಿಗಿಯಾಗುತ್ತಿವೆ.

ಕರೋನಾ ಕಾಲದಲ್ಲಿ ನಿಮ್ಮಬಂಧು ಬಾಂಧವರು, ಸೋದರ ಸಂಬಂಧಿಗಳು ಅಣ್ಣ ತಮ್ಮಂದಿರು ಕರೋನಾದಿಂದ ಸತ್ತ ಶವಗಳನ್ನು ಮುಟ್ಟಲು ಸಹ ಸಿದ್ಧರಿಲ್ಲದ ಸಮಯದಲ್ಲಿ, ಹಿಂದೂ ಸಂಪ್ರದಾಯದಂತೆಯೇ ತಮ್ಮವರದೇ ಶವಗಳೇನೋ ಎಂಬಂತೆ  ಶವಸಂಸ್ಕಾರ ಮಾಡಿದ ಮುಸಲ್ಮಾನ ಬಾಂಧವರನ್ನು ಕ್ಷಣ ಕಾಲ ನೆನೆಯಿರಿ. ಧರ್ಮದ್ವೇಷ ರಾಜಕೀಯಕ್ಕೆ ಲಾಭದಾಯಕವಾಗಬಹುದು. ಆದರೆ ಮನುಷ್ಯ ಸಮಾಜಕ್ಕೆ ಬೇಡವಾದ ನಡೆಯಾಗಿದೆ. ಮನುಷ್ಯತ್ವವಿಲ್ಲದ ಯಾವ ಧರ್ಮವೂ ಇಲ್ಲ ರಾಜಕಾರಣವೂ ಕೂಡ. ಮನುಷ್ಯತ್ವಕ್ಕಿಂತ ಮಿಗಿಲಾದ ಬೇರೆ ಧರ್ಮವಿಲ್ಲ.

ಈ ಪುರುಷ ಪ್ರಧಾನ ಸಮಾಜವು ಗಂಡಸಿಗೆ ಕಡ್ಡಾಯವಲ್ಲದ ಅನೇಕ ಧಾರ್ಮಿಕ ಕುರುಹುಗಳನ್ನು ಹೆಣ್ಣಿಗೆ ಮಾತ್ರ ಕಡ್ಡಾಯಗೊಳಿಸುತ್ತಿದೆ. ಅದು ಹಿಜಾಬ್ ಆಗಿರಬಹುದು ಅಥವಾ ಕುಂಕುಮ, ಬಳೆ, ಹೂ ಆಗಿರಬಹುದು. ಬಹುತ್ವದ ಭಾರತದಲ್ಲಿ ಈ ಮೂಲಕ ಹೆಣ್ಣನ್ನು ತನ್ನ ಬಿಗಿ ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನ ಪುರುಷ ಪ್ರಧಾನ ಸಮಾಜ ಮಾಡುತ್ತಿದೆ. ಅವಳ ಹಿಜಾಬ್ ಇವಳ ಕುಂಕುಮ ಪವಿತ್ರೀಕರಿಸಲಾಗುತ್ತದೆ. ಧರ್ಮದ ಕುರುಹುಗಳಾಗಿ ವಿಜೃಂಭಿಸಲಾಗುತ್ತದೆ. ಕಟ್ಟಳೆಗಳನ್ನು ಬಿಟ್ಟು ಅದನ್ನೆಲ್ಲಾ ಅವಳ ಆಯ್ಕೆಗೆ ಇವರುಬಿಡುತ್ತಾರೆಯೇ? ಬಹಳಷ್ಟು ಪ್ರಕರಣಗಳಲ್ಲಿ ಈ ಹಿಜಾಬ್ ಅವರಿಗೆ ಪ್ರಗತಿಯಿಂದ ಹಿಮ್ಮುಖ ಮಾಡುತ್ತಿಲ್ಲ. ಬದಲಾಗಿ ಅದು ಅವರ ಪ್ರಗತಿಗೆ ಕಾರಣವಾಗಿರುವುದನ್ನೂ ನಾವು ಕಾಣುತ್ತಿದ್ದೇವೆ. ಹಲವಾರು ಬಾರಿ ಹೆಣ್ಣಿನ ಹಿಜಾಬ್ ಮತ್ತು ಹಿಂದೂ ಮಹಿಳೆಯ ಕುಂಕುಮ ಬಳೆಗಳ ಹಿಂದೆ ಜಾಳು ಜಾಳಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಒತ್ತಾಯಗಳಿರುತ್ತವೆ. ಇಂತಹ ಚಹರೆಗಳನ್ನು ಆಯಾ ಧರ್ಮದ ಮಹಿಳೆಯರು ಪಾಲಿಸಬೇಕೆಂಬ ಒಪ್ಪಿತಗಳನ್ನು ಸಮಾಜವೇ ಅವರಿಗೆ ಕಲಿಸಿರುತ್ತದೆ. ಇದೆಲ್ಲವೂ ಗಂಡಾಳಿಕೆಯ ಭಾಗವಾಗಿಯೇ ಮುಂದುವರಿದಿವೆ.

ಆಚಾರ, ವಿಚಾರ, ಭಾಷೆ, ಜಾತಿ, ಧರ್ಮ, ಮತ, ಸಂಸ್ಕೃತಿಯ ಹೊರತಾಗಿಯೂ ನಾವು ಎಲ್ಲರೂ ಜತೆಯಾಗಿರುತ್ತೇವೆಂದು ತೀರ್ಮಾನಿಸಿ, ಅದರ ತಳಹದಿಯ ಮೇಲೆ ಒಂದು ಭಾರತದ ರಚನೆಯಾಗಿದೆ. ಜತೆಯಾಗಿರುವುದು ಮಾತ್ರವಲ್ಲ, ಪರಸ್ಪರ ಸಹಿಷ್ಣುತೆಯೊಂದಿಗೆ ವಿಭಿನ್ನತೆಯನ್ನು ಆಚರಿಸುವುವ ನಂಬಿಕೆಯೊಂದಿಗೆ ನಮ್ಮ ಭಾರತದ ಅಸ್ಮಿತೆ ಬೆಸೆದುಕೊಂಡಿದೆ. ಅದುವೆ ಬಹುಸಂಸ್ಕೃತಿಯ ಅಸ್ಮಿತೆಯನ್ನೊಳಗೊಂಡ ಭಾರತದ ವಿಶಿಷ್ಟತೆಯಾಗಿದೆ. ಲೀಯೋ ಟಾಲಸ್ಟಾಯ್ ಹೇಳುತ್ತಾರೆ. “ಒಂದು ದೇಶವನ್ನು ನಾಶಗೊಳಿಸಬೇಕಾದರೆ, ಆ ದೇಶದೆ ಜನರು ಧರ್ಮದ ಹೆಸರಿನಲ್ಲಿ ಪರಸ್ಪರ ಹೊಡೆದಾಡುವಂತೆ ಮಾಡಬೇಕು, ಅಂತಹ ದೇಶವು ತನ್ನಿಂದ ತಾನೇ ನಾಶವಾಗುತ್ತದೆ” ಎಂದು.

ಈ ಬಹುತ್ವವನ್ನು, ವೈವಿಧ್ಯ ಸಂಸ್ಕೃತಿಗಳನ್ನು ನಾವು ಯಾವಾಗ ಮರೆಯುತ್ತೇವೆಯೋ ಆವಾಗ ಒಬ್ಬರ ಭಿನ್ನತೆಯ ಕುರಿತು ಅಪಸ್ವರಗಳು ಕೇಳಿ ಬರಲು ಪ್ರಾರಂಭಿಸುತ್ತವೆ. ಆಗ ನಮ್ಮ ದೇಶವೂ ಉಳಿಯಲಾರದೆಂಬ ಸತ್ಯವನ್ನು ನಾವು ಅರಿಯಬೇಕಿದೆ. ಕೇಂದ್ರ ಸರ್ಕಾರ, ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಎನ್ನುತ್ತ ಬಹುತ್ವದ ಕುರುಹುಗಳನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ. ಅದನ್ನೇ ಮುಗ್ಧ ಮಕ್ಕಳ ತಲೆಯಲ್ಲಿಯೂ ತುಂಬುವ ಪ್ರಯತ್ನ ಮಾಡುತ್ತಿದೆ. ಆದರೆ ಇಂತಹ ಭಾರತ ನಮ್ಮದಲ್ಲ. ವಿಭಿನ್ನತೆಯೊಂದಿಗೆ, ಪರಸ್ಪರರನ್ನು ಗೌರವಿಸಿಕೊಂಡು, ಅವರವರ ಆಚರಣೆಗಳನ್ನು ಸೌಹಾರ್ದದಿಂದ ಕಾಣುವುದೇ ಬಹುತ್ವ ಭಾರತದ ನಡೆಯಾಗಿದೆ.

ಕರಾವಳಿ ಕರ್ನಾಟಕ ಯಾವತ್ತೂ ಕೋಮುವಾದಕ್ಕೆ ಹೆಸರು ಮಾಡಿರುವ ಪ್ರದೇಶವಾಗಿದೆ. ಮಕ್ಕಳ ಮುಗ್ಧ ಮನಸುಗಳನ್ನು ಕೋಮು ವಿಷ ಬೀಜ ಬಿತ್ತಿ ಪರಸ್ಪರ ಎದುರಾಳಿಗಳನ್ನಾಗಿಸುವ ಪ್ರಯತ್ನ ಇದಾಗಿದೆ. ಬೆರಳೆಣಿಕೆಯಷ್ಟಿರುವ ಕೋಮುವಾದಿಗಳ ಕಾರಣಕ್ಕೆ ಉಡುಪಿ ಮಂಗಳೂರಿನಂತಹ ಪ್ರದೇಶಗಳು ದಕ್ಷಿಣ ಕನ್ನಡ ಜಿಲೆಗೆ ಕೆಟ್ಟ ಹೆಸರು ತರುತ್ತಿವೆ. ಕೋಮುದ್ವೇಷದ ನಡೆ ಉಡುಪಿ, ಕುಂದಾಪುರದಿಂದ ಆರಂಭವಾಗಿ ಶಿವಮೊಗ್ಗ, ಬೆಳಗಾವಿಗೆ ಹಬ್ಬಿ ದೇಶದಾದ್ಯಂತ ಸದ್ದು ಮಾಡಿ ಈಗ ವಿಶ್ವದ ಗಮನ ಸೆಳೆಯುತ್ತಿದೆ. ದೇಶ ವಿದೇಶಗಳಲ್ಲಿ ಇದು ಚರ್ಚೆಯಾಗಿ, ನಾಯಕರುಗಳ ನಿಷ್ಕ್ರಿಯತೆ ಮತ್ತು (ಮುಸ್ಲಿಂ) ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುವ ಬೇಜವಾಬ್ದಾರಿ ನಡೆಗಳನ್ನು ಪ್ರಶ್ನಿಸುತ್ತಿದ್ದಾರೆ, ಟೀಕಿಸುತ್ತಿದ್ದಾರೆ. ಇಂತಹ ನಂಜೇರಿದ ರಾಜಕಾರಣಿಗಳಿಗೆ ಈ ಪುಟ್ಟ ಮಕ್ಕಳೇ ಬುದ್ದಿ ಕಲಿಸಬೇಕಿದೆ. ವಿದ್ಯಾರ್ಥಿಗಳು ಪರಸ್ಪರ ಸಂಸ್ಕೃತಿ, ಆಚರಣೆಗಳನ್ನು ರಕ್ಷಣೆ ಮಾಡಲು ಎಲ್ಲಾ ಧರ್ಮಿಯರನ್ನು ಗೌರವಿಸುವುದು, ರಕ್ಷಿಸುವ ಕೆಲಸ ಮಾಡಬೇಕಿದೆ. “ಅನೇಕತಾ ಮೇ ಏಕತಾ” ಎಂಬ ಸೂತ್ರ ನಮ್ಮದಾಗಬೇಕಿದೆ. ಮೌಮಿತ ಆಲಂರವರು“ನಾನು ಓದುತ್ತೇನೆ/ನಾನು  ಬರೆಯುತ್ತೇನೆ/ ನಾನೇನನ್ನು ಉಡುತ್ತೇನೋ/ನಾನೇ ನಿರ್ಧರಿಸುತ್ತೇನೆ.” ಎಂದು ‘ನನ್ನನ್ನು ಪ್ರತಿರೋಧವೆಂದು ಕರೆಯಿರಿ’ ಕವನದಲ್ಲಿ ಹೇಳುತ್ತಾರೆ. ಹೆಣ್ಣು ಮಕ್ಕಳೇ ಹಾಗೆ. ಅವರು ಯಾರ ತಂಟೆಗೂ ಹೋಗುವುದಿಲ್ಲ. ತಮ್ಮ ಪಾಡಿಗೆ ತಾವಿರುತ್ತಾರೆ. ತಮ್ಮ ತಂಟೆಗೆ ಯಾರಾದರೂ ಬಂದರೆ ಅವರನ್ನು ಖಂಡಿತ ಬಿಡುವುದಿಲ್ಲ.”ನಾರಿ ಮುನಿದರೆ ಮಾರಿ” ಡಾ.ಬಿ.ಆರ್.ಅಂಬೇಡ್ಕರ್. “ಹಿಂದೂ ಮುಸ್ಲಿಂ ಗಲಭೆಯಾಗುವಾಗ ಅಸ್ಪೃಶ್ಯರು ಹಿಂದೂಗಳಾಗುತ್ತಾರೆ. ಗಲಭೆ ಮುಗಿದ ಬಳಿಕ ಮತ್ತೇ ಅಸ್ಪೃಶ್ಯರಾಗುತ್ತಾರೆ” ಎಂಬುದನ್ನು ನಾವು ಗಮನಿಸಬೇಕು.

Donate Janashakthi Media

Leave a Reply

Your email address will not be published. Required fields are marked *