ಬೆಂಗಳೂರು: ಹಿಜಾಬ್ ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ ಎಂದು ಸಲಹೆ ನೀಡಿಲಾಗಿದೆ. ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ, ಧಾರ್ಮಿಕ ಗುರುತು ಸೂಚಿಸುವಂತಹ ವಸ್ತ್ರಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗಬಾರದು ಎಂದು ಮೌಖಿಕ ಆದೇಶ ನೀಡಿರುವ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿದೆ.
ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷವಾಗಿ ಈಗ ಮಧ್ಯಂತರ ಆದೇಶ ನೀಡಬಯಸುತ್ತೇವೆ. ವಿಚಾರಣೆ ಮುಗಿವವರೆಗೆ ಧಾರ್ಮಿಕ ಗುರುತುಗಳನ್ನು ಬಳಸಬಾರದು. ನಾವು ಈಗ ಆದೇಶ ಹೊರಡಿಸುತ್ತೇವೆ. ಕೆಲವೇ ದಿನಗಳಲ್ಲಿ ತೀರ್ಪು ನೀಡಲಾಗುವುದು ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.
ಹಿಜಾಬ್ ವಿವಾದ ಸಂಬಂಧ ಮೂರನೇ ದಿನದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯಿತು. ವಿಶೇಷ ಪೀಠವು ಉಡುಪಿ ವಲಯದ ಕಾಲೇಜುಗಳ 18 ಬಾಲಕಿಯರ ಪರವಾಗಿ ಒಟ್ಟು ಐದು ಅರ್ಜಿಗಳನ್ನು ಇಂದು ಮಧ್ಯಾಹ್ನ 02:30ಕ್ಕೆ ಆರಂಭಿಸಿದರು.
ಹೈಕೋರ್ಟ್ ಕೊಠಡಿ ಸಂಖ್ಯೆ 1 ರಲ್ಲಿ ಕಿಕ್ಕಿರಿದು ವಕೀಲರು ತುಂಬಿದ್ದರು. ಹೈಕೋರ್ಟ್ ಗೆ ಎಜಿ ಪ್ರಭುಲಿಂಗ್ ನಾವದಗಿ ಹಾಜರಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿದಾರರ ಪರ ವಕೀಲರು ಹಾಜರಾಗಿದ್ದಾರೆ. ದೇವದತ್ ಕಾಮತ್, ಸಂಜಯ್ ಹೆಗ್ಡೆ ಮತ್ತು ಶಾಲಾ ಅಭಿವೃದ್ಧಿ ಸಮಿತಿ ಪರವಾಗಿ ಸಜನ್ ಪೂವಯ್ಯ ಹಾಜರಾಗಿದ್ದರು.
ಫೆಬ್ರವರಿ 8, 9 ರಂದು ಎರಡು ದಿನಗಳ ಕಾಲ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ನಡೆದ ಬಳಿಕ ಪ್ರಕರಣ ಧರ್ಮ ಸೂಕ್ಷ್ಮವಾದ ಕಾರಣ ಇದನ್ನು ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು.
ಕರ್ನಾಟಕದಲ್ಲಿ ಹಲವೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷ ಹೆಚ್ಚಾಗುತ್ತಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡಿದ್ದರು. ಧರಣಿಯಲ್ಲಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವರಿಗೆ ಗಾಯಗಳಾಗಿವೆ. ಪರ-ವಿರೋಧ ಹೆಸರಲ್ಲಿ ಬೀದಿಗಿಳಿದ ವಿದ್ಯಾರ್ಥಿಗಳು ದಾಂಧಲೆ ನಡೆಸಿದ್ದರು. ಶಿವಮೊಗ್ಗ, ದಾವಣಗೆರೆ, ಬನಹಟ್ಟಿ ದೊಡ್ಡ ಮಟ್ಟದ ಗಲಭೆಗಳು ಸಂಭವಿಸಿದವು.
ಹಿಜಾಬ್ ಧರಿಸುವುದು ಸಂವಿಧಾನದ 25(1) ರಡಿ ಹಕ್ಕಲ್ಲ
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್ ನ್ಯಾಯಪೀಠದ ಮುಂದೆ ತಮ್ಮ ವಾದ ಮಂಡಿಸಿ, ವಿದ್ಯಾರ್ಥಿಗಳು ವರ್ಷಗಳಿಂದ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದಾರೆ. ಫೆಬ್ರವರಿ 3ನೇ ತಾರೀಖಿನಿಂದ ಮಾತ್ರ ಹಿಜಾಬ್ ಗೆ ನಿರ್ಬಂಧವಿದ್ದು, ಸರ್ಕಾರದ ಸಮವಸ್ತ್ರ ಆದೇಶ ವಿವೇಚನಾರಹಿತವಾಗಿದೆ. ಸರ್ಕಾರಿ ಆದೇಶದ ಎರಡನೇ ಪುಟವನ್ನು ತಾವು ಓದಬೇಕು. ಸುಪ್ರೀಂಕೋರ್ಟ್, ಹೈಕೋರ್ಟ್ ಗಳ ತೀರ್ಪನ್ನು ಉಲ್ಲೇಖಿಸಲಾಗಿದೆ. ಹಿಜಾಬ್ ಧರಿಸುವುದು ಸಂವಿಧಾನದ 25(1) ರಡಿ ಹಕ್ಕಲ್ಲ ಎಂದಿದ್ದಾರೆ. ಕಾನೂನಿಗೆ ವಿರುದ್ಧವಾದ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಸರ್ಕಾರ ಉಲ್ಲೇಖಿಸಿರುವ ಮೂರೂ ತೀರ್ಪುಗಳು ಅದರ ವಿರುದ್ಧವಿದೆ. ಪುಟ 35 ಅನ್ನು ಪರಾಮರ್ಶಿಸುವಂತೆ ಮನವಿ ಮಾಡಲಾಗಿದ್ದು, ಖಾಸಗಿ ಶಾಲೆಯಲ್ಲಿ ಧಾರ್ಮಿಕ ವಸ್ತ್ರ ಧರಿಸುವ ಪ್ರಕರಣ ಇದಾಗಿದೆ. ಸರ್ಕಾರಿ ಶಾಲೆಯಲ್ಲಿ ಹಿಜಾಬ್ ಧರಿಸುವ ವಿಚಾರವಲ್ಲ. ಖಾಸಗಿ ಶಾಲೆಗೂ ಅದರದ್ದೇ ಆದ ಮೂಲಭೂತ ಹಕ್ಕಿದೆ. ಸಂವಿಧಾನದ 30 ನೇ ವಿಧಿಯಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಹಕ್ಕಿದೆ. ವೈಯಕ್ತಿಕ ಹಕ್ಕು ಹಾಗೂ ಶಾಲೆಗಳ ಹಕ್ಕಿನ ನಡುವೆ ಸ್ಪರ್ಧೆಯಿತ್ತು ಎಂದು ಮಂಡನೆ ಮಾಡಿದರು.
ಖಾಸಗಿ ಅಲ್ಪಸಂಖ್ಯಾತ ಶಾಲೆಯ ಹಕ್ಕನ್ನು ಎತ್ತಿಹಿಡಿದಿತ್ತು. ಇದಕ್ಕೂ ಮೊದಲ ತೀರ್ಪಿನಲ್ಲಿ ಹಿಜಾಬ್ ಹಕ್ಕನ್ನು ಎತ್ತಿ ಹಿಡಿಯಲಾಗಿದೆ. ಖುರಾನ್, ಹದೀಸ್ನ್ನು ಉಲ್ಲೇಖಿಸಿ ಕೋರ್ಟ್ ತೀರ್ಪು ನೀಡಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವೆಂದು ಹೇಳಿದೆ ಎಂದು ಕೇರಳ ಹೈಕೋರ್ಟ್ನ 2016 ರ ತೀರ್ಪುನ್ನು ದೇವದತ್ ಓದಿದರು.
ಕೇರಳ ಪ್ರಕರಣದ ಬಗ್ಗೆ ಸಂಜಯ್ ಹೆಗ್ಡೆ ಉಲ್ಲೇಖ
ಕೇರಳ ಹೈಕೋರ್ಟ್ ಹಿಜಾಬ್ ಧರಿಸಿ ಪರೀಕ್ಷೆಗೆ ತೆರಳಲು ಅನುಮತಿ ನೀಡಿತ್ತು. ಹಿಜಾಬ್ ತಪಾಸಣೆ ನಡೆಸಿ ಪ್ರವೇಶ ನೀಡುವಂತೆ ಸೂಚಿಸಲಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು ಎಂದು ನ್ಯಾ. ಮೊಹಮ್ಮದ್ ಮುಷ್ತಾಕ್ ರ ತೀರ್ಪುನ್ನು ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೋರ್ವ ವಕೀಲ ಸಂಜಯ್ ಹೆಗ್ಡೆ ಕೇರಳ ಪ್ರಕರಣದ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಅಮೆರಿಕಾ ಕೋರ್ಟ್ನ ತೀರ್ಪು ಓದು
ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಕೆಲವೊಮ್ಮ ಮಾತ್ರ ನಿರ್ಬಂಧಿಸಬಹುದು. ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆ ದೃಷ್ಟಿಯಿಂದ ನಿರ್ಬಂಧಿಸಬಹುದು. ಅದೂ ಕೂಡಾ ಉಡುಪಿಯದ್ದೇ ಆದ ಶಿರೂರು ಮಠದ ಕೇಸ್ ಕೇರಳದ ಬಿಜಾಯ್ ಎಮ್ಯಾನುಯಲ್ ಪ್ರಕರಣದ ಉಲ್ಲೇಖ ಮಾಡಲಾಗುತ್ತಿದ್ದು, ರಾಷ್ಟ್ರಗೀತೆ ವೇಳೆ ವ್ಯಕ್ತಿ ಸುಮ್ಮನೇ ನಿಂತಿದ್ದ ಬಗ್ಗೆ ದೂರಲಾಗಿತ್ತು. ಲಿಂಕನ್ ನ ಗೊಂದಲ ಸರ್ಕಾರ, ಎಜಿ ಗೂ ಇರಬಹುದು ಎಂದು ನ್ಯಾ. ಜಾಕ್ಸನ್ ರ ಅಮೆರಿಕಾ ಕೋರ್ಟ್ ನ ತೀರ್ಪು ಸಹ ಓದಿದರು.
ಬಟ್ಟೆ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು
ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅದಕ್ಕೆ ಶಾಲೆಯ ಟೀಚರ್ ಗಳು ಆಕ್ಷೇಪ ಎತ್ತಿದ್ದಾರೆ. ಜೊತೆಗೆ ಹಿಜಾಬ್ ಧರಿಸಿ ಬಂದಾಗ ಗದರುತ್ತಿದ್ದರು. ಅಟೆಂಡೆನ್ಸ್ ಕೊಡದೇ ಆಬ್ಸೆಂಟ್ ಹಾಕುತ್ತಿದ್ದರು. ಹಿಜಾಬ್ ಅನ್ನು ತೆಗೆಯುವಂತೆ ಕೆಲವರು ಸೂಚಿಸಿದ್ದರು. ಹಿಜಾಬ್ ಧರಿಸಿ ತರಗತಿಗೆ ಬರಲು ಟೀಚರ್ ಅವಕಾಶ ನೀಡಿಲ್ಲ. ಡಿಸೆಂಬರ್ 2021 ರಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ವಿದ್ಯಾರ್ಥಿನಿಯರು ಶಾಲೆ ಅಭಿವೃದ್ದಿ ಸಮಿತಿಗೆ ದೂರು ನೀಡಿದ್ದಾರೆ ಎಂದು ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಇಚ್ಚಾನುಸಾರ ಬಟ್ಟೆ ತೊಡುವ ಹಕ್ಕಿದೆ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸಲು ಅವಕಾಶವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶವಿಲ್ಲ. ಬಟ್ಟೆ ಧರಿಸುವುದು ಸಂವಿಧಾನದ 19(1)ಎ ಅಡಿ ಬರುತ್ತದೆ. ದಿವ್ಯಾ ಯಾದವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರ್ಧರಿಸಿದೆ. ಬಟ್ಟೆ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಾಗಿದೆ ಎಂದು ಸಂಜಯ್ ಹೆಗ್ಡೆ ವಾದ ಮಂಡನೆ.
ಶಾಲೆಗಳಲ್ಲಿ ಮೊದಲು ಸಮವಸ್ತ್ರ ಎಂಬುದು ಇರಲಿಲ್ಲ. ತಮಿಳುನಾಡಿನಲ್ಲಿ ಮೊದಲಿಗೆ ಅದು ಶುರುವಾಯಿತು. 1995 ರಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ರೂಪಿಸಿತು. ಶಾಲಾ ಪಠ್ಯಕ್ರಮ ಸಂಬಂಧ ಈ ನಿಯಮಗಳಿವೆ. ಆದರೆ ಸಮವಸ್ತ್ರ 5 ವರ್ಷಕ್ಕೊಮ್ಮೆ ಬದಲಿಸಬೇಕು. ಇಚ್ಚೆ ಬಂದ ಕಡೆ ಸಮವಸ್ತ್ರ ಹೊಲಿಸಲು ಅವಕಾಶ ನೀಡಿಲಾಗಿದೆ. ಕಾಯ್ದೆಯಲ್ಲಿ ಶಾಲೆಗಳಿಗೆ ಸಮವಸ್ತ್ರ ಸಂಬಂಧ ಕೆಲ ಸೂಚನೆಗಳಿವೆ. ಆದರೆ ಪಿಯು ಕಾಲೇಜುಗಳಿಗೆ ಸಮವಸ್ತ್ರ ಸಂಬಂಧ ಯಾವುದೇ ನಿಯಮಗಳಿಲ್ಲ. ಸರ್ಕಾರ, ಶಾಲೆ ಒಂದು ಗೊತ್ತುವಳಿ ಮೇಲೆ ಅವಲಂಬಿತವಾಗಿದ್ದು, ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಗೊತ್ತುವಳಿ ಅಂಗೀಕರಿಸಲಾಗಿದೆ. ಹೃದಯ ವೈಶಾಲ್ಯತೆ ಇಲ್ಲದೇ ಈ ದೇಶದ ಬೆಳವಣಿಗೆ ಸಾಧ್ಯವಿಲ್ಲ ಎಂದು ಸಂಜಯ್ ಹೆಗ್ಡೆ ತಮ್ಮ ವಾದಮಂಡನೆ ಮುಂದುವರಿಸಿದ್ದಾರೆ.
ಸಂಜಯ್ ಹೆಗ್ಡೆ ವಾದಕ್ಕೆ ಮುಖ್ಯನ್ಯಾಯಮೂರ್ತಿ ಪ್ರತಿಕ್ರಿಯೆ
ನಮಗೆ ಅರ್ಥವಾಯಿತು ಈಗ ಕಾನೂನಿನ ವಾದ ಹೇಳಿ ಎಂದು ಅರ್ಜಿದಾರರಿಗೆ ಸಿಜೆ ರಿತುರಾಜ್ ಅವಸ್ತಿ ಸೂಚನೆ ನೀಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರ ಸಂಬಂಧ ನಿಯಮವಿಲ್ಲ. ಸಂಜಯ್ ಹೆಗ್ಡೆ ವಾದಕ್ಕೆ ಸಿಜೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ ಸಮವಸ್ತ್ರ ಧರಿಸುವ ಅಗತ್ಯವಿಲ್ಲವೇ. ನಮ್ಮ ಮೌಖಿಕ ಹೇಳಿಕೆಗಳನ್ನು ಬರೆಯಬೇಡಿ ಎಂದು ಮಾಧ್ಯಮಗಳಿಗೆ ಸಿಜೆ ಸೂಚನೆ.
ಮಧ್ಯಂತರ ಅರ್ಜಿದಾರ ಕಾಳೀಶ್ವರಮ್ ರಾಜ್ ವಾದ ಮಂಡನೆ
ಸರ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವಕಾಶ ನೀಡಬೇಕು. ಕೃಪಾಣ್ ಧರಿಸಲು ಸಿಖ್ಖರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಹಿಜಾಬ್ನೊಂದಿಗೆ ವಿದ್ಯಾರ್ಥಿನಿ ಹಾಜರಾಗಲು ಅನುಮತಿ ನೀಡಬೇಕು ಎಂದು ಮಧ್ಯಂತರ ಅರ್ಜಿದಾರ ಕಾಳೀಶ್ವರಮ್ ರಾಜ್ ವಾದ ಮಂಡನೆ.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ನಾವದಗಿ ವಾದ
ಅಂತಿಮ ತೀರ್ಪಿಗೆ ವಾದ ಕೇಳಲು ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ. ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಇದರಿಂದ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಗಲಭೆ ವಾತಾವರಣ ಇದೆ. ಹೀಗಾಗಿ ಸರ್ಕಾರ ಹೈಸ್ಕೂಲ್ ಕಾಲೇಜುಗಳಿಗೆ ನಾಳೆವರೆಗೆ ರಜೆ ನೀಡಿದೆ. ನಾವು ಕಾಲೇಜುಗಳನ್ನು ಆರಂಭಿಸಲು ಸಿದ್ದರಾಗಿದ್ದೇವೆ, ಆದರೆ ಒಬ್ಬರು ಹಿಜಾಬ್ ಮತ್ತೊಬ್ಬರಿಂದ ಕೇಸರಿ ಶಾಲಿಗೆ ಒತ್ತಾಯ ಕೇಳಿಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಕಾಲೇಜು ಆರಂಭಿಸುವುದು ಕಷ್ಟ. ಶಾಲಾ ಅಭಿವೃದ್ದಿ ಸಮಿತಿಯ ವಸ್ತ್ರಸಂಹಿತೆಗೆ ಬದ್ದವಾಗಿರಬೇಕು. ವಿವಾದಕ್ಕೆ ಸಂಬಂಧಿಸದ ದೊಡ್ಡ ಸಂಖ್ಯೆ ವಿದ್ಯಾರ್ಥಿಗಳಿದ್ದಾರೆ, ಅವರೆಲ್ಲಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದರು.
ಶಾಲೆ ಸ್ಥಗಿತದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಬೇಸರ
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರು, ಹಿಜಾಬ್ ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ಸ್ಥಗಿತಗೊಳಿಸಿದ ಸರ್ಕಾರದ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ವಿವಾದದಿಂದ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಶೀಘ್ರಗತಿಯಲ್ಲಿ ಆರಂಭಿಸಿ ಎಂದರು.
ಮುಂದಿನ ವಿಚಾರಣೆಯನ್ನು ಮುಂದಿನ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿರುವ ರಿತು ರಾಜ್ ಅವಸ್ಥಿ ಅವರು ತುರ್ತಾಗಿ ಅರ್ಜಿಯ ವಿಚಾರಣೆ ಮುಗಿಸಲು ಆಗುವುದಿಲ್ಲ. ಇನ್ನು ವಾದ-ಪ್ರತಿವಾದಗಳನ್ನು ಕೂಲಂಕೂಶವಾಗಿ ಪರಿಶೀಲಿಸಬೇಕಿದೆ ಎಂದಿದ್ದಾರೆ.
ಹಿಜಾಬ್ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ದೇವದತ್ ಕಾಮತ್ ಅವರು ವಾದ ಮಂಡಿಸಿದರು. ಇನ್ನು ಹಿರಿಯ ವಕೀಲರಾದ ಸಂಜಯ್ ಹೆಗಡೆ ಸಹ ವಾದ ಮಂಡಿಸಿದ್ದರು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ವಾದ ಮಂಡಿಸಿದರು.
ಅರ್ಜಿ ವಿಚಾರಣೆಯ ಎರಡನೇ ದಿನವಾದ ನೆನ್ನೆ (ಬುಧವಾರ) “ವೈಯಕ್ತಿಕ ಕಾನೂನಿನ ಕೆಲವು ಅಂಶಗಳ ಹಿನ್ನಲೆಯಲ್ಲಿ ಮೂಲಭೂತ ಪ್ರಾಮುಖ್ಯತೆಯ ಕೆಲವು ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ” ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಜೊತೆಗೆ ವಿದ್ಯಾರ್ಥಿನಿಯರು ಮಧ್ಯಂತರ ಆದೇಶದ ಸಮಸ್ಯೆಯನ್ನು ಸಹ ವಿಸ್ತೃತ ಪೀಠವೇ ಪರಿಗಣಿಸುತ್ತದೆ ಎಂದು ಆದೇಶ ನೀಡಿದ್ದರು.