ವಿದ್ಯಾರ್ಥಿನೀಯರು ಬುರ್ಖಾ ಧರಿಸಿರಲಿಲ್ಲ-ಸಮವಸ್ತ್ರ ಬಣ್ಣದ ಬಟ್ಟೆಯನ್ನು ಶಿರವಸ್ತ್ರವಾಗಿ ಬಳಸಿದ್ದರು

ನವದೆಹಲಿ: ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದಂತೆ  ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್ ಅವರು ವಿದ್ಯಾರ್ಥಿನೀಯರು ತರಗತಿಗಳಲ್ಲಿ ಧರಿಸುತ್ತಿದ್ದುದು ಬುರ್ಕಾ ಅಲ್ಲ, ಅವರು ಹಿಜಾಬ್ ಧರಿಸಿದ್ದರು. ಹಿಜಾಬ್ ಅಂದ್ರೆ ತಲೆಗೆ ಸುತ್ತಿಕೊಳ್ಳುವ ಒಂದು ಬಟ್ಟೆಯಾಗಿದೆ. ಇದು ಕಪ್ಪು ಸೇರಿ ಬೇರೆ ಬೇರೆ ಬಣ್ಣಗಳಲ್ಲಿ ಇರುತ್ತದೆ. ವಿದ್ಯಾರ್ಥಿನೀಯರು ಶಾಲೆಯ ಸಮವಸ್ತ್ರ ಬಟ್ಟೆಯ ಬಣ್ಣದೇ ಧರಿಸುತ್ತಿದ್ದಾರೆ. ಅವರು ಸಮವಸ್ತ್ರ ಬಣ್ಣ ಬಿಟ್ಟು ಬೇರೆ ಬಣ್ಣದ ಬಟ್ಟೆ ಧರಿಸುತ್ತಿಲ್ಲ. ಇದರಲ್ಲಿ ನಿಯಮಗಳ ಉಲ್ಲಂಘನೆ ಏನಿದೆ ಎಂದು ಪ್ರಶ್ನಿಸಿದರು.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದರ ವಿರುದ್ಧದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ನ್ಯಾಯಪೀಠ  ಇಂದು ಮುಂದುವರೆಯಿತು.

ಹಿಜಾಬ್ ಸಂವಿಧಾನದ 25ನೇ ವಿಧಿಯ ಭಾಗವಲ್ಲ ಎಂದು ಸರ್ಕಾರದ ಆದೇಶದಲ್ಲಿದೆ.  ಇದು ಒಂದು ಸಮುದಾಯವನ್ನು ಗುರಿ ಮಾಡಿದಂತೆ ಆಗುತ್ತದೆ ಎಂದು ಕಾಮತ್ ವಾದಿಸಿದರು. “ರಾಜ್ಯ ಸರ್ಕಾರದ ಆದೇಶವನ್ನು ನೀವು ಓದಿರುವ ಬಗೆ ಸರಿ ಇಲ್ಲ. ಏಕೆಂದರೆ ಒಂದೇ ಒಂದು ಸಮುದಾಯ ಮಾತ್ರವೇ ಧಾರ್ಮಿಕ ಉಡುಪು ಧರಿಸಿ ಬರಲು ಬಯಸಿದೆ” ಎಂದು ನ್ಯಾ. ಗುಪ್ತಾ ಹೇಳಿದರು.

ಇದಕ್ಕೆ ಉತ್ತರಿಸಿದ ಕಾಮತ್, ಬೇರೆ ಧರ್ಮಗಳ ವಿದ್ಯಾರ್ಥಿಗಳು ರುದ್ರಾಕ್ಷಿ, ಶಿಲುಬೆ ಮತ್ತು ನಾಮಗಳನ್ನು ಧರಿಸುತ್ತಾರೆ ಎಂದರು. “ರುದ್ರಾಕ್ಷಿ ಅಥವಾ ಶಿಲುವೆ ಬೇರೆ ಸಂಗತಿ. ಅವುಗಳನ್ನು ಉಡುಪಿನ ಒಳಗೆ ಧರಿಸುತ್ತಾರೆ. ಬೇರೆಯವರಿಗೆ ಕಾಣಿಸುವುದಿಲ್ಲ. ಇದರಿಂದ ಶಿಸ್ತಿನ ಉಲ್ಲಂಘನೆ ಆಗುವುದಿಲ್ಲ” ಎಂದು ನ್ಯಾ. ಗುಪ್ತಾ ಹೇಳಿದರು.

ಇಲ್ಲಿ ಪ್ರಶ್ನೆ ಇರುವುದು ಸಕಾರಣ ಅನುಮತಿಯ ಬಗ್ಗೆ, ಅವು ಕಾಣಿಸುತ್ತದೆಯೇ ಅಥವಾ ಅಲ್ಲವೇ ಎಂಬುದಲ್ಲ ಎಂದು ಕಾಮತ್ ವಾದಿಸಿದರು.

ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್‌ಗೆ ಅವಕಾಶ

ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿನ ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಾಬ್‌ಗೆ ಅವಕಾಶವಿದೆ. ಈವರೆಗೂ ಕೇಂದ್ರೀಯ ವಿದ್ಯಾನಿಲಯಗಳಲ್ಲಿ ನಿಯಮ ಬದಲಿಸಿಲ್ಲ. ಸಿಖ್ಖರಿಗೆ ಸಮವಸ್ತ್ರದ ಬಣ್ಣ ಟರ್ಬೈನ್‌ಗೆ ಅವಕಾಶ ನೀಡಿದೆ. ಅದೇ ರೀತಿ ಮುಸ್ಲಿಂ ವಿದ್ಯಾರ್ಥಿನೀಯರಿಗೆ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಿದೆ. ರಾಜ್ಯಗಳಲ್ಲಿ ಮಾತ್ರ ಹಿಜಾಬ್‌ಗೆ ಅವಕಾಶ ಯಾಕಿಲ್ಲ ಎಂದು ದೇವದತ್ ಕಾಮತ್ ವಾದಿಸಿದರು.

ಇದಕ್ಕೆ ಪೂರಕವಾಗಿ ಹಳೆಯ ಸುಪ್ರೀಂಕೋರ್ಟ್ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಕಾಮತ್, ಬಿಜೋಯ್ ಇಮ್ಯಾನುವೆಲ್ ಪ್ರಕರಣದಲ್ಲಿ ವಿದ್ಯಾರ್ಥಿಗಳು ಧರ್ಮವನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ ಎಂದು ವಿವರಿಸಿದರು.

ಶಾಲಾ ವಿದ್ಯಾರ್ಥಿಗಳನ್ನು ಕರ್ನಾಟಕ ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ. ಜೈಲಿನಲ್ಲಿ ಕೈದಿಗಳಿಗೆ ಯಾವುದೇ ಹಕ್ಕುಗಳು ಇರುವುದಿಲ್ಲ, ಅದೇ ರೀತಿ ಶಾಲೆಗಳಿಗೆ ತೆರಳಿದಾಗ ಮಕ್ಕಳು ಶಿಕ್ಷಕರ ಕಸ್ಟಡಿಯಲ್ಲಿ ಇರುತ್ತಾರೆ. ಅವರಿಗೂ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದೆ‌. ಇದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಒಂದು ನ್ಯಾಯಾಂಗ ಸಂಸ್ಥೆಯಾಗಿ ಹೈಕೋರ್ಟ್ ಇದನ್ನೆಲ್ಲ ಹೇಗೆ ಹೇಳುತ್ತದೆ? ಎಂದು ದೇವದತ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣದ ಪ್ರವೇಶ ಪಡೆಯಲು ಪೂರ್ವ ಷರತ್ತಾಗಿ ವಿದ್ಯಾರ್ಥಿ ಪ್ರಜೆಗಳು ಸಂವಿಧಾನದ 19, 21 ಮತ್ತು 25ರ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳನ್ನು ಕೈಬಿಡಬೇಕೇ? ಸರ್ಕಾರ ಹೊರಡಿಸಿರುವ ಆದೇಶವು ರಾಜ್ಯ ವಾದಿಸಿರುವಷ್ಟು ‘ನಿರುಪದ್ರವಿ’ ಅಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸುವುದು ಧಾರ್ಮಿಕ ಆಚರಣೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ ಮತ್ತು ಸಮವಸ್ತ್ರದ ನೀತಿಯನ್ನು ಶಾಲಾ ಅಭಿವೃದ್ಧಿ ಸಮಿತಿಗಳು (ಸಿಡಿಸಿ) ನಿರ್ಧರಿಸುತ್ತವೆ ಎಂಬ ಸರ್ಕಾರದ ಪ್ರತಿಪಾದನೆಯನ್ನು ಉಲ್ಲೇಖಿಸಿದ ದೇವದತ್‌ ಕಾಮತ್‌ ಅವರು, “ಪ್ರಬಲ ಸರ್ಕಾರವು ಈಗಾಗಲೇ ಸೂಚಿಸಿದ್ದರೆ, ಸಿಡಿಸಿಗಳಿಗೆ ಹಿಜಾಬ್ ನಿಷೇಧ ಮಾಡದೆ ಬೇರೆ ಆಯ್ಕೆಯೇ ಇಲ್ಲ” ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಕೇರಳ ರಾಜ್ಯದ ಬಾಲಕಿಗೆ ಮೂಗುತಿ ಧರಿಸಲು ಸಂವಿಧಾನ ಪೀಠ ಅನುಮತಿ ನೀಡಿದ್ದ ಪ್ರಕರಣವನ್ನು ದೇವದತ್‌ ಕಾಮತ್‌ ಪ್ರಸ್ತಾಪಿಸಿದರು. ಇದಕ್ಕೆ, ಮೂಗುತಿಯು ಧಾರ್ಮಿಕ ಸಂಕೇತವಲ್ಲ. ಜಗತ್ತಿನಾದ್ಯಂತ ಮಹಿಳೆಯರು ಮೂಗುತಿ, ಕಿವಿಯೋಲೆ ಧರಿಸುತ್ತಾರೆ. ಅದು ಧಾರ್ಮಿಕ ಅಭ್ಯಾಸವಲ್ಲ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು. ಹಾಗೆಯೇ ದಕ್ಷಿಣ ಆಫ್ರಿಕಾದ ತೀರ್ಪು ಅಲ್ಲಿನ ಕಾನೂನಿಗೆ ಅನುಗುಣವಾಗಿದೆ. ದಕ್ಷಿಣ ಆಫ್ರಿಕಾ ಮರೆತುಬಿಡಿ. ಭಾರತಕ್ಕೆ ಬನ್ನಿ ಎಂದು ವಕೀಲರಿಗೆ ಹೇಳಿತು.

ಹಾಗೆಯೇ ಅಮೆರಿಕದಲ್ಲಿ ಸುಪ್ರೀಂಕೋರ್ಟ್, ಕೆಲಸದ ಸ್ಥಳಗಳಲ್ಲಿ ಶಿರವಸ್ತ್ರ ಧರಿಸಲು ಅನುಮತಿ ನೀಡಿದ್ದರ ಬಗ್ಗೆ ಕಾಮತ್ ಪ್ರಸ್ತಾಪಿಸಿದರು. “ಅಮೆರಿಕ ಮತ್ತು ಕೆನಡಾವನ್ನು ಭಾರತದ ಜತೆ ಹೇಗೆ ಹೋಲಿಕೆ ಮಾಡುತ್ತೀರಿ? ನಮ್ಮದು ಸಂಪ್ರದಾಯವಾದಿ ಸಮಾಜ. ಅವರ ತೀರ್ಪು ಅಲ್ಲಿನ ಸಮಾಜ, ಸಂಸ್ಕೃತಿಗೆ ಅನುಗುಣವಾಗಿ ಇರುತ್ತದೆ. ನಾವು ಅದನ್ನು ಅನುಸರಿಸಲು ಸಾಧ್ಯವಿಲ್ಲ” ಎಂದು ನ್ಯಾ. ಗುಪ್ತಾ ಖಡಕ್ಕಾಗಿ ಹೇಳಿದರು.

ಸಕಾರಾತ್ಮಕ ಜಾತ್ಯತೀತತೆ

ಭಾರತದಲ್ಲಿ ಇರುವುದು ಸಕಾರಾತ್ಮಕ ಜಾತ್ಯತೀತತೆ. ಫ್ರಾನ್ಸ್ ಅಥವಾ ಟರ್ಕಿಗಳಲ್ಲಿ ಪಾಲಿಸುವಂತಹ ನಕಾರಾತ್ಮಕ ಜಾತ್ಯತೀತತೆ ಅಲ್ಲ. ಕೆಲವು ದೇಶಗಳಲ್ಲಿ ಸಾರ್ವಜನಿಕವಾಗಿ ಧರ್ಮ ಪ್ರದರ್ಶನ ಅಪರಾಧ. ನಾವು ಸಕಾರಾತ್ಮಕ ಜಾತ್ಯತೀತತೆ ಪಾಲಿಸುತ್ತೇವೆ. ಎಲ್ಲ ಧರ್ಮಗಳೂ ಒಂದೇ ದೇವರಿಂದ ಸೃಷ್ಟಿಯಾಗಿವೆ ಎಂಬುದು ಸಾಂವಿಧಾನಿಕ ನಿಲುವಾಗಿದೆ ಎಂದು ಕಾಮತ್ ತಿಳಿಸಿದರು.

“ಎಲ್ಲ ಧರ್ಮಗಳೂ ಇದನ್ನು ಒಪ್ಪಿಕೊಂಡಿವೆಯೇ? ” ಎಂದು ನ್ಯಾಯಪೀಠ ಪ್ರಶ್ನಿಸಿತು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು

ಸಂವಿಧಾನದ 19ನೇ ವಿಧಿಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಉಡುಪನ್ನೂ ಒಳಗೊಳ್ಳುತ್ತದೆ. ಈಗ ಹಿಜಾಬ್ ಧರಿಸಲು ಶಾಲೆಗಳಲ್ಲಿ ಅವಕಾಶ ನೀಡುವುದಿಲ್ಲ ಎನ್ನುವ ಮೂಲಕ ಸರ್ಕಾರ 19ನೇ ವಿಧಿಯನ್ನು ಉಲ್ಲಂಘಿಸಿದೆ. ಸರ್ಕಾರವು ತಮ್ಮ ಅಸ್ಮಿತೆ, ಘನತೆ ಮತ್ತು ಶಿಕ್ಷಣದ ಹಕ್ಕುಗಳ ನಡುವೆ ಆಯ್ಕೆ ಮಾಡಿಕೊಳ್ಳುವಂತೆ ಅವರನ್ನು ಒತ್ತಾಯಿಸುತ್ತಿದೆ ಎಂದು ದೇವದತ್‌ ಕಾಮತ್ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಗುಪ್ತಾ, “ನೀವು ಅತಾರ್ಕಿತ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಉಡುಪು ಧರಿಸುವ ಹಕ್ಕು, ಉಡುಪು ತೆಗೆಯುವುದನ್ನೂ ಒಳಗೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದರು.

“ಶಾಲೆಗಳಲ್ಲಿ ಯಾರೂ ಉಡುಪು ಕಳಚುವುದಿಲ್ಲ. ಪ್ರಶ್ನೆ ಇರುವುದು 19ನೇ ವಿಧಿ ಅನುಸಾರ ಹೆಚ್ಚುವರಿ ಧಿರಿಸು ತೊಡುವುದರ ಬಗ್ಗೆ. ಇದನ್ನು ನಿರ್ಬಂಧಿಸಬಹುದೇ?” ಎಂದು ಕಾಮತ್ ಪ್ರತಿಕ್ರಿಯಿಸಿದರು.

ಮೂಲಭೂತ ಹಕ್ಕಿಗೆ ಹೇಗೆ ಧಕ್ಕೆಯಾಗುತ್ತದೆ?

“ಸಾರ್ವಜನಿಕ ಆದೇಶದ ಆಧಾರದಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗಿಲ್ಲ ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ. ಇದು ನೈತಿಕತೆ ನೆಲೆಯಲ್ಲಿದೆ. ನಾನು ಶಿರವಸ್ತ್ರ ಧರಿಸಿದರೆ ಯಾರ ನೈತಿಕತೆಗೆ ಹಾನಿಯಾಗುತ್ತದೆ? ಸಮವಸ್ತ್ರದ ಬಣ್ಣವನ್ನು ಹೋಲುವ ಶಿರವಸ್ತ್ರ ಧರಿಸುವುದರಿಂದ ಯಾರದ್ದಾದರೂ ಮೂಲಭೂತ ಹಕ್ಕಿಗೆ ಧಕ್ಕೆ ಉಂಟಾಗುತ್ತದೆಯೇ?” ಎಂದು ಕೇಳಿದರು.

ಹೈಕೋರ್ಟ್ ತೀರ್ಪಿನ ವಿರುದ್ಧ ಆರೋಪ

ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಕಾಮತ್ , ಹಿಜಾಬ್ ಧರಿಸುವಂತೆ ಬಾಲಕಿಗೆ ಒತ್ತಾಯಿಸುವುದು 14ನೇ ವಿಧಿಯ ಉಲ್ಲಂಘನೆ ಎಂದು ಕೋರ್ಟ್ ಹೇಳಿದೆ. ಯಾರೂ ಇಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿಲ್ಲ. ವಿಧಿಯಿಲ್ಲದೆ ಹೆಣ್ಣುಮಕ್ಕಳು ಹಿಜಾಬ್ ಧರಿಸಿದರೆ ಅದನ್ನು ನಿರ್ಬಂಧಿಸಬಹುದು. ಇದು ಆಕೆಯ ಆಯ್ಕೆ. ನಾನು ವೈಯಕ್ತಿಕವಾಗಿ ಅದನ್ನು ಒಪ್ಪುವುದಿಲ್ಲ. ಆದರೆ ಅದು ಆಕೆಯ ನಿರ್ಧಾರ ಎಂದು ವಾದಿಸಿದರು. ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *