ಚೈತ್ರಿಕಾ ಹರ್ಗಿ
ಹಿಜಾಬ್ ಅನ್ನು ಎರಡು ರೀತಿಯಲ್ಲಿ ನೋಡೋಣ
1- ನನಗೆ ಹಿಜಾಬ್ ಹಾಕಲು ಇಷ್ಟ ಅದು ತನ್ನ ಹಕ್ಕು ಧಾರ್ಮಿಕ ನಂಬಿಕೆ ಹಾಗೆ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆ.
2 – ಹಿಜಾಬ್ ಪುರುಷ ಪ್ರಧಾನ ವ್ಯವಸ್ಥೆಯ ಒಂದು ಕೊಡುಗೆ.
ಎರಡೂ ವಾದವನ್ನು ನಾವು ಒಪ್ಪಲೇಬೇಕು. ಹಾಗೆ ಹುಡುಗಿಯರು ಹಿಜಾಬ್ ಹಾಕಿ ಶಾಲೆ, ಕಾಲೇಜಿಗೆ ಹೋದರೆ ಬಹುಸಂಖ್ಯಾತ ಮೂಲಭೂತವಾದಿಗಳ ಹೊರತು ಯಾರಿಗೂ ತೊಂದರೆ ಇಲ್ಲ. ಆದರೆ ಇದು ಪಿತೃಪ್ರಧಾನ ವ್ಯವಸ್ಥೆಯ ಕುರುಹು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
- ಈಗಿನ ಕೋಮುವಾದಿ ಧರ್ಮರಾಜಕಾರಣದ ಸನ್ನಿವೇಷದಲ್ಲ ಆಹಾರದ ಹಕ್ಕು ಸಂವಿಧಾನದಲ್ಲಿ ಇದ್ದರೂ ನಮ್ಮ ಕೈಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಹಿಜಾಬ್ ಹೋರಾಟ ಕಾನೂನಾತ್ಮಕವಾಗಿ ನಡೆಯುತ್ತದೆ ಎಂದರೆ ಒಳ್ಳೆಯದು. ಆದರೆ ಇದು ಒಂದೆರಡು ದಿನಕ್ಕೆ ಮುಗಿಯುವುದಿಲ್ಲ. ಅಲ್ಲಿಯವರೆಗೆ ಈ ಹೆಣ್ಣು ಮಕ್ಕಳ ಶಿಕ್ಷಣ ಕತೆ ಏನು? ಇದಕ್ಕೆ ಮುಸ್ಲಿಂ ಸಮುದಾಯದಲ್ಲಿ ಯಾರು ಹಿಜಾಬ್ ಸಮರ್ಥಿಸಿಕೂಳ್ಳುವ ಪುರುಷರಿದ್ದಾರೊ ಅವಳ ಬಳಿ ಉತ್ತರ ಇದೆಯೆ?
- ಹಿಜಾಬ್ ಪಿತೃಪ್ರಧಾನ ವ್ಯವಸ್ಥೆಯ ಕುರುಹು
ನನ್ನ ಅಕ್ಕ ಹುಬ್ಬಳ್ಳಿಯಲ್ಲಿ ಡಿ.ಯಡ್ ಕಲಿಯುವಾಗ ಆಕೆಗೆ ಖಾಸಾ ಮುಸ್ಲಿಂ ಗೆಳತಿಯೊಬ್ಬಳಿದ್ದಳು. ಬುರ್ಖಾ ತೆಗೆದಾಗ ಸೀರೆ ಮೇಲೆ ಹಿಜಾಬ್ ಧರಿಸುವಳು. ಯಾಕೆ ಅಂದ್ರೆ ಉತ್ತರ ಇಷ್ಟೆ, ಅದು “ಹುಬ್ಬಳ್ಳಿ”. ಅದೆ ಹುಡುಗಿ ಧಾರವಾಡ ಯುನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಓದುವಾಗ ಈ ಸಮಸ್ಯೆ ಕಾಡಲಿಲ್ಲ. ಅಲ್ಲಿ ಅವಳು ಶಿಕ್ಷಣ ಪಡೆದುಕೊಳ್ಳಲು ಮುಸ್ಲಿಂ ಸಮುದಾಯ ಅಡ್ಡಿ ಬರಲು ಅಲ್ಲಿ ಸಾಕಷ್ಟು ಮುಸ್ಲಿಂ ಗಂಡು ಮಕ್ಕಳಿದ್ದಿಲ್ಲ. ಅನೇಕ ಬಾರಿ ನಮ್ಮ ಮನೆಗೆ ಬಂದಾಗ ಅವಳು ಯಾವತ್ತೂ ಹಿಜಾಬ್ ಮನೆಯಲ್ಲಿ ಕಟ್ಟಿಕೊಂಡಿಲ್ಲ. ನಮ್ಮ ಸಬಂಧಿಕರ ಮನೆಗೆ ಹೋಗುವಾಗಲೂ ಕಟ್ಟುತ್ತಿರಲಿಲ್ಲ. ‘ಏಯ್ ನನ್ನ ಕೇಳಾಕ್ ಯಾರದಾರ್ ಬಿಡು’ ಅನ್ನೋಳು. ಆಕೆ ನಮ್ಮ ಮನೆಗಷ್ಟೆ ಮಗಳಾಗಿರದೆ ನನ್ನ ಅತ್ತೆಯಂದೀರು ಚಿಕ್ಕಪ್ಪ ದೊಡ್ಡಪ್ಪಂದೀರು ಇಷ್ಟ. ನನ್ನ ಚಿಕ್ಕಪ್ಪನ ಮಗನ ಮದುವೆ ಗೊತ್ತಾದಾಗ ಚಿಕ್ಕಪ್ಪ ಅಕ್ಕನಿಗೆ ಹೇಳಿ ಅವಳನ್ನ ಅವರ ಮನೆಯವರನ್ನ ಕರಿ ಬಂದಿದ್ರು. ದೂರದ ಹುಬ್ಬಳ್ಳಿಂದ ಬಡೆಮಾ (ದೊಡ್ಡಮ್ಮ)ನ ಕರೆದುಕೊಂಡು ಒಂದು ವಾರ ಉಳಿಯಲು ಬಂದಳು. ದೊಡ್ಡಮ್ಮ ಅವಳು ಯಾರೂ ಹಿಜಾಬ್ ಧರಿಸಲಿಲ್ಲ. ಅವರ ಪ್ರಾರ್ಥನೆಗೆ ನಮ್ಮ ಮನೆಯಲ್ಲಿ ತೊಂದರೆ ಇರಲಿಲ್ಲ. ನಾವು ಹೊರಗಡೆ ಹೊರಟಾಗ ವಯಸ್ಸಾದ ದೊಡ್ಡಮ್ಮನನ್ನು ಕರೆದುಕೊಂಡು ಹೋಗ್ತಿದ್ವೆ. ಅವರಿಗೆ ಬುರ್ಖಾ ಹಾಕಿ ಗೊತ್ತಿಲ್ಲ. ಉತ್ತರ ಕರ್ನಾಟಕದ ಹೆಣ್ಣು ಮಕ್ಕಳಂತೆ ತಲೆ ಮೇಲೆ ಸೆರಗು ಹೊದೆಯುತ್ತಿದ್ದರು. ಈಗ ಆ ಹುಡುಗಿ ಪೊಲೀಸ್ ಇಲಾಖೆ ಸೇರಿ ಮೂರು ವರ್ಷಗಳಾಯಿತು. ಹಿಜಾಬ್ ಅವಳ ಇಷ್ಟದ ಉಡುಪಾಗಿರಲಿಲ್ಲ. ಇಷ್ಟದ್ದೆ ಆಗಿದ್ದರೂ ಅವಳು ಪೊಲೀಸ್ ಇಲಾಖೆಯಲ್ಲಿ ಇರಲಾಗುತ್ತಿರಲಿಲ್ಲ.
ಮೊನ್ನೆ ಮೊನ್ನೆ ಯಾವುದೊ ಕೆಲಸದ ಮೇಲೆ ಫೋನ್ ಮಾಡಿದ ಗೆಳತಿ, ನನ್ನ ಶಿಕ್ಷಣಕ್ಕೆ ಮನೆಯವರಿಂದ ಅಡ್ಡಿ ಅನ್ನೊ ಕಾರಣಕ್ಕೆ ಹಿಜಾಬ್ ಕಟ್ಟಿ ಕಲಿಬೇಕಾಯ್ತು. ನನ್ನ ಮಗಳ ಕಾಲಕ್ಕೆ ತೊಲಗಿದರೆ ಸಾಕು ಅಂತಿದ್ರು.
ನನ್ನ ಖಾಸಾ ಗೆಳತಿಯ ಅಮ್ಮ ನನ್ನ ಗೆಳತಿಯನ್ನು ಹಿಜಾಬ್ ಕಟ್ಟದೆ ಹೋಗಲು ಬಿಡುವುದಿಲ್ಲ. ನಾನು ಕೇಳಿದ್ದಕ್ಕೆ, ನಮಗೇನು ಸಮಸ್ಯೆ ಇಲ್ಲ. ಆದರೆ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಹಿಂದೂ ಗೆಳತಿ ಮನೆಗೆ ಹೋದಾಗ ರಸ್ತೆಯಲ್ಲಿ ಮುಸ್ಲಿಂ ಹುಡುಗರು ಮಾಡಿದ ಗಲಾಟೆ ನೆನಪಿದೆ ಅಲ್ಲ. ನಾವು ಬದುಕ್ತಿರೋದು ಮುಸ್ಲಿಮರ ಏರಿಯಾದಲ್ಲಿ ಅನ್ನುತ್ತಿದ್ದರು. ಈಗ ಗೆಳತಿ ಹಿಜಾಬ್ ಬುರ್ಖಾ ತೊಟ್ಟೆ ಯೂನಿವರ್ಸಿಟಿ ಲೆಕ್ಚರರ್.
ಶಿಕ್ಷಣ ಪಡೆಯುವ ಹಾದಿಯಾಗಿ ಹಿಜಾಬ್ ಧರಿಸಿದೆವು ಎಂದು ಕೆಲ ತಿಂಗಳ ಹಿಂದೆ ನಡೆದ ಚರ್ಚೆಯಲ್ಲಿ ಅನೇಕ ಮುಸ್ಲಿಂ ಲೇಖಕಿಯರು ಹೇಳಿದ್ದಾರೆ.
ಈಗ ಉಡುಪಿಯಲ್ಲಿ ತಲೆದೋರಿರುವುದು ಸಂಘ ರಾಜಕಾರಣ. ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರ ಹೇಳಿಕೆ ಕೋಮುವಾದದ ಮೇರೆ ಮೀರಿದೆ. ಶಾಲೆಗಳಿಗೆ ಬಳೆ ತೊಡಬಹುದು, ಹೂ ಮುಡಿಯಬಹುದು, ಶಾರದಾ ಪೂಜೆ ಮಾಡಬಹುದು ಮುಸ್ಲಿಮರ ವಿಷಯಕ್ಕೆ ಬಂದರೆ ಧಾರ್ಮಿಕ ಸಂಕೇತ ಸಲ್ಲದು ಎಂಬುದು ಧರ್ಮರಾಜಕಾರಣ. ಇದನ್ನು ಖಂಡಿತ ವಿರೋಧಿಸೋಣ. ಈ ವಿರೋಧದ ಹಾದಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಬಲಿ ಮಾಡದಿರೋಣ.