ಬೆಂಗಳೂರು: ಆಗಸ್ಟ್ 22ರಂದು ರಾಜ್ಯದ ಮುಂಗಾರು ಅಧಿವೇಶನದ ಕೊನೆಯ ದಿನದ ಕಲಾಪವಾಗಿದ್ದು, ಆಗಸ್ಟ್ 11ರಂದು ಮುಂಗಾರು ಅಧಿವೇಶನ ಆರಂಭವಾಗಿತ್ತು. ಕೊನೆಯ ಹಾಗೂ ಒಂಬತ್ತನೇ ದಿನದ ವಿಧಾನ ಸಭಾ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳ ಆರೋಪಗಳಿಗೆ ಸಮಗ್ರ ಉತ್ತರ ನೀಡಲಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಸಂದರ್ಭದಲ್ಲಿನ ಕಾಲ್ತುಳಿತ ದುರಂತ ಸಂಬಂಧ ಮುಖ್ಮಮಂತ್ರಿ ಅವರು ಸದನದಲ್ಲಿ ಉತ್ತರ ನೀಡಲಿದ್ದಾರೆ.
ಕಾಲ್ತುಳಿತ ದುರಂತ ಸಂಬಂಧ ನಡೆದ ಚರ್ಚೆ ಮೇಲೆ ಈಗಾಗಲೇ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಉತ್ತರ ನೀಡಿದ್ದರು, ಆದರೆ, ಕಾಲ್ತುಳಿತ ದುರಂತದ ವೇಳೆ ಸಿಎಂ ಹೋಟೆಲ್ ಗೆ ಹೋಗಿ ಮಸಾಲೆ ದೋಸೆ ತಿನ್ನುತ್ತಿದ್ದರು ಎಂಬ ಆರೋಪಕ್ಕೆ ಸಿಎಂ ಅವರು ಸ್ಪಷ್ಟನೆ ನೀಡಲಿದ್ದಾರೆ.
ಇದನ್ನೂ ಓದಿ: ಅಲಾಸ್ಕಾ ದಲ್ಲಿ ಟ್ರಂಪ್-ಪುಟಿನ್ ಶೃಂಗಸಭೆ : ಉಕ್ರೇನ್ ಶಾಂತಿಯತ್ತ ನಡೆ ಸಾಧ್ಯವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುವ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದಾದ ಬಳಿಕ ಅಂದರೆ ಮಧ್ಯಾಹ್ನ ಸದನ ಅನಿರ್ದಿಷ್ಟಾವಧಿಗೆ ಸ್ವೀಕರ್ ಮುಂದೂಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರದ ವೇಳೆ ಅನುದಾನ, ಅಭಿವೃದ್ಧಿ ಹಾಗೂ ಕೇಂದ್ರ- ರಾಜ್ಯ ಸರ್ಕಾರಗಳ ನಡುವಿನ ಅನುದಾನ ಸಂಬಂಧ ಅಂಕಿ ಅಂಶಗಳನ್ನು ಬಹಿರಂಗಪಡಿಸುವ ಸಾಧ್ಯತೆಗಳಿವೆ.
ಇತಿಹಾಸ ಸೃಷ್ಟಿಸಿದ ಮುಂಗಾರು ಅಧಿವೇಶನ
ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಅತಿ ಹೆಚ್ಚು ವಿಧೇಯಕಗಳನ್ನು ಆಡಳಿತ ಪಕ್ಷ ಮಂಡನೆ ಮಾಡಿ ಅದಕ್ಕೆ ಅನುಮೋದನೆ ಪಡೆದಿದ್ದು ಒಂದು ಇತಿಹಾಸ ಸೃಷ್ಟಿಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಮಸೂದೆಗಳ ಮಂಡನೆ ಮಾಡಿರುವ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ.
ನಲವತ್ತಕ್ಕೂ ಹೆಚ್ಚು ವಿಧೇಯಕಗಳು ಮಂಡನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಈ ಮೊದಲು ಸುಮಾರು 20 ವಿಧೇಯಕಗಳ ಮಂಡನೆಯಾಗುತ್ತಿದ್ದವು, ಆದರೆ ಈ ಬಾರಿಯ ಅಧಿವೇಶನದಲ್ಲಿ ಅದಕ್ಕೂ ಎರಡು ಪಟ್ಟು ವಿಧೇಯಕಗಳ ಮಂಡನೆ ಮಾಡಿ ಅವುಗಳಿಗೆ ಅನುಮೋದನೆ ಪಡೆದದ್ದು ದಾಖಲೆಯಾಗಿದೆ.
ಅಧಿವೇಶನದ ಕೊನೆಯ ದಿನವಾದ ಇಂದೂ ಕೂಡ ನಾಲ್ಕೈದು ವಿಧೇಯಕಗಳ ಪರ್ಯಾಲೋಚನೆ ಮಾಡುವ ಸಾಧ್ಯತೆಗಳಿವೆ. ಇವುಗಳಲ್ಲಿ ಗ್ರೇಟರ್ ಬೆಂಗಳೂರು ತಿದ್ದುಪಡಿ ಮಸೂದೆ, ಅಂತರ್ಜಲ ಮಸೂದೆ, ಅತೀ ಹೆಚ್ಚು ಜನಸಂಖ್ಯೆ ಕಾರ್ಯಕ್ರಮಕ್ಕೆ ಅನುಮತಿ ಮಸೂದೆ ಸೇರಿವೆ.
ಗ್ರೇಟರ್ ಬೆಂಗಳೂರು ಚುನಾವಣೆ
ಈ ನಡುವೆ ಗ್ರೇಟರ್ ಬೆಂಗಳೂರು ತಿದ್ದುಪಡಿ ಮಸೂದೆ ಉಭಯ ಸದನದಲ್ಲಿ ಅಂಗೀಕಾರವಾದ ಬಳಿಕ ಇದೀಗ ಕಾಂಗ್ರೆಸ್ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಇಂದು ಬೆಂಗಳೂರು ನಗರ, ಗ್ರಾಮಾಂತರ ವ್ಯಾಪ್ತಿಯ ಸಚಿವರು, ಶಾಸಕರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿದೆ.
ಕ್ವೀನ್ಸ್ ರಸ್ತೆಯ ಇಂದಿರಾಗಾಂಧಿ ಭವನದಲ್ಲಿ ನಡೆಯಲಿರುವ ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ಕೂಡ ಭಾಗಿಯಾಗಲಿದ್ದಾರೆ. ಮೂವತ್ತಕ್ಕೂ ಹೆಚ್ಚು ಶಾಸಕರು, ಪರಿಷತ್ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿಕೊಂಡಿದ್ದು, ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಂಬಂಧ ಸ್ಪಷ್ಟ ಸೂಚನೆಗಳನ್ನು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ನೀಡಲಿದ್ದಾರೆ.
ಇದನ್ನೂ ನೋಡಿ: ದೂರುದಾರ ವ್ಯಕ್ತಿ ಪ್ರಾಮಾಣಿಕ, ಆತ ಹೇಳ್ತೀರೋದು ಎಲ್ಲವೂ ಸತ್ಯ – ಬಾಲನ್Janashakthi Media
