ಹೈದರಾಬಾದ್ : ದೇಶದಲ್ಲಿ ಶೇ. 45ರಷ್ಟು ಮ್ಯಾನೇಜ್‌ಮೆಂಟ್ ಮತ್ತು ಶೇ.48ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಎಂದು ನೀತಿ ಆಯೋಗದ ಉಪಾಧ್ಯಕ್ಷ, ಖ್ಯಾತ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಹೈದ್ರಾಬಾದ್ ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಆಯೋಜಿಸಿದ್ದ ‘ಉನ್ನತ ಶಿಕ್ಷಣ ಸಂವಾದ’ವನ್ನು ಉದ್ದೇಶಿಸಿ ಮಾತನಾಡುತ್ತಾ, ಉನ್ನತ ಶಿಕ್ಷಣದಲ್ಲಿ ನಿರ್ದಿಷ್ಟವಾಗಿ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧಿಸಲು ಒತ್ತು ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮ್ಯಾನೇಜ್‌ಮೆಂಟ್ ಕಾಲೇಜುಗಳು ಉದ್ಯಮದ ಅಗತ್ಯತೆಗಳನ್ನು ಪೂರೈಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡೀಪ್ ಲರ್ನಿಂಗ್, ರೋಬೋಟಿಕ್ಸ್ ಮುಂತಾದ ಉದ್ಯೋಗ ಆಧಾರಿತ ಕೋರ್ಸ್ ಗಳನ್ನು ಪ್ರಾರಂಭಿಸಬೇಕು. ನಮ್ಮ ದೇಶದ ಶೈಕ್ಷಣಿಕ ನೀತಿಯನ್ನು ಸುಧಾರಿಸಬೇಕು. ಅಗ ಮಾತ್ರ ನಾವು ಉತ್ತಮ ಪಲಿತಾಂಶ ನೀರಿಕ್ಷಿಸಲು ಸಾಧ್ಯ. ಅದಕ್ಕಾಗಿ US UK, ಜಪಾನ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಇರುವ ಕೋರ್ಸ್ ಗಳನ್ನು ಸಹ ಅಳವಡಿಸಿಕೊಳ್ಳಿ ಎಂದು ರಾಜೀವ್ ಸಲಹೆ ನೀಡಿದ್ದಾರೆ.
ಭಾರತವು ವಾರ್ಷಿಕವಾಗಿ ತನ್ನ ಬಜೆಟ್‌ನ 0.8 ಪ್ರತಿಶತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿದೆ. ಇದರ ಪರಿಣಾಮವಾಗಿ ದೇಶವು ಶಿಕ್ಷಣದಲ್ಲಿ ತುಂಬಾ ಹಿಂದುಳಿದಿದೆ. ದಕ್ಷಿಣ ಕೊರಿಯಾದಂತಹ ದೇಶಗಳು ತಮ್ಮ ಬಜೆಟ್ ನಲ್ಲಿ 4.5 ಪ್ರತಿಶತವನ್ನು ಖರ್ಚು ಮಾಡುತ್ತವೆ. ಈ ಕಾರಣಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಉನ್ನತ ಶಿಕ್ಷಣ ದಿನೇ ದಿನೇ ಕುಸಿಯುತ್ತಿದೆ.. ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಲು ಸರಕಾರ ಬಜೆಟ್ ನಲ್ಲಿ ಶಿಕ್ಷಣವನ್ನು ಹೆಚ್ಚಿಸಬೇಕು ಹಾಗೂ ಇತರೆ ರಾಷ್ಟ್ರಗಳಲ್ಲಿನ ಉನ್ನತ ಶಿಕ್ಷಣದ ಸಾಧನೆಯನ್ನು ಅಧ್ಯಯನ ನಡೆಸಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.