18 ತಿಂಗಳ ಬಳಿಕ ಶಾಲಾ ಕಾಲೇಜ್ ಆರಂಭ

ಬೆಂಗಳೂರು : ಕೊರೋನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದಿನಿಂದ ತೆರೆಯುತ್ತಿವೆ. ಹೌದು, ಆಗಸ್ಟ್​ 23ರಿಂದ 9,10,11 ಮತ್ತು 12ನೇ ತರಗತಿಗಳು ಶುರುವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.

ಬರೋಬ್ಬರಿ ಒಂದೂವರೆ ವರ್ಷಗಳಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳ ಮುಖವನ್ನೇ ನೋಡಿಲ್ಲ. ಶಾಲೆಗಳಲ್ಲಿ ಇಂದಿನಿಂದ ಢಣ ಢಣ ಸದ್ದು ಮಕ್ಕಳಿಗೆ ಖುಷಿ ಕೊಡಲಿದೆ. ಇಷ್ಟು ದಿನ ಕೇವಲ ಆನ್​​ಲೈನ್ ಕ್ಲಾಸ್​ನಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು, ಆಫ್​​ಲೈನ್ ಕ್ಲಾಸ್​ನತ್ತ ಮುಖ ಮಾಡಲಿದ್ದಾರೆ. ಶಾಲೆ ಆರಂಭಕ್ಕೆ ಸಂತಸಗೊಂಡಿರುವ ಮಕ್ಕಳು ಬೆಳಗ್ಗೆ ಬೇಗ ಎದ್ದು ಶಾಲೆಗೆ ಹೊರಡಲು ಸಿದ್ಧರಾಗಿದ್ದಾರೆ.

ಬರೋಬ್ಬರಿ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಜ್ಞಾನದೇಗುಲಗಳು ಇಂದು ತೆರೆಯಲಿವೆ. ಮೊದಲ ಹಂತದಲ್ಲಿ 9 ಮತ್ತು 12ನೇ ತರಗತಿಗಳು ಪ್ರಾರಂಭವಾಗಲಿದೆ. ಶಾಲಾ -ಕಾಲೇಜುಗಳ ಭೌತಿಕ ತರಗತಿ ಆರಂಭಕ್ಕೆ, ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಶಾಲೆಗಳನ್ನ ತೆರೆಯಲು ಶಿಕ್ಷಣ ಇಲಾಖೆ ಸಹ ಸಿದ್ಧತೆ ನಡೆಸಿದೆ.

ಈಗಾಗಲೇ 16,850 ಪ್ರೌಢ ಶಾಲೆಗಳು ಹಾಗೂ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲೆ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳ್ಳಗ್ಗೆ 10 ರಿಂದ 1:30 ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಶಾಲಾರಂಭಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಗೈಡ್​ಲೈನ್ಸ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಐಐಎಸ್‌ಸಿ : ದಲಿತ, ಹಿಂದುಳಿದವರಿಗೆ ಮೀಸಲಿಟ್ಟ ಸ್ಥಾನಗಳು ‘ಇನ್ನೊಬ್ಬರ’ ಪಾಲು?!

ಶಾಲೆ ಆರಂಭಕ್ಕೆ ಮಾರ್ಗಸೂಚಿ

  • ಮಾರ್ಗಸೂಚಿ-1 -ಶಾಲೆಗೆ ಹಾಜರಾಗೋ ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ.
  • ಮಾರ್ಗಸೂಚಿ-2 -9, 10ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದಲೇ ಉಪಹಾರ ತರಬೇಕು.
  • ಮಾರ್ಗಸೂಚಿ-3 -ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು.
  • ಮಾರ್ಗಸೂಚಿ-4 -ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ.
  • ಮಾರ್ಗಸೂಚಿ-5 -ಭೌತಿಕ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ನೀಡಬೇಕು.
  • ಮಾರ್ಗಸೂಚಿ-6 -ಸೋಮವಾರದಿಂದ ಶುಕ್ರವಾರದವರೆಗೆ ಬೆ.10ರಿಂದ ಮಧ್ಯಾಹ್ನ1.30ರ ವರೆಗೆ ತರಗತಿ.
  • ಮಾರ್ಗಸೂಚಿ-7 -ಶನಿವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50ರ ವರೆಗೆ ತರಗತಿ ನಡೆಯಲಿವೆ.
  • ಮಾರ್ಗಸೂಚಿ-8 -ದೈಹಿಕ ಅಂತರ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಭಜನೆ.
  • ಮಾರ್ಗಸೂಚಿ-9 -ಪ್ರತಿ ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳ ಒಂದು ತಂಡಕ್ಕೆ ಅವಕಾಶ ನೀಡಲಾಗುತ್ತೆ.

ಕೋವಿಡ್ ಪಾಸಿಟಿವ್ ದರವು ಶೇಕಡಾ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ತೆರೆಯಲು ಅನುಮತಿ ನೀಡಲಾಗಿದ್ದು, ಶೇಕಡಾ 2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭದ ಭಾಗ್ಯ ಸದ್ಯಕ್ಕೆ ಇಲ್ಲ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲೆ ಆರಂಭ ಇರುವುದಿಲ್ಲ. ಕೇರಳ ಭಾಗದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗಿರುವುದರಿಂದ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕೊವಿಡ್ ಕೇಸ್​​ಗಳ ಸಂಖ್ಯೆ ಇಳಿಕೆಯಾಗಿಲ್ಲ. ಹೀಗಾಗಿ ಈ ಐದು ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿಕೊಂಡು ಶಾಲೆಯನ್ನು ಆರಂಭಿಸಲಾಗುತ್ತದೆ.

ಒಟ್ಟಿನಲ್ಲಿ, ಮುಂಜಾಗ್ರತಾ ಕ್ರಮಗಳನ್ನಿಟ್ಟುಕೊಂಡು ಶಾಲೆ ಆರಂಭಿಸ್ತಿರೋ ಸರಕಾರ & ಶಿಕ್ಷಣ ಇಲಾಖೆಗೆ ಇದೊಂದು ದೊಡ್ಡ ಸವಾಲಾಗಿದೆ. ಶಾಲೆ ಆರಂಭವೇನಾದ್ರೂ ಯಶಸ್ವಿಯಾದ್ರೆ ಇನ್ನುಳಿದ ತರಗತಿಗಳ ಆರಂಭಕ್ಕೂ ಮುನ್ನುಡಿ ಸಿಕ್ಕಂತಾಗುತ್ತೆ.

 

Donate Janashakthi Media

Leave a Reply

Your email address will not be published. Required fields are marked *