1.6 ಕೋಟಿ ಡೋಸ್‌ ಹೇಗೆ ತರುವಿರಿ? ರಾಜ್ಯ ಸರಕಾರಕ್ಕೆ ಹೈ ಕೋರ್ಟ್‌ ಪ್ರಶ್ನೆ

ಬೆಂಗಳೂರು : ರಾಜ್ಯದಲ್ಲಿ 1.60 ಕೋಟಿ ಮಂದಿಗೆ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಬಾಕಿ ನೀಡಬೇಕಿದ್ದು, ಅವರಿಗೆ ಹೇಗೆ ಲಸಿಕೆ ಹೊಂದಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್‌ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಪೀಠವು ಸರ್ಕಾರಕ್ಕೆ ಲಸಿಕೆ ಹೇಗೆ ಹೊಂದಿಸುತ್ತೀರಿ ಎಂದು ಪ್ರಶ್ನಿಸಿತು.

ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿ ಆಗಿರುವ ವಕೀಲ ವಿಕ್ರಮ್‌ ಹುಯಿಲುಗೋಳ ಅವರು, ಗುರುವಾರದವರೆಗೆ ರಾಜ್ಯದಲ್ಲಿ ಒಟ್ಟು 1.60 ಕೋಟಿ ಜನ ಲಸಿಕೆಯ ಎರಡನೇ ಡೋಸ್‌ ಪಡೆದುಕೊಳ್ಳಬೇಕಿದೆ. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಮೊದಲನೇ ಲಸಿಕೆ ತೆಗೆದುಕೊಂಡಿರುವವರು ಎರಡನೇ ಡೋಸ್‌ ತೆಗೆದುಕೊಳ್ಳಬೇಕಿದೆ. ಇದರಿಂದ ಆಗಸ್ಟ್‌ನಲ್ಲಿ ಎರಡನೇ ಡೋಸ್‌ಗೆ ದಿಢೀರ್‌ ಹೆಚ್ಚಿನ ಬೇಡಿಕೆ ಉಂಟಾಗಬಹುದು ಎಂದು ತಿಳಿಸಿದರು.

ಇದನ್ನೂ ಓದಿ : ಕಾಣದಂತೆ ಮಾಯವಾದವೋ ಕೋವಿಡ್ ಲಸಿಕೆಗಳು!

ರಾಜ್ಯ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರು, ಜುಲೈ ಕೋಟಾದಡಿ 49,77,830 ಮತ್ತು 1,20,620 ಡೋಸ್‌ಗಳು ಮಂಜೂರಾಗಿವೆ. ರಾಜ್ಯದಲ್ಲಿ ಸದ್ಯ 6.72 ಲಕ್ಷ ಕೋವಿಶೀಲ್ಡ್‌ ಮತ್ತು 2.3 ಲಕ್ಷ ಕೋವ್ಯಾಕ್ಸಿನ್‌ ಡೋಸ್‌ ಲಭ್ಯವಿದ್ದು, ಲಸಿಕೆ ಕೊರತೆ ಇಲ್ಲ ಎಂದು ತಿಳಿಸಿದರು.

ವಿಚಾರಣೆ ವೇಳೆ ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲರು, ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇರುವುದರಿಂದ ಕೂಡಲೇ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಇಲ್ಲವಾದರೆ ಕೋರೋನಾ ಮಾತ್ರವಲ್ಲದೆ ಇತರೆ ಕಾಯಿಲೆಗಳಿಗೆ ಮಕ್ಕಳು ತುತ್ತಾಗುವ ಅಪಾಯವಿದೆ ಎಂಬುದಾಗಿ ವರದಿಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿವರಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಜುಲೈ ಮತ್ತು ಆಗಸ್ಟ್‌ ತಿಂಗಳಿಗೆ ಎಷ್ಟು ಡೋಸ್‌ಗಳು ಅಗತ್ಯವಿದೆ ಎಂಬ ಬಗ್ಗೆ ಪರಿಶೀಲಿಸಿ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಕೂಡಲೇ ಮನವಿ ಸಲ್ಲಿಸಬೇಕು. ಹಾಗೆಯೇ, ಮೂಂಚೂಣಿ ಕಾರ್ಯಕರ್ತರ ಕಟುಂಬಗಳ ಸದಸ್ಯರಿಗೂ ಆದ್ಯತೆ ಮೇರೆಗೆ ಲಸಿಕೆ ನೀಡುವ ಮತ್ತು ಕಟ್ಟಡ ಕಾರ್ಮಿಕರ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಚಾರ ಕುರಿತಂತೆ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ವರದಿ ಕುರಿತು ಪ್ರತಿಕ್ರಿಯಿಸಬೇಕು. ಚಾಮರಾಜನಗರದಲ್ಲಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಧನ ಹೆಚ್ಚಳ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.

Donate Janashakthi Media

Leave a Reply

Your email address will not be published. Required fields are marked *