ಸಿಲಿಂಡರ್‌ ಸರಬರಾಜು ಸ್ಥಗಿತ: ಕೇಂದ್ರ–ರಾಜ್ಯಕ್ಕೆ ಹೈಕೋರ್ಟ್‌ ನೋಟಿಸ್ ಜಾರಿ

ಬೆಂಗಳೂರು: ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ ಸರಬರಾಜು ನಿಲ್ಲಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಮಾರ್ಚ್‌ 17ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್‌ ನೋಟಿಸ್ ಜಾರಿಗೊಳಿಸಿದೆ.
ರಾಜ್ಯವಾರು ಎಲ್‌ಪಿಜಿ ಸಿಲಿಂಡರ್‌ಗಳ ಹಂಚಿಕೆ ಪ್ರಕ್ರಿಯೆ? ಮಾರ್ಚ್‌ ತಿಂಗಳಲ್ಲಿ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಎಷ್ಟು? ಮತ್ತು ರಾಜ್ಯದಲ್ಲಿ ಪ್ರಸ್ತುತ ಸಿಲಿಂಡರ್‌ ದಾಸ್ತಾನು ಎಷ್ಟಿದೆ? ಎಂಬುದನ್ನು ಬಗ್ಗೆ ವಿವರವಾಗಿ ಮಾಹಿತಿ ನೀಡುವಂತೆ ಸರ್ಕಾರಗಳಿಗೆ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ನಿರ್ದೇಶಿಸಿದೆ.

ಬೆಂಗಳೂರು ಹೋಟೆಲ್ಸ್ ಸಂಘ ಮತ್ತದರ ಪದಾಧಿಕಾರಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಪೀಠವು ಹೋಟೆಲ್‌ ಉದ್ಯಮದವರು ಎತ್ತಿರುವ ಎಲ್ಲಾ ವಿಚಾರಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಲಿದೆ ಎಂದಿದೆ.

ಇದನ್ನೂ ಓದಿ: ಸಿಎಂ ಬದಲಾವಣೆ ಕುರಿತು ಯಾವುದೇ ನಿರ್ಧಾರ ಇಲ್ಲ: ಕೆ.ಸಿ. ವೇಣುಗೋಪಾಲ್

ಇದಕ್ಕೂ ಮುನ್ನ, ಅರ್ಜಿದಾರ ಪರ ವಕೀಲ ಕೆ ಸತೀಶ್‌ ಭಟ್‌ ಅವರು “ಬೆಂಗಳೂರು ನಗರದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್‌-ರೆಸ್ಟೋರೆಂಟ್‌ಗಳಿವೆ. ಸುಮಾರು 6 ಲಕ್ಷ ಕಾರ್ಮಿಕರು ಈ ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ. ಆದರೆ, ಏಕಾಏಕಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜನ್ನು ನಿಲ್ಲಿಸಲಾಗಿದೆ. ಇದರಿಂದ ಹೋಟೆಲ್‌ಗಳು ಮುಚ್ಚುಲ್ಪಡುತ್ತಿವೆ. ಅದರ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇಡೀ ರಾಜ್ಯಕ್ಕೆ ನಿತ್ಯ ಒಂದು ಸಾವಿರ ಸಿಲಿಂಡರ್‌ ಸರಬರಾಜು ಮಾಡಲಾಗುವುದು ಎಂದು ಹೇಳುತ್ತಿದೆ. ಹೀಗಾದರೆ ಸಿಲಿಂಡರ್‌ ಸರಬರಾಜು ಬಿಕ್ಕಟ್ಟು ಪರಿಹಾರ ಹೇಗೆ ಮಾಡಲಾಗುತ್ತದೆ ಎಂಬುದು ತಿಳಿಯುತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು ಈ ಅರ್ಜಿಯಲ್ಲಿ ಎತ್ತಲಾಗಿರುವ ವಿಚಾರದ ಬಗ್ಗೆ ಮುಂಬೈ ಹೈಕೋರ್ಟ್‌ ನಿನ್ನೆಯಷ್ಟೇ ವಿಚಾರಣೆ ಮಾಡಿದೆ ಎಂದು ತಿಳಿಸಿ ಆ ಕುರಿತ ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದರು.

“ಸಿಲಿಂಡರ್ ಪೂರೈಕೆ ವಿಚಾರವು ಸರ್ಕಾರದ ನೀತಿ-ನಿಯಮದ ವಿಚಾರವಾಗಿದೆ. ಪ್ರಕರಣದ ಕುರಿತು ಕೇಂದ್ರ ಸರ್ಕಾರದಿಂದ ಅಗತ್ಯ ಮಾಹಿತಿ-ಸೂಚನೆ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಸೋಮವಾರವಷ್ಟೇ ಅಗತ್ಯ ಮಾಹಿತಿ ನಮಗೆ ಲಭ್ಯವಾಗಲಿದೆ. ಇದರಿಂದ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರದ ಪರ ವಕೀಲರು ಸಹ ಅರ್ಜಿಗೆ ವಿವರಣೆ ನೀಡಲಾಗುವುದು ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ ಮೇಲಿನಂತೆ ನಿರ್ದೇಶಿಸಿತು.

ವಿಚಾರಣೆಯ ಆರಂಭದಲ್ಲಿ ಅರ್ಜಿದಾರರ ಪರ ವಕೀಲ ಸತೀಶ್‌ ಭಟ್‌ “ಸಿಲಿಂಡರ್‌ ಪೂರೈಕೆಯಿಲ್ಲದ ಹೋಟೆಲ್‌-ರೆಸ್ಟೋರೆಂಟ್‌ಗಳು ಮುಚ್ಚಲ್ಪಡುತ್ತಿದೆ. ಇದರಿಂದ ಹೋಟೆಲ್‌ ಕಾರ್ಮಿಕರಲ್ಲದೆ, ಹೋಟೆಲ್‌ಗಳಿಗೆ ಹಾಲು, ತರಕಾರು ಮಾರಾಟ ಮಾಡುವವರು ಸಹ ಸಂಕಷ್ಟಕ್ಕೆ ಒಳಗಾಗುತ್ತಿದ್ಧಾರೆ. ಪ್ರತಿದಿನ ಸುಮಾರು 12 ಲಕ್ಷ ಲೀಟರ್ ಹಾಲು ಮತ್ತು ತರಕಾರಿ, ಹಣ್ಣು ಸೊಪ್ಪುಗಳು ಬಳಕೆ ಮಾಡುತ್ತಾರೆ. ಹೋಟೆಲ್‌ಗಳು ಮುಚ್ಚಿದರೆ ಈ ಸರಕು ಸರಪಳಿಗೂ ದೊಡ್ಡ ಹೊಡೆತ ಬೀಳಲಿದೆ. ಆದ್ದರಿಂದ, ಎಂದಿನಂತೆ ಸಿಲಿಂಡರ್ ಗಳ ಪೂರೈಕೆಗೆ ನಿರ್ದೇಶನ ನೀಡಬೇಕು” ಎಂದು ಕೋರಿದರು.

ಇದನ್ನೂ ನೋಡಿ: ಸಾಮ್ರಾಜ್ಯಶಾಹಿ ಸಖ್ಯತೆ ಬೇಡ: ಶಾಂತಿಗಾಗಿ ಮೇಣದ ಬತ್ತಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *