ಬೆಂಗಳೂರು: ಮಂಗಳವಾರ ಕರ್ನಾಟಕ ಹೈಕೋರ್ಟ್ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಮ್ಮ ವಿರುದ್ಧ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿ ನೀಡಿರುವುದನ್ನು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿಯನ್ನು ವಜಾ ಮಾಡುವ ಮೂಲಕ ಮಹತ್ವದ ಆದೇಶ ಮಾಡಿದೆ. ಇದರೊಂದಿಗೆ ಮೊದಲ ಹಂತದ ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯ ಗೆ ತೀವ್ರ ಹಿನ್ನಡೆಯಾದಂತಾಗಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ರ ಏಕಸದಸ್ಯ ಪೀಠ ಇಂದು ರಾಜ್ಯಪಾಲರ ಆದೇಶ ರದ್ದತಿಗೆ ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 12ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿತು.
ರಾಜ್ಯಪಾಲರ ಆದೇಶವು ವಿವೇಚನಾ ಶೂನ್ಯವಾಗಿಲ್ಲ. ಎಲ್ಲವೂ ಕಾನೂನಿನ ಅನ್ವಯವಾಗಿದೆ. ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲ ಎಂದ ಹೈಕೋರ್ಟ್. ಮಧ್ಯಂತರ ಆದೇಶ ಮುಂದುವರಿಯುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಹಿರಿಯ ಸಾಮಾಜಿಕ ಹೋರಾಟಗಾರ್ತಿ ಪಿ.ಬಿ.ಡೇಸಾ ನಧನ
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಯ ಒಡೆತನದ್ದು ಎನ್ನಲಾದ ಕೃಷಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ವಶಪಡಿಸಿಕೊಂಡು ಭೂಮಿಗೆ ಪರ್ಯಾಯವಾಗಿ 14 ನಿವೇಶನ ಹಂಚಿಕೆ ಮಾಡಿರುವುದು ವಿವಾದದ ಕೇಂದ್ರ ಬಿಂದುವಾಗಿದೆ. ಪರಿಹಾರವಾಗಿ ನಿವೇಶನಗಳನ್ನು ನೀಡಿರುವ ಪ್ರಕ್ರಿಯೆ ಅಕ್ರಮದಿಂದ ಕೂಡಿದೆ. ಇಡೀ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಪ್ರಭಾವ ಬೀರಿರುವುದು ಕಂಡು ಬಂದಿದೆ ಎಂದು ಸಲ್ಲಿಕೆಯಾದ ಖಾಸಗಿ ದೂರುಗಳನ್ನು ಆಧರಿಸಿ ಪ್ರಕರಣದ ತನಿಖೆಗಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿ ನೀಡಿದ್ದರು. ಇದನ್ನು ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ “ರಾಜ್ಯ ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್ ನೋಟಿಸ್ ಹಿಂಪಡೆಯುವ ಶಿಫಾರಸ್ಸಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಎದ್ದು ಕಾಣುವ ಅತಾರ್ಕಿಕ ಅಂಶಗಳನ್ನು ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶದಲ್ಲಿ ಪಟ್ಟಿ ಮಾಡಿಲ್ಲ. ಬದಲಾಗಿ, ಸಂಪುಟದ ಶಿಫಾರಸ್ಸು ಪಕ್ಷಪಾತಿ ಎಂಬುದನ್ನಷ್ಟೇ ರಾಜ್ಯಪಾಲರು ಹೇಳಿದ್ದಾರೆ. ಆ ಮೂಲಕ ಸ್ವತಂತ್ರವಾಗಿ ವಿವೇಚನೆ ಬಳಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿಸುವಾಗ ತನಿಖಾಧಿಕಾರಿ ಅಭಿಪ್ರಾಯ ರೂಪಿಸಿರಬೇಕು. ಇದೂ ಹಾಲಿ ಪ್ರಕರಣದಲ್ಲಿ ಅನುಪಾಲನೆಯಾಗಿಲ್ಲ.ಹೀಗಾಗಿ, ರಾಜ್ಯಪಾಲರ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದ್ದರು.
ಮತ್ತೊಬ್ಬ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ “ಕೆಸರೆ ಗ್ರಾಮದಲ್ಲಿನ ಆಕ್ಷೇಪಾರ್ಹವಾದ ಸರ್ವೆ ನಂ. 464ರಲ್ಲಿನ 3.16 ಗುಂಟೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದು, ದೇವನೂರು ಲೇಔಟ್ ರೂಪಿಸುವಾಗ ಅದನ್ನು ವಶಕ್ಕೆ ಪಡೆಯಲಾಗಿಲ್ಲ. ಸಿದ್ದರಾಮಯ್ಯ ರ ಬಾವಮೈದುನನಿಗೆ ಅದನ್ನು ಮಾರಾಟ ಮಾಡುವಾಗ ಅದರ ಒಡೆತನ ಮೂಲ ಭೂಮಾಲೀಕರ ಬಳಿಯೇ ಇತ್ತೇ ಹೊರತು ಮುಡಾ ಬಳಿ ಅಲ್ಲ. ಆ ವೇಳೆ ಅದು ಕೃಷಿ ಭೂಮಿಯೇ ಆಗಿತ್ತು. ಆಕ್ಷೇಪಾರ್ಹವಾದ ಭೂಮಿಯನ್ನು ಮುಡಾ ತನ್ನ ವಶಕ್ಕೆ ಪಡೆದಿರಲಿಲ್ಲ. 1993ರಲ್ಲಿ ಆಕ್ಷೇಪಾರ್ಹವಾದ ಭೂಮಿ ಸೇರಿದಂತೆ ಹಲವು ಜಮೀನುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಡಾ ಒಟ್ಟಾರೆಯಾಗಿ ಒಂದು ಕೋಟಿಗೂ ಅಧಿಕ ಪರಿಹಾರ ನೀಡಿತ್ತು. ಇನ್ನು ದೂರುದಾರರು ಕೆಸರೆ ಗ್ರಾಮವೇ ಇಲ್ಲ ಎಂದು ವಾದಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ಕೆಸರೆ ಗ್ರಾಮ ಇದ್ದು, ಅಲ್ಲಿ ಜನವಸತಿ ಮತ್ತು ಆಸ್ಪತ್ರೆ ಇತ್ಯಾದಿಗಳು ಇದ್ದವು. ಇದಕ್ಕೆ ಸಂಬಂಧಿಸಿದಂತೆ ಜನಗಣತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ” ಎಂದು ವಾದಿಸಿದ್ದರು.
ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರು ಸಂಪುಟ ಸಭೆಯ ಶಿಫಾರಸ್ಸನ್ನು ಆಧರಿಸಬೇಕಿಲ್ಲ. ಮೇಲ್ನೋಟಕ್ಕೆ ತನಿಖಾ ಸಂಸ್ಥೆಯು ಕಾನೂನಿನ ಅಡಿ ಪ್ರಕರಣದ ತನಿಖೆ ನಡೆಸಬೇಕಿದೆಯೇ ಎಂಬುದರ ಪ್ರಕಾರ ರಾಜ್ಯಪಾಲರು ಮುನ್ನಡೆದಿದ್ದಾರೆ. ರಾಜ್ಯಪಾಲರ ನಿರ್ಧಾರವು ವಾಸ್ತವಿಕ ಅಂಶಗಳನ್ನು ಆಧರಿಸಿ, ವಿವೇಚನಾಯುತವಾಗಿದೆ. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಎಲ್ಲಾ ಕಡೆ ಅನ್ವಯವಾಗುತ್ತದೆ. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ದೂರನ್ನು ಓದಿದ ಬಳಿಕ ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡು ಬಂದಿರುವುದರಿಂದ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ” ಎಂದು ವಾದಿಸಿದ್ದರು.
ಮುಂದುವರಿದು, “ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 17ಎ ಅಧಿಕಾರದ ಮೂಲ ಗುಣವೇ ಕಾರ್ಯಕಾರಿ ಮತ್ತು ಆಡಳಿತಾತ್ಮಕವಾಗಿದೆ. ಇದರ ಅಡಿ ಅನುಮತಿ ನೀಡುವಾಗ ಆರೋಪಿಯ ವಾದ ಆಲಿಸಬೇಕಿಲ್ಲ. ಸೆಕ್ಷನ್ 17ಎ ಹಂತದಲ್ಲಿ ಸಹಜ ನ್ಯಾಯ ತತ್ವ ಅನ್ವಯಿಸುವುದಿಲ್ಲ. ಸೆಕ್ಷನ್ 19ರ ಹಂತದಲ್ಲೂ ಸಹಜ ನ್ಯಾಯತತ್ವ ಅನ್ವಯಿಸದು. ಸಂಪುಟ ಸಭೆಯ ನಿರ್ಣಯವು ಏಕೆ ಪಕ್ಷಪಾತದಿಂದ ಕೂಡಿದೆ ಎಂಬುದಕ್ಕೆ ರಾಜ್ಯಪಾಲರು ತಮ್ಮದೇ ನೋಟ್ಸ್ ಮಾಡಿದ್ದಾರೆ. ನಬಮ್ ರೇಬಿಯಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ರಾಜ್ಯಪಾಲರ ವಿವೇಚನೆಗೆ ಸಂಬಂಧಿಸಿದಂತೆ ಏನು ಹೇಳಿದೆ ಎಂಬುದನ್ನು ಡಾ. ಅಭಿಷೇಕ್ ಮನು ಸಿಂಘ್ವಿ ಗೊಂದಲ ಮಾಡಿಕೊಂಡಿದ್ದಾರೆ. ನಬಮ್ ರೇಬಿಯಾ ತೀರ್ಪು ನಮ್ಮ ಪರವಾಗಿದ್ದು, ಸಂಪುಟದ ನಿರ್ಣಯದಲ್ಲಿನ ಪಕ್ಷಪಾತ ಸಾಧ್ಯತೆಗೆ ಸಂಬಂಧಿಸಿದಂತೆಯೂ ತೀರ್ಪುಗಳನ್ನು ಉಲ್ಲೇಖಿಸಿದ್ದೇನೆ” ಎಂದಿದ್ದರು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡುವುದಕ್ಕೂ ಮುನ್ನ ತನಿಖಾಧಿಕಾರಿಯ ಪ್ರಾಥಮಿಕ ತನಿಖಾ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರು ನಿರ್ಧರಿಸಬೇಕಿತ್ತು. ಆದರೆ, ರಾಜ್ಯಪಾಲರು ತಾವೇ ತನಿಖಾಧಿಕಾರಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ” ಎಂದು ಆಕ್ಷೇಪಿಸಿದ್ದರು.
ಕೇವಿಯೇಟರ್ ಸ್ನೇಹಮಯಿ ಕೃಷ್ಣ ರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಣೀಂದರ್ ಸಿಂಗ್ “ತನಿಖೆಗೆ ಇದು ಸೂಕ್ತವಾದ ಪ್ರಕರಣ. ಸರ್ಕಾರದ ಎಲ್ಲಾ ವಿಭಾಗಗಳು ಒಂದೇ ರೀತಿಯ ಪ್ರತಿಕ್ರಿಯೆ ಸಲ್ಲಿಸಿದರೆ ರಾಜ್ಯ ಸರ್ಕಾರದ ಅಂಗ ಸಂಸ್ಥೆ ಹೇಗೆ ತನಿಖೆ ನಡೆಸುತ್ತದೆ? ಭೂಮಿಯ ಡಿನೋಟಿಫಿಕೇಶನ್ ಒಪ್ಪಬೇಕೆ ಅಥವಾ ಬೇಡವೇ ಎಂಬ ವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧರಿಸಬೇಕಿದೆ. ಇದೇ ತನಿಖೆಯ ವಸ್ತುವಾಗಿರಲಿದೆ. ಸೆಕ್ಷನ್ 48ರ ಅಡಿ ಭೂಮಿ ಬಿಡುಗಡೆ ಮಾಡಿರುವುದನ್ನು ನಾನು ಸಮರ್ಥಿಸುತ್ತಿಲ್ಲ. ಅದು ಅಸಾಧ್ಯ ಎಂಬುದನ್ನು ತೋರ್ಪಡಿಸುತ್ತಿದ್ದೇನೆ. ಇಲ್ಲಿ ಕೈಚಳಕ ನಡೆದಿರುವುದು ಸ್ಪಷ್ಟವಾಗಿದೆ” ಎಂದಿದ್ದರು.
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಪಿ ಎಸ್ ಪ್ರದೀಪ್ ಕುಮಾರ್ ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರಭುಲಿಂಗ ನಾವದಗಿ “ತಮಗಿರುವ ಆಸಕ್ತಿಯ ಕಾರಣಕ್ಕೆ ಸಂಪುಟದ ಸಚಿವರು ಪ್ರಕರಣದಲ್ಲಿ ಪಕ್ಷಪಾತಿಗಳಾಗುವ ಸಾಧ್ಯತೆಯಿಂದಾಗಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರದಿಂದ ವಂಚಿತರಾಗುತ್ತಾರೆ. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನುಸಾರ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವೇ ಅಲ್ಲದೆ ಸಂವಿಧಾನದ ರಕ್ಷಕರಾಗಿಯೂ ತಮ್ಮ ಕಚೇರಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ” ಎಂದಿದ್ದರು.
ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್, ಟಿ ಜೆ ಅಬ್ರಹಾಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದಿಸಿದ್ದರು. ಸಿದ್ದರಾಮಯ್ಯ ಪರವಾಗಿ ವಕೀಲ ಶತಭಿಷ್ ಶಿವಣ್ಣ, ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ವಕೀಲ ಕೆ ಅಭಿಷೇಕ್ ವಕಾಲತ್ತು ಹಾಕಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ – 150 | ನಾಜಿ, ಫ್ಯಾಸಿ ಕಾಲಘಟ್ಟದಲ್ಲಿ ಪ್ರೊಪಗ್ಯಾಂಡ ಸಿನೆಮಾ – ಕೆ.ಫಣಿರಾಜ್ ಮುರಳಿ ಕೃಷ್ಣ ಮಾತುಕತೆ