ಇತ್ತೀಚಿನ ಪ್ರಕರಣಗಳನ್ನು ಗಮನಿಸಿದರೆ ಹೆಣ್ಣು ಎಂಬ ಪದದ ಅರ್ಥವೇ ಅತ್ಯಾಚಾರ ಸಹಿಸಿಕೊಳ್ಳುವವಳು ಎನ್ನುವಂತಾಗಿದೆ. ಹೆಣ್ಣು ಮೊದಲಿನಿಂದ ಬಗೆಬಗೆಯ ಸಂಕಟಗಳನ್ನು ಸಹಿಸಿಕೊಂಡೇ ಬಂದಿದ್ದಾಳೆ. ಪ್ರತಿ ಹೆಣ್ಣೂ ತನ್ನ ಜೀವನದ ಘಟನೆಗಳನ್ನು ಮೆಲುಕು ಹಾಕಿದರೆ ಸಾಕು, ಸಂಕಟಗಳ ವಿಶ್ವರೂಪ ಅರಿವಾಗುತ್ತದೆ.
ನನಗೆ 1975ರ ಸುಮಾರಿಗೆ ಮಹಿಳಾವಾದದ ಪರಿಚಯವಾಯ್ತು. ಹಾಗೆಯೇ ದಲಿತ ಚಳುವಳಿಯ ಪರಿಚಯವೂ. ಮೈತ್ರಿ ಎಂಬ ಸಂಘಟನೆ ಸೇರಿದೆ. ಡಾ. ಮಂಜುಶ್ರೀ ಎಂಬ ಕೇಸಿನ ಕುರಿತು ಚರ್ಚೆಯಾಗುತ್ತಿದ್ದ ಕಾಲ ಅದು. ವರದಕ್ಷಿಣೆಗಾಗಿ ಒಬ್ಬ ವೈದ್ಯೆಯಾದ ಮಂಜುಶ್ರೀ ಸಂಕಟಕ್ಕೊಳಗಾಗಿದ್ದಳು. ನೋಡಿ, ವಿದ್ಯೆಯಾಗಲೀ, ವೈದ್ಯೆಯೆಂಬ ಸ್ಥಾನವಾಗಲೀ ಆ ಜೀವವನ್ನು ವರದಕ್ಷಿಣೆ ಎಂಬ ಪಿಡುಗಿನಿಂದ ರಕ್ಷಿಸಲಾಗಲಿಲ್ಲ. ನಂತರ ಮಥುರಾ ಕೇಸ್ ಸಂಭವಿಸಿತು. ನಮ್ಮೂರಿನ ಒಬ್ಬ ವಿಧವೆ ಬಸುರಿಯಾಗಿದ್ದಳು. ಊರು ಅವಳಿಗೆ ಬಸುರು ಇಳಿಸುವಂತೆ ತಾಕೀತು ಮಾಡಿ ಶಿಕ್ಷೆ ನೀಡಿತು. ಶಿಕ್ಷೆ ಏನೆಂದರೆ ಆ ಊರ ಹೆಣ್ಣುಮಕ್ಕಳು ಅವಳನ್ನೊಂದು ಕಂಬಕ್ಕೆ ಕಟ್ಟಿ, ಅವಳ ಎರಡೂ ಕೈ ಹಿಂದೆ ಕಟ್ಟಿ ಬೆನ್ನು ಮತ್ತು ಹೊಟ್ಟೆ ಮೇಲೆ ಹೊಡೆಯಬೇಕು. ರಕ್ತಸ್ರಾವವಾಗಿ ಬಸಿರು ಇಳಿಯಬೇಕು. ಈ ಕ್ರೂರ ಶಿಕ್ಷೆಯನ್ನು ಹೆಣ್ಣುಮಕ್ಕಳು ಯಾವ ಕರುಣೆಯಿಲ್ಲದೆ ನೀಡುತ್ತಿದ್ದರೆ ರಕ್ತ ಹರಿಸುವವಳನ್ನು ನೋಡನೋಡುತ್ತ ಬಸಿರಿಗೆ ಕಾರಣವಾದವನೂ ಆ ಗುಂಪಿನಲ್ಲಿ ಕೂತು ಅವಳನ್ನು ಬೈಯುತ್ತಿದ್ದ! ಹೀಗೆ ಹೆಣ್ಣುಮಕ್ಕಳ ಸಂಕಟದ ಬದುಕನ್ನು ನೋಡಿ, ಕೇಳಿ ನನ್ನ ಬೌದ್ಧಿಕ ಬೆಳವಣಿಗೆಯಾಯ್ತು.
1927 ಡಿಸೆಂಬರ್ 25ರಂದು ಅಂಬೇಡ್ಕರ್ ಮನುಸ್ಮೃತಿ ಸುಟ್ಟಿದ್ದರು. ಮನು ಹೆಣ್ಮಕ್ಕಳನ್ನು, ದಲಿತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಹೇಳಿದ್ದ ಎನ್ನುವುದು ಎಲ್ಲರಿಗೂ ಗೊತ್ತು. ಮನುಧರ್ಮದ ಕಾರಣಕ್ಕಾಗೇ ದಲಿತ ಮಹಿಳೆಯರು ದುಪ್ಪಟ್ಟು ಶೋಷಣೆ ಅನುಭವಿಸುತ್ತಿದ್ದಾರೆ ಎಂದೂ ಧೃಢವಾಯಿತು. ತಾರಾಬಾಯಿ ಶಿಂಧೆಯನ್ನು ಓದಿದೆ. ಮಹಿಳಾ ಸಾಹಿತ್ಯವನ್ನೆಲ್ಲ ಓದುತ್ತ ಹೋದೆ. ಓದುತ್ತ ಹೋದಂತೆ ದಲಿತ ಮಹಿಳೆಯ ಅನುಭವ ಲೋಕ, ಪ್ರಶ್ನೆಗಳು ಬೇರೆಯೇ ಎನಿಸಿತು. ಉಳಿದ ಮಹಿಳೆಯರ ಬರಹದಲ್ಲೂ ಮಹಿಳಾ ಪ್ರಶ್ನೆಗಳು ಬರುತ್ತವೆ, ಇಲ್ಲ ಎನ್ನುವುದಿಲ್ಲ. ಆದರೆ ಅದು ದಲಿತ ಮಹಿಳಾ ಪ್ರಶ್ನೆಗಳನ್ನು ಎತ್ತುವುದಿಲ್ಲ.
ಈ ವೇಳೆಗೆ ಶಾಬಾನು ಕೇಸ್ ಮುನ್ನೆಲೆಗೆ ಬಂತು. ರೂಪ್ ಕನ್ವರ್ ಸತಿ ಪ್ರಕರಣವೂ ಆಗಲೇ ಸಂಭವಿಸಿತು. ಭನವಾರಿ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪೂ ದೇಶಾದ್ಯಂತ ಗಮನ ಸೆಳೆಯಿತು. ಕೆಳಜಾತಿಯ, ಅಷ್ಟೇನೂ ಚಂದವಿಲ್ಲದ ಅವಳ ಮೇಲೆ ಮೇಲ್ಜಾತಿ ಗಂಡಸರು ಅತ್ಯಾಚಾರ ಮಾಡಿರುವ ಸಾಧ್ಯತೆಯಿಲ್ಲ ಎಂದು ಹೇಳಿದ ಹೈಕೋರ್ಟು ದುಡ್ಡಿಗಾಗಿ ಅವಳು ಕತೆ ಕಟ್ಟಿದ್ದಾಳೆಂದು ತನ್ನ ತೀರ್ಪಿನಲ್ಲಿ ಬರೆಯಿತು. ಆ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಯಿತು. ನಾಗಲಾಪಲ್ಲಿ, ಖೈರ್ಲಾಂಜಿ, ಧರ್ಮಪುರಿ ಘಟನೆಗಳು ಸಂಭವಿಸಿದವು. ಆಗೆಲ್ಲ ಪ್ರತಿಭಟಿಸಿದೆವು.
ಅತ್ಯಾಚಾರ, ಸ್ತ್ರೀ ಭ್ರೂಣ ಹತ್ಯೆ, ಖಾಪ್ ಪಂಚಾಯ್ತಿ, ಅಂತರ್ಜಾತಿ ಮದುವೆ ನಿರ್ಬಂಧ, ಮರ್ಯಾದಾ ಹತ್ಯೆ, ಸೈನ್ಯ ಮಹಿಳೆಯರ ಮೇಲೆ ನಡೆಸುವ ಅತ್ಯಾಚಾರ – ಓಹ್! ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಎಷ್ಟು ಕಾರಣಗಳು!?
ಇಂಥವೆಲ್ಲ ನಡೆಯುತ್ತಿರುವಾಗ ನಮ್ಮ ಧರ್ಮ ಏನು ಮಾಡಿತು? ಧರ್ಮ ಗುರುಗಳು ಏನು ಮಾಡಿದರು? ಅಣ್ಣಾ ಎಂದು ರಾಖಿ ಕಟ್ಟಿ ಎನ್ನುತ್ತಾರೆ. ತಾವು ಹೇಳಿಕೊಡುವ ಮಂತ್ರ ಹೇಳುವವರ ಮೇಲೆ ರೇಪ್ ಆಗುವುದಿಲ್ಲ ಎನ್ನುತ್ತಾರೆ. ಐದು ಗಂಟೆ ಒಳಗೆ ಮನೆಗೆ ಬನ್ನಿ, ಪರ್ಸಿನಲ್ಲಿ ಮೆಣಸಿನ ಪುಡಿ ಇಟ್ಕೊಳ್ಳಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕೊಡಿ – ಹೀಗೇ ಏನೇನೋ ಮಾತು ಕೇಳಿ ಬರುತ್ತಿದೆ. ಆದರೆ ಇಂಥ ಕ್ರಮಗಳು ಮಹಿಳೆಗೆ ಸ್ವಾತಂತ್ರ್ಯ ಮತ್ತು ರಕ್ಷಣೆ ಎರಡನ್ನೂ ಒಟ್ಟಿಗೇ ನೀಡಬಲ್ಲವೆ?
ಖಂಡಿತಾ ಇಲ್ಲ. ಇದಕ್ಕೆಲ್ಲ ಏನು ಮಾಡುವುದು?
ಓದಿ ಬರೆದ ನಮ್ಮೆಲ್ಲರ ಕರ್ತವ್ಯ ಈ ಕೊಳಕು ತೊಳೆಯುವುದು. ಮಹಿಳೆ ಜಾಗೃತಳಾಗಬೇಕು. ಸಂಘಟಿತಳಾಗಬೇಕು. ಹಬ್ಬ-ಸೀರೆ-ಅಡಿಗೆ-ಮಕ್ಕಳು ಈ ಎಲ್ಲವೂ ಇರಲಿ. ಅದರ ಜೊತೆಗೆ ಲಿಂಗ/ಧರ್ಮ/ಜಾತಿ/ಭಾಷೆ ಎಂಬ ಎಲ್ಲ ಗೋಡೆಗಳ ತೊರೆದು ಆಕೆ ಮುಂದುವರೆಯಬೇಕು. ನಮ್ಮ ನಮ್ಮ ಅಂತರಾಳ ಮಾತನಾಡಬೇಕು. ಜಾಗೃತಿ ಯುದ್ಧ ನಡೆಯಬೇಕು.
ಮೂಲ ಮಾತುಗಳು: ಊರ್ಮಿಳಾ ಪವಾರ್
ಸಂಗ್ರಹಾನುವಾದ: ಡಾ. ಎಚ್. ಎಸ್. ಅನುಪಮಾ
(ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮೊದಲ ಸಮಾವೇಶದ ವೇಳೆ ಮಾರ್ಚ್ 7, 2013ರಂದು ನಡೆದ ‘ಮಹಿಳೆಯರ ಮೇಲಿನ ದೌರ್ಜನ್ಯ: ಆಯಾಮಗಳು, ಕಾರಣಗಳು’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರಸಿದ್ಧ ಮರಾಠಿ ಲೇಖಕಿ, ಹೋರಾಟಗಾರ್ತಿ ಊರ್ಮಿಳಾ ಪವಾರ್ ಮಾಡಿದ ಭಾಷಣ)