ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಬುಧವಾರ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಿದ್ದು, ಈ ಮೂಲಕ ಬಂಧನಕ್ಕೊಳಗಾದ ಮೂರನೇ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲಾಗಿದ್ದಾರೆ. ಹೇಮಂತ್ ಸೋರೆನ್ ಅವರಿಗಿಂತ ಮೊದಲು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರ ತಂದೆ ಶಿಬು ಸೊರೆನ್ ಹಾಗೂ ಮಧು ಕೋಡಾ ಅವರನ್ನು ಬಂಧಿಸಲಾಗಿತ್ತು.
2019ರ ಡಿಸೆಂಬರ್ 29 ರಂದು ರಾಜ್ಯದ ಅಧಿಕಾರ ವಹಿಸಿಕೊಂಡ ಹೇಮಂತ್ ಸೊರೆನ್ ಅವರಿಗೆ ಇಡಿ ಈ ಹಿಂದೆ ಒಟ್ಟು ಒಂಬತ್ತು ಸಮನ್ಸ್‌ಗಳನ್ನು ಕಳುಹಿಸಿತ್ತು. ಬುಧವಾರ ಅವರನ್ನು ಇಡಿ ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿ ಬಂಧಿಸಿದೆ. ಬಂಧನಕ್ಕೂ ಮುನ್ನ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ನಂತರ ಅವರನ್ನು ವಿಚಾರಣೆಗೆ ಕರೆದೊಯ್ಯಲಾಗಿತ್ತು.
ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಪ್ರಕರಣ | ಸಂಸ್ಥಾಪಕ & ಮಾನವ ಸಂಪನ್ಮೂಲ ಮುಖ್ಯಸ್ಥರ ಕಸ್ಟಡಿ ಫೆಬ್ರವರಿ 17 ರವರೆಗೆ ವಿಸ್ತರಣೆ
ಕಳೆದ ವಾರ ಅವರು ನಾಪತ್ತೆಯಾಗಿದ್ದಾರೆ ಎಂಬ ಊಹಾಪೋಹಗಳ ನಡುವೆ ಜಾರ್ಖಂಡ್ ಮತ್ತು ದೆಹಲಿಯಲ್ಲಿ ಇಡಿ ಮತ್ತು ಸೊರೆನ್ ನಡುವೆ ತಿಕ್ಕಾಟ ನಡೆದಿತ್ತು. ಆದಾಗ್ಯೂ, ಸೊರೆನ್ ಅವರು ಮಂಗಳವಾರ ರಾಂಚಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದರು. ಅವರ ಪತ್ನಿ ಕಲ್ಪನಾ ಸೊರೆನ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆಯಿದೆ ಎಂಬ ವದಂತಿಗಳ ನಡುವೆ ತಮ್ಮ ಶಾಸಕರೊಂದಿಗೆ ಸಭೆ ನಡೆಸಿದ್ದರು.
ಜಾರ್ಖಂಡ್‌ನಲ್ಲಿ ಅಕ್ರಮವಾಗಿ ಜಮೀನಿನ ಮಾಲೀಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸೋರೆನ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 14 ಮಂದಿಯನ್ನು ಬಂಧಿಸಲಾಗಿದೆ.
2000ರ ನವೆಂಬರ್ 15 ರಂದು ಜಾರ್ಖಂಡ್ ರಚನೆಯಾದಾಗಿನಿಂದ, ರಾಜ್ಯದ ಆರು ಮುಖ್ಯಮಂತ್ರಿಗಳನ್ನು ಕಂಡಿದೆ. ಈ ನಡುವೆ ರಾಜ್ಯದಲ್ಲಿ ಮೂರು ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ರಾಜ್ಯದ ಒಬ್ಬ ಸಿಎಂ ಬಿಜೆಪಿಯ ರಘುಬರ್ ದಾಸ್ ಮಾತ್ರ ತಮ್ಮ ಪೂರ್ಣಾವಧಿಯನ್ನು (2014 ರಿಂದ 2019) ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಕರಣದ ಎರಡನೇ ಸುತ್ತಿನ ವಿಚಾರಣೆಯ ಸಂದರ್ಭದಲ್ಲಿ ಇಡಿ ಸೊರೆನ್ ಅವರಿಗೆ 15 ಪ್ರಶ್ನೆಗಳನ್ನು ಕೇಳಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಅದಕ್ಕೂ ಮೊದಲು ಅವರನ್ನು ಜನವರಿ 20 ರಂದು ಪ್ರಶ್ನಿಸಲಾಗಿತ್ತು. ತನಿಖಾ ಸಂಸ್ಥೆಯು ಟೈಪ್ ಮಾಡಿ ದಾಖಲಿಸಿದ ಹೇಳಿಕೆಗಳನ್ನು ತೋರಿಸಲಾಗಿದ್ದು, ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು, ಈ ದಾಖಲೆಗಳ ಮೇಲೆ ಅವರ ಸಹಿಯನ್ನು ಕೇಳಲಾಗಿದೆ. ಆದರೆ ಅದರಕ್ಕೆ ಅವರು ಸಹಿ ಮಾಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬಂಧನಕ್ಕೊಳಗಾದ ಜಾರ್ಖಂಡ್ ಮುಖ್ಯಮಂತ್ರಿಗಳು:
ಮಧು ಕೋಡ
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದರು. 2006 ಮತ್ತು 2008 ರ ನಡುವೆ ಯುಪಿಎ ಸರ್ಕಾರದ ಮೈತ್ರಿಯೊಂದಿಗೆ ಸಿಎಂ ಆಗಿ ಸೇವೆ ಸಲ್ಲಿಸಿದ ಕೊಡಾ, ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಕ್ರೋಢೀಕರಣದ ಆರೋಪ ಎದುರಿಸಿದ್ದರು.
ಕೋಡಾ ಅವರು ಗಣಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರು ಸಿಎಂ ಆಗಿದ್ದ ಅವಧಿಯಲ್ಲಿ ಕಲ್ಲಿದ್ದಲು ಮತ್ತು ಗಣಿಗಾರಿಕೆ ಬ್ಲಾಕ್‌ಗಳನ್ನು ಹಂಚಿಕೆ ಮಾಡಲು ಲಂಚ ಪಡೆದಿದ್ದಾರೆ ಎಂದು ಸಿಬಿಐ ಮತ್ತು ಇಡಿ ಆರೋಪ ಮಾಡಿತ್ತು. ಅವರು ಮತ್ತು ಅವರ ಸಹಚರರು 4,000 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು.
2009ರಲ್ಲಿ ಬಂಧನಕ್ಕೊಳಗಾದ ಕೊಡಾ 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.2017ರಲ್ಲಿ ಅವರಿಗೆ 25 ಲಕ್ಷ ರೂ.ಗಳ ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತ್ತು. ಹವಾಲಾ ವಹಿವಾಟು ಮತ್ತು ಅಕ್ರಮ ಆಸ್ತಿಗಳ ಇತರ ನಾಲ್ಕು ಪ್ರಕರಣಗಳಲ್ಲಿ ಅವರು ಶಿಕ್ಷೆಗೊಳಗಾಗಿದ್ದಾರೆ.
ಇದನ್ನೂ ಓದಿ: ಮಧ್ಯಂತರ ಬಜೆಟ್ 2024 ಮುಖ್ಯಾಂಶಗಳು | ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದ ಹಣಕಾಸು ಮಂತ್ರಿ!
ಶಿಬು ಸೋರೆನ್
1994 ರಲ್ಲಿ ತನ್ನ ಖಾಸಗಿ ಕಾರ್ಯದರ್ಶಿ ಶಶಿನಾಥ್ ಝಾ ಅವರ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಹೇಮಂತ್ ಸೋರೆನ್ ಅವರ ತಂದೆ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರಿಗೆ ದೆಹಲಿ ನ್ಯಾಯಾಲಯವು 2006ರ ಡಿಸೆಂಬರ್ 5 ರಂದು ಜೀವಾವಧಿ ಶಿಕ್ಷೆ ವಿಧಿಸಿತು.
ಈ ವೇಳೆ ಶಿಬು ಸೊರೆನ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಕಲ್ಲಿದ್ದಲು ಸಚಿವರಾಗಿದ್ದರು. 2007ರ ಆಗಸ್ಟ್‌ನಲ್ಲಿ ಅವರ ವಿರುದ್ಧ ಸಾಕ್ಷ್ಯವನ್ನು ಪಡೆಯುವಲ್ಲಿ ತನಿಖಾ ಸಂಸ್ಥೆಯು “ದಯನೀಯವಾಗಿ” ವಿಫಲವಾಗಿದೆ ಎಂದು ದೆಹಲಿ ಹೈಕೋರ್ಟ್ ಶಿಬು ಸೊರೆನ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. 2018ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದು ಶಿಬು ಸೊರೆನ್ ಅವರನ್ನು ಖುಲಾಸೆಗೊಳಿಸಿತು.
ವಿಡಿಯೊ ನೋಡಿ: ಓ! ಹಾಗಾದರೆ ನೀವೂ ನಮ್ಹಾಗೆ…! ಮೂಲ : ಫಾಹ್ಮಿದಾ ರಿಯಾಜ್, ಭಾವಾನುವಾದ – ಬಿ.ಸುರೇಶ್ Janashakthi Media