ಜನಸಾಮಾನ್ಯರ ಕನಸು ಎಷ್ಟೊಂದು ಪುಟ್ಟದು!! ಅದನ್ನು ಈಡೇರಿಸಿಕೊಳ್ಳಲು ಬದುಕಿನುದ್ದಕ್ಕೂ ಏಗೋದೇ ಏಗೋದು. ಶಾಲೆಗೋಗುವ ಹುಡುಗ ಹೆಬ್ಬುಲಿ ಕಟ್ ಮಾಡಿಸಿಕೊಳ್ಳಲು ಪಡುವ ಕಷ್ಟವೇ ‘ಹೆಬ್ಬುಲಿ ಕಟ್’ ಸಿನಿಮಾ. ಅವನ ಸಹಪಾಠಿಯೊಬ್ಬಳ ಪುಸ್ತಕದಲ್ಲಿ ಹೆಬ್ಬುಲಿ ಸಿನಿಮಾದ ಕಿಚ್ಚ ಸುದೀಪ್ ಅವರ ಪೋಟೊ ಒಂದು ಸಿಗುತ್ತದೆ. “ನೀನು ಸುದೀಪನ ತರ ಹೆಬ್ಬುಲಿ ಕಟ್ ಮಾಡಿಸಿಕೊಂಡರೆ ಆ ಹುಡುಗಿ ನಿನ್ನ ಇಷ್ಟಪಡುತ್ತಾಳೆ” ಎಂದು ಯಾರೋ ಐಡಿಯಾ ಕೊಡುತ್ತಾನೆ. ಹೆಬ್ಬುಲಿ ಕಟ್ ಕನಸು ಕಾಣುತ್ತಾ, ಅದಕ್ಕಾಗಿ ಹಣ ಹೊಂದಿಸಲು ಹುಡುಗನ ಪರದಾಟ, ಮನೆಯಲ್ಲಿ ಬಡತನ, ಇದರ ಮಧ್ಯೆಯೆ ಈ ಹೆಬ್ಬುಲಿ ಕಟ್ ಮಾಡಿಸುವ ಕಾಡುವ ಕನಸು. ಹೆಬ್ಬುಲಿ ಕಟ್
ಆಣೇಕಟ್ಟೆ ವಿಶ್ವನಾಥ್
ಹೇಗೋ ಸಿನಿಮಾ ಮುಕ್ತಾಯದ ಹಂತದಲ್ಲಿ ಹಣ ಹೊಂದಿಸುತ್ತಾನೆ. ಆದರೆ ಅವನಿಗೆ ಕಟಿಂಗ್ ಮಾಡಲಾರದ ಸಾಮಾಜಿಕ ವ್ಯವಸ್ಥೆ. ದಲಿತ ಹುಡುಗನಿಗೆ ಹೆಬ್ಬುಲಿ ಕಟ್ ಮಾಡಲು ಕಟಿಂಗ್ ಶಾಪಿನವನು ಪರದಾಡುತ್ತಾನೆ. ಏಕೆಂದರೆ ದಲಿತ ಹುಡುಗನಿಗೆ ಕಟಿಂಗ್ ಮಾಡಿದರೆ ಮೇಲ್ಜಾತಿಯ ಜನರು ಮೇಲೆ ಬೀಳುತ್ತಾರೆ ಎಂಬ ಭಯ. ಅದಕ್ಕಾಗಿ ಅವನೊಂದು ಪ್ಲಾನ್ ಮಾಡಿ ಹೇಳುತ್ತಾನೆ, “ನೀನು ನಾಳೆ ಮುಂಜಾನೆ ಯಾರೂ ಎದ್ದಿರದ ಸಮಯದಲ್ಲಿ ಬಾ, ನಾನು ಇಲ್ಲೇ ಕಟಿಂಗ್ ಶಾಪ್ನಲ್ಲಿ ಮಲಗಿದ್ದು ಕಟಿಂಗ್ ಮಾಡುತ್ತೇನೆ” ಎಂದು. ಆ ಹುಡುಗ ಮನೆಗೆ ಹೋದರೆ ಅವಳ ಅಮ್ಮ ಅವನ ತಲೆಗೂದಲನ್ನು ಅವಳಿಗೆ ಬೇಕಾದಂತೆ ಕಟಿಂಗ್ ಮಾಡಿಸುತ್ತಾಳೆಂದು ಹುಡುಗ ರಾತ್ರಿಯೆಲ್ಲಾ ಹೇಗೋ ಟೈಂ ಪಾಸ್ ಮಾಡಿ ಮುಂಜಾನೆ ಹೊತ್ತಿಗೆ ಕಟಿಂಗ್ ಶಾಪ್ ಗೆ ಹೋಗುತ್ತಾನೆ. ಅಲ್ಲಿ ಅವನು ಹೆಬ್ಬುಲಿ ಕಟ್ ಮಾಡಿಸಿಕೊಂಡನೆ ಇಲ್ಲವೆ ಎನ್ನುವುದೆ ಕೊನೆಯ ಹಂತ.
ಹೆಬ್ಬುಲಿ ಕಟ್ ಸಿನಿಮಾ ಕನ್ನಡದಲ್ಲಿ ಒಂದು ಭಿನ್ನ ಪ್ರಯೋಗ!! ಒಂದು ಸಾಮಾಜಿಕ ಸಂವೇದನೆ ಇರುವ ವಿಷಯವನ್ನು ಆಯ್ದುಕೊಳ್ಳಲು ಸಿನಿಮಾ ತಯಾರಿಕೆಯಲ್ಲಿ ಎಂಟೆದೆ ಬೇಕು. ಏಕೆಂದರೆ, ಈ ಕಾಲ ಇದೆಯಲ್ಲ ಅದು ಸಾಂಸ್ಕೃತಿಕವಾಗಿ ದೃವೀಕರಣಗೊಂಡಿರುವ ಕಾಲ, ಬಹಳ ಬೇಗ ರಿಯಾಕ್ಟ್ ಮಾಡಿಬಿಡುತ್ತದೆ. ಇಂತಹ ಒಂದು ವಿಷಯ ವಸ್ತುವನ್ನು ಆಯ್ದುಕೊಂಡು ಅದನ್ನು ಕಮರ್ಷಿಯಲ್ ಸಿನಿಮಾ ರೀತಿಯಲ್ಲಿ ವೃತ್ತಿಪರವಾಗಿ ಸಿದ್ದಗೊಳಿಸಿರುವುದು ಸಿನಿಮಾದ ಹೆಚ್ಚುಗಾರಿಕೆ. ಹಾಗಾಗಿ ಕಮರ್ಷಿಯಲ್ ಸಿನಿಮಾ ರೀತಿಯ ಚಿಕ್ಕ ಚಿಕ್ಕ ಮಸಾಲೆಗಳಿವೆ, ಕೊನೆಯವರೆಗೆ ಎಲ್ಲಿಯೂ ಸಿನಿಮಾ ಬೋರ್ ಹೊಡೆಸುವುದಿಲ್ಲ.
ಇದನ್ನೂ ಓದಿ: ಜುಲೈ 9 – ಕಾರ್ಮಿಕ ವರ್ಗದ ನೇತೃತ್ವದಲ್ಲಿ ಅಖಿಲ ಭಾರತ ಮಹಾ ಮುಷ್ಕರ
ಸಾಮಾಜಿಕ ಸೂಕ್ಷ್ಮ ವಿಷಯಗಳಲ್ಲಿ ಒಂದಾದ ಜಾತಿಯ ವ್ಯವಸ್ಥೆಯನ್ನು ಹೇಳುವಾಗ ಕ್ರೌರ್ಯವನ್ನು ವಿಜೃಂಭಿಸುವುದು ನಾವು ಇತ್ತಿಚಿನ ಕೆಲವು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಸಿನಿಮಾದಲ್ಲಿ ಆ ಕ್ರೌರ್ಯವನ್ನು ಅಗತ್ಯವಿರುವಷ್ಟು ಮಾತ್ರ ತೋರಿಸಿರುವುದರಿಂದ ಸಿನಿಮಾ ಕುಟುಂಬ ಸಮೇತ ನೋಡಲು ಸಹ್ಯವೆನಿಸುತ್ತದೆ. ಗ್ರಾಮೀಣ ಭಾರತದಲ್ಲಿ ಇರುವ ಜಾತಿವ್ಯವಸ್ಥೆ ಮತ್ತು ಜಮೀನ್ದಾರಿಕೆ ದಬ್ಬಾಳಿಕೆ ಕ್ರೌರ್ಯವನ್ನು ಒಂದು ಚಿಕ್ಕ ಕಥಾವಸ್ತುವಿನ ಮೂಲಕ ಸುಂದರವಾಗಿ ಹೇಳಿದ್ದಾರೆ.
ಮಲಯಾಳಂ ಮತ್ತು ತಮಿಳಿನಲ್ಲಿ ಇಂತಹ ಸಿನಿಮಾ ಬಂದಿವೆ ಕನ್ನಡದಲ್ಲಿ ಬರುತ್ತಿಲ್ಲ ಎನ್ನುತ್ತಿದ್ದವರಿಗೆ ಮುಖದ ಮೇಲೆ ಹೊಡೆದಂತೆ “ನಾವು ಕನ್ನಡ ಪ್ರತಿಭೆಗಳು ಯಾರಿಗೂ ಕಡಿಮೆ ಇಲ್ಲ” ಎಂದು ಹೇಳುತ್ತಿದೆ ಸಿನಿಮಾ. ಹೊಸಬರ ತಂಡವಾದರೂ ವೃತ್ತಿಪರವಾಗಿ ಸಿನಿಮಾವನ್ನು ರೂಪಿಸಿದೆ.
ಹುಡುಗ ಹುಡುಗಿಯ ಪ್ರೇಮ ಕಥೆಯ ಪ್ರಸಂಗಗಳು, ಹೇರ್ ಕಟ್ ಮಾಡಿಸುವ ಪರದಾಟ ವಿನೋದದಿಂದ ಕೂಡಿವೆ, ಸಿನಿಮಾ ಉದ್ದಕ್ಕೂ ತಿಳಿಹಾಸ್ಯ ಇರುವುದರಿಂದ ಸಿನಿಮಾ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಹೊಸಬರ ನಟನೆಯಲ್ಲಿ ಒಂದು ಮುಗ್ಧತೆ ಕಾಣುತ್ತದೆ. ಪ್ರತಿಯೊಂದು ಕುಟುಂಬವೂ ನೋಡಬೇಕಾದ ಸಿನಿಮಾ.
ಈ ದೇಶವನ್ನು ಉದ್ಧರಿಸಲು ಇನ್ನೆಷ್ಟು ಅಂಬೇಡ್ಕರರು ಬರಬೇಕೋ, ಇನ್ನೆಷ್ಟು ಬಸವಣ್ಣರು, ಬುದ್ಧಗುರುಗಳು ಬರಬೇಕೋ ಎನ್ನುವಷ್ಟು ಈ ಕಾಲದ ಜನರ ಮನಸ್ಸು ಮಲಿನಗೊಂಡಿದೆ. ಸಾಂಪ್ರದಾಯಿಕ ಜಮೀನ್ದಾರಿಕೆ ಪದ್ಧತಿಯು ಬದಲಾಗಿ ಆಧುನಿಕವಾದ ಬಂಡವಾಳಶಾಹಿ ಪದ್ಧತಿಯು ಬೇರೆ ರೂಪದಲ್ಲಿ ನಮ್ಮನ್ನು ಆಳುತ್ತಿದೆ. ಸಾಮಾಜಿಕ ಏಣಿಶ್ರೇಣಿ ವ್ಯವಸ್ಥೆಯನ್ನು ಕಾದಿಡುವ ನವ ಹುನ್ನಾರಗಳು ಧರ್ಮ ಮತ್ತು ದೇಶದ ಹೆಸರಲ್ಲಿ ಮುನ್ನೆಲೆಗೆ ಬಂದಿವೆ. ಅವು ನಮ್ಮೊಳಗೆ ನಮ್ಮ ದೇಹವನ್ನು ಮನಸ್ಸನ್ನು ಛಿದ್ರಛಿದ್ರ ಮಾಡಿದೆ. ಇಂತಹ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಸಂವೇದನಾಶೀಲತೆ ಬೆಳೆಸಲು ಇಂತಹ ಸಿನಿಮಾಗಳು ಈ ಕಾಲದ ಅಗತ್ಯ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ.
ಕನ್ನಡ ಕೋಗಿಲೆ Uma Yg ಅವರ ನಟನೆ ಈ ಹಿಂದಿನ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಪಾತ್ರಕ್ಕೆ ಹೆಚ್ಚು ನ್ಯಾಯ ಒದಗಿಸಿಕೊಟ್ಟಿದೆ. ಮಹದೇವು ನಟನೆಯು ತುಂಬಾ ನ್ಯಾಚುರಲ್ ಆಗಿದೆ. ಕೊನೆಯ ದೃಶವಂತೂ ಅತ್ಯದ್ಭುತ, ಗೋಡೆಯ ಮೇಲೆ ಉಳಿದಿರುವ ‘…. ನಾವೆಲ್ಲ ಒಂದು’ ಎಂಬ ಬರಹ ಸಾಂಕೇತಿಕವಾಗಿ ಈ ಸಾಮಾಜಿಕ ವ್ಯವಸ್ಥೆಯ ವಿಡಂಬನಾತ್ಮಕವಾಗಿ ತೋರಿಸುತ್ತದೆ. ತಪ್ಪದೆ ತಪ್ಪದೆ ಹೆಬ್ಬುಲಿ ಕಟ್ ಸಿನಿಮಾ ನೋಡಿ ಕನ್ನಡ ಸಿನಿಮಾವನ್ನು ಬೆಂಬಲಿಸೋಣ..
ಇದನ್ನೂ ನೋಡಿ: LIVE | ನಾಡ ಉಳಿಸಿ ಸಮಾವೇಶ | ಬಲವಂತದ ಭೂ ಸ್ವಾಧೀನದ ವಿರುದ್ಧ ಅನ್ನದಾತರ ಧರಣಿ
