ರಾಜ್ಯಾದ್ಯಂತ ಆರ್ಭಟಿಸಿದ್ದ ಮಳೆ, ಸದ್ಯ ನಿಂತಿದೆ. ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿದ್ದ ಜನಜೀವನ ಈಗ ಸಹಜ ಸ್ಥಿತಿಯತ್ತ ಬರುತ್ತಿದೆ. ಆದರೆ ರಾಜ್ಯಾದ್ಯಂತ ಸುರಿದ ಮಳೆಗೆ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಜೊತೆ ನಿಲ್ಲಬೇಕಿದ್ದ ಸರಕಾರ, ಶಾಸಕರು ಮಂತ್ರಿಗಿರಿ ಆಸೆಗಾಗಿ ಜನರನ್ನು ಮಳೆಯಲ್ಲಿ ನೆನೆಯುವಂತೆ ಮಾಡಿದ್ದಾರೆ.
ರಾಜ್ಯದಲ್ಲಿ ಭಾರೀ ಮಳೆಗೆ ಇದುವರೆಗೆ 10 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರಕಾರ ಘೋಷಿಸಿದೆ. ರಾಜ್ಯದಲ್ಲಿ ಮಳೆಯಿಂದ ಆದ ಅನಾಹುತಗಳ ಮಾಹಿತಿ ಲಭ್ಯವಾಗಿದ್ದು ರಾಜ್ಯದ 11 ಜಿಲ್ಲೆಗಳ 45 ತಾಲೂಕುಗಳ ಸುಮಾರು 283 ಗ್ರಾಮಗಳಿಗೆ ಮಳೆಯಿಂದ ಭಾರೀ ಹಾನಿ ಆಗಿದೆ ಎಂದು ಸರಕಾರದ ದಾಖಲೆಗಳು ಹೇಳುತ್ತಿವೆ.
ರಾಜ್ಯದ 36,498 ಜನರಿಗೆ ಪ್ರವಾಹದಿಂದಾಗಿ ತೊಂದರೆ ಆಗಿದ್ದು, ರಾಜ್ಯದ 500 ಕ್ಕೂ ಮನೆಗಳು ಸಂಪೂರ್ಣ ಹಾನಿಯಾಗಿದ್ದು, 3292 ಮನೆಗಳಿಗೆ ಭಾಗಶ: ಹಾನಿ ಆಗಿವೆ. ಇದುವರೆಗೆ 31,360 ಜನರನ್ನು ಬೆರಡೆ ಸ್ಥಳಾಂತರಿಸಲಾಗಿದೆ. 54 ದೊಡ್ಡ ಜಾನುವಾರುಗಳು ಮೃತಪಟ್ಟಿದ್ದು, 24 ಸಣ್ಣ ಜಾನುವಾರುಗಳು ಸಾವೀಗಿಡಾಗಿವೆ., 58,960 ಬೆಳೆ ಹಾನಿಯಾಗಿವೆ. 1962 ಎಕರೆಯಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳು ಸಹ ನಷ್ಟ ಉಂಟಾಗಿವೆ. ರಾಜ್ಯದ 237 ಕಡೆಗಳಲ್ಲಿ ಕಾಳಜಿ ಕೇಂದ್ರಗಳ ಆರಂಭಿಸಲಾಗಿದ್ದು, ಕಾಳಜಿ ಕೇಂದ್ರಗಳಲ್ಲಿ 22,417 ಜನರಿಗೆ ಪರಿಹಾರದ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಮಳೆಯಿಂದಾಗಿ ಜಿಲ್ಲೆಗಳಲ್ಲಿ ಆದ ನಷ್ಟದ ಮಾಹಿತಿಯನ್ನು ನೋಡ್ತಾ ಹೋಗೊಣ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದ ಸೃಷ್ಟಿಯಾಗಿದ್ದ ಪ್ರವಾಹದಿಂದ ಉಂಟಾದ ಹಾನಿಗಳ ವಿವರವನ್ನು ಜಿಲ್ಲಾಡಳಿತ ದಾಖಲಿಸಿದೆ. 81 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. 50 ಮನೆಗಳು ಸಂಪೂರ್ಣ ಬಿದ್ದಿದ್ದು, 146 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈವರೆಗೆ 4 ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಸುಮಾರು 737.54 ಕೋಟಿ ರೂಪಾಯಿಯಷ್ಟು ರಸ್ತೆ, ಸೇತುವೆ, ಮೂಲಭೂತ ಸೌಕರ್ಯಗಳ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.
ಗದಗ್‌ನಲ್ಲಿ ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು ರೋಣ ಮತ್ತು ನರಗುಂದ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೆರೆ ಭೀತಿ ಆರಂಭವಾಗಿದೆ. ಜೋಳ, ಕುಸುಬೆ, ಕಡಲೆ ಸೂರ್ಯಕಾಂತಿ, ಬೆಳೆಗಳು ಸಂಫೂರ್ಣ ನಾಶವಾಗಿದ್ದು, ಕೋಟ್ಯಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜನರನ್ನು ಅಸ್ತವ್ಯಸ್ತ ಮಾಡಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1800 ಅಡಿ ದಾಟಿದ್ದು, ಸಾಗರ ತಾಲೂಕಿನಲ್ಲಿ ಪ್ರವಾಹ ಭೀತಿ ಜಾಸ್ತಿಯಾಗುತ್ತಲೇ ಇತ್ತು, ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ 100 ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ; 3.1 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, 30 ಸೇತುವೆಗಳಿಗೆ, 327 ಕಿಮೀ ರಸ್ತೆಗಳಿಗೆ ಹಾನಿಯಾಗಿದ್ದು, ಸಂಚಾರ ಸ್ಥಗಿತವಾಗಿದೆ. ಭಾರೀ ಮಳೆಯಾಗುತ್ತಿರುವ ಕಾರಣ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಇದನ್ನೂ ಓದಿ : ಲಿಂಗಾಯತರ ವಿರೋಧ ಕಟ್ಟಿಕೊಳ್ಳದೆ ತಂತ್ರ ಹೆಣೆದ ಬಿಜೆಪಿ, ಹಿಂದುತ್ವದ ಅಜೆಂಡ ಸಿಎಂ ಆಯ್ಕೆಗೆ ಮುಖ್ಯವಾಯಿತೆ?!
ಕೊಡಗು ಜಿಲ್ಲೆಯ ಮಡಿಕೇರಿ-ಸೋಮವಾರಪೇಟೆ ಮುಖ್ಯರಸ್ತೆಯ ಹಟ್ಟಿಹೊಳೆಯಲ್ಲಿ 500 ಮೀಟರ್ಗಳಷ್ಟು ದೂರ ರಸ್ತೆ ಬಿರುಕು ಬಿಟ್ಟಿದ್ದು, ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಆದರೆ ಕಳೆದ 2 ತಿಂಗಳಿನಿಂದ ವರುಣನ ಅಬ್ಬರ ಮತ್ತು ಗಾಳಿಯ ರಭಸಕ್ಕೆ ಕೊಡಗಿನಲ್ಲಿ ಈತನಕ 52 ಕೋಟಿ 39 ಲಕ್ಷದ 30 ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಹಾಸನದಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇತ್ತು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು, ಹಾಸನದಲ್ಲಿ ಧಾರಾಕಾರ ಮಳೆಯಾಗಿದೆ.. ಮಳೆಯ ರಭಸ ಎಷ್ಟಿದೆ ಎಂದರೆ ಮಳೆಯ ನೀರು ಮನೆಗಳಿಗೂ ನುಗ್ಗಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣ ಜಲಾವೃತಗೊಂಡಿದ್ದು. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ರಸ್ತೆ ಕುಸಿದ ಪರಿಣಾಮ ಸಂಚಾರಕ್ಕೆ ಬಾರಿ ಅಡೆತಡೆಯಾಗಿತ್ತು. ಹೇಮಾವತಿ, ವಾಟೇಹೊಳೆ, ಯಗಚಿ ಜಲಾಶಯಗಳ ಒಳಹರಿವು ಹೆಚ್ಚಿದ್ದು, ವಾಟೇಹೊಳೆಯಿಂದ ನದಿಗೆ ನೀರು ಹರಿಸಲಾಗುತ್ತಿದೆ ಗೊರೂರಿನ ಹೇಮಾವತಿ ಅಣೆಕಟ್ಟೆ ಭಾಗಶಃ ಭರ್ತಿಯಾಗಿದೆ. ಅಪಾರ ಪ್ರಮಾಣದ ನಷ್ಟವಾಗಿರುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಲ್ಲೂ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ, ನದಿತೀರದ ಮನೆಗಳು, ಕೃಷಿಭೂಮಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದ 47 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದಾಗಿ 5 ತಾಲೂಕಿನ 51 ಗ್ರಾಮಗಳಿಗೆ ತೊಂದರೆ ಆಗಿದೆ. 26 ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 2 ಸಾವಿರ ಜನ ಕಾಳಜಿ ಕೇಂದ್ರದಲ್ಲಿ ಇದ್ದಾರೆ. ಎರಡು NDRF ತಂಡ ಬೆಳಗಾವಿ ಜಿಲ್ಲೆಯಲ್ಲಿ ಇದ್ದಾರೆ. 224 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. 36 ಸೇತುವೆ ಮುಳುಗಡೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ದಾವಣಗೆರೆ ಜಿಲ್ಲೆಯ ಮಳೆಯ ಆರ್ಭಟ ಹೆಚ್ಚಾಗಿತ್ತು, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿನ ಹೂವಿನ ಬೆಳೆ ಗಳು, ಮೆಕ್ಕೆಜೋಳ, ಶೇಂಗಾ, ಅಡಕೆ, ದ್ವಿದಳ ಧಾನ್ಯ ಬೆಳೆಗಳು ಜಲಾವೃತಗೊಂಡಿವೆ. ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೋಟ್ಯಾಂತರ ರೂ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಕೃಷ್ಣಾನದಿಗೆ ಹೆಚ್ಚಿನ ನೀರು ಹರಿದ ಕಾರಣ ಬಾಗಲಕೋಟೆ ಜಿಲ್ಲೆಯ ನದಿ ಪಾತ್ರದ 60 ಗ್ರಾಮಗಳು ಜಲಾವೃತಗೊಂಡಿವೆ, ಈವರೆಗೆ ಒಟ್ಟು 100 ಹೆಚ್ಚಿನ ಮನೆಗಳು ಮಳೆಯಿಂದ ಹಾನಿಯಾಗಿವೆ. ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ 60 ಪ್ರವಾಹ ಬಾಧಿತ ಗ್ರಾಮಗಳ 8813 ಕುಟುಂಬಗಳ, 35,157 ಜನ ಸಂತ್ರಸ್ತರಾಗಿದ್ದು, ಅವರಿಗಾಗಿ ಒಟ್ಟು 55 ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಸದ್ಯ 55 ಕಾಳಜಿ ಕೇಂದ್ರಗಳಲ್ಲಿ 11,961 ಜನ ಆಶ್ರಯ ಪಡೆದಿದ್ದು, ಉಳಿದವರು ತೋಟದ ಮನೆ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಉಡಪಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಿಜಾಪುರ, ಹಾವೇರಿ, ಸೇರಿದಂತೆ ಅನೇಕ ಕಡೆಗಳಲ್ಲೂ ಮಳೆ ಅವಾಂತರವನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ನಷ್ಟವಾಗಿದ್ದು, ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ತಳ್ಳಿದೆ. ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಸಾರ್ವಜನಿಕರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

ಮಳೆ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ 5 ಲಕ್ಷರೂ ಪರಿಹಾರ ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಈ ರೀತಿ ಘೋಷಣೆಗಳು ಪ್ರತಿಬಾರಿಯೂ ಮಾಡಲಾಗುತ್ತೆ, ಆದರೆ ಘೋಷಿತ ಪರಿಹಾರ ಆ ಫಲಾನುಭವಿಗಳಿಗೆ ಸರಿಯಾಗಿ ಸಿಕ್ಕ ಉದಾಹರಣೆಗಳು ಇಲ್ಲ. ಆ ಪರಿಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡುವ ಇಲ್ಲವೆ ಲಂಚವನ್ನು ಕೇಳುವ ಕಾರಣಕ್ಕಾಗಿ ಅದೆಷ್ಟೊ ಜನ ಪರಿಹಾರ ಪಡೆಯದೇ ಹಾಗೇ ಭೀಟ್ಟ ಉದಾಹರಣೆಗಳಿವೆ. ಇತ್ತ ಪ್ರತಿಬಾರಿಯೂ ಮಳೆಗಾಲದಲ್ಲಿ ಈ ರೀತಿ ಸಮಸ್ಯೆ ಬರುತ್ತದೆ ಎಂಬ ಅರಿವಿದ್ದರೂ ಸರಕಾರ ಕೈ ಚೆಲ್ಲಿ ಸುಮ್ಮನೆ ಕುಳಿತು ಬಿಡುತ್ತದೆ. ಅದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ಸರಕಾರ ಮಾಡದರುವುದು ಬೇಸರದ ಸಂಗತಿಯಾಗಿದೆ.
ಇನ್ನೂ ರಾಜ್ಯದಲ್ಲಿ ಹೊಸ ಮುಖಮಂತ್ರಿ ಅಧಿಕಾರ ನಡೆಸುತ್ತಿದ್ದು, ಅವರು ಸಂಪುಟ ರಚನೆಯ ಕಸರತ್ತಿನಲ್ಲಿ ತೊಡಗಿದ್ದಾರೆ. ಈ ಜನರ ಗೋಳು ಕೇಳುವವರು ಯಾರೂ ಎಂಬ ಪ್ರಶ್ನೆಯೂ ಈಗ ಉದ್ಭವವಾಗಿದೆ. ಸರಕಾರ ಕೂಡಲೆ ಸಂಪುಟ ರಚನೆ ಮಾಡಿಕೊಂಡು ಮಳೆಹಾನಿಗೊಳಗಾಗಿರುವ ಜನರಿಗೆ ಮೂಲ ಸೌಲಭ್ಯ ಆರ್ಥಿಕ ಸಹಾಯ ಹಾಗೂ ಶಾಶ್ವತ ಪರಿಹಾರವನ್ನು ನೀಡಲು ಮುಂದಾಗಬೇಕಿದೆ.