ಬೆಂಗಳೂರು: ಸೋಮವಾರ, 12 ಆಗಸ್ಟ್, ಆ.14ರಿಂದ 20 ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ. ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ರಾಜ್ಯದಲ್ಲಿ
ದಕ್ಷಿಣ ಒಳನಾಡು ಪ್ರದೇಶವನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ನೈರುತ್ಯ ಮುಂಗಾರು ಆಗಮಿಸಿದೆ. ಅದಾಗ್ಯೂ ಆಗಸ್ಟ್ 14ರ ನಂತರ ಕಿತ್ತೂರು ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಆಗಸ್ಟ್ 20 ರವರೆಗೆ ಹೆಚ್ಚಿನ ಮಳೆಯಾಗುವ ನಿರೀಕ್ಷೆಗಳಿವೆ. ಹೀಗಾಗಿ, ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ಹಾಗೂ ಕೃಷ್ಣ-ಕಾವೇರಿ ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಜೀವಹಾನಿಯಂತಹ ಅನಾಹುತ ತಪ್ಪಿಸಲು ಮತ್ತಷ್ಟು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಕ
ಮಳೆಯಾಗುವ ಸಂದರ್ಭದಲ್ಲಿ ನದಿ ಉಕ್ಕಿಹರಿಯುತ್ತದೆ, ಇದೇ ವೇಳೆ ಅಣೆಕಟ್ಟೆಗಳಿಂದಲೂ ನೀರು ಹರಿಸಿದರೆ ಪ್ರವಾಹ ಸ್ಥಿತಿ ಉಂಟಾಗಿ ಜನ ಪರಿತಪಿಸುವ ಸ್ಥಿತಿ ಎದುರಾಗುತ್ತದೆ. ಹೀಗಾಗಿ ಅಣೆಕಟ್ಟೆಗಳು ತುಂಬುವವರೆಗೂ ಕಾಯದೆ ಜಲಾಶಯಗಳ ಒಳಹರಿವನ್ನು ನಿಯಮಿತವಾಗಿ ಬಿಡುಗಡೆ ಮಾಡುವ ಮೂಲಕ ನೆರೆಯನ್ನು ನಿಯಂತ್ರಿಸಬಹುದು. ಈ ಮಾದರಿಯ ನೀರಿನ ನಿರ್ವಹಣೆ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದಲ್ಲದೆ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳು ಹಾಗೂ ಗುಡ್ಡದ ಅಂಚಿನಲ್ಲಿ ಕುಸಿದುಬೀಳುವ ಸಾಧ್ಯತೆಗಳಿರುವ ಮನೆಗಳನ್ನು ಗುರುತಿಸಿ ಜನವಾಸ ನಿಷೇಧಿಸಲು ಹಾಗೂ ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ರವಾನಿಸುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ವಾಡಿಕೆಗಿಂತ ಸರಾಸರಿ ಶೇ. 26ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಈವರೆಗೆ 553 ಮಿಲಿ ಮೀಟರ್ ಮಳೆಯಾಗಬೇಕಿದ್ದರಲ್ಲಿ, ಸರಾಸರಿ 699ರಷ್ಟು ಮಿ. ಮೀ ಮಳೆಯಾಗಿದೆ. ದಕ್ಷಿಣ ಒಳನಾಡು ವಾಡಿಕೆ 171, ವಾಸ್ತವಿಕ- 246, ಉತ್ತರ ಒಳನಾಡು ವಾಡಿಕೆ- 260 ವಾಸ್ತವಿಕ- 322, ಮಲೆನಾಡು- ವಾಡಿಕೆ- 1127, ವಾಸ್ತವಿಕ- 1361, ಕರಾವಳಿ ವಾಡಿಕೆ- 2299, ವಾಸ್ತವಿಕ 2947 ಮಿ.ಮೀ. ಮಳೆಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಶೇ.5ರಷ್ಟು ಮಳೆ ಕಡಿಮೆಯಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿತ್ತು. ಆದರೆ ಕಳೆದ 10 ದಿನಗಳಲ್ಲಿ ಸುಧಾರಿಸಿದ ಮಳೆಯು ಕೊರತೆ ಸರಿದೂಗಿಸಿದೆ.
ಅತಿವೃಷ್ಟಿಗೆ ಈ ಬಾರಿ 58 ಮಂದಿ ಸಾವಿಗೀಡಾಗಿದ್ದಾರೆ. ಆಹಾರ ಧಾನ್ಯ, ತೋಟಗಾರಿಕೆ ಸೇರಿ 80 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ವಾರದೊಳಗೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು. ಮೃತರ ಕುಟುಂಬಗಳಿಗೆ ಒಟ್ಟು 3.04 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ. 1126 ಪೂರ್ಣ ಬಿದ್ದ ಮನೆಗಳು, ಅನಧಿಕೃತ 98, ದೊಡ್ಡ ಹಾನಿ 1176, ಭಾಗಶಃ ಹಾನಿ 2338, 2,377 ಮನೆಗಳು ಅಲ್ಪ ಹಾನಿಯಾಗಿವೆ. ಪೂರ್ಣ ಬಿದ್ದ 768 ಮನೆಗಳಿಗೆ ತಲಾ 1.20 ಲಕ್ಷ ರೂ. ನಂತೆ 9.21 ಕೋಟಿ ರೂ. ಪರಿಹಾರ ಪಾವತಿ ಮಾಡಲಾಗುವುದು. ಭಾಗಶಃ ಬಿದ್ದ 2,800 ಮನೆಗಳಿಗೆ ಒಟ್ಟು 78 ಲಕ್ಷ ರೂ. ದಿನಬಳಕೆ ವಸ್ತುಗಳ ನೆರವಿಗೆ 1.40 ಕೋಟಿ ರೂ ಪರಿಹಾರ ವಿತರಿಸಲಾಗುತ್ತಿದೆ. ಬಲಿಯಾದ 151 ದೊಡ್ಡ ಜಾನುವಾರು, 137 ಚಿಕ್ಕ ಜಾನುವಾರುಗಳಿಗೆ ಸೇರಿ ಒಟ್ಟು 52.98 ಲಕ್ಷ ರೂ. ಪರಿಹಾರ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ನೋಡಿ: ರೈಲ್ವೇ ಯೋಜನೆ : ಮಿತ್ರ ಪಕ್ಷಗಳಿಗೆ ಬಂಪರ್, ಕರ್ನಾಟಕ, ಕೇರಳ, ತಮಿಳುನಾಡಿಗೆ ತಾರತಮ್ಯ Janashakthi Media