ರಾಜ್ಯದ ಹಲವೆಡೆ ಭಾರೀ ಮಳೆಯ ಸಾಧ್ಯತೆ ಇದೆ. ವಿಜಯಪುರ, ಬೀದರ್, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಗುಡುಗು ಸಹಿತ ಮಳೆಯಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯನಗರ ಸೇರಿದಂತೆ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಮಧ್ಯಾಹ್ನದ ವೇಳೆಗೆ ವಿಜಯಪುರ, ಬೀದರ್, ತುಮಕೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯಾಗಲಿದೆ. ಇದೇ ರೀತಿ ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ತುಮಕೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇವುಗಳ ಹೊರತಾಗಿ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಯಾದಗಿರಿ, ಕೊಪ್ಪಳ, ಮಂಡ್ಯ, ಹಾಸನ, ಮೈಸೂರು ಜಿಲ್ಲೆಗಳ ಕೆಲವೆಡೆ ಬಿರುಗಾಳಿ ಸಹಿತ ಮಳೆಯಾಗಬಹುದು.
ಇದನ್ನು ಓದಿ :-ಡಾ.ಎಂ.ಎ.ಸಲೀಂ ನೂತನ ಡಿಜಿಪಿಯಾಗಿ ನೇಮಕವಾಗುವ ಸಾಧ್ಯತೆ
ಮೇ 1ರಿಂದ ಮೇ 5ರವರೆಗೆ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ರಾಯಚೂರು, ಯಾದಗಿರಿ, ಕೊಪ್ಪಳ, ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಕೆಲವೆಡೆ ಬಿರುಗಾಳಿ ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ.
ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯ ಪರಿಣಾಮವಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಮರದ ಕೆಳಗೆ ನಿಂತಿದ್ದ ಆಂಬ್ಯುಲೆನ್ಸ್ ಹಾಗೂ 9 ಕಾರುಗಳು ಜಖಂಗೊಂಡಿವೆ. ಕಾಲ್ಟೆಕ್ಸ್ ವೃತ್ತ ಸಮೀಪ ಆರ್ಯನ್ ಶಾಲೆಯ ಚಾವಣಿ ಶೀಟುಗಳು ಹಾರಿ ಲೈಟ್ ಕಂಬದ ಮೇಲೆ ಬಿದ್ದಿವೆ. ಬಿಎಚ್ರಸ್ತೆ, ಸಿದ್ಧಗಂಗಾ ಮಹಿಳಾ ಕಾಲೇಜಿನ ಒಳಭಾಗದ ಮರಗಳು ಬಿಎಚ್ ರಸ್ತೆ ಕಡೆ ಉರುಳಿ ಸಂಪೂರ್ಣ ಕಾಂಪೌಂಡ್ ಹಾನಿಯಾಗಿದೆ. ರಸ್ತೆ ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಟ್ಟರು. ಆಸ್ಪತ್ರೆ ಬಳಿ ನಿಂತಿದ್ದ ಮಾರುತಿ 800 ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ಅದರಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ :-ಡಾ.ಎಂ.ಎ.ಸಲೀಂ ನೂತನ ಡಿಜಿಪಿಯಾಗಿ ನೇಮಕವಾಗುವ ಸಾಧ್ಯತೆ
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮೇ 5ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ನಾಗರಿಕರು ಎಚ್ಚರಿಕೆಯಿಂದ ಇರಬೇಕು. ವಿದ್ಯುತ್ ಕಂಬಗಳು, ಮರಗಳು ಮತ್ತು ನೀರಿನಿಂದ ತುಂಬಿದ ಪ್ರದೇಶಗಳಿಂದ ದೂರವಿರಬೇಕು. ಅತ್ಯಾವಶ್ಯಕತೆ ಇಲ್ಲದೆ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಸ್ಥಳೀಯ ಆಡಳಿತ ಮತ್ತು ಹವಾಮಾನ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು.
ಈ ಸಂದರ್ಭದಲ್ಲಿ ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಳೆ ಮತ್ತು ಬಿರುಗಾಳಿ ಕಾರಣದಿಂದ ಬೆಳೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನಿಸಿ, ತಮ್ಮ ಕೃಷಿ ಚಟುವಟಿಕೆಗಳನ್ನು ರೂಪಿಸಬೇಕು.