ನಿರಂತರ ಮಳೆ : ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿ : ಕಣ್ಣೀರಲ್ಲಿ ಅನ್ನದಾತ

ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಮಳೆಯ ಆರ್ಭಟಕ್ಕೆ ಮನೆಗಳೆಲ್ಲ ಕುಸಿದು ಬೀಳುತ್ತಿವೆ. ಇನ್ನೊಂದೆಡೆ ಅನ್ನದಾತರ ಬಂಗಾರದ ಬೆಳೆ ನಾಶವಾಗುತ್ತಿದೆ.

ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯದಲ್ಲಿ ಸುಮಾರು 3.63 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಾಮರಾಜ ನಗರ: 349 ಮನೆಗಳು ಹಾನಿ : ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಮನೆಗಳಿಗೆ ಹಾನಿ ಯಾಗಿರುವ ಪ್ರಕರಣ ಮತ್ತಷ್ಟು ಏರಿಕೆಯಾಗಿವೆ. ಜಿಲ್ಲಾಡಳಿತ ನೀಡಿರುವ ಪ್ರಕಾರ, ಒಟ್ಟು 349 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಂದಾಜು ಮಾಡಿರುವಂತೆ ಗುರುವಾರದವರೆಗೆ 1,620 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿ ರುವ ಬೆಳೆಗಳಿಗೆ ಹಾನಿಯಾಗಿದೆ. 33.52 ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ.

ಗಾಳಿ-ಮಳೆಯಿಂದಾಗಿ ಈವರೆಗೆ 37 ವಿದ್ಯುತ್‌ ಕಂಬ ಮುರಿದು ಬಿದ್ದಿವೆ. 20 ವಿದ್ಯುತ್‌ ಪರಿವರ್ತಕಗಳು ಹಾನಿಗೀಡಾಗಿವೆ.

9 ಸಾವಿರ ಕೋಳಿಗಳು ಜಲಸಮಾಧಿ : ತುಮಕೂರು ತಾಲ್ಲೂಕು ಕಸಬಾ ಹೋಬಳಿ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಶಿವಕುಮಾರ್ ಎಂಬ ರೈತರ ಕೋಳಿ ಫಾರಂ ಗೆ ನೀರು ನುಗ್ಗಿ ಸಾವಿರಾರು ಕೋಳಿಗಳು ಸಾವನ್ನಪ್ಪಿದ್ದಾವೆ.

ಇತ್ತ ಚಿಂತಾಮಣಿಯ ಅಚ್ಚಕದಿರೇನಹಳ್ಳಿಯಲ್ಲಿಯೂ ಕೋಳಿ ಫಾರ್ಮ್ ಹೌಸ್ ಗೆ ಮಳೆ ನೀರು ನುಗ್ಗಿದ್ದರಿಂದಾಗಿ ಸಾವಿರಾರು ಕೋಳಿಗಳು ಜಲಸಮಾಧಿಯಾಗಿವೆ. ಕೋಳಿಗಳು ಸಾವನ್ನಪ್ಪಿದ್ದರಿಂದಾಗಿ, ಮಾಲೀಕ ಕಣ್ಣೀರುಡುವಂತೆ ಆಗಿದೆ.

ಧಾರವಾಡ : ಸಾವಿರಾರು ಹೆಕ್ಟೇರ್ ಬೆಳೆ ಹಾನಿ : ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಸಾವಿರಾರು ಹೆಕ್ಟೇರ್ ಬೆಳೆ ಹಾನಿ ಆಗಿದೆ.ಅಕಾಲಿಕೆ ಮಳೆಯಿಂದ 188 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂಪೂರ್ಣವಾಗಿ 22 ಮನೆಗಳಿಗೆ ಹಾನಿಯಾದರೆ, ಇಲ್ಲಿಯವರೆಗೆ 7390 ಹೆಕ್ಟೇರ್ ಕೃಷಿ ಬೆಳೆಗಳು ಹಾನಿ ಆಗಿದೆ.

1210 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾದ್ರೆ, ಸುಮಾರು 28 ಕಿಲೋ ಮೀಟರ್​​​ನಷ್ಟು ರಸ್ತೆಗಳು ಹಾಳಾಗಿವೆ.

ಮೈಸೂರು ಮೆನೆ, ಬೆಳೆ ಹಾನಿ : ಸತತ ಮಳೆಯಿಂದ ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 500 ಹೆಕ್ಟೇರ್‌ ಬೆಳೆ ನಾಶವಾಗಿದ್ದು, ಮೂವರು ಮೃತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1,907 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 87 ಮನೆಗಳಿಗೆ ಸಂಪೂರ್ಣ ಹಾನಿ ಆಗಿದೆ. ಗ್ರಾಮಾಂತರ ಪ್ರದೇಶದಲ್ಲಿ 500 ಕಿ.ಮೀ., ನಗರ ಪ್ರದೇಶದಲ್ಲಿ 1,100 ಕಿ.ಮೀ. ರಸ್ತೆ ಹಾಳಾಗಿವೆ. 67 ಶಾಲಾ ಕಟ್ಟಡ, 33 ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಕಟ್ಟಡಗಳಿಗೆ ಹಾನಿ ಉಂಟಾಗಿದೆ. 130 ವಿದ್ಯುತ್‌ ಕಂಬಗಳು ಬಿದ್ದಿವೆ’ ಎಂದು ಮಾಹಿತಿ ನೀಡಿದರು.

ಹಾವೇರಿ : 500 ಕ್ಕೂ ಹೆಚ್ಚು ಮನೆಗಳಿಗೆ ಹಾನಿ : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಶುಕ್ರವಾರ ಒಂದೇ ದಿನ ಜಿಲ್ಲೆಯಾದ್ಯಂತ 567 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಅತಿವೃಷ್ಟಿ ಮಳೆಯಿಂದ 18,665 ಹೆಕ್ಟೇರ್‌ ಕೃಷಿ ಬೆಳೆ ಹಾಗೂ 230 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. 4799 ಹೆಕ್ಟೇರ್‌ ಭತ್ತದ ಬೆಳೆ ಜಲಾವೃತವಾಗಿ ನಾಶವಾಗಿದೆ.

ಹಾಸನ: 1,105 ಎಕರೆ ರಾಗಿ, 650 ಎಕರೆ ಜೋಳದ ಬೆಳೆ ನಾಶ : ಹಾಸನ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ನಾಶ ಆಗಿದೆ. 1,105 ಎಕರೆ ರಾಗಿ, 650 ಎಕರೆ ಜೋಳದ ಬೆಳೆ ನಾಶ ಉಂಟಾಗಿದೆ. ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ‌ ತಾಲೂಕಿನ ಎತ್ತಿನಕಟ್ಟೆ, ಕವಳಿಕೆರೆ, ಈಚನಹಳ್ಳಿ, ಮುದ್ಸನಹಳ್ಳಿ ಭಾಗದಲ್ಲಿ ಭಾರಿ ಮಳೆಯಿಂದ ಬೆಳೆ ನಾಶ ಉಂಟಾಗಿದೆ.

ಕೊಪ್ಪಳ: ತುಂಗಭದ್ರಾ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚನೆ : ಭಾರಿ ಮಳೆಯಿಂದ ತುಂಗಭದ್ರಾ ಡ್ಯಾಂ ಒಳ ಹರಿವು ಹೆಚ್ಚಳ ಆಗಿದೆ. ನದಿಗೆ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚನೆ ಕೊಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಭಾಗದ ಜನರಿಗೆ ಮೈಕ್, ತಮಟೆ ಮೂಲಕ ಅಧಿಕಾರಿಗಳಿಂದ ಸಂದೇಶ ನೀಡಿದ್ದಾರೆ. ತಾಲೂಕು ಪಂಚಾಯಿತಿ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ.

ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಎ.ಕೊತ್ತೂರು ಎಂಬಲ್ಲಿ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಮೃತದೇಹ ಪತ್ತೆ ಆಗಿದೆ. 20 ಗಂಟೆಗಳ ಬಳಿಕ ಪತ್ತೆಯಾದ ಅಮರಾವತಮ್ಮ ಮೃತದೇಹ ಸಿಕ್ಕಿದೆ. ಎ.ಕೊತ್ತೂರು ಬಳಿ ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶವ ಪತ್ತೆಹಚ್ಚಿದ್ದಾರೆ.

ಕೋಲಾರದಲ್ಲಿ ಭಾರಿ ಮಳೆಯಿಂದಾಗಿ ಕಚೇರಿಗಳು ಜಲಾವೃತ ಆಗಿವೆ. ಸರ್ಕಾರಿ ಅಧಿಕಾರಿಗಳ ಬಂಗಲೆ‌ಗಳು, ಕಚೇರಿಗಳು ಜಲಾವೃತ ಆಗಿವೆ. ಭಾರಿ ಮಳೆಯಿಂದ ಕೋಲಾರದ ಸಾರಿಗೆ ಕಚೇರಿ, ಎಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮನೆಗಳು ಜಲಾವೃತ ಆಗಿವೆ.

ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದುದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, 24 ಗಂಟೆಯಲ್ಲಿ14405 ಹೆಕ್ಟೇರ್‌ ವಿವಿಧ ಬೆಳೆಗಳು ಹಾನಿಯಾಗಿದೆ.ಅಂದಾಜು 20 ಕೋಟಿ ರೂಗಳಷ್ಟು ನಷ್ಟವಾಗಿದ್ದು ರೈತರು ಕಂಗಾಲಾಗಿದ್ದಾರೆ.

ಗಣಿನಾಡಲ್ಲಿ ಇತ್ತೀಚಿಗೆ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ನೀರಿಕ್ಷೆಯಂತೆ ಉತ್ತಮ ಬೆಳೆ ಬಂದು ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಅನ್ನದಾತನ ಒಡಲಿಗೆ ವರುಣ ವಕ್ರದೃಷ್ಟಿ ನೆಟ್ಟಿದ್ದಾನೆ. ಸೀಜಂಟಾ ತಳಿಯ ಬೀಜಗಳನ್ನು ಬಿತ್ತಿ ಉತ್ತಮ ಇಳುವರಿ ಬೆಳೆದಿದ್ದ ರೈತರ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಮೆಣಸಿನಕಾಯಿ ಹಾಳಾಗಿದೆ.

ಜಮೀನಿನಿಂದ ತಂದು ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಒಣಗಲು ಹಾಕಿದ್ದಾಗ ಅಬ್ಬರಿಸಿದ ವರುಣ ಬೆಳೆಯೆಲ್ಲವನ್ನು ಹಾಳು ಮಾಡಿದ್ದಾನೆ. ಎಕರೆ ಬೆಳೆಗೆ ತಲಾ 1.50 ಲಕ್ಷ ಕ್ಕೂ ಅಧಿಕ ಖರ್ಚು ಮಾಡಿದ್ದ ರೈತರು ಇದೀಗ ತಲೆ ಮೇಲೆ ಕೈ ಹೊತ್ತು ಕಣ್ಣೀರಿಡುತ್ತಿದ್ದಾರೆ. ಮೆಣಸಿನಕಾಯಿ ಬೀಜಕ್ಕಾಗಿ ಲಾಠಿಯೇಟು ತಿಂದಿದ್ದ ಅನ್ನದಾತರು ಬಂಗಾರದ ಬಳೆ ಬದುಕನ್ನ ಬದಲಾಯಿಸುತ್ತೆ ಅಂದುಕೊಂಡಿದ್ದರು ಆದರೆ ಸದ್ಯ ಬೆಳೆ ನೀರಲ್ಲಿ ನಿಂತು ಕೊಳೆತು ಹೋಗುವ ಪರಿಸ್ಥಿತಿ ಎದುರಾಗಿದೆ.

ಪ್ರತಿ ಕ್ವಿಂಟಾಲ್​ಗೆ 18000 ರೂಪಾಯಿವರೆಗೆ ಮಾರಾಟವಾಗಬೇಕಿದ್ದ ಬೆಳೆ ಮಣ್ಣಾಗಿದೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ ತಾಲೂಕುಗಳ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೆಣಸಿನಕಾಯಿಯನ್ನು ಬೆಳೆದು ಉತ್ತಮ ಆದಾಯ ನೀರಿಕ್ಷೆಯಲ್ಲಿದ್ದರು ಸದ್ಯ ವರುಣನ ಅವಾಂತರಕ್ಕೆ ಬೆಚ್ಚಿ ಕಣ್ಣೀರಿಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *