`ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ’

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್

ಭಾರತದಂತಹ ದೇಶಗಳ ಪ್ರಸ್ತುತ ಸನ್ನಿವೇಶದಲ್ಲಿ ಸಾಮ್ರಾಜ್ಯಶಾಹಿಯ ವರ್ತನೆ ಈ ತೆರನದ್ದು. ಎಲ್ಲವೂ ಸುಗಮವಾಗಿರುವ ವರೆಗೆ ಅದರ ಶ್ರೇಯಸ್ಸನ್ನು ನವ-ಉದಾರವಾದಿ ಆಳ್ವಿಕೆಗೆ ಸಲ್ಲಿಸಲಾಗುತ್ತದೆ. ಆದರೆ, ಒಂದು ಬಿಕ್ಕಟ್ಟು ಎದುರಾದ ಕೂಡಲೇ, ಅದರ ಹೊಣೆಗಾರಿಕೆಯನ್ನು ನವ-ಉದಾರವಾದಿ ಆಳ್ವಿಕೆಯು ಗಂಟು ಹಾಕಿಕೊಂಡ ನವ-ಫ್ಯಾಸಿಸಂನ ತಲೆಗೆ ಕಟ್ಟಲಾಗುತ್ತದೆ. ಈ ರೀತಿಯಲ್ಲಿ ಸಾಮ್ರಾಜ್ಯಶಾಹಿಯು ದ್ವಿ-ಪಾತ್ರ ವಹಿಸುತ್ತದೆ: ಮೊದಲನೆಯದಾಗಿ, ಧರ್ಮ ಅಥವಾ ಜನಾಂಗೀಯತೆಯ ಆಧಾರದ ಮೇಲೆ ದ್ವೇಷವನ್ನು ಪ್ರಚೋದಿಸುವ ಮೂಲಕ, ನವ-ಉದಾರವಾದಿ ಆಡಳಿತವನ್ನು ಬಲಪಡಿಸುವುದು. ಇದು ನಿರ್ಮಿಸುವ ಹೊಗೆ ಪರದೆಯ ಹೊಗೆ ಪರದೆಯ ಹಿಂದೆ ಕಾರ್ಪೊರೇಟ್‌ಗಳಿಗೆ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡುವುದು ಮತ್ತು. ಎರಡನೆಯದಾಗಿ, ಜನರು ದಂಗೆ ಎದ್ದಾಗ ಅದು ತನ್ನನ್ನು ನವ-ಫ್ಯಾಸಿಸ್ಟ್ ಆಳ್ವಿಕೆಯನ್ನೇ ಬಲಿಪಶು ಮಾಡುವುದು. 

 ಸಾಮ್ರಾಜ್ಯಶಾಹಿಯ ಕುಟಿಲತೆಗಳಿಗೆ ಒಂದು ಮಿತಿ ಎಂಬುದೇ ಇಲ್ಲ. ವಿಶ್ವದ ಅನೇಕ ದೇಶಗಳಲ್ಲಿ ನವ-ಫ್ಯಾಸಿಸ್ಟ್ ಸರ್ಕಾರಗಳು ಇಂದು ಅಸ್ತಿತ್ವದಲ್ಲಿವೆ. ಈ ಸರ್ಕಾರಗಳು ತಮ್ಮ ತಮ್ಮ ದೇಶಗಳ ಭಾರೀ ಬಂಡವಾಳಗಾರರ (ಇವರೆಲ್ಲರೂ ಜಾಗತೀಕರಣಗೊಂಡ ಬಂಡವಾಳದೊಂದಿಗೆ ಕೈಜೋಡಿಸಿರುವವರೇ) ಬೆಂಬಲದ ಮೇಲೆ ನಿಂತಿವೆ ಮತ್ತು ನವ-ಉದಾರವಾದಿ ನೀತಿಗಳನ್ನು ತಮ್ಮದೇ ಆದ ವಿಶಿಷ್ಟ ಕ್ರೂರ-ಶೈಲಿಯಲ್ಲಿ ಜಾರಿಗೊಳಿಸುತ್ತವೆ. ಇನ್ನೂ ಕೆಲವು ದೇಶಗಳಲ್ಲಿ, ನವ-ಫ್ಯಾಸಿಸ್ಟ್ ಸಂಘಟನೆಗಳು ತಾವು ಅಧಿಕಾರಕ್ಕೆ ಬಂದರೆ ನವ-ಉದಾರವಾದಿ ನೀತಿಗಳನ್ನು ಜಾರಿಗೊಳಿಸುವುದಾಗಿ ತಮ್ಮ ದೇಶಗಳ ಭಾರೀ ಬಂಡವಾಳಗಾರ-ಆಶ್ರಯದಾತರಿಗೆ ಭರವಸೆ ನೀಡುವ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಉದಾರವಾದ ಮತ್ತು ನವ-ಫ್ಯಾಸಿಸ್ಟ್‌ಗಳ ಮೈತ್ರಿಯು ಸರ್ವವ್ಯಾಪಿಯಾಗಿದೆ.

ನವ-ಉದಾರವಾದವು ಬಹಳ ದಿನಗಳಿಂದಲೂ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿರುವುದರಿಂದಾಗಿ ಅದು ಅವಶ್ಯವಾಗಿ ನವ-ಫ್ಯಾಸಿಸ್ಟ್‌ಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ. “ನವ-ಉದಾರವಾದಿ ನೀತಿಗಳ ಮೂಲಕ ಪ್ರತಿಯೊಬ್ಬರ ಸ್ಥಿತಿ-ಗತಿಗಳು ಅಂತಿಮವಾಗಿ ಉತ್ತಮಗೊಳ್ಳುತ್ತವೆ” ಎಂಬ ವಿಶ್ವಾಸವನ್ನು ಅದು ಜನರಲ್ಲಿ ಮೂಡಿಸಿತ್ತು ಮತ್ತು ಬಹಳ ದಿನಗಳ ಕಾಲ ಈ ವಿಶ್ವಾಸ ಅಳಿಯದಂತೆ ನೋಡಿಕೊಂಡಿತ್ತು. ಆದರೆ, ಅರ್ಥವ್ಯವಸ್ಥೆಯು ಮುಂದೆ ಸಾಗಲಾರದ ಒಂದು ಜಡ ಸ್ಥಿತಿಯನ್ನು ತಲುಪಿರುವಾಗ, ಈವರೆಗೂ ಅದು ಹೇಳಿಕೊಂಡು ಬಂದಿದ್ದ “ಜಿನುಗು ಸಿದ್ಧಾಂತ”(ಟ್ರಿಕ್ಲ್ ಡೌನ್ ಥಿಯರಿ)ವನ್ನು ಇನ್ನು ಮುಂದೆ ದುಡಿಯುವ ಜನರು ನಂಬುವುದಿಲ್ಲ ಮಾತ್ರವಲ್ಲ ಅವುಗಳನ್ನು ವಿರೋಧಿಸಲು ಮುಂದಾಗುತ್ತಾರೆ. ಆದ್ದರಿಂದ, ಜನರನ್ನು ದಮನಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಗಾಗಿ, ಈ ಎಲ್ಲವನ್ನೂ ಮರೆಮಾಚುವ ಸಲುವಾಗಿ ಭಿನ್ನ ಭಿನ್ನ ಧರ್ಮೀಯ ಮತ್ತು ಭಿನ್ನ ಭಿನ್ನ ಜನಾಂಗೀಯ ಗುಂಪುಗಳ ನಡುವೆ ಘರ್ಷಣೆಗಳನ್ನು ಪ್ರಚೋದಿಸಬೇಕಾಗುತ್ತದೆ. ಇಂತಹ ಘರ್ಷಣೆಗಳನ್ನು ಪ್ರಚೋದಿಸುವಲ್ಲಿ ಪರಿಣಿತಿ ಹೊಂದಿದ ನವ-ಫ್ಯಾಸಿಸ್ಟ್ ಸಂಘಟನೆಗಳು ಈ ಸನ್ನಿವೇಶದಲ್ಲಿ ರಂಗ ಪ್ರವೇಶ ಪಡೆಯುತ್ತವೆ.

ನವ-ಉದಾರವಾದಿ ಮತ್ತು ನವ-ಫ್ಯಾಸಿಸ್ಟ್ ಮೈತ್ರಿ

ನವ-ಫ್ಯಾಸಿಸಂನೊಂದಿಗಿನ ಮೈತ್ರಿಯು ಈ ಕಾರಣದಿಂದ ಮಾತ್ರವಲ್ಲದೆ, ಅಧಿಕವಾಗಿ ಮತ್ತೊಂದು ಕಾರಣದಿಂದಲೂ ನವ-ಉದಾರವಾದಕ್ಕೆ ಪ್ರಯೋಜನಕಾರಿಯಾಗಿದೆ. ಅಧಿಕಾರದಲ್ಲಿರುವ ನವ-ಫ್ಯಾಸಿಸ್ಟ್ ಸಂಘಟನೆಗಳು, ನವ-ಉದಾರವಾದಕ್ಕೆ ಪ್ರಯೋಜನಕಾರಿಯಾಗಿದ್ದರೂ ಸಹ, ನವ-ಉದಾರವಾದವು ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವ ಸಾಮರ್ಥ್ಯ ಹೊಂದಿಲ್ಲ. ಕುಗ್ಗುತ್ತಿರುವ ಬೇಡಿಕೆಗೆ ಹೋಲಿಸಿದರೆ ಅತಿಯಾದ ಉತ್ಪಾದನೆಯಿಂದ ಕೂಡಿರುವ ನವ-ಉದಾರವಾದದ ಬಿಕ್ಕಟ್ಟನ್ನು ನಿವಾರಿಸಬಹುದಾದ ಒಟ್ಟಾರೆ ಬೇಡಿಕೆಯನ್ನು ಪ್ರಚೋದಿಸುವಂತಹ ಪ್ರಭುತ್ವದ ಮಧ್ಯಪ್ರವೇಶದ ಕ್ರಮಗಳನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅವಿರತವಾಗಿ ವಿರೋಧಿಸುತ್ತದೆ. ಬೇಡಿಕೆಯ ನಿವ್ವಳ ವಿಸ್ತರಣೆಯನ್ನು ಸೃಷ್ಟಿಸಬಲ್ಲ ಪ್ರಭುತ್ವದ ಖರ್ಚು-ವೆಚ್ಚಗಳಿಗೆ ಹಣ ಒದಗಿಸಿಕೊಳ್ಳಬಹುದಾದ ಎರಡೇ ಎರಡು ಮಾರ್ಗಗಳಾದ ಶ್ರೀಮಂತರ ಮೇಲೆ ತೆರಿಗೆ ಹೇರುವುದನ್ನೂ ಅದು ಬಯಸುವುದಿಲ್ಲ ಅಥವಾ ದೊಡ್ಡ ಪ್ರಮಾಣದ ವಿತ್ತೀಯ ಕೊರತೆಯನ್ನೂ ಅದು ಬಯಸುವುದಿಲ್ಲ, ಆದ್ದರಿಂದ, ನವ-ಫ್ಯಾಸಿಸ್ಟ್ ಸರ್ಕಾರಗಳೂ ಸಹ, ತಮ್ಮ ವಿಭಜಕ ಅಜೆಂಡಾಗಳ ಹೊರತಾಗಿಯೂ, ಬಿಕ್ಕಟ್ಟು ಆಳಗೊಳ್ಳುತ್ತಿದ್ದಂತೆಯೇ ಜನ ಬೆಂಬಲವನ್ನು ಕಳೆದುಕೊಳ್ಳುತ್ತವೆ. ಘಟನಾವಳಿಗಳು ಈ ರೀತಿಯಲ್ಲಿ ಜರುಗಿದಾಗ, ನವ-ಉದಾರವಾದದ ಬಿಕ್ಕಟ್ಟಿನ ಹೊಣೆಗಾರಿಕೆಯನ್ನು ನವ-ಫ್ಯಾಸಿಸಂನ ಮೇಲೆ ಹೊರಿಸಲಾಗುತ್ತದೆ ಮತ್ತು ನವ-ಫ್ಯಾಸಿಸಂಅನ್ನೇ ದೂಷಿಸಲಾಗುತ್ತದೆ. ಮಾತ್ರವಲ್ಲ, ಜಗಳವನ್ನು ನವ-ಫ್ಯಾಸಿಸಂನೊಂದಿಗೆ ಬಗೆಹರಿಸಿಕೊಳ್ಳುವಂತೆ ಜನರನ್ನು ಉತ್ತೇಜಿಸಲಾಗುತ್ತದೆ, ನವ-ಉದಾರವಾದದೊಂದಿಗೆ ಅಲ್ಲ.

ಆರ್ಥಿಕ ಅಭಿವೃದ್ಧಿಯ ವಿಷಯಗಳಲ್ಲಿ ಮೂರನೇ ಜಗತ್ತಿನ ಬಹುತೇಕ ರಾಷ್ಟ್ರಗಳ ಬೌದ್ಧಿಕ ಪ್ರವಚನವನ್ನು ನಿಯಂತ್ರಿಸುವ ಬ್ರೆಟನ್ ವುಡ್ಸ್ ಸಂಸ್ಥೆಗಳಿಗೆ ಅಭಿವೃದ್ಧಿ ಅರ್ಥಶಾಸ್ತ್ರದ ಮೇಲಿನ ಪ್ರವಚನವನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಆರ್ಥಿಕ ಬಿಕ್ಕಟ್ಟಿನ ಹಿಂದೆ ನವ-ಫ್ಯಾಸಿಸಂ ಮಾತ್ರ ಇದೆ ಎಂಬ ಸಲಹೆಯನ್ನು ತೇಲಿಬಿಡುವುದೂ ಸಹ ಕಷ್ಟವಲ್ಲ. ಈ ಸಲಹೆಯನ್ನು ಒಪ್ಪಿನವ-ಫ್ಯಾಸಿಸ್ಟ್‌ಗಳನ್ನು ವಿರೋಧಿಸುವ ತೀವ್ರಗಾಮಿ (radical) ಬುದ್ದಿಜೀವಿಗಳೂ ಒಪ್ಪಿಕೊಳ್ಳುತ್ತಾರೆ. ಈ ಬಿಕ್ಕಟ್ಟಿನ ದೂಷಣೆಯನ್ನು ಏಕಮಾತ್ರವಾಗಿ ನವ-ಫ್ಯಾಸಿಸಂನ ಮೇಲೆ ಹೊರಿಸಿದಾಗ ಅದು ಎಡಪಂಥೀಯರ ಒಂದು ವರ್ಗಕ್ಕೂ ಸಹ ಆಪ್ಯಾಯಮಾನವಾಗುತ್ತದೆ. ಏಕೆಂದರೆ, ನವ-ಫ್ಯಾಸಿಸ್ಟ್‌ರು ಒಂದು ಅದೃಷ್ಟಹೀನ ಅಲ್ಪಸಂಖ್ಯಾತ-ಜನರ ವಿರುದ್ಧ ದ್ವೇಷವನ್ನು ಉತ್ತೇಜಿಸುತ್ತಾರೆ, ಜನರ ಪ್ರಜಾಸತ್ತಾತ್ಮಕ ನಡವಳಿಕೆಗಳನ್ನು ಸಂಕುಚಿತಗೊಳಿಸುತ್ತಾರೆ, ದುಡಿಯುವ ಜನರ ಹಕ್ಕುಗಳ ಮೇಲೆ ಆಕ್ರಮಣ ನಡೆಸುತ್ತಾರೆ ಮತ್ತು ಅವರ ವಿರುದ್ಧವಾಗಿ ಜನರಲ್ಲಿರುವ ಕೋಪವನ್ನು ಹರಿಹಾಯಿಸುವುದನ್ನೇ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, ಜನರ ಆರ್ಥಿಕ ಸಂಕಷ್ಟಗಳಿಗೆ ಕಾರಣವಾದ ನವ-ಫ್ಯಾಸಿಸಂಅನ್ನು ಆಕ್ರಮಣದ ಏಕಮಾತ್ರ ಗುರಿಯನ್ನಾಗಿಸದಿರುವುದನ್ನು ನವ-ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಒಂದು ಪುಕ್ಕುಲುತನದ ಸಂಕೇತವಾಗಿ ಗುರುತಿಸುವ ಅಪಾಯವಿದೆ. ನವ-ಫ್ಯಾಸಿಸಂಅನ್ನು ಏಕಮಾತ್ರ ಗುರಿಯನ್ನಾಗಿಸಲು ಹಿಂಜರಿಯುವವರನ್ನು ಅತ್ಯಂತ ಖಂಡನೀಯ, ಅತ್ಯಂತ ಅಸಹ್ಯಕರ, ಅತ್ಯಂತ ಮತಾಂಧ, ಬಲಪಂಥೀಯರ ರಕ್ಷಕರು ಎಂಬುದಾಗಿ ಆರೋಪಿಸಲೂ ಬಹುದು.

ನವ-ಉದಾರವಾದ ನಿರ್ಮಿಸುವ ಚಕ್ರ

ಆದಾಗ್ಯೂ, ಈ ಪ್ರಕ್ರಿಯೆಯಲ್ಲಿ, ನವ-ಉದಾರವಾದವನ್ನು ದೃಷ್ಟಿಗೆ ತಾಕದಂತೆ ಮರೆಮಾಡಿರುವುದರಿಂದ, ನವ-ಫ್ಯಾಸಿಸ್ಟ್‌ರನ್ನು ಅಧಿಕಾರದಿಂದ ಹೊರಹಾಕಿದಾಗಲೂ, ಫ್ಯಾಸಿಸ್ಟ್ ಅಲ್ಲದ, ನವ-ಉದಾರವಾದಿ ಆರ್ಥಿಕ ನೀತಿಗಳನ್ನೇ ಅನುಸರಿಸುವ ಒಂದು ಹೊಸ ಉದಾರವಾದಿ ಸರ್ಕಾರವು ಅಧಿಕಾರಕ್ಕೆ ಬರುವ ದಾರಿ ಸುಗಮವಾಗಿರುತ್ತದೆ. ಆದರೆ, ಅಂತಹ ಒಂದು ಹೊಸ ಸರ್ಕಾರವೂ ಸಹ, ನಾವು ಈಗಾಗೇ ಚರ್ಚಿಸಿದ ಹಾಗೆ, ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಿಲ್ಲದ ಕಾರಣಗಳಿಂದಾಗಿ, ನವ-ಫ್ಯಾಸಿಸ್ಟ್ ಸರ್ಕಾರವನ್ನು ಹೊರ ಹಾಕಿ ಅಧಿಕಾರಕ್ಕೆ ಬಂದ ಉದಾರವಾದಿ ಸರ್ಕಾರದಿಂದಲೂ ಜನರು ಬೇಸತ್ತ ನಂತರದಲ್ಲಿ ಮತ್ತೊಮ್ಮೆ ನವ-ಫ್ಯಾಸಿಸ್ಟ್ ಸರ್ಕಾರವು ಮರಳುವ ಮಾರ್ಗವು ಸುಗಮವಾಗಿರುತ್ತದೆ. ಈ ರೀತಿಯಲ್ಲಿ, ನವ-ಉದಾರವಾದಕ್ಕೆ ಬದ್ಧವಾಗಿರುವ ನವ-ಫ್ಯಾಸಿಸ್ಟ್ ಮತ್ತು ಉದಾರವಾದಿ ರಾಜಕೀಯ ಪಂಗಡಗಳ ನಡುವೆ ಸರ್ಕಾರವು ಒಮ್ಮೆ ಅತ್ತ; ಮತ್ತೊಮ್ಮೆ ಇತ್ತ ಎಂಬಂತೆ ಪರ್ಯಾಯವಾಗಿ ಬದಲಾಗುವಂತಹ ಪರಿಸ್ಥಿತಿಗೆ ರಾಜಕೀಯವನ್ನು ತಳ್ಳಲು ಪ್ರಯತ್ನಿಸಲಾಗುತ್ತದೆ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ಈ ತಿಕ್ಕಾಟದಲ್ಲಿ ದುಡಿಯುವ ಜನರು ಆರ್ಥಿಕ ಬಿಕ್ಕಟ್ಟಿನ ಭೀಕರ ಪರಿಣಾಮಗಳನ್ನು ಅನುಭವಿಸುತ್ತಲೇ ಇರುತ್ತಾರೆ.

ಭಾರತವು ಈ ವಿದ್ಯಮಾನಕ್ಕೆ ಒಂದು ಒಳ್ಳೆ ಮಾದರಿ ಉದಾಹರಣೆಯಾಗುತ್ತದೆ. ಆರ್ಥಿಕ ಬಿಕ್ಕಟ್ಟಿನ ಹೊಡೆತವನ್ನು ಆಗತಾನೆ ತಿನ್ನಲಾರಂಭಿಸಿದ್ದ ಸಮಯದಲ್ಲಿ, ಪ್ರಸ್ತುತ ಮೋದಿ ಸರ್ಕಾರವು 2014 ರಲ್ಲಿ ಅಧಿಕಾರಕ್ಕೆ ಬಂದಿತು. ಬಿಕ್ಕಟ್ಟಿನ ದೂಷಣೆಯನ್ನು ಸಂಪೂರ್ಣವಾಗಿ ಹಿಂದಿನ ಮನಮೋಹನ್ ಸಿಂಗ್ ಅವರ ಉದಾರವಾದಿ ಸರ್ಕಾರದ ದೌರ್ಬಲ್ಯ ಮತ್ತು ಕಾರ್ಯವೈಖರಿಯ ಮೇಲೆ ಹೊರಿಸುವ ಮೂಲಕ ಮತ್ತು ನವ-ಉದಾರವಾದದ ಬಗ್ಗೆ ಏನನ್ನೂ ಹೇಳದಿರುವ ಮೂಲಕ ಮೋದಿ ಅಧಿಕಾರ ಹಿಡಿದರು. ಅಧಿಕಾರಕ್ಕೆ ಬಂದ ನಂತರ, ತೀವ್ರಗೊಳ್ಳುತ್ತಿದ್ದ ಬಿಕ್ಕಟ್ಟಿನ ಪರಿಣಾಮವಾಗಿ ನಿರುದ್ಯೋಗವು ಹೆಚ್ಚುತ್ತಲೇ ಹೋದರೂ ಸಹ ಮತ್ತು ಜನರ ಆದಾಯವು ಕುಸಿಯುತ್ತಲೇ ಹೋದರೂ ಸಹ, ಮೋದಿ ಸರ್ಕಾರವು ಹಗೆ ತೀರಿಸಿಕೊಳ್ಳುವ ರೀತಿಯಲ್ಲಿ ನವ-ಉದಾರವಾದಿ ನೀತಿಗಳನ್ನೇ ಜಾರಿಗೊಳಿಸಿತು.  ಈ ನೀತಿಗಳ ಪರಿಣಾಮವಾಗಿ ಜನರ ಸಂಕಷ್ಟಗಳು ಹೆಚ್ಚುತ್ತಾ ಹೋದವು ಎಂಬುದನ್ನು ಸಮೀಕ್ಷೆಗಳೂ ತಿಳಿಸುತ್ತವೆ. ವಾರ್ತಾ ಪತ್ರಿಕೆಗಳ ವರದಿಗಳ ಪ್ರಕಾರ, 2012-13 ಮತ್ತು 2017-18ರ ನಡುವಿನ ಅವಧಿಯಲ್ಲಿ ಗ್ರಾಮೀಣ ಭಾರತದಲ್ಲಿ ತಲಾವಾರು ನೈಜ ಬಳಕೆಯ ವೆಚ್ಚಗಳಲ್ಲಿ ಶೇಕಡಾ 9 ರಷ್ಟು ಕುಸಿತವಾಗಿತ್ತು ಎಂಬುದು ರಾಷ್ಟ್ರೀಯ ಮಾದರಿ ಸಮೀಕ್ಷೆಯ (ಎನ್‌ಎಸ್‌ಎಸ್) ವರದಿಯಿಂದ ತಿಳಿದುಬರುತ್ತದೆ. ವರದಿಯ ಈ ಅಂಶವು ಎಷ್ಟು ಗಾಬರಿ ಹುಟ್ಟಿಸಿತ್ತು ಎಂದರೆ, ಸರ್ಕಾರವು ರಾಷ್ಟ್ರೀಯ ಮಾದರಿ ಸಮೀಕ್ಷೆಯ ವರದಿಯ ಪ್ರಕಟಣೆಯನ್ನೇ ನಿಷೇಧಿಸಿತು. ಸ್ವಾತಂತ್ರ್ಯ ಬಂದ ಅಲ್ಪ ಸಮಯದ ನಂತರ, ಖ್ಯಾತಿವೆತ್ತ ಸಂಖ್ಯಾಶಾಸ್ತ್ರಜ್ಞ ಪಿ.ಸಿ. ಮಹಾಲನೋಬಿಸ್ ಅವರ ಉಸ್ತುವಾರಿಯಲ್ಲಿ ಆರಂಭಿಸಿದ್ದ ರಾಷ್ಟ್ರೀಯ ಮಾದರಿ ಸಮೀಕ್ಷೆಯನ್ನೇ ಸರ್ಕಾರವು ಅಮಾನತಿನಲ್ಲಿಟ್ಟಿತು.

ಬಿಕ್ಕಟ್ಟನ್ನು ಅನುಭವಿಸುತ್ತಿರುವ ದೇಶ ಭಾರತ ಒಂದೇ ಅಲ್ಲ

ಕೊರೊನಾ ಸಾಂಕ್ರಾಮಿಕವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಆದರೆ, ಕೊರೊನಾ ಇಳಿಕೆಯಾದ ನಂತರವೂ, ನಿರುದ್ಯೋಗದ ಪರಿಸ್ಥಿತಿಯು ಸ್ವಾತಂತ್ರ್ಯದ ನಂತರದ ಯಾವುದೇ ವರ್ಷಕ್ಕಿಂತ ಇಂದು ಕೆಟ್ಟದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಣದುಬ್ಬರವು ಉದ್ರಿಕ್ತ ರೀತಿಯಲ್ಲಿ ಉಲ್ಬಣಗೊಳ್ಳುತ್ತಿದೆ. ಡಾಲರ್ ವಿರುದ್ಧವಾಗಿ ರೂಪಾಯಿಯ ಮೌಲ್ಯವು ಸತತವಾಗಿ ಇಳಿಯುತ್ತಲೇ ಇದೆ. ಆರ್ಥಿಕ ಸಂಕಷ್ಟಗಳ ವಿರುದ್ಧ ಜನರ ಪ್ರತಿಭಟನೆಗಳು ಹೆಚ್ಚುತ್ತಿವೆ. ಆದರೆ, ಬಹುತೇಕ ಪ್ರತಿಭಟನಾಕಾರರು ನವ-ಉದಾರವಾದಿ ನೀತಿಗಳ ಬಗ್ಗೆ ತುಟಿ ಪಿಟಿಕ್ಕೆನ್ನದೆ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಏಕಮಾತ್ರವಾಗಿ ದೂಷಿಸುತ್ತಾರೆ. ಈ ಅಭೂತಪೂರ್ವ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ನಿಸ್ಸಂದೇಹವಾಗಿ ಮೋದಿ ಸರ್ಕಾರವು ನಿಂದಾರ್ಹವಾಗಿದೆ. ಆದರೆ, ಅದಕ್ಕಿಂತಲೂ ಮುಖ್ಯವಾಗಿ, ನವ-ಉದಾರವಾದಿ ನೀತಿಗಳನ್ನು ಉತ್ಸಾಹದಿಂದ ಮತ್ತು ನಿರ್ದಯವಾಗಿ ಅಳವಡಿಸಿಕೊಂಡಿರುವುದೇ ಅದರ ಅತಿ ದೊಡ್ಡ ಲೋಪವಾಗುತ್ತದೆ. ಚಲಾವಣೆಯಲ್ಲಿದ್ದ ಕರೆನ್ಸಿಯ ಸುಮಾರು 85% ಭಾಗವನ್ನು ಹಠಾತ್ತಾಗಿ ಮೌಲ್ಯಹೀನಗೊಳಿಸಿದಂತಹ ಕೆಲವು ಅಸಂಬದ್ಧ ಮತ್ತು ಬುದ್ಧಿಹೀನ ಕ್ರಮಗಳನ್ನು ಅದು ಜಾರಿಗೊಳಿಸಿತು, ನಿಜ. ಅರ್ಥವ್ಯವಸ್ಥೆಗೆ ಎಳ್ಳಷ್ಟೂ ಪ್ರಯೋಜನವಾಗದ ಇಂತಹ ಕ್ರಮಗಳು ಜನರಿಗೆ ತೀವ್ರ ಸಂಕಷ್ಟವನ್ನು ಉಂಟುಮಾಡಿದವು ಮತ್ತು ಕಿರು ಉತ್ಪಾದನಾ ವಲಯವನ್ನು ಹಾಳುಗೆಡವಿದವು. ಆದರೂ, ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಅಗಾಧತೆಗೆ ಈ ಕ್ರಮಗಳು ವಿವರಣೆಯಾಗಲಾರವು. ಅಂತೆಯೇ, ಸರಕು ಮತ್ತು ಸೇವಾ ತೆರಿಗೆಯನ್ನು ಸರ್ಕಾರವು ಜಾರಿಗೆ ತಂದಿತು. ಇದು ಕಿರು ಉತ್ಪಾದನಾ ವಲಯಕ್ಕೆ ಮಾರಣಾಂತಿಕ ಪೆಟ್ಟು ನೀಡಿತು. ಜಿಎಸ್‌ಟಿಯನ್ನು ಜಾರಿಗೊಳಿಸುವಂತೆ ವಿಶ್ವಬ್ಯಾಂಕ್ ಸಲಹೆ ಕೊಟ್ಟಿತ್ತು. ಅದನ್ನು ಮನಮೋಹನ್ ಸಿಂಗ್ ಸರ್ಕಾರವೇ ಪ್ರಸ್ತಾಪಿಸಿತ್ತು. ಮೋದಿಯವರು ಮಾಡಿದ್ದೇನೆಂದರೆ, ತನ್ನ ಎಂದಿನ ನಿರ್ದಯತೆಯೊಂದಿಗೆ ಆ ಮಾರ್ಗದಲ್ಲಿ ಮುಂದುವರಿಯಿತು. ನೋಟುರದ್ಧತಿಯ ಜೊತೆಯಲ್ಲಿ ಜಿಎಸ್‌ಟಿ ಜಾರಿಯ ಕ್ರಮವನ್ನು ಸೇರಿಸಿದರೂ ಸಹ, ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಅಗಾಧತೆಗೆ ಅದು ಒಂದು ಸಮರ್ಪಕವಾದ ವಿವರಣೆಯಾಗುವುದಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಉದಾರವಾದದ ಚೌಕಟ್ಟಿನ ಹೊರಗಿನ ಯಾವುದೇ ಕ್ರಮಗಳನ್ನು ಸರ್ಕಾರದ ವಿರುದ್ಧ ಆಪಾದಿಸಬಹುದಾದರೂ, ಅವು ಎಷ್ಟೇ ಹಾನಿಕಾರಕವಾಗಿದ್ದರೂ, ಬಿಕ್ಕಟ್ಟನ್ನು ಸ್ವತಃ ಅವು ವಿವರಿಸಲಾರವು. ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿರುವ ದೇಶ ಭಾರತ ಒಂದೇ ಅಲ್ಲ ಎಂಬ ಅಂಶದಿಂದ ಇದು ಸ್ಪಷ್ಟವಾಗುತ್ತದೆ ಮತ್ತು ಈ ಅಂಶವು ಅದನ್ನು ಒತ್ತಿಹೇಳುತ್ತದೆ. ಈ ಬಿಕ್ಕಟ್ಟು ಎಲ್ಲ ದೇಶಗಳನ್ನೂ ವ್ಯಾಪಿಸಿದೆ. ಇಡೀ ಮೂರನೇ ಜಗತ್ತಿನ ದೇಶಗಳನ್ನು ಪೂರ್ಣವಾಗಿ ಬಾಧಿಸುತ್ತಿದೆ. ಅದು, ನವ-ಉದಾರವಾದಿ ನೀತಿಗಳನ್ನು ಅನುಸರಿಸಿದ ಪರಿಣಾಮವಾಗಿದೆ. ಆದರೂ, ವಿಸ್ಮಯಗೊಳಿಸುವ ರೀತಿಯಲ್ಲಿ, ಪ್ರತಿಯೊಂದು ದೇಶದ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವಾಗಲೂ ನವ-ಉದಾರವಾದದ ಬಗ್ಗೆ ಪ್ರಸ್ತಾಪ ಆಗುವುದೇ ಇಲ್ಲ. ಶ್ರೀಲಂಕಾದ ಬಿಕ್ಕಟ್ಟಿಗೆ ರಾಜಪಕ್ಸೆಗಳ ಮೂರ್ಖತನವೇ ಕಾರಣ; ಭಾರತದ ಬಿಕ್ಕಟ್ಟಿಗೆ ಮೋದಿ ಆಡಳಿತದ ಮೂರ್ಖತನವೇ ಕಾರಣ; ಆಫ್ರಿಕಾದ ಬಿಕ್ಕಟ್ಟಿಗೆ ಉಕ್ರೇನ್ ಯುದ್ಧವು ವಿಶ್ವ ಧಾನ್ಯಗಳ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತದೆ.

ಎಡಪಂಥೀಯರು ಅನುಕರಿಸಬಾರದು

ಇಂದಿನ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಅಗಾಧ ಕುಶಲತೆ ಅಡಗಿರುವುದು ಈ ಸಂಗತಿಯಲ್ಲಿಯೇ. ಸಾಮ್ರಾಜ್ಯಶಾಹಿಗೆ ಈ ಸನ್ನಿವೇಶವು “ಗೆದ್ದರೆ ಆಡಲು ಬಂದಿದ್ದೆ; ಸೋತರೆ ನೋಡಲು ಬಂದಿದ್ದೆ’ ಎನ್ನುವ ರೀತಿಯದ್ದು. ಎಲ್ಲಿಯವರೆಗೆ ಎಲ್ಲವೂ ಸುಗಮವಾಗಿ ನಡೆಯುತ್ತವೆಯೋ ಅಲ್ಲಿಯವರೆಗೂ ಅದರ ಶ್ರೇಯಸ್ಸನ್ನು ನವ-ಉದಾರವಾದಿ ಆಳ್ವಿಕೆಗೆ ಸಲ್ಲಿಸಲಾಗುತ್ತದೆ. ನವ-ಉದಾರವಾದಿ ಆಳ್ವಿಕೆಯು ಜಿಡಿಪಿ ಬೆಳವಣಿಗೆಯ ದರಗಳನ್ನು ತ್ವರಿತಗೊಳಿಸಿದೆ ಎಂದು ಹೇಳಲಾಗುತ್ತದೆ. ಆದರೆ, ಒಂದು ಬಿಕ್ಕಟ್ಟು ಎದುರಾದ ಕೂಡಲೇ, ಅದರ ಹೊಣೆಗಾರಿಕೆಯನ್ನು ನವ-ಉದಾರವಾದಿ ಆಳ್ವಿಕೆಯು ಗಂಟು ಹಾಕಿಕೊಂಡ ನವ-ಫ್ಯಾಸಿಸಂನ ತಲೆಗೆ ಕಟ್ಟಲಾಗುತ್ತದೆ. ಈ ರೀತಿಯಲ್ಲಿ ಸಾಮ್ರಾಜ್ಯಶಾಹಿಯು ದ್ವಿ-ಪಾತ್ರ ವಹಿಸುತ್ತದೆ: ಮೊದಲನೆಯದಾಗಿ, ಧರ್ಮ ಅಥವಾ ಜನಾಂಗೀಯತೆಯ ಆಧಾರದ ಮೇಲೆ ದ್ವೇಷವನ್ನು ಪ್ರಚೋದಿಸುವ ಮೂಲಕ, ಕೆಲವು ಅದೃಷ್ಟಹೀನ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿ ಕಟ್ಟುವ ಮೂಲಕ ನವ-ಉದಾರವಾದಿ ಆಡಳಿತವನ್ನು ಇದು ಬಲಪಡಿಸುತ್ತದೆ. ಈ ಕ್ರಮವು ಒಂದು ಹೊಗೆ ಪರದೆಯನ್ನು ನಿರ್ಮಿಸುತ್ತದೆ. ಈ ಹೊಗೆ ಪರದೆಯ ಹಿಂದೆ ಕಾರ್ಪೊರೇಟ್‌ಗಳಿಗೆ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತದೆ. ಎರಡನೆಯದಾಗಿ, ಜನರು ದಂಗೆ ಎದ್ದಾಗ ಅದು ತನ್ನ ಕಂಕುಳಲ್ಲಿರುವ ಪಶುವನ್ನು ಬಲಿ ಕೊಡುತ್ತದೆ.

ಮರಾಠಿ ನಾಟಕಕಾರ ವಿಜಯ್ ತೆಂಡೂಲ್ಕರ್ ಅವರ ’ಘಾಸಿರಾಮ್ ಕೊತ್ವಾಲ್’ ನಾಟಕದಲ್ಲಿ ಪುಣೆಯ ಆಡಳಿತಗಾರನ ಮಂತ್ರಿ ನಾನಾ ಫಡ್ನವಿಸ್, ತನ್ನ ಆಡಳಿತದ ಎಲ್ಲಾ ದಮನಕಾರಿ ಕ್ರಮಗಳನ್ನು ಕೈಗೊಳ್ಳಲು ಒಬ್ಬ ದಬ್ಬಾಳಿಕೆಯ ಬಂಟನನ್ನು ಬಳಸಿಕೊಳ್ಳುತ್ತಾನೆ. ಆದರೆ, ಅಂತಿಮವಾಗಿ ಅವನ ಈ ದಬ್ಬಾಳಿಕೆಯ ಕ್ರಮಗಳ ವಿರುದ್ಧ ಜನರು ದಂಗೆ ಎದ್ದಾಗ, ಅವನು ಈ ಬಂಟನನ್ನು ಕೆಲಸದಿಂದ ವಜಾ ಮಾಡುತ್ತಾನೆ ಮತ್ತು ಜನರ ಪ್ರಶಂಸೆಯನ್ನೂ ಗಳಿಸುತ್ತಾನೆ. ಮೂರನೆಯ ಜಗತ್ತಿನ ದೇಶಗಳಲ್ಲಿ ನವ-ಫ್ಯಾಸಿಸ್ಟ್‌ಗಳು ಈ ಬಂಟ ಘಾಸಿರಾಮ್‌ನಂತೆಯೇ ಇದ್ದಾರೆ: ಅಧಿಕಾರದಲ್ಲಿದ್ದಾಗ, ನವ-ಉದಾರವಾದವನ್ನು ಎತ್ತಿಹಿಡಿಯುವಾಗಲೂ ತಮ್ಮ ಫ್ಯಾಸಿಸ್ಟಿಕ್ ಕ್ರಮಗಳ ಮೂಲಕ ಸಮಾಜಕ್ಕೆ ಅಪಾರ ಹಾನಿಯನ್ನುಂಟುಮಾಡುತ್ತಾರೆ; ಮತ್ತು ಜನರು ಕೋಪಗೊಂಡಾಗ, ನವ-ಉದಾರವಾದಕ್ಕೆ ಯಾವುದೇ ಹಾನಿಯಾಗದಂತೆ ಅವುಗಳನ್ನು ಅಳಿಸಿ ಹಾಕಲೂ ಹೇಸುವುದಿಲ್ಲ.

ನವ-ಫ್ಯಾಸಿಸಂ ಅನ್ನು ಅದರ ಆರ್ಥಿಕ ಏರಿಳಿತಗಳನ್ನು ಹೊರತುಪಡಿಸಿ ನೋಡುವ, ನವ-ಫ್ಯಾಸಿಸ್ಟ್ ಸರ್ಕಾರವು ವಾಸ್ತವವಾಗಿ ನವ-ಉದಾರವಾದಿ-ನವ-ಫ್ಯಾಸಿಸ್ಟ್ ಮೈತ್ರಿಯ ಮೇಲೆ ಆಧಾರಿತವಾಗಿದೆ ಎಂಬ ಅಂಶವನ್ನು ನಿರ್ಲಕ್ಷಿಸುವ ಮತ್ತು, ಸಾಮಾನ್ಯವಾಗಿ, ರಾಜಕೀಯವನ್ನು ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದೆ ಎಲ್ಲವನ್ನೂ ಒಳಗೊಂಡ ಒಂದು ಸ್ವಯಂಭೂ ವಲಯವಾಗಿ ನೋಡುವ ಉದಾರವಾದೀ ಸ್ವಭಾವವನ್ನು ಎಡಪಂಥೀಯರು ಅನುಕರಿಸಬಾರದು.

Donate Janashakthi Media

Leave a Reply

Your email address will not be published. Required fields are marked *