ಭಾಷಾ ನೀತಿ ಅರ್ಥಮಾಡಿಕೊಳ್ಳಿ-ಪತ್ರ ಬರೆದ ಭಾಷೆಯಲ್ಲೇ ಉತ್ತರಿಸಿ: ಕೇಂದ್ರಕ್ಕೆ ನ್ಯಾಯಾಲಯ ನಿರ್ದೇಶನ

  • ತಮಿಳುನಾಡು, ಪುದುಚೇರಿಯಲ್ಲಿ ಪರೀಕ್ಷಾ ಕೇಂದ್ರ ರಚಿಸಲು ಮಧುರೈ ಸಂಸದ ಪತ್ರ
  • ಸಿಪಿಐ(ಎಂ) ಸಂಸದರ ಪತ್ರಕ್ಕೆ ಕೇಂದ್ರ ಗೃಹ ಸಚಿವಾಲಯ ಹಿಂದಿಯಲ್ಲಿ ಉತ್ತರ
  • 1963ರ ಅಧಿಕೃತ ಭಾಷಾ ಕಾಯ್ದೆ ಸೆಕ್ಷನ್ 3 ಕಟ್ಟುನಿಟ್ಟಾಗಿ ಪಾಲಿಸಿ
  • ಮಧುರೈ ಪೀಠದಿಂದ ಕೇಂದ್ರಕ್ಕೆ ನಿರ್ದೇಶನ
  • ಪತ್ರ ಬರೆದ ಭಾಷೆಯಲ್ಲೇ ಉತ್ತರ ನೀಡಿ

ನವದೆಹಲಿ: ‘ಕೇಂದ್ರ ಸರ್ಕಾರವು ದೇಶದ ಪ್ರತಿ ಭಾಷೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಮಹತ್ವ ಮತ್ತು ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.

ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಸಿಆರ್‌ಪಿಎಫ್ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಮಧುರೈ ಲೋಕಸಭಾ ಕ್ಷೇತ್ರದ ಸಿಪಿಐ(ಎಂ) ಪಕ್ಷದ ಸಂಸದ ವೆಂಕಟೇಶನ್ ಅವರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಿಗೆ ಪತ್ರವನ್ನು ಬರೆದಿದ್ದರು.

ಗ್ರೂಪ್ ಬಿ ಹಾಗೂ ಗ್ರೂಪ್ ಸಿನಲ್ಲಿರುವ ಖಾಲಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆಯಲು ಸರ್ಕಾರ ಪರೀಕ್ಷಾ ಕೇಂದ್ರವನ್ನು ನಿರ್ಮಿಸಿಲ್ಲ. ಹೀಗಾಗಿ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಾನು ಅಕ್ಟೋಬರ್ 9ರಂದು ಪತ್ರ ಬರೆದಿದ್ದೆ. ಈ ಪ್ರದೇಶದಲ್ಲಿ ಒಂದು ಪರೀಕ್ಷಾ ಕೇಂದ್ರವನ್ನಾದರೂ ನಿರ್ಮಿಸಬೇಕು ಎಂದು ಕೇಳಿದ್ದೆ. ನನಗೆ ನವೆಂಬರ್ 9ರಂದು ಕೇಂದ್ರ ಗೃಹ ಸಚಿವಾಲಯದಿಂದ ಹಿಂದಿಯಲ್ಲಿ ಪತ್ರ ಬಂತು. ಆದರೆ ಅವರು ಏನು ಹೇಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಗಿಲ್ಲ’ ಎಂದು ವೆಂಕಟೇಷನ್ ಪತ್ರದಲ್ಲಿ ಉಲ್ಲೇಖಿಸಿದ್ದರು.

ಆದರೆ, ಸಂಸದ ವೆಂಕಟೇಶನ್‌ ಅವರು ಇಂಗ್ಲೀಷಿನಲ್ಲಿ ಪತ್ರವನ್ನು ಬರೆದರೆ ಕೇಂದ್ರದಿಂದ ಹಿಂದಿಯಲ್ಲಿ ಉತ್ತರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸಂಸದರು ನ್ಯಾಯಾಲಯದ ಮೋರೆಹೋದರು. ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ಎಂ ದೊರೈಸ್ವಾಮಿ ಅವರಿದ್ದ ವಿಭಾಗೀಯ ಪೀಠ, ಮದುರೈ ಸಂಸದ ವೆಂಕಟೇಶನ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ‌ ನಡೆಸಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಂವಿಧಾನದ ಕಂ 350ಅನ್ನು ಉಲ್ಲೇಖಿಸಿ, ಕೇಂದ್ರ ಅಥವಾ ರಾಜ್ಯಗಳಲ್ಲಿ ಬಳಸುವ ಯಾವುದೇ ಭಾಷೆಯಲ್ಲಿ ಕೇಂದ್ರಕ್ಕೆ ಪತ್ರ ಬರೆಯಬಹುದಾಗಿದೆ. ಇಂಗ್ಲಿಷ್‌ನಲ್ಲಿ ಪತ್ರ ಬರೆದರೆ ಕೇಂದ್ರ ಸರ್ಕಾರ ಅದಕ್ಕೆ ಇಂಗ್ಲಿಷ್ ಭಾಷೆಯಲ್ಲಿಯೇ ಉತ್ತರಿಸಬೇಕು. ಇದು ಅಧಿಕೃತ ಭಾಷೆಗಳ ಕಾಯ್ದೆಗೆ ಅನ್ವಯ ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.

ನ್ಯಾಯಪೀಠವು ರಾಜ್ಯದ ಅಧಿಕಾರಿಗಳಾಗಲಿ, ಜನತೆ, ಸಂಸದರು ಹಾಗೂ ಜನಪ್ರತಿನಿಧಿಗಳು ಯಾವ ಭಾಷೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆಸುವ ಪತ್ರ ವ್ಯವಹಾರದಲ್ಲಿ ಅವರಿಗೆ ಅದೇ ಭಾಷೆಯಲ್ಲಿಯೇ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದೆ. ಕೇಂದ್ರ ಸರಕಾರಕ್ಕೆ ಸಂಸದರು ಇಂಗ್ಲಿಷ್‌ನಲ್ಲಿ ಪತ್ರವನ್ನು ಬರೆದರು, ಆದರೆ ಅವರಿಗೆ ಹಿಂದಿಯಲ್ಲಿ ಉತ್ತರ ನೀಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದ್ದು, 1963ರ ಅಧಿಕೃತ ಭಾಷಾ ಕಾಯ್ದೆಯನ್ನು, ಅದರಲ್ಲೂ ಮುಖ್ಯವಾಗಿ ಸೆಕ್ಷನ್ 3 ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇದನ್ನು ಉಲ್ಲೇಖಿಸಿದ್ದ ನ್ಯಾಯಪೀಠ, ‘ಈ ಪ್ರಕರಣದಲ್ಲಿ, ಹಿಂದಿಯಲ್ಲಿ ಉತ್ತರ ನೀಡುವುದು ಕಾನೂನು ಉಲ್ಲಂಘನೆ’ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಈ ಕುರಿತು ಅರ್ಥ ಮಾಡಿಕೊಳ್ಳಬೇಕು ಹಾಗೂ ಇದನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Donate Janashakthi Media

Leave a Reply

Your email address will not be published. Required fields are marked *