ಹತ್ತು ಲಕ್ಷ ಜನ ಭಾಗವಹಿಸಿದ ನಾಲ್ಕನೇ ಕೆಂಪು ಪುಸ್ತಕ ದಿನ

ಫೆಬ್ರುವರಿ 21ರಂದು ತೆಲಂಗಾಣದಲ್ಲಿ ರಾಜ್ಯದಾದ್ಯಂತ ಭಗತ್ ಸಿಂಗ್ ಪುಸ್ತಕ ವನ್ನು ಸಾಮೂಹಿಕವಾಗಿ ಓದಲಾಯಿತು. ಆಂದ್ರಪ್ರದೇಶದಲ್ಲಿ ಕ್ರಾಂತಿಕಾರಿ ಕವಿ ಶ್ರೀ ಶ್ರೀ ಅವರ ಪ್ರಸಿದ್ಧ ಕಾವ್ಯ ‘ಮಹಾಪ್ರಸ್ಥಾನ’ ವನ್ನು ಸಾಮೂಹಿಕವಾಗಿ ಓದಲಾಯಿತು. ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಧರ್ಮದ ಕುರಿತು ಮಾರ್ಕ್ಸ್ ಬರಹಗಳನ್ನು ಓದಲಾಯಿತು. ಫೆಬ್ರುವರಿ 14ರಿಂದ 21ರ ವರೆಗೆ ಕೇರಳದಲ್ಲಿ ಪುಸ್ತಕಗಳ, ಲೇಖಕರ ಕುರಿತ ಸಾಹಿತ್ಯೋತ್ಸವ ಜರುಗಿತು. ಹಲವು ರಾಜ್ಯಗಳಲ್ಲಿ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಸಾರ್ವಜನಿಕವಾಗಿ ಸಾಮೂಹಿಕವಾಗಿ ಓದಲಾಯಿತು. ಫೆಬ್ರುವರಿ 21ರಂದು ಏನಿದು ವಿಶೇಷ  ಎಂದಿರಾ? ಫೆಬ್ರುವರಿ 21 ನ್ನು 2020ರಿಂದ ಕೆಂಪು ಪುಸ್ತಕಗಳ ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಕೆಂಪು ಪುಸ್ತಕ ದಿನ – ಏನಿದು?

ಫೆಬ್ರುವರಿ 21 ಎರಡು ಮಹತ್ವದ ಘಟನೆಗಳು ನಡೆದ ದಿನ. 175 ವರ್ಷಗಳ ಹಿಂದೆ ಈ ದಿನವೇ ಇಬ್ಬರು ಯುವ ಬುದ್ಧಿಜೀವಿಗಳು – ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡೆರಿಕ್ ಏಂಗೆಲ್ಸ್ – ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಪ್ರಕಟಿಸಿದರು. ಈ ದಿನವನ್ನು 2002ರಿಂದ ವಿಶ್ವಸಂಸ್ಥೆಯ ಕರೆಯ ಮೇರೆಗೆ “ಅಂತರರಾಷ್ಟ್ರೀಯ ಮಾತೃಭಾಷಾ ದಿನ”ವಾಗಿಯೂ ಆಚರಿಸಲಾಗುತ್ತಿದೆ. ಈ ದಿನವನ್ನು 1948ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಉರ್ದು ಭಾಷೆಯ ಹೇರಿಕೆಯ ವಿರುದ್ಧ ಮತ್ತು ಬಾಂಗ್ಲಾ ಭಾಷಾ ಸಂರಕ್ಷಣೆಗೆ ನಡೆದ ಚಳುವಳಿಯನ್ನು ನೆನಪಿಸಲು ಆಯ್ದುಕೊಳ್ಳಲಾಗಿದೆ. ಆ ದಿನ ಡಾಕ್ಕಾ ವಿವಿಯ ಐದು ವಿದ್ಯಾರ್ಥಿಗಳು ಹುತಾತ್ಮರಾಗಿದ್ದರು. ಇದು ಜಗತ್ತಿನಲ್ಲಿ ಮಾತೃಭಾಷೆಯ ಮಹತ್ವ ಮತ್ತು ಎಲ್ಲ ಭಾಷೆಗಳ ಸಮಾನತೆ  ತಿಳಿಸುವ ಹಾಗೂ ಭಾಷಾ ಬಹುತ್ವ ವೈವಿಧ್ಯತೆಯನ್ನು ಸಂಭ್ರಮಿಸುವ ದಿನ ಸಹ ಆಗಿದೆ.

2020ರಲ್ಲಿ ಭಾರತದ ಲೆಫ್ಟ್ ವರ್ಡ್ ಸೇರಿದಂತೆ  ಕೆಲವು ಎಡ ಪ್ರಕಾಶಕರು ಫೆಬ್ರುವರಿ 21ನ್ನು ‘ಕೆಂಪು ಪುಸ್ತಕ ದಿನ’ವಾಗಿ ಆಚರಿಸಬೇಕೆಂದು ನಿರ್ಧರಿಸಿದರು. ಅಂದು ಜಗತ್ತಿನಾದ್ಯಂತ ತಮ್ಮ ಭಾಷೆಯಲ್ಲಿ ಜನರು ತಮ್ಮ ಮಾತೃಭಾಷೆಯಲ್ಲಿ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಸಾಮೂಹಿಕವಾಗಿ ಸಾರ್ವಜನಿಕವಾಗಿ ಓದಬೇಕು ಎಂದು ಕರೆ ಕೊಟ್ಟರು. ಮೊದಲ ವರ್ಷ ಕೆಲವು ಎಡ ಪ್ರಕಾಶಕರು, ಲೇಖಕರು, ಬುದ್ಧಿಜೀವಿಗಳು, ಎಡ ಗುಂಪುಗಳು ಭಾಗವಹಿಸಿದರು. ಇವೇ ಎಡ ಪ್ರಕಾಶಕರು ಮುಂದೆ ಎಡ ಪ್ರಕಾಶಕರ ಅಂತರಾಷ್ಟ್ರೀಯ ಒಕ್ಕೂಟ (IULP – International Union of Left Publishers) ರಚಿಸಿದರು. ಭಾರತದ ಸಿಪಿಐ(ಎಂ) 2021ರಲ್ಲಿ ತನ್ನ ಘಟಕಗಳಿಗೆ ‘ಕೆಂಪು ಪುಸ್ತಕ ದಿನ’ವಾಗಿ ಆಚರಿಸಬೇಕು ಎಂದು ಕರೆ ಕೊಡುವ ಮೂಲಕ ಇದಕ್ಕೆ ವ್ಯಾಪಕ ಸಾಮೂಹಿಕ ರೂಪ ಸಿಕ್ಕಿತು. ಲ್ಯಾಟಿನ್ ಅಮೆರಿಕ, ಆಫ್ರಿಕಾ, ಯುರೋಪಿನಲ್ಲೂ .ಹಲವು ಎಡ ಸಂಘಟನೆಗಳು, ಚಳುವಳಿಗಳು, ಪಕ್ಷಗಳು ಈ ದಿನವನ್ನು ಆಚರಿಸಲಾರಂಭಿಸಿವೆ.  ಕಳೆದ 4 ವರ್ಷಗಳಲ್ಲಿ ಹೆಚ್ಚೆಚ್ಚು ದೇಶಗಳಲ್ಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜನ ಚಳುವಳಿಗಳು, ಜನಸಂಘಟನೆಗಳು, ಎಡ ಗುಂಪುಗಳು, ಎಡ ಚಳುವಳಿಗಳು, ಎಡ ಪಕ್ಷಗಳು  ‘ಕೆಂಪು ಪುಸ್ತಕ ದಿನ’ವನ್ನು ತಮ್ಮದಾಗಿಸಿಕೊಂಡರು.

ಭಾರತದಲ್ಲಿ ನಡೆದ ದಿನಾಚರಣೆಯ ಝಲಕ್ ಇಲ್ಲಿದೆ

ಕಲಬುರಗಿ, ಕರ್ನಾಟಕ
ಲೆಫ್ಟ್‌ ವರ್ಲ್ಡ್‌ – ದೆಹಲಿ
ತಮಿಳುನಾಡು
ಕೊಲ್ಹಾಪುರ, ಮಹಾರಾಷ್ಟ್ರ
ಕೇರಳ

ನಮ್ಮ ಬರಹಗಾರರು, ನಮ್ಮ ಚಿಂತಕರು, ನಮ್ಮ ಜಾಗಗಳು, ನಮ್ಮ ಜನರು ಮತ್ತು ಜನಪರ ಚಿಂತನೆಗಳು ಜಾಗತಿಕ ಬಂಡವಾಳಶಾಹಿ  ಮತ್ತು ಉಗ್ರ ಬಲಪಂಥೀಯರ ಆಕ್ರಮಣಗಳನ್ನು ಎದುರಿಸಬೇಕಾಗಿದೆ. ಈ ‘ಚಿಂತನೆಗಳ ಸಮರ’ ದಲ್ಲಿ ಪ್ರತಿದಾಳಿಯನ್ನು ಹೂಡಲು ಕೆಂಪು ಪುಸ್ತಕಗಳ ಅಭಿಯಾನ. ಈ ಸಮರದಲ್ಲಿ ಸಾಮಾನ್ಯ ಜನರ ಧ್ವನಿಯನ್ನು ವರ್ಧಿಸುವ ಪುಸ್ತಕಗಳು ನಮ್ಮ ಆಯುಧಗಳಾಗಿವೆ – ಎಂದು ಈ ಸಂದರ್ಭದಲ್ಲಿ IULP ಬಿಡುಗಡೆ ಮಾಡಿದ ಮಾರ್ಮಿಕ ಹೇಳಿಕೆಯಲ್ಲಿ ತಿಳಿಸಿದೆ. ಈ ಹೇಳಿಕೆಯ ಪೂರ್ಣಪಾಠ ಇದರ ಜತೆಗಿದೆ.

ಇದನ್ನು ಓದಿ: ಕೆಂಪು ಪುಸ್ತಕ ದಿನ 2022 ಆಚರಣೆಗೆ ಕರೆ

ಕರ್ನಾಟಕದ ಕೆಂಪು ಪುಸ್ತಕ ಅಭಿಯಾನ

ಕಳೆದ 3 ವರ್ಷದಿಂದ IULP ಸದಸ್ಯ ಸಂಸ್ಥೆಯಾದ ಕ್ರಿಯಾ ಮಾಧ್ಯಮದ ಮತುವರ್ಜಿಯಿಂದ ಕರ್ನಾಟಕದಲ್ಲೂ  ‘ಕೆಂಪು ಪುಸ್ತಕ ದಿನ’ವನ್ನು ಆಚರಿಸಲಾಗುತ್ತಿದೆ. ಈ ವರ್ಷ ಫೆ.21 ರಿಂದ ಮಾ.14 ರ ವರೆಗಿನ 3 ವಾರಗಳ ಕೆಂಪು ಪುಸ್ತಕ ಅಭಿಯಾನಕ್ಕೆ ಕರೆ ಕೊಡಲಾಗಿದೆ. ಫೆಬ್ರುವರಿ 21ರಂದು ಈ ಅಭಿಯಾನವನ್ನು ಆನ್ ಲೈನಿನಲ್ಲಿ (ಝೂಮ್ ಲಿಂಕ್ ನಲ್ಲಿ ಮತ್ತು ಯೂ ಟ್ಯೂಬ್ ಲೈವ್ ಪ್ರಸಾರದ ಮೂಲಕ) ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಉದ್ಘಾಟಿಸಿದರು. ಅವರು ಕಮ್ಯುನಿಸ್ಟ್ ಪ್ರಣಾಳಿಕೆಯ ಮಹತ್ವ ಮತ್ತು ಪ್ರಸ್ತುತತೆ ಕುರಿತು ಮಾತನಾಡಿ, 1848ರಲ್ಲಿದ್ದ ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿದ್ದ ಬಂಡವಾಳಶಾಹಿ ಸಮಾಜದ ಕುರಿತ ವಿಶ್ಲೇಷಣೆಗೆ ಸೀಮಿತವಾಗಿಲ್ಲವೆಂದರು. ಬಂಡವಾಳಶಾಹಿ ವ್ಯವಸ್ಥೆಯ ಆಂತರಿಕ ತರ್ಕವನ್ನು ಮತ್ತು ಪ್ರವೃತ್ತಿಯನ್ನು ಸರಿಯಾಗಿ ಅರ್ಥೈಸಿದ್ದರಿಂದ ಮತ್ತು ಅದನ್ನು ಬದಲಿಸಲು ಕಾರ್ಮಿಕ ವರ್ಗದ ಸಿದ್ಧತೆ, ಪಾತ್ರಗಳ ಕುರಿತು ಸರಿಯಾಗಿ ಗ್ರಹಿಸಿದ್ದರಿಂದ 175 ವರ್ಷಗಳ ನಂತರವೂ ಪ್ರಸ್ತುತವಾಗಿದೆ, ಮತ್ತು ಅದು ಜಗತ್ತಿನ (ಬೈಬಲ್, ಕುರಾನ್ ಬಿಟ್ಟರೆ) ಅತ್ಯಂತ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ, ಪ್ರಸಾರ ಕಂಡ ಪುಸ್ತಕವಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ನವೆಂಬರ್ ೭, ೧೯೧೭– ರಶ್ಯನ್ ಸಮಾಜವಾದಿ ಕ್ರಾಂತಿಯಾದ ದಿನ

ಸಿಪಿಐ(ಎಂ) ಕಾರ್ಯದರ್ಶಿ ಯು.ಬಸವರಾಜ್ ಪ್ರೇರಣಾ ಮಾತುಗಳನ್ನು ಆಡಿ, ಪಕ್ಷದ ಎಲ್ಲ ಘಟಕಗಳು ಮಾ.14ರ ವರೆಗಿನ ಅವಧಿಯಲ್ಲಿ ಕಮ್ಯುನಿಸ್ಟ್ ಪ್ರಣಾಳಿಕೆಯ ಕುರಿತು ಉಪನ್ಯಾಸ, ಚರ್ಚೆ, ಸಾಮೂಹಿಕ ಸಾರ್ವಜನಿಕ ಓದುಗಳನ್ನು ಸಂಘಟಿಸಬೇಕೆಂದು ಕರೆಕೊಟ್ಟರು. ಉದ್ಘಾಟನಾ ಕಾರ್ಯಕ್ರಮದಲ್ಲಿ “ನಾನು ಕಮ್ಯುನಿಸ್ಟ್ ಪ್ರಣಾಳಿಕೆ ಓದಿದ್ದು” ಅನುಭವ ಕಥನ”( ಕೆ.ಎಸ್.ಲಕ್ಷ್ಮಿ), ಪ್ರಣಾಳಿಕೆಯ ಭಾಗಗಳ ಓದು (ಬಸವರಾಜ ಪೂಜಾರ, ಮಾಲಿನಿ ಮೇಸ್ತ), ಹಾಡು (ಕೆ.ಎಸ್.ಲಕ್ಷ್ಮಿ), ಕವನ ವಾಚನ (ಯಮುನಾ, ಲಿಂಗರಾಜು) ಗಳೂ ಸೇರಿದ್ದವು. ಮುಂದಿನ ಎರಡು ವಾರಗಳಲ್ಲಿ ಫೇಸ್ ಬುಕ್ ನಲ್ಲಿ  “ನಾನು ಕಮ್ಯುನಿಸ್ಟ್ ಪ್ರಣಾಳಿಕೆ ಓದಿದ್ದು” ಅನುಭವ ಕಥನ” ಮತ್ತು ಪ್ರಣಾಳಿಕೆಯ ಭಾಗಗಳ ಓದು ಗಳನ್ನು ಪ್ರಸಾರ ಮಾಡಲಾಗುವುದು. ಬೆಂಗಳೂರು ದಕ್ಷಿಣ, ಕಲಬುರ್ಗಿ, ಹಾಸನ ಮುಂತಾದ ಕಡೆ ಜಿಲ್ಲಾ ಮಟ್ಟದ ಕೆಂಪು ಪುಸ್ತಕ ದಿನ ಆಚರಣೆಯ ವರದಿಗಳು ಬಂದಿವೆ.

ಕರ್ನಾಟಕದ ಉದ್ಘಾಟನಾ ಸಭೆಯ ಪೂರ್ಣ ವಿಡಿಯೊ ಇಲ್ಲಿದೆ

https://www.youtube.com/watch?v=boaBfMT1ccA&t=2625s

ಹತ್ತು ಲಕ್ಷ ಜನ ಭಾಗವಹಿಸಿದ ಕೆಂಪು ಪುಸ್ತಕ ದಿನ

ಕೆಂಪು ಪುಸ್ತಕ ವೆಂದರೆ ಕಮ್ಯುನಿಸ್ಟ್ ಪ್ರಣಾಳಿಕೆ ಅಥವಾ ಮಾರ್ಕ್ಸ್ ಏಂಗೆಲ್ಸ್ ಅಥವಾ ಮಾರ್ಕ್ಸ್ ವಾದಿ ಕೃತಿಗಳು ಮಾತ್ರವಲ್ಲ. ಈಗಿರುವ ಶೋಷಕ ವ್ಯವಸ್ಥೆಯನ್ನು ಕಿತ್ತೆಸೆಯುವ ಮತ್ತು ಸಮಸಮಾಜದ ಕನಸು ಬಿತ್ತುವ, ಪ್ರಜ್ಞೆ ಬೆಳೆಸುವ, ಅದನ್ನು ಸಾಧಿಸಲು ಹೋರಾಟಕ್ಕೆ ಪ್ರೇರಣೆ ಕೊಡುವ ಎಲ್ಲ ಪುಸ್ತಕಗಳೂ ಕೆಂಪು ಪುಸ್ತಕಗಳೇ ಎಂದು ಪರಿಗಣಿಸಲಾಗಿದೆ. ಕೆಂಪು ಪುಸ್ತಕ ದಿನವೆಂದರೆ ಓದು ಮಾತ್ರವಲ್ಲ. ಹಾಡು, ಕವನ ವಾಚನ, ಪೋಸ್ಟರ್, ಕಲಾಕೃತಿ, ಫಿಲಂ ಪ್ರದರ್ಶನಗಳು ಕೂಡಾ. ಇವುಗಳ ಮೂಲಕ ಸಮಾಜವಾದಿ ಸೆಕ್ಯುಲರ್ ಆಧಾರದ ಮೇಲೆ ಜನ ಕಳೆದುಕೊಳ್ಳುತ್ತಿರುವ ಸಾರ್ವಜನಿಕ ಜಾಗಗಳನ್ನು, ಸಾಮೂಹಿಕ ಜೀವನವನ್ನು ಮರಳಿ ಪಡೆಯುವ ದಿನವಾಗಿ ಹಬ್ಬದಂತೆ ಆಚರಿಸಬೇಕಾದ ದಿನ.

ಇದನ್ನು ಓದಿ: ಕೆಂಪು ರೋಸಾ : ‘ಕ್ರಾಂತಿಯ ಬೆಂಕಿ’, ‘ಎತ್ತರದಲ್ಲಿ ಹಾರುವ ಹದ್ದು’

ಈ ವರ್ಷ ಜೆ.ಎನ್.ಯು, ಹೈದರಾಬಾದ್, ಜಾಮಿಯ ಮಿಲಿಯ, ದೆಹಲಿ, ಪ್ರೆಸಿಡೆನ್ಸಿ ಮುಂತಾದ ಹಲವು ವಿವಿ ಗಳಲ್ಲಿ ಕೆಂಪು ಪುಸ್ತಕ ಓದು, ಹಾಡು, ಕವನ ವಾಚನ, ಪೋಸ್ಟರ್, ಕಲಾಕೃತಿ, ಫಿಲಂ ಪ್ರದರ್ಶನಗಳ ಮೂಲಕ ಆಚರಿಸಲಾಯಿತು. ದೆಹಲಿಯಲ್ಲಿ ಲೆಫ್ಟ್ ವರ್ಡ್ ಸಂಘಟಿಸಿದ ತಡೆರಾತ್ರಿಯ ವರೆಗೆ ನಡೆದ ಸಭೆಯಲ್ಲಿ ಭಾರತದ ಮತ್ತು ವಿದೇಶಗಳ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಣಾಳಿಕೆಯ ಭಾಗಗಳನ್ನು ಓದಿದ್ದು  ಮತ್ತು ಜನಂ ನಾಟಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ದೆಹಲಿಯಲ್ಲಿ ದಿನಾಚರಣೆಯ ವಿಡಿಯೊ ಇಲ್ಲಿದೆ

ಭಾರತದ ಹೊರಗೂ ಈ ಬಾರಿಯ ಕೆಂಪು ಪುಸ್ತಕ ದಿನ ವಿಸ್ತಾರ, ವೈವಿಧ್ಯತೆಗಳನ್ನು ಕಂಡಿತು. ಮಲೇಶ್ಯಾ, ಚೀನಾ, ಪಾಕಿಸ್ತಾನ, ನೇಪಾಳ, ಆಪ್ರಿಕಾದ ಕೆಲವು ದೇಶಗಳು ಮೊದಲ ಬಾರಿ ಭಾಗವಹಿಸಿದವು. ಯು.ಎಸ್, ಲ್ಯಾಟಿನ್ ಅಮೆರಿಕ, ಯುರೋಪಿನಲ್ಲಿ ಹಿಂದಿನ ವರ್ಷಗಳಿಗಿಂತಲೂ ಹೆಚ್ಚು ವ್ಯಾಪಕವಾಗಿ ಹೆಚ್ಚಿನ ವ್ಯಕ್ತಿಗಳು, ಗುಂಪುಗಳು, ಸಂಘಟನೆಗಳು ಭಾಗವಹಿಸಿದ್ದವು.

ವಿದೇಶಗಳಲ್ಲಿ ಕೆಂಪು ಪುಸ್ತಕ ದಿನಾಚರಣೆಯ ಕೆಲ ಝಲಕ್ ಇಲ್ಲಿದೆ

ಕ್ಯೂಬಾ
ನ್ಯೂಯಾರ್ಕ್‌
ಜೊಹನ್ಸ್‌ಬರ್ಗ್‌, ದಕ್ಷಿಣ ಆಫ್ರಿಕಾ
ನೇಪಾಳ

ಒಟ್ಟು ಹತ್ತು ಲಕ್ಕಕ್ಕೂ ಮೀರಿ ಈ ಬಾರಿ ಭಾಗವಹಿಸಿದ ವರದಿಗಳು ಬಂದಿವೆ.

ಕೆಂಪು ಪುಸ್ತಕಗಳ ದಿನದಂದು, IULP ಕರೆ

ನಾವು, ಎಡ ಪ್ರಕಾಶಕರ ಅಂತರಾಷ್ಟ್ರೀಯ ಒಕ್ಕೂಟ (International Union of Left Publishers) ಕೆಂಪು ಪುಸ್ತಕಗಳ ದಿನವಾದ ಫೆಬ್ರವರಿ 21, 2023 ರಂದು, ಕಮ್ಯುನಿಸ್ಟ್ ಪ್ರಣಾಳಿಕೆಯ ಜೀವಂತ ಸಂದೇಶದ ಸಂಭ‍್ರಮಾಚರಣೆಗೆ ಮತ್ತು ಅದರ ಏಕತೆಯ ಕರೆಗೆ ಬದ್ಧರಾಗಿರಲು ನಮ್ಮೊಂದಿಗೆ ಸೇರಲು ಎಲ್ಲಾ ಪ್ರಕಾಶಕರು, ಬರಹಗಾರರು, ಪುಸ್ತಕ ಮಾರಾಟಗಾರರು, ಶಿಕ್ಷಣತಜ್ಞರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಎಲ್ಲಾ ಹೋರಾಡುತ್ತಿರುವ ಜನರಿಗೆ ಕರೆ ನೀಡುತ್ತೇವೆ.

1848 ರಲ್ಲಿ ಬರೆಯಲಾದ, ಕಮ್ಯುನಿಸ್ಟ್ ಪ್ರಣಾಳಿಕೆಯು ಬಂಡವಾಳಶಾಹಿಯ ದುರಂತದ ಆರಂಭವನ್ನು ಕಣ್ಣಾರೆ ಕಂಡ ಇಬ್ಬರು ಯುವಕರ ದೃಷ್ಟಿಯ ಸ್ಪಷ್ಟತೆಯನ್ನು ಪ್ರತಿನಿಧಿಸುತ್ತದೆ. ಅವರು ಅದರ ಕಾರ್ಯವಿಧಾನವನ್ನು ಅನಾವರಣಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಮುಂದೆ ಏನಾಗಬಹುದು ಎಂದು ಅವರು ನಮಗೆ ಎಚ್ಚರಿಕೆ ನೀಡಿದರು. ಆದರೆ ಪ್ರಪಂಚದಾದ್ಯಂತ ಅದನ್ನು ಮಾರ್ದನಿಸುವಂತೆ ಮಾಡಿದ್ದರ ಹೆಗ್ಗಳಿಕೆ, ತಮ್ಮ ಎಲ್ಲವನ್ನೂ ಧಾರೆಯೆರೆದು ವಿಮೋಚನೆ, ಸಾರ್ವಭೌಮತ್ವ ಮತ್ತು ಸಮಾಜವಾದಕ್ಕಾಗಿ ವ್ಯಾಪಕ ಹೋರಾಟಗಳನ್ನು ಕಟ್ಟಿದ, ಪ್ರತಿ ಖಂಡದಲ್ಲಿ ಹೆಸರಾಂತ ಮತ್ತು ಹೆಸರೇ ಗೊತ್ತಿರದ ಕೋಟ್ಯಾಂತರ ಕಮ್ಯುನಿಸ್ಟರಿಗೆ ಸಲ್ಲುತ್ತದೆ. ಈ ಕೋಟ್ಯಾಂತರ ಜನರ ಹೋರಾಟವು ಈ ಪಠ್ಯಕ್ಕೆ ತನ್ನದೇ ಆದ ಜೀವಂತಿಕೆಯನ್ನು ನೀಡಿದೆ.  ಅದು ಇಂದು ತಮ್ಮ ಹಕ್ಕುಗಳು ಮತ್ತು ಘನತೆಯ ಜೀವನ ಪರಿಸ್ಥಿತಿಗಳಿಗಾಗಿ ಒತ್ತಾಯಿಸುವ ಹಾಗೂ ಕ್ರಾಂತಿಕಾರಿ ಚಳುವಳಿಗಳನ್ನು ಕಟ್ಟುತ್ತಿರುವ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.

ಇದನ್ನು ಓದಿ: ಕಾರ್ಮಿಕ ವರ್ಗದ ವಿಶಿಷ್ಟ ಪಾತ್ರ ಏಂಗೆಲ್ಸ್ ಕೊಡುಗೆ: ತೆಕ್ಕೆಡೆತ್

ನಮ್ಮ ಬರಹಗಾರರು, ನಮ್ಮ ಚಿಂತಕರು, ನಮ್ಮ ಜಾಗಗಳು ಮತ್ತು ನಮ್ಮ ಜನರು ಉಗ್ರ ಬಲಪಂಥೀಯರ ತೀವ್ರ ಬೆಳವಣಿಗೆ ಮತ್ತು ತಮ್ಮ ವಿರುದ್ಧವಾದ ಅವರ ವೈವಿಧ್ಯಮಯವಾದ ವೇಗವಾಗಿ ಹಬ್ಬುತ್ತಿರುವ ಆಕ್ರಮಣಗಳನ್ನು ಎದುರಿಸುತ್ತಿದ್ದಾರೆ. ಜಾಗತಿಕ ಬಂಡವಾಳಶಾಹಿ ಮಾರುಕಟ್ಟೆಗಳು ಪ್ರಕಾಶನ ಉದ್ಯಮವನ್ನು ಉಸಿರುಗಟ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ‘ಚಿಂತನೆಗಳ ಸಮರ’ ದಲ್ಲಿ ಪ್ರತಿದಾಳಿಯನ್ನು ಪ್ರಾರಂಭಿಸಲು, ನಾವು ನಮ್ಮ ಜಾಲವನ್ನು 2020 ರ ಕೆಂಪು ಪುಸ್ತಕಗಳ ದಿನದಂದು ಸ್ಥಾಪಿಸಿದ್ದೇವೆ. ಈ ಸಮರದಲ್ಲಿ ಸಾಮಾನ್ಯ ಜನರ ಧ್ವನಿಯನ್ನು ವರ್ಧಿಸುವ ಪುಸ್ತಕಗಳು ಮತ್ತು  ಎಲ್ಲಾ ಖಂಡಗಳಾದ್ಯಂತ ಇರುವ ಒಡನಾಡಿಗಳ ಬಲವಾದ ಜಾಲವು ನಮ್ಮ ಆಯುಧಗಳಾಗಿವೆ. ಈ ಜಾಲದ   ಒಡನಾಡಿಗಳು ಪ್ರಪಂಚದಾದ್ಯಂತದ ಜನಪರ ಚಿಂತನೆಗಳನ್ನು ಬೆಂಬಲಿಸುವ ಅಂತರಾಷ್ಟ್ರೀಯ ಸಹಯೋಗದ ಕ್ರಿಯಾಶೀಲ ಆಚರಣೆಗೆ ಬದ್ಧರಾಗಿರುವವರು.  ಬಹುಪಾಲು ಮಾನವೀಯತೆಯ ಕಾರ್ಯಸೂಚಿಯನ್ನು ಪ್ರತಿನಿಧಿಸುವ ಈ ಚಿಂತನೆಗಳು ಜಾಗತಿಕ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಯಜಮಾನಿಕೆಗೆ ನೇರ ಬೆದರಿಕೆಯಾಗಿದೆ. ಹಾಗಾಗಿ ಈ ಚಿಂತನೆಗಳನ್ನು ದಮನಿಸಲು ಬಲಪಂಥೀಯ ಶಕ್ತಿಗಳು, ಅವರ ಆಳುವ ವರ್ಗಗಳ ಬೆಂಬಲಿಗರೊಂದಿಗೆ ಭೌತಿಕ ಮತ್ತು ಸೈದ್ಧಾಂತಿಕ ದಾಳಿಗಳನ್ನು ಮುಂದುವರೆಸುತ್ತವೆ.

IULP ಯ ನಾವು, ಭವಿಷ್ಯದ ಹಾದಿಯನ್ನು ಬೆಳಗಿಸುವ ವಿಚಾರಗಳ ದಮನವನ್ನು ಸಹಿಸಲು ನಿರಾಕರಿಸುತ್ತೇವೆ ಹಾಗೂ ನಮ್ಮ ಒಡನಾಡಿಗಳು ಮತ್ತು ನಮ್ಮ ಜನರ ಒಗ್ಗಟ್ಟಿನಿಂದ ನಾವು ನಮ್ಮ ಬಲವನ್ನು ಪಡೆಯುತ್ತೇವೆ.

ತಮ್ಮ ಲಾಭಗಳನ್ನು ಉತ್ಪಾದಿಸುವವರಿಗೆ ಹೆದರಿ ತಮ್ಮ ಲಾಭವನ್ನು ಅವಚಿಟ್ಟುಕೊಳ್ಳುವ ಆಳುವ ವರ್ಗಗಳನ್ನು, ಕಮ್ಯುನಿಸಂ ಪ್ರೇತಭೀತಿಯಂತೆ ಕಾಡಲಿ. ಆದರೆ ಕಮ್ಯುನಿಸಂ, ಪ್ರಪಂಚದ ಜನರು ತಮ್ಮ ಸ್ವಂತ ಅಗತ್ಯಗಳಿಗೆ ಅನುಗುಣವಾಗಿ, ಎಲ್ಲರಿಗೂ ಅದನ್ನು ಒದಗಿಸುವ, ತಮ್ಮ ಸ್ವಂತ ಕೈಗಳಿಂದಲೇ ಕಟ್ಟುವ ಭವಿಷ್ಯದ ಕಡೆಗಿನ ಹಾದಿಯನ್ನು ತೋರುವ ಪತಾಕೆ.

ವಿಶ್ವದ ಕಾರ್ಮಿಕರೇ ಒಂದಾಗಿ! ಸಾಮ್ರಾಜ್ಯಶಾಹಿ ಬಿದ್ದು ಹೋಗಲಿ!! ಸಮಾಜವಾದದತ್ತ ಮುನ್ನಡೆಯೋಣ!!

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *