ಹತ್ರಾಸ್‌ನಲ್ಲಿ 120ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಭೋಲೆ ಬಾಬಾ ದೊಡ್ಡ ಕ್ರಿಮಿನಲ್‌

ಹತ್ರಾಸ್ ದುರಂತಕ್ಕೆ ಇಡೀ ದೇಶವೇ ಮಮ್ಮಲ ಮರಗುತ್ತಿದೆ. ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 121 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಸಾವು- ನೋವಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶ ರಾಜ್ಯದ ಹತ್ರಾಸ್‌ನಲ್ಲಿ ಮಹಿಳೆಯರೂ, ಮಕ್ಕಳೂ ಸೇರಿದಂತೆ ಸಾವಿರಾರು ಜನರು ಸೇರಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದ ವೇಳೆ ನೂರಾರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ಧಾರ್ಮಿಕ ದುರಂತ ಎಂದೇ ಬಿಂಬಿತವಾಗಿದೆ.

ಸಾವಿರಾರು ಜನರನ್ನು ಒಂದು ಸಣ್ಣ ಪ್ರದೇಶದಲ್ಲಿ ಸೇರಿಸಿದ್ದರಿಂದ ಜನರಿಗೆ ಉಸಿರಾಡಲು ಕಷ್ಟವಾಯಿತು, ಕುಸಿದು ಬೀಳಲು ಪ್ರಾರಂಭಿಸಿದರು, ಇದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು ಎಂದು ಭೋಲೆ ಬಾಬಾನ ಸತ್ಸಂಗದಲ್ಲಿ ನಡೆದ ಘೋರ ಕಾಲ್ತುಳಿತದ ಕುರಿತು ತನಿಖಾ ವರದಿಗಳು ಹೊರ ಬರುತ್ತಿವೆ.

ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜಿನ ಎಂಟು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಪ್ರಕಾರ, “ಬಹುತೇಕ ಮರಣೋತ್ತರ ಪರೀಕ್ಷೆಯ ವರದಿಗಳಲ್ಲಿ ಹೆಚ್ಚಿನ ಜನರು ಎದೆಯ ಗಾಯಗಳು, ಆಂತರಿಕ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಗಮನಿಸಲಾಗಿದೆ. ಎದೆಯ ಬಳಿ ರಕ್ತ, ಪಕ್ಕೆಲುಬಿನ ಛಿದ್ರ ಅಥವಾ ರಕ್ತಸ್ರಾವದ ಕಾರಣದಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂಬುದು ಪೋಸ್ಟ್ ಮಾರ್ಟಮ್ ವರದಿಗಳಲ್ಲಿ ಕಂಡುಬಂದಿವೆ” ಎಂದು ವೈಧ್ಯರು ದೃಢಪಡಿಸಿದ್ದಾರೆ.

ಕಾಲ್ತುಳಿತ ಪ್ರಕರಣದ ನಂತರ, ಅನೇಕ ವಿಚಾರಗಳು ಹೊರ ಬರುತ್ತಿವೆ. 80 ಸಾವಿರ ಜನರನ್ನು ಸೇರಿಸಲು ಮಾತ್ರ ಅನುಮತಿಯಿದ್ದ ಕಾರ್ಯಕ್ರಮಕ್ಕೆ ಎರಡುವರೆ ಲಕ್ಷ ಜನರು ಸೇರುವ ಮೂಲಕ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 120ಕ್ಕೂ ಹೆಚ್ಚು ಮಂದಿ ಬಲಿ!

ಭೋಲೆ ಬಾಬಾನ ಭಯಾನಕ ಹಿನ್ನೆಲೆ

ಹತ್ರಾಸ್ ಕಾಲ್ತುಳಿತ ದುರಂತದ ಕೇಂದ್ರ ಬಿಂದು ಸ್ವಯಂ ಘೋಷಿತ ದೇವಮಾನವ ಸೂರಜ್‌ ಪಾಲ್‌ ಅಲಿಯಾಸ್‌ ನಾರಾಯಣ ಸಾಕಾರ್‌ ಹರಿ ಕುರಿತಾಗಿ ಅನೇಕ ವಿಚಾರಗಳು ಹೊರ ಬಿದ್ದಿವೆ. ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಬಹದೂರ್ ಎಂಬ ಊರಲ್ಲಿ ಜನಿಸಿರುವ ಭೋಲೆ ಬಾಬಾ ಮೂಲ ಹೆಸರು ಸೂರಜ್‌ ಪಾಲ್‌ ಸಿಂಗ್.

‘ಸೂರಜ್‌ ಸಿಂಗ್ 10 ವರ್ಷಗಳಷ್ಟು ಅವಧಿಗೆ ‍ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದರು’ ಎಂದು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸೂರಜ್‌ ಸಿಂಗ್‌ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ನಂತರ ತನ್ನ ಹೆಸರನ್ನು ‘ಸಾಕಾರ ವಿಶ್ವಹರಿ ಬಾಬಾ'(ಭೋಲೆ ಬಾಬಾ) ಎಂದು ಬದಲಿಸಿಕೊಂಡು ‘ಸತ್ಸಂಗ’ಗಳನ್ನು ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

2000ನೇ ಇಸವಿಯಲ್ಲಿ ಭೋಲೆ ಬಾಬಾ ಆಗ್ರಾದಲ್ಲಿ ವಾಸವಿದ್ದರು. ಆಗ ಸೂಜರ್ ಪಾಲ್ ವಿರುದ್ಧ ಔಷಧ ಮತ್ತು ಪವಾಡ ಚಿಕಿತ್ಸೆಗಳ ಕಾಯ್ದೆ 1954ರ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.

ಭೋಲೆ ಬಾಬಾಗೂ ರಾಜಸ್ಥಾನದಲ್ಲಿ ನಡೆದ ಜೂನಿಯರ್ ಎಂಜಿನಿಯರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್‌ಪಿನ್‌ಗೂ ನಂಟು ಇರುವುದು ಕೂಡ ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಜೆಇಎನ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ನೇಪಾಳದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಹರ್ಷವರ್ಧನ್ ಮೀನಾಗೆ ಸೇರಿದ ಜಮೀನಿನಲ್ಲಿಯೇ ಭೋಲೆ ಬಾಬಾ ಆಶ್ರಮ ನಡೆಸಿದ್ದರು ಎಂಬುದನ್ನು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಪತ್ತೆ ಹಚ್ಚಿದೆ.

123 ಜನರ ಸಾವಿಗೆ ಕಾರಣವಾದ ಹತ್ರಾಸ್‌ನಲ್ಲಿ ಸತ್ಸಂಗ ನಡೆಸಿದ ಸ್ವಯಂಘೋಷಿತ ದೇವಮಾನವ ‘ಭೋಲೆ ಬಾಬಾ’ ಗಾಗಿ ಉತ್ತರ ಪ್ರದೇಶ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಗುರುವಾರ ಮೈನ್‌ಪುರಿಯಲ್ಲಿರುವ ರಾಮ್ ಕುಟೀರ್ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಶೋಧ ನಡೆಸಿದರು.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ‘ಭೋಲೆ ಬಾಬಾ’ ಹೆಸರನ್ನು ಎಫ್ಐಆರ್ ನಲ್ಲಿ ಇನ್ನೂ ಉಲ್ಲೇಖಿಸಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇನ್ನೂ ಈ ರೀತಿಯಾಗಿ ದೇವಮಾನವರು ಎಂದು ಹೇಳಿಕೊಂಡು ಜನರನ್ನು ವಂಚಿಸುವವರ ವಿರುದ್ದ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ.  ಹಾಗಾಗಿಯೇ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ದೇವರ ಹೆಸರಿನಲ್ಲಿ ಜನರ ಭಾವನಾತ್ಮಕತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಇಂತಹ ಡೋಂಗಿವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹತ್ರಾಸ್ ಕಾಲ್ತುಳಿತ ದುರಂತದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯ ರಚನೆಗೆ ಆಗ್ರಹಿಸಿ ನ್ಯಾಯವಾದಿ ವಿಶಾಲ್ ತಿವಾರಿ ಎಂಬವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ. ಈ ಭೀಕರ ದುರಂತಕ್ಕೆ ಹೊಣೆಗಾರರಾದ ಸತ್ಸಂಗದ ಆಯೋಜಕರು ಹಾಗೂ ಕರ್ತವ್ಯಲೋಪವೆಸಗಿದ ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದಾರೆ.

ಸ್ವಯಂಘೋಷಿತ ಸ್ವಾಮೀಜಿ, ಬಾಬಾಗಳ ಮೇಲೆಯೂ ಪ್ರಕರಣ ದಾಖಲಾಗಬೇಕು. ದುರಂತಕ್ಕೆ ಕಾರಣವಾದ ಧಾರ್ಮಿಕ ಸಂಘಟನೆಗಳಿಗೆ ಮುಂದೆ ಯಾವತ್ತೂ ಅಂತಹ ಬೃಹತ್ ಸಮ್ಮೇಳನ ನಡೆಸದಂತೆ ಶಾಶ್ವತ ನಿಷೇಧವನ್ನು ಹೇರಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

 

 

Donate Janashakthi Media

Leave a Reply

Your email address will not be published. Required fields are marked *