ಹಾಸನ: ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ 24ನೇ ರಾಜ್ಯ ಸಮ್ಮೇಳನ ಹಾಸನ ನಗರ ಎಂ ಕೆ ಸಮುದಾಯ ಭವನದಲ್ಲಿ ನಡೆಯುತ್ತಿದೆ.
ಹಾಸನದ ತಣ್ಣೀರುಹಳ್ಳ ವೃತ್ತದಿಂದ ಹುತಾತ್ಮ ಜ್ಯೋತಿ ಗೆ ಸ್ವಾಗತಿಸಿ ಅಲ್ಲಿಂದ ಸಮ್ಮೇಳನದ ಜಾಗದವರೆಗೆ ಜ್ಯೋತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಮೆರವಣಿಗೆಯಲ್ಲಿ ಸಿಪಿಐ ಪಕ್ಷದ ಹಿರಿಯರಾದ ಡಾ. ಸಿದ್ದನಗೌಡ ಪಾಟೀಲ್ ‘ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್ ಮತ್ತು ರಾಜ್ಯದ ಉಸ್ತುವಾರಿ ಬಿನೋಯ್ ವಿಶ್ವಮ್ ಸೇರಿದಂತೆ ರಾಜ್ಯ ಜಿಲ್ಲಾ ನಾಯಕರು ನೇತೃತ್ವ ವಹಿಸಿದ್ದರು.
ಮೊದಲಿಗೆ, ಪಕ್ಷದ ಹಿರಿಯ ನಾಯಕ ಗುಣಶೇಖರ್ ಧ್ವಜಾರೋಹಣ ಮಾಡಿದರು. ನಂತರ ಹುತಾತ್ಮ ಸ್ತಂಭಕ್ಕೆ ಪುಷ್ಪರ್ಚನೆ ಮಾಡುವುದರ ಮೂಲಕ ಸಮ್ಮೇಳನ ಸಭಾಂಗಣಕ್ಕೆ ಪ್ರವೇಶಿಸಿದರು. ಗಿಡಕ್ಕೆ ನೀರು ಹಾಕುವ ಮೂಲಕ ಪ್ರತಿನಿಧಿ ಸಮಾವೇಶ ಅಧಿಕೃತವಾಗಿ ಉದ್ಘಾಟನೆಗೊಂಡಿತು.
ಸಮ್ಮೇಳನಕ್ಕೂ ಮುಂಚಿತವಾಗಿ ಕಳೆದ ನಾಲ್ಕು ದಿನಗಳ ಹಿಂದೆ ಹೋರಾಟದ ನೆಲವಾದ ಭಾಗೂರು ನವಿಲೇಯಿಂದ ಆರಂಭವಾದ ಕಲಾ ಜಾಥಾ ಹಾಗೂ ಕೆಂಪು ಸೈನಿಕರ ವೈಭವಯುತವಾಗಿ ಸ್ವಾಗತಿಸಲಾಯಿತು. ಈ ಕಲಾ ಜಾಥಾವು ಹಳ್ಳಿ ಹಳ್ಳಿಗಳಲ್ಲಿ ಸಿಪಿಐ ಪಕ್ಷದ ಮಹತ್ವ ಹಾಗೂ ಆಳುವ ಸರ್ಕಾರಗಳು ಅನುಸರಿಸುತ್ತಿರುವ ಜನ ವಿರೋಧಿ ನೀತಿಗಳು ಹಾಗೂ ರೈತ, ಕಾರ್ಮಿಕರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳ ಪರಿಹಾರದಲ್ಲಿ ಸರ್ಕಾರದ ಪಾತ್ರ ಹಾಗೂ ಜನರನ್ನು ದಿಕ್ಕು ತಪ್ಪಿಸಿ, ಹಿಂಸೆ, ಕೋಮುವಾದ, ಅಪ್ರಜಾಸತ್ತಾತ್ಮಕ ವಿಚಾರಗಳನ್ನು ಹರಡುವ ಮೂಲಕ ದೇಶವನ್ನು ಹಾಳುಗೆಡವುತ್ತಿರುವ ಶಕ್ತಿಗಳ ಅಜೆಂಡಾಗಳನ್ನು ಪ್ರಚುರ ಪಡಿಸಲಾಯಿತು.
ಸಮ್ಮೇಳನದ ವೇದಿಕೆಗೆ ಹಿರಿಯ ಕಾರ್ಮಿಕ ಮುಖಂಡ ಎನ್ ಶಿವಣ್ಣ ವೇದಿಕೆ ಎಂದು ಹೆಸರಿಸಲಾಯಿತು. ಸಮ್ಮೇಳನದ ಆರಂಭದಲ್ಲಿ ಸಿಪಿಐ ಪಕ್ಷದ ಹಾಸನ ಜಿಲ್ಲಾ ಕಾರ್ಯದರ್ಶಿ ಎಂ ಸಿ ಡೋಂಗ್ರೆ ಸ್ವಾಗತಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಮ್, ಮುಖಂಡರಾದ ಪಿ ವಿ ಲೋಕೇಶ್, ಸಿದ್ದನಗೌಡ ಪಾಟೀಲ್, ವಿಜಯ ಭಾಸ್ಕರ್, ಜನಾರ್ಧನ್, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್(ಎಐಎಫ್ಬಿ) ರಾಜ್ಯ ಕಾರ್ಯದರ್ಶಿ ಶಿವಶಂಕರ್, ಎಸ್ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಉಮಾ, ಸಿಪಿಐ(ಎಂಎಲ್) ಪಕ್ಷದ ಮಣಿ, ಅಪ್ಪಣ್ಣ, ಮತ್ತಿತರರು ಭಾಗಿಯಾಗಿದ್ದರು.