- ದುರಸ್ತಿಗೆ ಬೇಕಿದೆ ಅನುದಾನ – ಇನ್ನೂ ಸಿಕ್ಕಿಲ್ಲ ಹಣ
- ಮಕ್ಕಳು-ಶಿಕ್ಷಕರಲ್ಲಿ ಆತಂಕ
- ಶಿಕ್ಷಣ ಇಲಾಖೆ, ಸಚಿವರು, ಶಾಸಕರ ನಿರ್ಲಕ್ಷ್ಯ
ಹಾಸನ ಜಿಲ್ಲೆಯಲ್ಲಿ ಹಲವು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಯಾವ ಶಾಲೆಯ ಗೋಡೆ, ಮತ್ತಯಾವ ಶಾಲೆ ಮೇಲ್ಛಾವಣಿ ಎಂದು ಧರಾಶಾಹಿಯಾಗುವುದೋ, ಆ ಮೂಲಕ ಅಪಾಯ ತಂದೊಡ್ಡುವುದೋ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿಯೇ ಮೊದಲೇ ಮಳೆಗಾಲ ಆರಂಭವಾಗಿರುವುದರಿಂದ ಶಿಕ್ಷಕರು ಹಾಗೂ ಮಕ್ಕಳು ಆತಂಕದಲ್ಲೇ ನಿತ್ಯ ಶಾಲೆಗೆ ಆಗಮಿಸುವ ಪರಿಸ್ಥಿತಿ ಅನೇಕ ಕಡೆಗಳಲ್ಲಿ ನಿರ್ಮಾಣವಾಗಿದೆ.
ಹೌದು ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮಕ್ಕಳ ಕೊರತೆಯಿಂದ ಮುಚ್ಚಿದ್ದ ಹಲವು ಸರ್ಕಾರಿ ಶಾಲೆಗಳು ಮತ್ತೆ ಬಾಗಿಲು ತೆರೆದಿವೆ. ಆದರೆ ಜಿಲ್ಲೆಯ ಬಹುತೇಕ ಶಾಲೆಗಳು ಶಿಥಿಲಾವಸ್ಥೆ ತಲುಪಿದ್ದು, ದುರಸ್ತಿಗಾಗಿ ಸರ್ಕಾರದ ಅನುದಾನಕ್ಕೆ ಎದುರು ನೋಡುತ್ತಿವೆ. ದುರಸ್ತಿಗೆ
ಕಾಯುತ್ತಿವೆ 82 ಸರ್ಕಾರಿ ಶಾಲೆ: ಜಿಲ್ಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲೆ ಸೇರಿದಂತೆ ಒಟ್ಟು 82 ಸರ್ಕಾರಿ ಶಾಲೆಗಳ ಕೊಠಡಿಗಳು ಭದ್ರತೆ ಕಳೆದುಕೊಂಡಿದ್ದು, ಮತ್ತೆ ಗಟ್ಟಿಯಾಗಿ ನೆಲೆಯೂರಲು ದುರಸ್ತಿಗಾಗಿ ಕಾಯುತ್ತಿವೆ. ಈ ಪೈಕಿ ಆಲೂರು ತಾಲೂಕಿನಲ್ಲಿ 5, ಅರಕಲಗೂಡು 2, ಅರಸೀಕೆರೆ ೩, ಬೇಲೂರು 21, ಚನ್ನರಾಯಪಟ್ಟಣ 4, ಹಾಸನ 14, ಹೊಳೆನರಸೀಪುರ 20 ಹಾಗೂ ಸಕಲೇಶಪುರ ತಾಲೂಕಿನ 13 ಶಾಲೆಗಳು ತುರ್ತು ದುರಸ್ತಿಗಾಗಿ ಎದುರು ನೋಡುತ್ತಿವೆ.
ಶಿಥಿಲಗೊಂಡ 136 ಕೊಠಡಿ: ಆಲೂರು ತಾಲೂಕಿನ 8, ಅರಕಲಗೂಡು 7, ಅರಸೀಕೆರೆ 9, ಬೇಲೂರು 26, ಚನ್ನರಾಯಪಟ್ಟಣ 8, ಹಾಸನ 26, ಹೊಳೆನರಸೀಪುರ 26 ಹಾಗೂ ಸಕಲೇಶಪುರ ತಾಲೂಕಿನ 26 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಇಷ್ಟೂ ಶಾಲಾ ಕೊಠಡಿಗಳ ದುರಸ್ತಿಗೆ ಬೇಕಾಗಿರುವ ಅಗತ್ಯ ಅನುದಾನಕ್ಕಾಗಿ 2022-23ನೇ ಸಾಲಿನ ರಾಜ್ಯ ವಲಯಕ್ಕೆ ವಿವಿಧ ಯೋಜನೆಯಡಿ ಹಣ ಬಿಡುಗಡೆಗೆ 82 ಶಾಲೆಗಳ 136ಕೊಠಡಿಗಳಿಗೆ ದುರಸ್ತಿಗೆ ಬೇಕಿರುವ ಹಣಕಾಸು ನೆರವಿಗಾಗಿ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
12 ಶಾಲೆಗಳಿಗೆ ಸಂಪೂರ್ಣ ಹಾನಿ:ಆಲೂರು ತಾಲೂಕಿನ ಕಣದಹಳ್ಳಿ, ಬೇಲೂರು ತಾಲೂಕಿನ ನೆಹರು ನಗರದ ಶಾಲೆ, ಚೌಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಡ್ಡರಹಳ್ಳಿ ಕೊಪ್ಪಲು ಶಾಲೆ, ಹಾಸನ ತಾಲೂಕಿನ ಎಂ ತಿಮ್ಮಹಳ್ಳಿ, ಸಜ್ಜೇನಹಳ್ಳಿ, ಅನುಘವಳ್ಳಿ, ದ್ಯಾವಪ್ಪನಕೊಪ್ಪಲು ಹಾಗೂ ಹೊಳೆನರಸೀಪುರ ತಾಲೂಕಿನ ತಿಮ್ಮನಕೊಪ್ಪಲು, ಕುರುಬರಹಳ್ಳಿ, ಕುರಿಕಾವಲು ಗ್ರಾಮದ ಶಾಲೆಗಳ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು ಮಕ್ಕಳಿಗೆ ಪಾಠ ಮಾಡಲು ಪರ್ಯಾಯ ಕೊಠಡಿಗಳೇ ಇಲ್ಲದ ಕಾರಣ ಇದೇ ಕೊಠಡಿಗಳಲ್ಲಿ ಶಿಕ್ಷಕರು ಆತಂಕದಲ್ಲೇ ಪಾಠ ಪ್ರವಚನ ಮಾಡಬೇಕಿದೆ.
ಸರ್ಕಾರದಿಂದ ಬಿಡುಗಡೆಯಾಗದ ಅನುದಾನ: ಶಾಲಾ ಕೊಠಡಿ, ಕಟ್ಟಡಗಳ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಕೆಲ ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೂ, ಇದುವರೆಗೂ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಜಿಪಂ ಹಾಗೂ ರಾಜ್ಯವಲಯ ಸೇರಿ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆ ಅಂದಾಜು ಪಟ್ಟಿ ಸಲ್ಲಿಸಿದ್ದರೂ ಸರ್ಕಾರದ ನಿರ್ಲಕ್ಷ್ಯ ಮುಂದುವರಿದಿದೆ.
ಮಳೆಗಾಲದಲ್ಲೇ ಮಕ್ಕಳಿಗೆ ಹೆಚ್ಚು ತೊಂದರೆ: ಹಾಲಿ ಮಳೆಗಾಲ ಆರಂಭಗೊAಡಿದೆ. ಜಿಲ್ಲಾದ್ಯಂತ ಈಗಾಗಲೇ ಪೂರ್ವ ಮುಂಗಾರಿನ ಮಳೆಗೆ ಶಿಥಿಲಗೊಂಡಿದ್ದ ಹಲವು ಶಾಲೆ ಸೋರುತ್ತಿದ್ದವು. ಅಲ್ಲಲ್ಲಿ ಶಾಲೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿತ್ತು. ಇನ್ನು ಮುಂದೆ ಮುಂಗಾರು ಚುರುಕುಗೊಂಡರೆ ಮೊದಲೇ ಬಲ ಕಳೆದು ಕೊಂಡಿರುವ ಶಾಲಾ ಕೊಠಡಿಗಳು ಮತ್ತೆ ಜೋರು ಮಳೆಗೆ ಸೋರುವ ಆತಂಕ ಎದುರಾಗಿದೆ.
ಬೇಲೂರಲ್ಲಿ ಹೆಚ್ಚು ಶಾಲೆ ಶಿಥಿಲ: ಬೇಲೂರು ತಾಲೂಕಿನಲ್ಲಿ ಹೆಚ್ಚು ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಸುಮಾರು 20ಕ್ಕೂ ಹೆಚ್ಚು ಶಾಲೆಗಳಲ್ಲಿ 2 ಕೊಠಡಿ ಇದ್ದರೆ ಅದರಲ್ಲಿ ಒಂದು ಕೊಠಡಿ ರಿಪೇರಿಯಾಗಬೇಕಿದೆ. ಹೀಗಾಗಿ ಎರಡು ಕೊಠಡಿಯ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಬೋಧನೆ ಮಾಡಬೇಕಿದೆ. ಹಾಸನ ತಾಲೂಕಿನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.
ದಾನಿಗಳ ನೆರವು ಅಗತ್ಯ: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ದಾನಿಗಳು, ಸಂಘ-ಸಂಸ್ಥೆಗಳೂ ಕೈಜೋಡಿಸಬೇಕಾಗಿದೆ. ಸರ್ಕಾರಿ ಶಾಲೆಗಳ ಉಳಿವಿನಿಂದ ಬಡ ವಿದ್ಯಾರ್ಥಿಗಳ ಶಿಕ್ಷಣ ಸುಧಾರಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ ಹಲವು ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು, ದಾನಿಗಳು, ಸಂಘ-ಸಂಸ್ಥೆಗಳು ಕೈಜೋಡಿಸುವ ಮೂಲಕ ಕಾಯಕಲ್ಪಕ್ಕೆ ಮುಂದಾಗಿವೆ. ಈ ನೆರವು ಇನ್ನೂ ಹೆಚ್ಚಾಗಬೇಕಿದೆ.
ಶಾಲೆ ಕೊಠಡಿಗಳ ನಿರ್ಮಾಣ, ಶಿಥಿಲಗೊಂಡಿರುವ ಶಾಲಾ ಕೊಠಡಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಪಂ ಹಾಗೂ ರಾಜ್ಯವಲಯದ ಅನುದಾನಕ್ಕೂ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲಾಗಿದೆ.
ಪ್ರಕಾಶ್, ಡಿಡಿಪಿಐ, ಹಾಸನ
ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಕೊಠಡಿಗಳ ವಿವರ