ಹಾಸನ: ಧೂಮಕೇತು ವೀಕ್ಷಣೆಗೆ ಅಡ್ಡಿ ಮಾಡಿದ ಮೋಡ

ಹಾಸನವೂ ಸೇರಿದಂತೆ ರಾಜ್ಯಾದ್ಯಂತ ಮೋಡದ ಕಾರಣ ಧೂಮಕೇತು ಬರಿಗಣ್ಣಿಗೆ ಗೋಚರವಾಗಲಿಲ್ಲ

ಹಾಸನ: 50,000 ವರ್ಷಗಳ ನಂತರ ಭಾರತೀಯ ಆಕಾಶದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಬೇಕಿದ್ದ COMET ZTF (C/2022 E3) ಹಸಿರು ಧೂಮಕೇತು ದಟ್ಟ ಮೋಡದ ಕಾರಣ ಕಾಣಿಸಲಿಲ್ಲ.

ಹಾಸನ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್‌)ಯು ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ, ಅರಸಿಕೆರೆ ಹಾಗೂ ನಿಟ್ಟೂರು ಗ್ರಾಮ ಪಂಚಾಯತಿಯ ಸಹಾಯದೊಂದಿಗೆ ನಗರದಿಂದ 24 ಕಿಲೋಮೀಟರ್ ದೂರದ ನಿಟ್ಟೂರು ಗ್ರಾಮ ಪಂಚಾಯತಿ ತಿರುಪತಿಹಳ್ಳಿಯ ಚಿಕ್ಕಗಿರಿ ರಂಗನಾಥ ಬೆಟ್ಟದಲ್ಲಿ ಆಯೋಜಿಸಿತ್ತು.

ಇದನ್ನು ಓದಿ: ಫೆ. 1 ಮತ್ತು 2ರಂದು: 50 ಸಾವಿರ ವರ್ಷಗಳ ನಂತರ ಹಸಿರು ಧೂಮಕೇತು ಭೂಮಿ ಸಮೀಪ ಹಾದು ಹೋಗಲಿದೆ

ಆಕಾಶ ವೀಕ್ಷಣೆ ಸಂದರ್ಭದಲ್ಲಿ ದಟ್ಟಮೋಡ ಆವರಿಸಿದ ಕಾರಣ ಗಂಟೆಗಳ ಕಾಲ ಕಾದರೂ ಧೂಮಕೇತು ದರ್ಶನವಾಗಲಿಲ್ಲ. ಆದರೆ ವೀಕ್ಷಣೆಗೆ ಸೇರಿದ್ದ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಬಿಜಿವಿಎಸ್ ಕಾರ್ಯಕರ್ತರು ಸ್ಟೆಲ್ಲಾರಿಯಂ ಗೂಗಲ್ ಆಪ್ ಮೂಲಕ ತೋರಿಸಿದರು. ಆಪ್‌ನಲ್ಲಿ ಸದರಿ ಧೂಮಕೇತುವು ಮೂರು ಮಾದರಿಯ ಬಾಲಹೊಂದಿರುವುದನ್ನು ಸ್ಪಷ್ಟವಾಗಿ ತೋರಿತು. ಹಾಗೂ ಇದೇ ವೇಳೆ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರವು ಜೋಡಿಸಿದ್ದ ಎರಡು ದೊಡ್ಡ ಟೆಲೆಸ್ಕೋಪ್ ಮೂಲಕ ಚಂದ್ರನ ಮೇಲ್ಮೈ ಕಲೆಗಳನ್ನು ತೋರಿಸಿದರು ಧೂಮಕೇತು ದರ್ಶನವಾಗದೆ ಬೇಸರಗೊಂಡಿದ್ದ, ನೆರೆದಿದ್ದ ಜನರಿಗೆ ಚಂದ್ರನ ಮನಮೋಹಕ ದರ್ಶನ ಹಾಗೂ ಸ್ಟೆಲ್ಲಾರಿಯಂ ಧೂಮಕೇತು ದರ್ಶನ ಸಂತಸ ಮೂಡಿಸಿತು.

ಕಳೆದ ವರ್ಷ ಮಾರ್ಚ್ 2 ರಂದು, ಅಮೆರಿಕಾದ ಖಗೋಳ ಶಾಸ್ತ್ರಜ್ಞರಾದ ಬ್ರೈಸ್ ಬೋಲಿನ್ ಮತ್ತು ಫ್ರಾಂಕ್ ಮಾಸ್ಕಿ ಅವರು ಕ್ಯಾಲಿಫೋರ್ನಿಯಾದ ಜ್ವಿಕಿ ಟ್ರಾನ್ಸಿಯೆಂಟ್ ಫೆಸಿಲಿಟಿ(ZTF) ಮೂಲಕ C/2022 E3 (ZTF) ಈ ಧೂಮಕೇತುವನ್ನು ಕಂಡುಹಿಡಿದರು. ಅದು ಜನವರಿ 21ರ ನಂತರ ಆಕಾಶದಲ್ಲಿ ಸಾಮಾನ್ಯ ಟೆಲೆಸ್ಕೋಪು ಹಾಗೂ ಬೈನಾಕ್ಯಲರ್‌ಗೆ ಗೋಚರಿಸಲಾರಂಬಿಸಿತು. ಫೆಬ್ರವರಿ 1-2ರಂದು ಭೂಮಿಗೆ ಅತಿ ಸಮೀಪ ಬರಲಿದ್ದು ಈಶಾನ್ಯ ದಿಕ್ಕಿನಲ್ಲಿ ಸಪ್ತರ್ಷಿ ಮಂಡಲದ ಕೆಳಭಾಗದಲ್ಲಿ ಸುಮಾರು 5 ಡಿಗ್ರಿ ಕೋನದಲ್ಲಿ ಬೆಳಗಿನ 3 ಗಂಟೆಯಿಂದ 4 ಗಂಟೆಯವರೆಗೆ ಹಸಿರು ಬಣ್ಣದಲ್ಲಿ ಬರೀಗಣ್ಣಿಗೆ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನು ಓದಿ: ಇಂದು ಬಾನಂಗಳದಲಿ ಗುರು-ಶನಿಗಳ ಸಮಾಗಮ

ಕಾರ್ಯಕ್ರಮ ಆರಂಭಕ್ಕೂ ಮೊದಲು ರಾತ್ರಿ 10.30ರ ಸಮಯದಲ್ಲಿ ಧೂಮಕೇತುಗಳ ಪರಿಚಯ ಹಾಗೂ ಅವುಗಳು ಬಾಲ ಹೇಗೆ ಮೂಡಿಸುತ್ತವೆ ಎಂದು ಸಂಚಾಲಕಿ ಹಾಗೂ ಸಂಪನ್ಮೂಲ ವ್ಯಕ್ತಿ ಕವಿತ ಸೊಗಸಾಗಿ ಪಿಪಿಟಿ ಹಾಗೂ ನಡುನಡುವೆ ರಸಪ್ರಶ್ನೆ ಮೂಲಕ ನಡೆಸಿಕೊಟ್ಟರು.

ಸೌರ ಸಂಸಾರದದಲ್ಲಿ ಗಟ್ಟಿ ಕಾಯಗಳು ಸನಿಹದಲ್ಲೇ ಉಳಿದು ಜೊಳ್ಳುಗಳಲ್ಲೆ ಅನಿಲ ದೈತ್ಯವಾಗಿ ದೂರ ಸರಿದು ಸಣ್ಣ ಸಣ್ಣ ಹಿಮದ ಚೂರೆಲ್ಲ ದೂರ ಹೇಗೆ ಸರಿದವು ಎಂಬುದನ್ನು ರಾಗಿ ಕಣದ ಕೆಲಸದ ಹೋಲಿಕೆ ಮೂಲಕ ಮನವರಿಕೆ ಮಾಡಿ ಸೌರವ್ಯೂಹದಾಚೆ ರ‍್ಟನ ಮೋಡದೊಳಗೆ ಕೋಟ್ಯಾಂತರ ಇಂತಹ ಹಿಮದುಂಡೆಗಳು ಇದ್ದು ಗ್ರಹ-ನಕ್ಷತ್ರಗಳ ಚಲನೆ ಕಾರಣ ಗುರುತ್ವ ಕ್ಷೋಭೆ ಉಂಟಾಗಿ ಸೂರ್ಯನ ಗುರುತ್ವಕ್ಕೆ ಸಿಲುಕಿ ಧಾವಿಸಿ ಬರುತ್ತದೆ. ಹತ್ತಿರ ಬರುತ್ತಿದ್ದಂತೆ ಸೂರ್ಯನ ಶಾಖಕ್ಕೆ ಬಾಷ್ಪೀಕರಣ ಹೊಂದಿ ಬಿಳಿ ಬಣ್ಣದ ಆವಿಯ ಮೋಡ ಸುತ್ತಲೂ ಕಟ್ಟಿಕೊಳ್ಳುತ್ತದೆ, ಸೂರ್ಯನ ಕಿರಣಗಳಿಗೆ ಅದರ ಮೇಘ ಅಯಾನಿಕರಣ ಹೊಂದಿ ನೀಲಿಬಣ್ಣದ ಅಯಾನು ಬಾಲ ಉದ್ಭವಿಸುತ್ತದೆ ಎಂದು ಚಿತ್ರ ಹಾಗೂ ವಿಡಿಯೋ ಮೂಲಕ ವಿವರಿಸಿದರು.

ಭಾರತದ ಚರಿತ್ರೆಯಲ್ಲಿ ಧೂಮಕೇತುಗಳ ಬಗ್ಗೆ ಅಹಮದ್ ಹಗರೆ ವಿವರಿಸಿ, ಭಾರತೀಯ ಪುರಾಣಗಳಲ್ಲಿ ಸಾವಿರಾರು ಧೂಮಕೇತುಗಳ ದಾಖಲೆ ಇದ್ದು ಅಲ್ಲೆಲ್ಲಿಯೂ ಅದು ಕೆಟ್ಟದ್ದು ಎಂದು ನಮೂದಿಸಿಲ್ಲ. 12ನೇ ಶತಮಾನದ ನಂತರವಷ್ಟೇ ಅದನ್ನು ಕೆಟ್ಟ ಶಕುನದಂತೆ ನೋಡಲು ಶುರು ಮಾಡಿದರು ಎಂದು ಅವರು, ಆಕಾಶದಲ್ಲಿ ಗೋಚರಿಸಿದ ನಕ್ಷತ್ರಗಳ ಬಗ್ಗೆಯೂ ಪರಿಚಯ ಮಾಡಿಕೊಟ್ಟರು.

ಇದನ್ನು ಓದಿ: ಭಾರತದ ಆಳರಸರು ಧರ್ಮ-ಜಾತಿ-ಪಾಳೇಗಾರಿ-ಅಸ್ಪೃಶ್ಯತೆಯಡೆಗೆ ಕೊಂಡೊಯ್ಯುತ್ತಿದ್ದಾರೆ: ಎಚ್‌.ಟಿ. ಗುರುರಾಜು

ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ನಡುವೆ ಮೌಢ್ಯ ಬಿತ್ತುವ ಗ್ರಹಣ, ಶನಿ ಗ್ರಹ, ರಾಹು-ಕೇತು, ಧೂಮಕೇತು ಇತ್ಯಾದಿ ಖಗೋಳ ವಿದ್ಯಮಾನಗಳ ನಿಜ ವೃತ್ತಾಂತ ತಿಳಿಸಲು ಆಕಾಶೋತ್ಸವ ಮಾಡಲಾಗಿದೆ ಎಂದರು.

ಗ್ರಾಮಪಂಚಾಯತಿ ಪಿಡಿಒ ಮಲ್ಲೇಶಪ್ಪ ಧೂಮಕೇತು ಚಿತ್ರವನ್ನು ಅನಾವರಣ ಮಾಡುವ ಮೂಲಕ ಆಕಾಶೋತ್ಸವ ಉದ್ಗಾಟಿಸಿದರು. ಹಾಸನ ಪೋಲಿಸ್ ಅಧಿಕಾರಿ ಹರಿರಾಮ್ ಶಂಕರ್ ಅವರು ಕಾರ್ಯಕ್ರಮದ ಕೊನೆಯವರೆಗೂ ಇದ್ದು, ಮಕ್ಕಳ ಹಾಗೂ ಜನರ ಜೊತೆಗಿದ್ದು ಚಂದ್ರವೀಕ್ಷಣೆ ಹಾಗೂ ನಕ್ಷತ್ರ ವೀಕ್ಷಣೆ ಮಾಡಿದರು.

ದುದ್ದ ಪೋಲಿಸ್ ಠಾಣೆ ಇಲಾಖೆ ಹಾಗೂ ಅರಣ್ಯ ಇಲಾಖೆ ಸೂಕ್ತ ರಕ್ಷಣೆ ನೀಡಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ನಿಟ್ಟೂರು ಗ್ರಾಮಪಂಚಾಯತಿ ಪಿಡಿಒ ಕೊನೆಯವರೆಗೂ ಜೊತೆಗಿದ್ದು ಸೂಕ್ತ ಸಹಕಾರ ನೀಡಿದ್ದಲ್ಲದೆ, ವಸತಿ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದರು. ಹಾಸನದಿಂದ ಜನರನ್ನು ಕರೆದುಕೊಂಡು ಹೋಗಿಬರಲು ಹಾಸನದ ಮಾಸ್ಟರ್ ಕಾಲೇಜಿನ ಗೌಡೇಗೌಡ ಹಾಗೂ ದುದ್ದದ ಶ್ರೀ ವಿದ್ಯಾಪೀಠ ಶಾಲೆಯ ಶಿವಣ್ಣ ಉಚಿತವಾಗಿ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದರು.

ಧೂಮಕೇತುವನ್ನು ವೀಕ್ಷಿಸಲು ಕಾಲೇಜಿನ ಪ್ರೊಫೆಸರುಗಳು, ಬ್ಯಾಂಕಿನ ಅಧಿಕಾರಿಗಳು, ಪೋಲಿಸ್ ಇಲಾಖೆಯ ಅಧಿಕಾರಿಗಳು, ಉಪನ್ಯಾಸಕರು, ಕಾರ್ಮಿಕ ಮುಖಂಡರು, ರೈತ ನಾಯಕರು, ಕಡೂರಿನಿಂದ ಯುವಕರ ತಂಡ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನೋಂದಾಯಿಸಿ ಭಾಗವಹಿಸಿದ್ದರು. ಲೋಲಾಕ್ಷಿ ಎಲ್ಲರನ್ನು ಸ್ವಾಗತಿ ಕೋರಿದರು. ಕಡೆಯಲ್ಲಿ ಬಿಜಿವಿಎಸ್ ಉಪಾದ್ಯಕ್ಷೆ ಮಮತಾಶಿವು ವಂದಿಸಿದರು.

ಲೋಲಾಕ್ಷಿ, ಮಮತಾಶಿವು, ಪ್ರಮೀಳಾ, ವನಜಾಕ್ಷಿ, ಆಶಾ ಹಾಗೂ ಸೌಭಾಗ್ಯ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಹಕಾರ್ಯದರ್ಶಿ ನಾಗೇಶ್, ಚಿನ್ನೇನಹಳ್ಳಿ ಸ್ವಾಮಿ, ಜಯಪ್ರಕಾಶ್, ಅರ್ಜುನಶೆಟ್ಟಿ ಮತ್ತು ಶಾರದಾ ಫೈರ್ ಕ್ಯಾಂಪ್ ಸಂಚಾಲಿಕಿ ಹೆಜ್ಜೆಹೆಜ್ಜೆಗೂ ಸಾರ್ವಜನಿಕರಿಗೆ ಚಹ ತಯಾರಿಸಿ ಹಂಚಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *