ಚಂಡೀಗಢ: ಹರಿಯಾಣದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು 100 ಜನ ರೈತರ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಕೇಂದ್ರ ಸರಕಾರದ ಜನವಿರೋಧಿ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಪಸಭಾಧ್ಯಕ್ಷ ರಣಬೀರ್ ಗಂಗ್ವಾ ಅವರ ವಾಹನದ ಮೇಲೆ ರೈತರು ದಾಳಿ ನಡೆಸಿದರು ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆ ಜುಲೈ 11 ರಂದು ಘಟನೆ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ನಡೆದಿದೆ ಎನ್ನಾಗಿದೆ. ರೈತರ ವಿರುದ್ಧ ದೇಶದ್ರೋಹದ ಪ್ರಕರಣದಡಿ ಎಫ್‌ಐಆರ್ ಕೂಡ ಅದೇ ದಿನ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ದೇಶದ್ರೋಹ ಮಾತ್ರವಲ್ಲದೇ ಇನ್ನಿತರ ಹಲವಾರು ಗಂಭೀರ ಆರೋಪಗಳನ್ನೂ ರೈತರ ಮೇಲೆ ಹೊರಿಸಲಾಗಿದೆ. ಇದರಲ್ಲಿ “ಕೊಲೆ ಯತ್ನ” ಮತ್ತು “ಜನನಾಯಕನನ್ನು ಸಾರ್ವಜನಿಕ ಕಾರ್ಯಗಳನ್ನು ಮಾಡದಂತೆ ತಡೆಯುವುದು” ಸೇರಿಸಲಾಗಿದೆ.
ಇದನ್ನು ಓದಿ: ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಪ್ರಕರಣದಲ್ಲಿ ರೈತ ಪ್ರತಿಭಟನೆಯ ಇಬ್ಬರು ನಾಯಕರಾದ ಹರ್ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ರೈತರ ಮೇಲಿನ ದೇಶದ್ರೋಹ ಪ್ರಕರಣ ದಾಖಲಿಸಲಾದ ಬಗ್ಗೆ ಸುಳ್ಳು, ಸೃಷ್ಟಿತ ಮತ್ತು ದುರುದ್ದೇಶಪೂರ್ವಕ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿರುವುದು ರೈತರನ್ನು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೆಹಲಿ ಗಡಿಗಳಲ್ಲಿ ಕಳೆದ ನವೆಂಬರ್‌ನಿಂದ ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಇಂದು ದೇಶದ್ರೋಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ವಿಚಾರಣೆಯ ಸಂದರ್ಭದಲ್ಲಿ ದೇಶದ್ರೋಹ ಕಾನೂನಿನ ಪ್ರಸ್ತುತತೆಯನ್ನು ಪ್ರಶ್ನಿಸಿದೆ. ಬ್ರಿಟಿಷರ ವಸಾಹತು ಕಾಲದ ಈ ಕಾನೂನು ಸ್ವಾತಂತ್ರ್ಯ ಬಂದ 73 ವರ್ಷಗಳ ಬಳಿಕವೂ ದಾಖಲಿಸಲಾಗುತ್ತಿರುವುದು ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಕಾನೂನಿನ ದುರುಪಯೋಗವಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದೆ.
ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ಅವರು ʻʻಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು, ಭಿನ್ನಾಭಿಪ್ರಾಯದ ಧ್ವನಿಯನ್ನು ಮೌನಗೊಳಿಸಲು ಬ್ರಿಟಿಷರು ದೇಶದ್ರೋಹ ಕಾನೂನನ್ನು ಬಳಸಿದ್ದರು. ಆಗ ಬ್ರಿಟಿಷರು ಮಹಾತ್ಮ ಗಾಂಧಿ ಮತ್ತು ಬಾಲ ಗಂಗಾಧರ ತಿಲಕ್ ಅವರ ಮೇಲೂ ಇದೇ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿದ್ದರು. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಈ ಕಾನೂನನ್ನು ಉಳಿಸಿಕೊಳ್ಳಲು ಸರ್ಕಾರ ಬಯಸುತ್ತದೆಯೇʼʼ ಎಂದು ಪ್ರಶ್ನೆ ಮಾಡಿದ್ದಾರೆ.