ಹರಿಯಾಣ ರೈತರಿಂದ 20 ಗಂಟೆ ಹೆದ್ದಾರಿ ತಡೆ: ಹೋರಾಟಕ್ಕೆ ಮಣಿದ ಸರ್ಕಾರ-ಭತ್ತ ಖರೀದಿ ಮಿತಿ ಹೆಚ್ಚಳ

ಚಂಡೀಗಢ: ಮಳೆಯಿಂದಾಗಿ ಧಾನ್ಯಗಳು ಹಾಳಗದಂತೆ ಶೀಘ್ರವೇ ಭತ್ತ ಖರೀದಿ ಮಾಡಬೇಕು ಮತ್ತು ಎಕರೆಗೆ 22 ಕ್ವಿಂಟಾಲ್‌ ಮಿತಿಯನ್ನು ಹೆಚ್ಚಿಸಬೇಕೆ ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಹರಿಯಾಣ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು. ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಧರಣಿ ಮುಂದುವರೆದು, ಸತತ 20 ಗಂಟೆಯ ನಂತರ ರೈತರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವುದಾಗಿ ಸರ್ಕಾರ ತಿಳಿಸಿದೆ.

ಹರಿಯಾಣದಲ್ಲಿ ಭತ್ತ ಸೇರಿದಂತೆ ಖಾರಿಫ್ ಬೆಳೆಗಳ ಖರೀದಿ ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿದೆ. ಭತ್ತ ಖರೀದಿಯಲ್ಲಿ ಹೆಚ್ಚು ಇಳುವರಿ ಇರುವ ಜಿಲ್ಲೆಗಳಿಂದ ಎಕರೆಗೆ 22 ಕ್ವಿಂಟಾಲ್ ಬದಲಿಗೆ ಎಕರೆಗೆ 30 ಕ್ವಿಂಟಾಲ್ ಹಾಗೂ ಇತರ ಹಲವಾರು ಜಿಲ್ಲೆಗಳಲ್ಲಿ ಇದನ್ನು ಎಕರೆಗೆ 28 ​​ಕ್ವಿಂಟಾಲ್‌ಗಳಿಗೆ ಖರೀದಿಸಲು ಒಪ್ಪಿಕೊಂಡ ನಂತರ ಹೆದ್ದಾರಿ ತಡೆ ಪ್ರತಿಭಟನಾ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಹರಿಯಾಣ ಭಾರತೀಯ ಕಿಸಾನ್‌ ಯೂನಿಯನ್‌(ಬಿಕೆಯು(ಚದುನಿ)) ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ಹೇಳಿದ್ದಾರೆ.

ಕುರುಕ್ಷೇತ್ರ ಜಿಲ್ಲೆಯ ಶಹಬಾದ್ ಬಳಿ ರೈತರು ತಮ್ಮ ಕಟಾವು ಮಾಡಿದ ಉತ್ಪನ್ನವನ್ನು ಖರೀದಿಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಹೆದ್ದಾರಿ ತಡೆದಿದ್ದರು. ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಲು ಜಾಗವಿಲ್ಲ ಎಂದು ಉಲ್ಲೇಖಿಸಿ ಖರೀದಿಯ ದಿನಾಂಕವನ್ನು ಮುಂಚಿತವಾಗಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಮಳೆಯ ಪ್ರಮಾಣ ಹೆಚ್ಚಳದಿಂದಾಗಿ ಧಾನ್ಯಗಳು ಹಾಳಾಗುತ್ತವೆ ಎಂದು ಪ್ರತಿಭಟನಾ ನಿರತ ರೈತರು ಆತಂಕ ವ್ಯಕ್ತಪಡಿಸಿ ಶೀಘ್ರವೇ ಬೆಳೆ ಖರೀದಿಗೆ ಒತ್ತಾಯಿಸಿ ತಡರಾತ್ರಿವರೆಗೂ ಪ್ರತಿಭಟಿಸಿದ್ದರು.

ಧಾನ್ಯ ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಎಲ್ಲಾ ಭತ್ತವನ್ನು ಸಾಗಿಸಲು ಪ್ರಾರಂಭಿಸುವುದಾಗಿ ರಾಜ್ಯ ಸರ್ಕಾರ ಈಗ ಹೇಳಿದೆ. ಮೊದಲು ಘೋಷಿಸಿದಂತೆ ಅಕ್ಟೋಬರ್ 1 ರಂದು ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಬೆಳೆ ಹೆಚ್ಚು ಇಳುವರಿ ಪಡೆಯುವ ಐದು ಜಿಲ್ಲೆಗಳಲ್ಲಿ ಖರೀದಿಯ ಮಿತಿಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.

ಪ್ರತಿಭಟನೆಯಿಂದಾಗಿ ಕುರುಕ್ಷೇತ್ರದ ಸುತ್ತಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾದ ಕಾರಣಕ್ಕಾಗಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಹರಿಯಾಣ ಸರ್ಕಾರವು ತುರ್ತು ಕ್ರಮ ಕೈಗೊಂಡಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಸಂಚಾರಕ್ಕೆ ಯಾವುದೇ ಅಡೆತಡೆಯಿಲ್ಲದೆ ಹೆದ್ದಾರಿಯನ್ನು ಮುಕ್ತವಾಗಿಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡದಂತೆ ತಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯವು, ಆಡಳಿತಕ್ಕೆ ಬೇರೆ ಮಾರ್ಗವಿಲ್ಲದಿದ್ದರೆ ಬಲ ಪ್ರಯೋಗ ಮಾಡುವುದು ಕೊನೆಯ ಆಯ್ಕೆಯಾಗಿರಬೇಕು ಎಂದು ಸಹ ಸೂಚನೆ ನೀಡಿತ್ತು.

ಇದೀಗ ರಾಜ್ಯ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿದ್ದು, ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *