ಹರೇಕಳ ಗ್ರಾಮ ಪಂಚಾಯತ್ ಚಲೋ | ಸಿಪಿಐ(ಎಂ) ನೇತೃತ್ವದಲ್ಲಿ ಮನೆ ನಿವೇಶನ ರಹಿತರ ಹೋರಾಟ

ದಕ್ಷಿಣ ಕನ್ನಡ: ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ನೀಡಬೇಕು ಮತ್ತು 557 ಮನೆಗಳ ತೆರಿಗೆ ಸಂಗ್ರಹವನ್ನು ಈ ಕೂಡಲೇ ಮಾಡಬೇಕೆಂದು ಒತ್ತಾಯಿಸಿ ಜಿಲ್ಲೆಯ ನಿವೇಶನರಹಿತರು ಸಿಪಿಐ(ಎಂ) ನೇತೃತ್ವದಲ್ಲಿ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮ ಪಂಚಾಯತ್ ಚಲೋ ಹೋರಾಟ ಗುರುವಾರ ನಡೆಯಿತು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ಅವರು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅಮೃತ ಮಹೋತ್ಸವವನ್ನು ದಾಟಿ ಮುನ್ನಡೆಯುತ್ತಿದ್ದರೂ ದೇಶದ ಬಡಪಾಯಿ ಜನತೆಗೆ ಇನ್ನೂ ಕೂಡ ತುಂಡು ಭೂಮಿ ಲಭಿಸದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

“ಹರೇಕಳ ಗ್ರಾಮದಲ್ಲಿ ಕಳೆದ 4 ದಶಕಗಳಿಂದ ಬಡವರಿಗೆ ಮನೆ ನಿವೇಶನವನ್ನು ಒದಗಿಸದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳ ನಿರಂತರ ಹೋರಾಟದ ಫಲವಾಗಿ ಇಲ್ಲಿನ ಗ್ರಾಮ ಪಂಚಾಯತ್ ನಿವೇಶನ ರಹಿತರ ಪಟ್ಟಿಯನ್ನು ಸಿದ್ದಗೊಳಿಸಿದೆ. ಆದರೆ ಅದಕ್ಕಾಗಿ ನಿವೇಶನವನ್ನು ಇನ್ನೂ ಕೂಡ ಕಾದಿರಿಸದೆ ಸ್ಥಳೀಯ ಜನತೆಯನ್ನು ಗ್ರಾಮ ಪಂಚಾಯತ್ ವಂಚಿಸುತ್ತಿದೆ. ಅಲ್ಲದೆ, ಕಳೆದ ಹಲವಾರು ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದ 557 ಮನೆಗಳ ತೆರಿಗೆ ಕಟ್ಟುವುದನ್ನು ಏಕಾಏಕಿ ನಿಲ್ಲಿಸಿ ಅವರನ್ನೂ ಕೂಡ ಗ್ರಾಮದಿಂದಲೇ ಒದ್ದೋಡಿಸಲು ವ್ಯವಸ್ಥಿತ ಹುನ್ನಾರ ನಡೆಸಿದೆ” ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಆರೋಗ್ಯ ಅಧಿಕಾರಿಗಳು ದಾಳಿ; 156 ನಕಲಿ ವೈದ್ಯರು ಪತ್ತೆ

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, “ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಎಕರೆ ಭೂಮಿ ಸರಕಾರದ ವಶದಲ್ಲಿದ್ದರೂ ಇಲ್ಲಿನ ಬಡಪಾಯಿ ಜನತೆಯ ಮನೆ ನಿವೇಶನಕ್ಕಾಗಿ ಜಾಗ ಕಾದಿರಿಸಲು ಇನ್ನೂ ಸಾಧ್ಯವಾಗಿಲ್ಲ. ಮಾತ್ರವಲ್ಲದೆ ಈ ಹೋರಾಟವನ್ನು ದಾರಿ ತಪ್ಪಿಸಲು 9 ಎಕರೆಯಷ್ಟು ಭೂಮಿ ನಿವೇಶನ ರಹಿತರಿಗೆ ಕಾದಿರಿಸಲಾಗಿದೆ ಎಂದು ಪಂಚಾಯತ್ ಆಡಳಿತ ಪತ್ರಿಕಾಗೋಷ್ಠಿಯ ಮೂಲಕ ಹೇಳಿದೆ. ಇದು ನಿಜಕ್ಕೂ ದಾಖಲೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಂತ ನಮೂದಿಸಲಾಗಿದೆಯೇ ಹೊರತು ನಿವೇಶನ ರಹಿತರಿಗೆ ಅಂತ ಇನ್ನೂ ಕೂಡ ಆಗಿಲ್ಲ” ಎಂದು ಕಿಡಿ ಕಾರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ ಸಿಪಿಐ(ಎಂ) ಯುವ ನಾಯಕರಾದ ರಫೀಕ್ ಹರೇಕಳ ಅವರು ನಿವೇಶನ ರಹಿತರ ಹೋರಾಟದ ಮಹತ್ವವನ್ನು ವಿವರಿಸುತ್ತಾ, “ನಿವೇಶನರಹಿತರ ಪ್ರಶ್ನೆಗಳನ್ನು ಮುಂದಿಟ್ಟು ಕಳೆದ ಹಲವಾರು ಬಾರಿ ಹೋರಾಟಗಳನ್ನು ನಡೆಸಿದ್ದೇವೆ. ಆದರೂ ಪಂಚಾಯತ್ ಆಡಳಿತ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ಹೊರತು ಜನತೆಯ ನೋವುಗಳಿಗೆ ಸ್ಪಂದಿಸಿಲ್ಲ. ಗ್ರಾಮದಲ್ಲಿಯೇ ಹುಟ್ಟಿ ಬೆಳೆದ ಅಸಂಖ್ಯಾತ ಬಡ ಜನತೆಗೆ ಒಂದು ಕಡೆ ನಿವೇಶನವನ್ನೂ ನೀಡದೆ, ಮತ್ತೊಂದು ಕಡೆ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ 557 ಮನೆಗಳಿಗೆ ಏಕಾಏಕಿ ತೆರಿಗೆ ಕಟ್ಟಲು ಅವಕಾಶ ನಿರಾಕರಿಸಲಾಗುತ್ತಿದೆ. ಈ ಮೂಲಕ ಗ್ರಾಮದಲ್ಲಿ ಬಡವರನ್ನು ಊರಿನಿಂದಲೇ ಎತ್ತಂಗಡಿ ಮಾಡಲು ಹುನ್ನಾರ ನಡೆಯುತ್ತಿದೆ” ಎಂದು ಸ್ಥಳೀಯ ಆಡಳಿತದ ವಿರುದ್ದ ಚಾಟಿ ಬೀಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ(ಎಂ) ಜಿಲ್ಲಾ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸುಕುಮಾರ್ ತೊಕ್ಕೋಟು, ಜಯಂತ ನಾಯಕ್ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ) ಯುವ ನಾಯಕರಾದ ಜಯಂತ ಅಂಬ್ಲಮೊಗರು, ಇಬ್ರಾಹಿಂ ಮದಕ, ರಿಜ್ವಾನ್ ಅವರು ಭಾಗವಹಿದ್ದರು. ಹೋರಾಟದ ನೇತೃತ್ವವನ್ನು ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಹರೇಕಳ, ಸಿಪಿಐ(ಎಂ) ಸ್ಥಳೀಯ ನಾಯಕರಾದ ಕೆ.ಎಚ್ ಹಮೀದ್, ಜನಾರ್ದನ ಅಮೀನ್, ಕೆ.ಉಮ್ಮರಬ್ಬ, ಸತ್ತಾರ್ ಕೊಜಪ್ಪಾಡಿ, ಇಸ್ಮಾಯಿಲ್, ಕೆ.ಎಚ್ ಇಕ್ಬಾಲ್, ಹೈದರ್ ಹರೇಕಳ, ಬಶೀರ್ ಲಚ್ಚಿಲ್, ನಿಝಾಮ್ ಆಲಡ್ಕ, ಯಾಕೂಬ್ ಖಂಡಿಗ ಮುಂತಾದವರು ವಹಿಸಿದ್ದರು.

ವಿಡಿಯೊ ನೋಡಿ: ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್‌ ಎಂಬ ತೂಗುಗತ್ತಿ – ಕೆ. ಮಹಾಂತೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *