ಹರಪ್ಪಾ ನಾಗರೀಕತೆಯ ಭಾಷೆ ಸಂಸ್ಕೃತ ಎನ್ನುವುದು, ಬಸವಣ್ಣ ಇಂಗ್ಲಿಷ್ ಮಾತನಾಡುತ್ತಿದ್ದರು ಎನ್ನುವಷ್ಟೇ ಹಾಸ್ಯಾಸ್ಪದ : ಪ್ರೊ. ಗಣೇಶ  ದೇವಿ

ವಸಂತರಾಜ ಎನ್.ಕೆ

ಮಹಾಭಾರತ ಈ ಅವಧಿಯ ಮತ್ತು ಇನ್ನೂ ಹಿಂದಿನ ದೀರ್ಘ ಅವಧಿಯ ‘ಇತಿಹಾಸ’ವನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡುತ್ತದೆ. ಹೆಚ್ಚಾಗಿ ಪುರಾಣವಾದ ಅಲ್ಪಸ್ವಲ್ಪ ಇತಿಹಾಸವಿರುವ ಗತವನ್ನು ನೆನಪಿಟ್ಟುಕೊಳ್ಳುವ, ಶಾಶ್ವತ ಮತ್ತು ಬದಲಾವಣೆಯ ಆಯಾಮಗಳನ್ನು ಒಳಗೊಳ್ಳುವ ಕಾಲಚಕ್ರ ವಿಧಾನವನ್ನು ಅಂಗೀಕರಿಸುತ್ತದೆ.  ಒಂದು ‘ಯುಗ’ ಮುಗಿದು ಇನ್ನೊಂದು ಯುಗ ಆರಂಭವಾಗುವಾಗ ಹೆಚ್ಚಾಗಿ ಮಹಾಕಾವ್ಯ ಉದ್ಭವಿಸುತ್ತದೆ. ಇರಾವತಿ ಕರ್ವೆ ಅವರು ‘ಯುಗಾಂತರ’ ಕೃತಿಯಲ್ಲಿ ಹೇಳುವಂತೆ ಭಾರತದಲ್ಲಿ ‘ಪಶುಪಾಲನಾ’ ಯುಗ ಮುಗಿದು, ಪ್ರಭುತ್ವ ಸಾಮ್ರಾಜ್ಯ ಗಳಿರುವ ಯುಗ ಆರಂಭವಾಗುವ ಸ್ಥಿತ್ಯಂತರದಲ್ಲಿ ಮಹಾಭಾರತ ಬರುತ್ತದೆ. ಮಹಾಭಾರತ ಒಂದು (ಬಹುತ್ವ ಎತ್ತಿ ಹಿಡಿಯುವ) ಫೆಡೆರಲ್ (ಒಕ್ಕೂಟ) ಮಹಾಕಾವ್ಯ, ರಾಮಾಯಣ ದಂತೆ ಈಗಿನ ಆಳುವವರಿಗೆ ಪ್ರಿಯವಾದ ‘ಯುನಿಟರಿ’ (ಬಹುತ್ವ ನಿರಾಕರಿಸುವ ಏಕತ್ವದ) ಮಹಾಕಾವ್ಯವಲ್ಲ. ಇಂದು ಏಕತ್ವದ ರಾಜಕೀಯ ಎದುರಿಸಲು ಬಹುತ್ವವನ್ನು ಎತ್ತಿ ಹಿಡಿಯುವ ಮಹಾಭಾರತವನ್ನು ರಾಜಕೀಯವಾಗಿ ಬಳಸಬಹುದು.

“ಹರಪ್ಪಾ ನಾಗರೀಕತೆಯ ಭಾಷೆ ಸಂಸ್ಕೃತ ಎನ್ನುವುದು ಬಸವಣ್ಣ ಇಂಗ್ಲಿಷ್ ಮಾತನಾಡುತ್ತಿದ್ದರು ಎನ್ನುವಷ್ಟೇ ಹಾಸ್ಯಾಸ್ಪದ!” – ಹೀಗೆಂದವರು ಪ್ರೊ.ಗಣೇಶ ದೇವಿ. ಅವರು ತಮ್ಮ ಇಂಗ್ಲೀಷ್ ಮೂಲ ಪುಸ್ತಕ “ಮಹಾಭಾರತ : ದಿ ಎಪಿಕ್ ಅಂಡ್ ದಿ ನೇಶನ್” ದ ಕನ್ನಡ ಅನುವಾದ “ಮಹಾಭಾರತ : ಭೂಮಕಾವ್ಯ ಮತ್ತು ಭಾರತರಾಷ್ಟ್ರ” ಪುಸ್ತಕ ಬಿಡುಗಡೆ ಸಮಾರಂಭಧಲ್ಲಿ ಮಾತನಾಡುತ್ತಿದ್ದರು.  ಈ ಸಮಾರಂಭವನ್ನು ಪುಸ್ತಕದ ಪ್ರಕಾಶಕ ಕ್ರಿಯಾ ಮಾಧ್ಯಮ ಮಾರ್ಚ್ 19ರಂದು ಬಿ.ಎಂ.ಶ್ರೀ ಪ್ರತಿಷ್ಠಾನ ಸಭಾಂಗಣದಲ್ಲಿ ಏರ್ಪಡಿಸಿತ್ತು. “ಮಹಾಭಾರತ ….” ಪುಸ್ತಕ ಬರೆಯಲು ಕಾರಣವಾದ ಅಂಶಗಳ ಕುರಿತು ದೇವಿ ಅವರು ಮಾತನಾಡುತ್ತಿದ್ದರು. ಇಡೀ ಭಾರತ ಉಪಖಂಡದಲ್ಲಿಯೇ ಮಹಾಭಾರತದ ಸಾರ್ವಕಾಲಿಕ ಸಾರ್ವತ್ರಿಕ ಜನಪ್ರಿಯತೆಗೆ ಕಾರಣಗಳೇನು? ಶುದ್ಧ ಇತಿಹಾಸವೂ ಅಲ್ಲದೆ, ಶುದ್ಧ ಪುರಾಣವೂ ಅಲ್ಲದೆ, ಆದರೆ ಇತಿಹಾಸವೆಂದು ಹೆಚ್ಚಿನವರು ನಂಬುವ ಈ ಅದ್ಭುತ ಮಹಾಕಾವ್ಯದಲ್ಲಿ ಇದನ್ನು ಸಾಧಿಸಲು ಅದರ ಕೃತಿಕಾರ ವ್ಯಾಸ ಬಳಸಿದ ವಿಧಾನವೇನು? – ಈ ಕುರಿತು ಕುತೂಹಲವೇ ಈ ಪುಸ್ತಕ ಬರೆಯಲು ಪ್ರಮುಖ ಕಾರಣವೆಂದು ದೇವಿ ಅವರು ಹೇಳಿದರು.

ಇದಲ್ಲದೆ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯವು 2016ರಲ್ಲಿ ಭಾರತದ ನಾಗರಿಕತೆ, ಸಂಸ್ಕೃತಿಗಳ ಮೂಲ ಮತ್ತು 12 ಸಾವಿರ ವರ್ಷಗಳ ಇತಿಹಾಸವನ್ನು  ‘ಪುನರ್ರಚಿಸಲು’ ಒಂದು ಸಮಿತಿಯನ್ನು ನೇಮಿಸಿದ್ದು ಸಹ ಕಾರಣವಾಯಿತು. ಈ ಸಮಿತಿಯ ಕೆಲವು ಇತಿಹಾಸಕಾರರು ಈಗಾಗಲೇ ಹರಪ್ಪಾ ನಾಗರೀಕತೆಯ ಭಾಷೆ ಸಂಸ್ಕೃತವೆಂದು ಹೇಳುತ್ತಿದ್ದಾರೆ.  ಇದನ್ನು ಇನ್ನಷ್ಟು ಹಿಂದಕ್ಕೆ ಒಯ್ಯಲು ಪ್ರಯತ್ನ ನಡೆದಿದೆಯೆಂಬುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಮಹಾಭಾರತ ಕಟ್ಟಿಕೊಡುವ ‘ಇತಿಹಾಸ’ ಭಾರತದ ಅದುವರೆಗಿನ ನಾಗರಿಕತೆ, ಸಂಸ್ಕೃತಿಗಳ ಕುರಿತು ಏನು ಹೇಳುತ್ತದೆ ಎಂದು ಚರ್ಚಿಸುವ ತುರ್ತು ಅಗತ್ಯಕ್ಕೆ ನನ್ನ ಪಾಲಿನ ಕೊಡುಗೆ ಕೊಡಬೇಕು ಎಂಬ ಹಂಬಲ ಸಹ ಈ ಪುಸ್ತಕ ಬರೆಯಲು ಕಾರಣವಾಯಿತೆಂದು ಪ್ರೊ.ದೇವಿ ಅವರು ಹೇಳಿದರು.

‘ಬಹುತ್ವ ಎತ್ತಿ ಹಿಡಿಯುವ ಮಹಾಕಾವ್ಯ’

ಮೊದಲಿನ ಅವತರಣಿಕೆ ‘ಭಾರತ’ ಮತ್ತು ‘ಮಹಾಭಾರತ’ ಗಳ ನಡುವಿನ ಅವಧಿಯು (ಕ್ರಿ.ಪೂ. 1400ರಿಂದ ಕ್ರಿ.ಪೂ 800) ಸನಾತನ ವೈದಿಕ ಮತಕ್ಕೆ ಎರಡು ದೊಡ್ಡ ಸವಾಲುಗಳು ಎದುರಾದ ಅವಧಿ.  ಒಂದು ಕಡೆ ಬುದ್ಧನ ಮತ ಪಾಲಿ ಭಾಷೆಯಲ್ಲಿ ದೇವರು, ಜ್ಞಾನ, ಸಾಮಾಜಿಕ ನೈತಿಕತೆ ಗಳ ಕುರಿತು ಸವಾಲೊಡ್ಡಿತ್ತು. ಇನ್ನೊಂದು ಕಡೆ ಮಹಾವೀರನ ಜೈನಮತ ಪ್ರಾಕೃತ ಭಾಷೆಯಲ್ಲಿ ‘ಅಪರಿಗ್ರಹ’ದ ಸವಾಲೆಸೆದಿತ್ತು. ‘ನಾನು ನನ್ನ ವೈರಿಯನ್ನು ಸೋಲಿಸಿ ಸಾವಿರ ಹಸುಗಳನ್ನು ಹೊಡೆದುಕೊಂಡು ಬಂದಿದ್ದೇನೆ, ನಾಳೆ ಇನ್ನೊಬ್ಬ ವೈರಿಯನ್ನು ಸೋಲಿಸಿ ಹತ್ತು ಸಾವಿರ ಹಸುಗಳನ್ನು ಹೊಡೆದುಕೊಂಡು ಬರಲು ಶಕ್ತಿ ಕೊಡು’ ಎಂದು ಪ್ರಾರ್ಥನೆ ಮಾಡುವ ಸನ್ನಿವೇಶದಲ್ಲಿ ‘ಅಪರಿಗ್ರಹ’ದ ಸವಾಲನ್ನು ಅರ್ಥ ಮಾಡಿಕೊಳ್ಳಬೇಕು.  ಆದರೆ ಈ ಅವಧಿಯು ಸಂಸ್ಕೃತದ ಲಿಖಿತ ಸಾಹಿತ್ಯ ಇತಿಹಾಸಗಳಲ್ಲಿ ಒಂದು ಬಗೆಯ ‘ಮೌನದ ಕಾಲ’ವಾಗಿದೆ. ಅತ್ಯಾಚಾರಕ್ಕೆ  ಬಲಿಯಾದವಳಿಗೆ “ಶಾಂತತಾ, ಕೋರ್ಟ್ ಚಾಲೂ ಆಹೆ” (ಮೌನವಾಗಿರು! ಕೋರ್ಟು ನಡೆಯುತ್ತಿದೆ) ಎಂಬ ಹೆಸರಿನ ಮರಾಠಿ ನಾಟಕದಲ್ಲಿ ಹೇಳುವಂತಹ ‘ಮೌನ’ವಿದು.

ಮಹಾಭಾರತ ಈ ಅವಧಿಯ ಮತ್ತು ಇನ್ನೂ ಹಿಂದಿನ ದೀರ್ಘ ಅವಧಿಯ ‘ಇತಿಹಾಸ’ವನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡುತ್ತದೆ. ಹೆಚ್ಚಾಗಿ ಪುರಾಣವಾದ ಅಲ್ಪಸ್ವಲ್ಪ ಇತಿಹಾಸವಿರುವ ಗತವನ್ನು ನೆನಪಿಟ್ಟುಕೊಳ್ಳುವ, ಶಾಶ್ವತ ಮತ್ತು ಬದಲಾವಣೆಯ ಆಯಾಮಗಳನ್ನು ಒಳಗೊಳ್ಳುವ ಕಾಲಚಕ್ರ ವಿಧಾನವನ್ನು ಅಂಗೀಕರಿಸುತ್ತದೆ.  ಒಂದು ‘ಯುಗ’ ಮುಗಿದು ಇನ್ನೊಂದು ಯುಗ ಆರಂಭವಾಗುವಾಗ ಹೆಚ್ಚಾಗಿ ಮಹಾಕಾವ್ಯ ಉದ್ಭವಿಸುತ್ತದೆ. ಇರಾವತಿ ಕರ್ವೆ ಅವರು ‘ಯುಗಾಂತರ’ ಕೃತಿಯಲ್ಲಿ ಹೇಳುವಂತೆ ಭಾರತದಲ್ಲಿ ‘ಪಶುಪಾಲನಾ’ ಯುಗ ಮುಗಿದು, ಪ್ರಭುತ್ವ ಸಾಮ್ರಾಜ್ಯ ಗಳಿರುವ ಯುಗ ಆರಂಭವಾಗುವ ಸ್ಥಿತ್ಯಂತರದಲ್ಲಿ ಮಹಾಭಾರತ ಬರುತ್ತದೆ. ಮಹಾಭಾರತ ಒಂದು (ಬಹುತ್ವ ಎತ್ತಿ ಹಿಡಿಯುವ) ಫೆಡೆರಲ್ (ಒಕ್ಕೂಟ) ಮಹಾಕಾವ್ಯ, ರಾಮಾಯಣ ದಂತೆ ಈಗಿನ ಆಳುವವರಿಗೆ ಪ್ರಿಯವಾದ ‘ಯುನಿಟರಿ’ (ಬಹುತ್ವ ನಿರಾಕರಿಸುವ ಏಕತ್ವದ) ಮಹಾಕಾವ್ಯವಲ್ಲ. ಇಂದು ಆಳುವವರ ಏಕತ್ವದ ರಾಜಕೀಯ ಎದುರಿಸಲು ಬಹುತ್ವವನ್ನು ಎತ್ತಿ ಹಿಡಿಯುವ ಮಹಾಭಾರತವನ್ನು ರಾಜಕೀಯವಾಗಿ ಬಳಸಬಹುದು ಎಂದು ಪ್ರೊ.ದೇವಿ ಅವರು ಪುಸ್ತಕದ ಆಶಯವನ್ನು ಮಂಡಿಸಿದರು.

ಸಮಾರಂಭದ ಮೊದಲಿಗೆ ಪ್ರಸಿದ್ಧ ವಿಮರ್ಶಕ, ಲೇಖಕ, ಚಿಂತಕ ಪ್ರೊ.ಸಿ.ಎನ್.ರಾಮಚಂದ್ರನ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಮೊದಲಿಗೆ ಅವರು ಮೂಲ ಲೇಖಕ ಪ್ರೊ.ದೇವಿ ಅವರನ್ನು ಪರಿಚಯಿಸಿದರು. ಡಾ.ಶಾಂತಿನಾಥ ದೇಸಾಯಿ ಅವರ ‘ಪೆಟ್ ಸ್ಟೂಡೆಂಟ್’ ಆಗಿದ್ದ ಗಣೇಶ ದೇವಿ ಅವರ ಜೀವನದ ಮೂರು ಪ್ರಮುಖ ಅವಧಿಗಳನ್ನು ಪರಿಚಯಿಸಿದರು. ಮೊದಲ ಕೃತಿ ‘ಆಫ್ಟರ್ ಅಮ್ನೇಶಿಯಾ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಸಾಹಿತ್ಯ-ಸಂಸ್ಕೃತಿ ವಿಮರ್ಶೆಯ ಅಕಾಡೆಮಿಕ್ ಜೀವನ ದೇವಿ ಅವರ ಜೀವನದ ಮೊದಲ ಅವಧಿ. ಎರಡನೆಯ ಅವಧಿಯಲ್ಲಿ ಅವರು ತಮ್ಮ ಉದ್ಯೋಗ ತ್ಯಾಗ ಮಾಡಿ ಆದಿವಾಸಿ ಭಾಷೆ, ಬದುಕು, ಸಂಸ್ಕೃತಿಗಳ ಅಧ್ಯಯನಕ್ಕೆ ತಮ್ಮನ್ನು ಮುಡಿಪಾಗಿಟ್ಟರು. ಮೂರನೆಯ ಅವಧಿಯಲ್ಲಿ ‘ದಕ್ಷಿಣಾಯಣ’ ಸ್ಥಾಪಿಸಿ ಹೆಚ್ಚಿನ ‘ಆಕ್ಟಿವಿಸ್ಟ್’ ಪಾತ್ರ ವಹಿಸುತ್ತಿದ್ದಾರೆ.

‘ಪ್ರಧಾನ ರಸ ವೀರರಸವಲ್ಲ, ಶಾಂತರಸ’

ಪುಸ್ತಕದ ಕುರಿತು ಮಾತನಾಡುತ್ತಾ ಇದು ಮಹಾಭಾರತದ ಮರುಕಥನವಲ್ಲ, ಮತ್ತೊಂದು ಮಹಾಭಾರತವಲ್ಲ, ಮಹಾಭಾರತದ ವ್ಯಾಖ್ಯಾನದಲ್ಲಿ ಹೊಸ ರೀತಿಯ ಚಿಂತನೆ ತಾತ್ವಿಕತೆಯನ್ನು ಒಳಗೊಂಡಂದ್ದು ಎಂದರು. ಮಹಾಕಾವ್ಯಗಳಲ್ಲೇ ಹೆಚ್ಚಿನ ವ್ಯಾಪ್ತಿಯ, ಭವ್ಯವಾದ,  ವಿಶಿಷ್ಟವಾದ ಮಹಾಭಾರತ ವನ್ನು ವ್ಯಾಖ್ಯಾನಿಸಲು, ಕುವೆಂಪು ಅವರು ಮೊದಲು ಬಳಕೆಗೆ ತಂದ ‘ಭೂಮಕಾವ್ಯ’ವೆಂಬ ಶಬ್ದ ಬಳಸಿದ್ದು ಸೂಕ್ತವಾಗಿದೆಯೆಂದರು. ಮಹಾಭಾರತದ ವಿಕಾಸದ ಮೂರು ಘಟ್ಟಗಳು ಮತ್ತು ಪರಂಪರೆಗಳನ್ನು ವಿವರಿಸಿದರು. ವಿಕಾಸದ ಮೂರು ಘಟ್ಟಗಳೆಂದರೆ – ಜಯ, ಭಾರತ, ಮಹಾಭಾರತ.  ಭಂಡಾರಕರ್ಸ್ ಸಂಸ್ಥೆ ಅಂಗೀಕರಿಸಿದ ವಿಮರ್ಶಾತ್ಮಕ ಆವೃತ್ತಿ ಸೇರಿದಂತೆ ಹಲವು ಲಿಖಿತ ಮಹಾಭಾರತದ ಸಂಸ್ಕೃತ ಆವೃತ್ತಿಗಳು, ಪ್ರಾದೇಶಿಕ ಭಾಷೆಯ ಮಹಾಭಾರತಗಳು, ಆದಿವಾಸಿ ಬುಡಕಟ್ಟು ಜನಸಮುದಾಯಗಳಲ್ಲಿ ಮೌಖಿಕವಾಗಿ (ಸಂಸ್ಕೃತ ಮಹಾಭಾರತವೇ ಇಂತಹ ಹಲವು ಆಗ ಪ್ರಚಲಿತವಿದ್ದ ಕತೆ ಐತಿಹ್ಯ ಗಳ ಸಂಕಲನವೇ ಎಂದು ಹೇಳಲಾಗುತ್ತದೆ) ಪ್ರಚಲಿತವಿರುವವು – ಇವು ಮಹಾಭಾರತದ ಮೂರು ಪರಂಪರೆಗಳು.  ಇವುಗಳಲ್ಲಿ ಕೆಲವು (ಉದಾ: ಪ್ರಾದೇಶಿಕ ಭಾಷೆಗಳವು) ಮರುಕಥನಗಳು, ಕೆಲವು ಸ್ವತಂತ್ರ ಕಥನಗಳು (ಉದಾ: ಮೌಖಿಕ ಪರಂಪರೆಯವು). ಈ ಹಲವು ಮಹಾಭಾರತಗಳಲ್ಲಿ ಹಲವು ಪಾತ್ರಗಳು, ಘಟನೆಗಳಲ್ಲಿ ಸಾಮ್ಯವಿರುತ್ತದೆ. ಆದರೆ ಸಾಕಷ್ಟು ವ್ಯತ್ಯಾಸಗಳೂ (ಉದಾ: ಮೌಖಿಕ ಮಹಾಭಾರತಗಳಲ್ಲಿ ಕುರುಕ್ಷೇತ್ರ ಯುದ್ಧವೇ ಇಲ್ಲ) ಸ್ವತಂತ್ರ ಕಥೆಗಳೂ ಇರುತ್ತವೆ.  ಮಹಾಭಾರತದ ಕುರಿತ ಈ ವಿವರಗಳನ್ನೂ ಕೊಟ್ಟ ನಂತರ ದೇವಿ ಅವರು ಹಲವು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾರೆ. ಇದಕ್ಕೆ ಉತ್ತರಗಳನ್ನು ಕಂಡುಕೊಳ್ಳಲು ಸಾಹಿತ್ಯ ವಿಮರ್ಶೆ, ಇತಿಹಾಸ, ಚರಿತ್ರೆ,, ಭಾಷಾಶಾಸ್ತ್ರ, ತಳಿಶಾಸ್ತ್ರ – ಮುಂತಾದ ಹಲವು ಜ್ಞಾನಶಿಸ್ತುಗಳ ತಿಳಿವಳಿಕೆ, ವಿಧಾನಗಳನ್ನು ಬಳಸುತ್ತಾರೆಂದರು ಪ್ರೊ.ಸಿ.ಎನ್.ಆರ್.

ಮಹಾಭಾರತದಲ್ಲಿ ಯಾರೂ ನಾಯಕರಿಲ್ಲ, ನಾಯಕಿಯರಿಲ್ಲ, ಖಳನಾಯಕರಿಲ್ಲ ಅಥವಾ ಎಲ್ಲರೂ ನಾಯಕರೇ, ನಾಯಕಿಯರೇ.  ಪಾಂಡವರು, ಕೌರವರಲ್ಲದೆ ಭೀಷ್ಮ, ಯಮ, ಅಶ್ವತ್ಥಾಮ, ಕೃಷ್ಣ, ದ್ರೌಪದಿ, ಪ್ರಮೀಳಾ, ಸುಭದ್ರೆ ಹೀಗೆ ಅನೇಕ ನಾಯಕರು ನಾಯಕಿಯರಿದ್ದರೆ.  ಇದರಲ್ಲಿ ಅನೇಕ ಭಾಷೆಗಳು ಇವೆ.  ಇಲ್ಲಿನ ಪಾತ್ರಗಳು ಹಲವು ಕುಲಗಳಿಂದ ಪ್ರದೇಶಗಳಿಂದ ಬಂದವರು. ಒಂದೇ ಕಾಲದವರೂ ಅಲ್ಲ. ಏಳು ತಲೆಮಾರುಗಳಿಗೆ ಸೇರಿದವರು. ಇಲ್ಲಿನ ಹಲವು ಘಟನೆಗಳು ಈಗಿನ ಭಾರತದ ವಿವಿಧ ಪ್ರದೇಶಗಳಲ್ಲಿ ನಡೆಯುತ್ತವೆ.  ಕುರುಕ್ಷೇತ್ರ ಯುದ್ಧ ದೊಡ್ಡ ಭಾಗವಾಗಿದ್ದರೂ, ಮಹಾಭಾರತದ ಪ್ರಧಾನ ರಸ ವೀರರಸವಲ್ಲ ಶಾಂತರಸ.  ಹೀಗೆ ಇಲ್ಲಿನ ಪಾತ್ರಗಳು ಘಟನೆಗಳು ಸಂವಾದಗಳಲ್ಲಿ  ಹಲವು ಕುಲಗಳು,  ಭಾಷೆಗಳು, ಮತಧರ್ಮಗಳು,  ಪ್ರದೇಶಗಳು,  ಚಿಂತನೆಗಳು, ಮೌಲ್ಯಗಳು ಇವೆ. ಯಾವುದೇ ಒಂದಕ್ಕೆ ಪ್ರಾಧಾನ್ಯವಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮಹಾಭಾರತವು ಬಹುತ್ವವನು ಎತ್ತಿ ಹಿಡಿಯುವ ಗತಕಾಲದ ನೆನಪು.  ಒಂದು ಯುಗದ ವೈಚಾರಿಕತೆ ಅಥವಾ ಯುಗಧರ್ಮ (ಎಪಿಸ್ಟೀಮ್) ಬದಲಾಗಿ ಮತ್ತೊಂದು ವೈಚಾರಿಕತೆ/ಯುಗಧರ್ಮ ಮತ್ತು ಹೊಸ ನಾಗರಿಕತೆಯ ಆದಿಕಾಲದಲ್ಲಿ ಮಹಾಕಾವ್ಯ ಬರುತ್ತದೆ. ಮಹಾಭಾರತ ಅದರ ಹಿಂದಿನ ಯುಗದ ಚಿಂತನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ರೀತಿಯನ್ನು ದಾಖಲಿಸುತ್ತದೆ.  ಏನನ್ನು ಯಾತಕ್ಕೆ ನೆನಪಿಸಿಕೊಳ್ಳಬೇಕು ಎಂಬುದನ್ನು ಸಹ ಮಹಾಭಾರತವು ತನ್ನದೇ ಮಾದರಿಯಿಂದ ತೋರಿಸುತ್ತದೆ  ಎಂದು ಪ್ರೊ.ಸಿ.ಎನ್.ಆರ್  ಪುಸ್ತಕದ ಸಾರವನ್ನು ನಿರೂಪಿಸಿದರು.

ಮಹಾಭಾರತವನ್ನು ನಮ್ಮ ಕಾಲಕ್ಕೆ ಭಾವಿಸುವ ಪುಸ್ತಕ

ಅನುವಾದಕ ಡಾ.ಎಂ.ಜಿ.ಹೆಗಡೆ ಅವರು ಈ ಅನುವಾದದ ಪ್ರಕ್ರಿಯೆಯೇ, ಈ ಪುಸ್ತಕದಲ್ಲಿ ಬರುವ ಮಹಾಭಾರತದ ವಿವಿಧ ವ್ಯಾಖ್ಯಾನಗಳು, ಸಂಬಂಧಪಟ್ಟ ಆಕರಗಳ ಅದರ ಅನುವಾದಗಳ ಓದು ಮರು-ಓದುಗಳನ್ನು ನೆನಪಿಸುವ ಮೂಲಕ, ನನಗೆ ಸಂತೋ಼ಷ ಕೊಟ್ಟಿದೆಯೆಂದರು. ಈ ಪುಸ್ತಕವನ್ನು ಬರೆಯುವಲ್ಲಿ ಮತ್ತು ಎಲ್ಲ ಭಾಷೆಗಳಲ್ಲಿ ಇದರ ಅನುವಾದ ಬೇಗನೇ ಬರಬೇಕು ಎಂದು ದೇವಿ ಅವರ ಓಘದ ಹಿಂದೆ ಇರುವ ತುರ್ತಿನ ಕಾರಣ ಗಮನಿಸಬೇಕು.  ಇಂದು ಮುನ್ನೆಲೆಗೆ ಬರಲು ಹಪಹಪಿಸುತ್ತಿರುವ ಕೆಲವು ಶಕ್ತಿಗಳು ಕ್ಷಾತ್ರ ಹಿಂದೂ ಸಮಾಜದ ಕಲ್ಪನೆಯನ್ನು ಮುಂದೊತ್ತುತ್ತಿರುವುದು, ದೇಶದ ಪ್ರತಿಷ್ಠಿತ ವಿ.ವಿ ಯ ಪದಗ್ರಹಣ ಮಾಡಿದ ಕುಲಪತಿ ‘ಇಂಡಿಯಾ-ಸೆಂಟ್ರಿಕ್ ನರೇಟಿವ್’ ಬಿತ್ತರಿಸಲು ವಿ.ವಿ ಕೆಲಸ ಮಾಡಲಿದೆಯೆಂದು ಹೇಳಿದ್ದು ಕಾರಣವಾಗಿರಬೇಕು. ಈ ಭಾವೋನ್ಮಾದದ ವಾತಾವರಣವನ್ನು ಕಳೆಯಲು ಮತ್ತು ಮಹಾಭಾರತವನ್ನು ನಮ್ಮ ಕಾಲಕ್ಕೆ ಭಾವಿಸುವುದಕ್ಕೆ ಈ ಪುಸ್ತಕ ಅನುವು ಮಾಡಿಕೊಡುತ್ತದೆ ಎಂದು ಡಾ.ಎಂ.ಜಿ.ಹೆಗಡೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮವನ್ನು ಕೆ.ಎಸ್.ವಿಮಲ ಅವರು ನಿರ್ವಹಿಸಿದರು. ವಸಂತರಾಜ ಎನ್.ಕೆ ಅಧ್ಯಕ್ಷತೆ ವಹಿಸಿದ್ದರು. ‘ಜನಶಕ್ತಿ ಮೀಡಿಯಾ’ ಈ ಕಾರ್ಯಕ್ರವನ್ನು ಫೇಸ್ ಬುಕ್ ಲೈವ್ ಆಗಿ ಬಿತ್ತರಿಸಿದ್ದು ಅದು ವೆಬ್ ನಲ್ಲಿ ಲಭ್ಯವಿದೆ.

https://www.facebook.com/690357324363690/videos/681521559699754

ಈ ಕಾರ್ಯಕ್ರಮದ ಮೂರು ಪ್ರಮುಖ ಭಾಷಣಗಳು ಯೂ ಟ್ಯೂಬ್ ನಲ್ಲಿ ಪ್ರತ್ಯೇಕವಾಗಿ ಲಭ್ಯ ಇವೆ.

ಪುಸ್ತಕದ ಆಯ್ದ ಭಾಗಗಳು

ಗತಕಾಲವನ್ನು ಸ್ಮರಿಸಿಕೊಳ್ಳುವ ಅಗತ್ಯ ವಿಧಾನವನ್ನು ಮಹಾಭಾರತವು ರೂಪಿಸಿತು. ತನ್ನ ರಾಷ್ಟ್ರೀಯ ಸ್ಮರಣೆಯನ್ನು ಕಾಪಿಡುವ ಮಾರ್ಗವಾಗಿ ಆ ವಿಧಾನವನ್ನು ಭಾರತವು ಅಂತರಂಗೀಕರಿಸಿಕೊಂಡಿದೆ. ಆ ಅರ್ಥದಲ್ಲಿ ಮಹಾಭಾರತವು ನಮ್ಮ ರಾಷ್ಟ್ರೀಯ ಮಹಾಕಾವ್ಯ. ಅದು ರಾಷ್ಟ್ರದ ಬಗ್ಗೆ ಇರುವ ಕಾವ್ಯವಲ್ಲ; ಬದಲಾಗಿ, ನಾವು ಗತಕಾಲವನ್ನು ನೆನಪಿಟ್ಟುಕೊಳ್ಳುವ ವಿಧಾನದ ಬಗ್ಗೆ ಇರುವ ಕಾವ್ಯ. ಸಮಾನವಾಗಿ ಗ್ರಹಿಸಲ್ಪಟ್ಟ ಗತದ ಮೂಲಕವೇ ಮಹಾಭಾರತವು ನಮ್ಮನ್ನು ಒಂದು ರಾಷ್ಟ್ರವಾಗಿ ಒಂದುಗೂಡಿಸುವುದೇ ಹೊರತು ಸಮಾನವಾಗಿ ಗ್ರಹಿಸಿಕೊಂಡ ಸಾಮೂಹಿಕ ಅಸ್ಮಿತೆಯ ಮೂಲಕವಲ್ಲ. ಈ ವಿಧಾನದಲ್ಲಿ ಗತಕಾಲದ ಕುರಿತು ಆತಂಕವಿಲ್ಲ. ಏಕೆಂದರೆ ಅದು ಹಲವು ಆರಂಭಗಳನ್ನು ಅನುಮತಿಸುತ್ತದೆ.

ಮಹಾಭಾರತ ಮನೋಭಾವವೇ ಎಂತಹುದೆಂದರೆ ಯಾವುದೇ ಬಗೆಯ ಕದನಶೀಲವೂ ಏಕರೂಪಿಯೂ ಆದ ರಾಷ್ಟ್ರವಾಗಿ ಈ ಉಪಖಂಡವನ್ನು ಕಲ್ಪಿಸಿದರೆ ಅದು ಚಳವಳಿ ಹೂಡುವುದು ಶತಃಸಿದ್ಧ. ಏಕೆಂದರೆ ಎಲ್ಲ ಬಗೆಯ ಅಪಾರ ವೈವಿಧ್ಯದಿಂದಲೇ ಅದು ತುಂಬಿಕೊಂಡಿದೆ. ಈ ಭೂಮಕಾವ್ಯವು ನಮ್ಮನ್ನು ಯಾವುದೇ ಕಲ್ಪಿತವಾದ, ಸೀಮಾಬದ್ಧವಾದ ರಾಷ್ಟ್ರವಾಗಿ ಒಂದುಗೂಡಿಸುವುದಿಲ್ಲ. ಅದು ನಮ್ಮನ್ನು ಒಗ್ಗೂಡಿಸುವುದು ಕಾಲಚಕ್ರದಿಂದ ಸಂಕೇತಿಸಲ್ಪಟ್ಟ ಕಾಲದ ಕಲ್ಪನೆಯಿಂದ. ಮಹಾಭಾರತದ ಈ ಅಪ್ರತಿಮ ಸಂಕೇತವು ಪ್ರತಿಯೊಂದನ್ನೂ ಸಂಪೂರ್ಣ ನಮ್ರತೆಯಿಂದ ಒಪ್ಪಿಕೊಳ್ಳುವ ಶ್ರೇಷ್ಠವಾದ ಸ್ವೀಕರಣ ಮನೋಭಾವವನ್ನು ಕಲಿಸುತ್ತದೆ.

– ಪ್ರೊ. ಗಣೇಶ ದೇವಿ

ಸದ್ಯ ಮುನ್ನೆಲೆಗೆ ಬರಲು ಹಪಹಪಿಸುತ್ತಿರುವ ಮತ್ತು ಅಧಿಕೃತಗೊಳ್ಳಲು ಎಲ್ಲಾ ಉಪಕರಣಗಳನ್ನೂ ಬಳಸುತ್ತಿರುವ ರಾಷ್ಟ್ರ, ಚರಿತ್ರೆ ಮತ್ತು ಸಮಾಜದ ಕಲ್ಪನೆಗಳು ರಾಷ್ಟ್ರೀಯ ಕಾವ್ಯವೆಂದು ಮನ್ನಣೆ ಪಡೆದಿರುವ ಮಹಾಭಾರತಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎನ್ನುವುದು ದೇವಿಯವರ ಮಹಾಭಾರತ ವ್ಯಾಖಾನದ ಕೇಂದ್ರ ಗ್ರಹೀತಗಳಲ್ಲೊಂದು. ಅಂದರೆ ವಸಾಹತುಶಾಹಿ ವಿಕಲ್ಪಗಳಿಗೆ ನೇತುಬಿದ್ದಿರುವ ವರ್ತಮಾನದ ರಾಜಕೀಯಕ್ಕೆ ಪರಂಪರೆಯ ವಿವೇಕವನ್ನು ನೆನಪಿಸುವ ಉದ್ದೇಶದ ಕೃತಿಯಿದು. ದೇವಿಯವರು ಮಹಾಭಾರತವನ್ನು ಭಾರತೀಯ ಸಂಸ್ಕೃತಿಯ ಪ್ರತ್ಯಭಿಜ್ಞಾನಕ್ಕೆ ಒದಗುವ ಮಹತ್ವದ ಆಕರಗ್ರಂಥವಾಗಿ ಪರಿಗಣಿಸುತ್ತಾರೆ.

ಮಹಾಭಾರತದ ವ್ಯಾಸನೇ ಆದರೂ ಎರಡೂ ಕೈ ಎತ್ತಿ ಕೂಗಿ ಹೇಳುತ್ತಿದ್ದರೂ ವಿವೇಕದ ಮಾತನ್ನು ಯಾರೂ ಕೇಳುತ್ತಿಲ್ಲ ಎನ್ನಬಹುದು. ಆದರೆ ದೇವಿಯವರು ಮಾತ್ರ ಭವಿಷ್ಯದ ಭಾರತ ವೈರಸ್‌ಗಳಿಂದ ಮುಕ್ತವಾಗುತ್ತದೆ ಎಂಬ ಭರವಸೆಯನ್ನು ಕಳೆದುಕೊಳ್ಳಲಾರರು

-ಡಾ.ಎಂ.ಜಿ.ಹೆಗಡೆ

Donate Janashakthi Media

One thought on “ಹರಪ್ಪಾ ನಾಗರೀಕತೆಯ ಭಾಷೆ ಸಂಸ್ಕೃತ ಎನ್ನುವುದು, ಬಸವಣ್ಣ ಇಂಗ್ಲಿಷ್ ಮಾತನಾಡುತ್ತಿದ್ದರು ಎನ್ನುವಷ್ಟೇ ಹಾಸ್ಯಾಸ್ಪದ : ಪ್ರೊ. ಗಣೇಶ  ದೇವಿ

  1. Excellent report of a very meaningful function. The report compels one to read the original original work. Thank you for a good job.8

Leave a Reply

Your email address will not be published. Required fields are marked *