ನಾ ದಿವಾಕರ
75ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಭಾರತ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮನೆಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿ ಕೇಂದ್ರಸರ್ಕಾರವು ಆಗಸ್ಟ್ 13 ರಿಂದ 15ರವರೆಗೆ “ ಮನೆಮನೆಯ ಮೇಲೆ ತ್ರಿವರ್ಣ ಧ್ವಜ ” ಅಭಿಯಾನವನ್ನು ಹಮ್ಮಿಕೊಂಡಿದೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದು, ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ರೂಪುಗೊಂಡ ಭಾರತ ಮತ್ತು ಭಾರತದ ಸಮಸ್ತ ಜನತೆ ಈ ಸಂದರ್ಭವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಸದಾಶಯದ ಕ್ರಮವಾಗಿದೆ, ಕೇಂದ್ರ ಸರ್ಕಾರದ ಮೂರು ದಿನಗಳ ಅಭಿಯಾನ ಸದಭಿರುಚಿಯ ಕಾರ್ಯಕ್ರಮವೂ ಆಗಿದೆ. ರಾಷ್ಟ್ರಧ್ವಜವನ್ನು ದೇಶಪ್ರೇಮದ ಸಂಕೇತ ಎಂದೇ ಭಾವಿಸಲಾಗಿದ್ದು ಧ್ವಜಾರೋಹಣ ಮತ್ತು ಧ್ವಜವಂದನೆಗೆ ತನ್ನದೇ ಆದ ಚಾರಿತ್ರಿಕ ಮಹತ್ವವೂ ಇದೆ. 75 ವರ್ಷಗಳನ್ನು ಪೂರೈಸುತ್ತಿರುವ ಸ್ವತಂತ್ರ ಭಾರತ ವರ್ತಮಾನದ ಸಂದರ್ಭದಲ್ಲಿ ಈ ಸಾಂಕೇತಿಕ ರಾಷ್ಟ್ರಪ್ರೇಮದೊಂದಿಗೇ ಸ್ವಾತಂತ್ರ್ಯ ಸಂಗ್ರಾಮದ ಸದಾಶಯಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ಮನಗಾಣಬೇಕಿದೆ.
ಮೂಲತಃ ಭಾರತದ ರಾಷ್ಟ್ರಧ್ವಜವನ್ನು ಸಮಸ್ತ ನಾಗರಿಕರೂ ಗೌರವಿಸುವ ನಿಟ್ಟಿನಲ್ಲಿ 1950ರಲ್ಲೇ ಕಾಯ್ದೆಯೊಂದನ್ನು ರೂಪಿಸಲಾಗಿತ್ತು. ಲಾಂಛನ ಮತ್ತು ಹೆಸರುಗಳ (ದುರ್ಬಳಕೆ ಪ್ರತಿಬಂಧಕ) ನಿಯಮ ಕಾಯ್ದೆ 1950 ಮತ್ತು 1971ರಲ್ಲಿ ಜಾರಿಗೊಳಿಸಲಾದ ರಾಷ್ಟ್ರ ಗೌರವದ ಅಪಮಾನ ನಿರ್ಬಂಧಕ ಕಾಯ್ದೆ ಭಾರತದ ರಾಷ್ಟ್ರಧ್ವಜನದ ಬಳಕೆಯ ನಿಯಮಗಳನ್ನು ರೂಪಿಸಿದ್ದವು. ಈ ಕಾಯ್ದೆಗೆ ತಿದ್ದುಪಡಿ ಮಾಡದೆಯೇ 2002ರ ಜನವರಿ 26ರಂದು ನೂತನ ಧ್ವಜ ಸಂಹಿತೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ಈ ಸಂಹಿತೆಯಲ್ಲಿ ರಾಷ್ಟ್ರಧ್ವಜದ ಬಳಕೆ, ಪ್ರದರ್ಶನ ಮತ್ತು ಧ್ವಜಾರೋಹಣದ ನಿಯಮಗಳನ್ನು ವಿಷದೀಕರಿಸಲಾಗಿದೆ. 2002ರ ಸಂಹಿತೆಯ ಅನುಸಾರ ಸಾರ್ವಜನಿಕ ವಲಯದ, ಖಾಸಗಿ ಸಂಸ್ಥೆ ಅಥವಾ ಶೈಕ್ಷಣಿಕ ಸಂಸ್ಥೆಗೆ ಸೇರಿದ ವ್ಯಕ್ತಿ ಎಲ್ಲ ದಿನಗಳಲ್ಲೂ, ಎಲ್ಲ ಸಂದರ್ಭಗಳಲ್ಲೂ ರಾಷ್ಟ್ರಧ್ವಜನವನ್ನು ಹಾರಿಸಲು ಅವಕಾಶವಿದೆ. ಆದರೆ ಧ್ವಜದ ಘನತೆ ಮತ್ತು ಗೌರವವನ್ನು ಕಾಪಾಡುವುದು ಕಡ್ಡಾಯವಾಗಿರುತ್ತದೆ. ಈ ಸಂಹಿತೆಯಲ್ಲಿ ಮೂರು ವಿಭಾಗಗಳಿವೆ. ಮೊದಲನೆಯದಾಗಿ ರಾಷ್ಟ್ರಧ್ವಜದ ಲಕ್ಷಣಗಳನ್ನು ವಿವರಿಸಲಾಗಿದೆ. ಎರಡನೆಯದರಲ್ಲಿ ಧ್ವಜದ ಬಳಕೆ ಮತ್ತು ಆರೋಹಣದ ಬಗ್ಗೆ ನಿಯಮಗಳನ್ನು ನೀಡಲಾಗಿದೆ. ಮೂರನೆಯ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಂಬಂಧಪಟ್ಟ ಸಂಸ್ಥೆಗಳು ಧ್ವಜವನ್ನು ಪ್ರದರ್ಶಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ಸೂಚಿಸಲಾಗಿದೆ. ಈ ಸಂಹಿತೆಯ ಕೆಲವು ಅಂಶಗಳನ್ನು ಹಾಲಿ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.
ʼಮನೆಮನೆಯ ಮೇಲೆ ತಿರಂಗಾʼ ಅಭಿಯಾನಕ್ಕೆ ಪೂರಕವಾಗಿಯೇ ಕೇಂದ್ರ ಸರ್ಕಾರವು ಧ್ವಜ ಸಂಹಿತೆಯನ್ನೂ ತಿದ್ದುಪಡಿ ಮಾಡಿದ್ದು, ಯಂತ್ರಗಳಿಂದ ತಯಾರಿಸಿದ ಸಿಂಥೆಟಿಕ್ ಧ್ವಜಗಳನ್ನೂ ಬಳಸಲು ಅನುಮತಿ ನೀಡಿದೆ. 2019ರಲ್ಲಿ ಜಾರಿಗೊಳಿಸಲಾದ ನಿಯಮಾನುಸಾರ ಯಂತ್ರಗಳ ಮೂಲಕ ಸಿದ್ಧಪಡಿಸಿದ ಧ್ವಜಗಳನ್ನು ಆಮದು ಮಾಡಿಕೊಳ್ಳುವುದು ನಿಷಿದ್ಧವಾಗಿತ್ತು. ” ಕೈಮಗ್ಗದ ಮೂಲಕ, ಕೈಗಳಿಂದಲೇ ನೂಲುವ ಉಣ್ಣೆಯ, ಹತ್ತಿಯ ಅಥವಾ ರೇಷಿಮೆಯ ಖಾದಿ ಧ್ವಜವನ್ನು ಮಾತ್ರ ಬಳಸಲು ಅವಕಾಶವಿತ್ತು. ನೂತನ ಸಂಹಿತೆಯ ಮೂಲಕ ಕೈ ಮಗ್ಗದ ಮತ್ತು ಯಂತ್ರಗಳಿಂದ, ಸಿಂಥೆಟಿಕ್, ಪಾಲಿಯೆಸ್ಟರ್, ಉಣ್ಣೆ, ರೇಷಿಮೆ ಮತ್ತು ಹತ್ತಿಯನ್ನು ಬಳಸಿ ತಯಾರಿಸಲಾದ ಧ್ವಜಗಳನ್ನು ಸ್ಥಳೀಯವಾಗಿ ತಯಾರಿಸಿ ಅಥವಾ ಆಮದು ಮಾಡಿಕೊಂಡು ಬಳಸಲು ಅವಕಾಶ ನೀಡಲಾಗಿದೆ. 2002ರ ಧ್ವಜಸಂಹಿತೆಯ ಅನುಸಾರ ರಾಷ್ಟ್ರಧ್ವಜವನ್ನು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮಾತ್ರವೇ ಹಾರಿಸಲು ಅವಕಾಶವಿತ್ತು. ಕೇಂದ್ರ ಸರ್ಕಾರ ಈ ನಿಯಮವನ್ನು ತಿದ್ದುಪಡಿ ಮಾಡಿ, ದಿನವಿಡೀ ಹಾರಿಸುವ ಅವಕಾಶವನ್ನು ನೀಡಿದೆ.
ಕೇಂದ್ರ ಸರ್ಕಾರದ ಅಭಿಯಾನವನ್ನು ಸಮಸ್ತ ನಾಗರಿಕರೂ ಮುಕ್ತಕಂಠದಿಂದ ಸ್ವಾಗತಿಸಿದ್ದರೂ, ಕೋಟ್ಯಂತರ ಧ್ವಜಗಳು ಮನೆಮನೆಯ ಮೇಲೆ ಹಾರುವ ಒಂದು ಸುಸಂದರ್ಭವು, ಮುಳುಗುತ್ತಿರುವ ಪಾರಂಪರಿಕ ಖಾದಿ ಉದ್ಯಮಕ್ಕೆ ಮರುಜೀವ ಕೊಡಬಹುದಿತ್ತು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಖಾದಿ ನೇಯ್ಗೆಯಲ್ಲಿ ತೊಡಗಿರುವ ಅಸಂಖ್ಯಾತ ಉದ್ದಿಮೆಗಳು ಈಗಾಗಲೇ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದರಿಂದ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಗತ್ಯವಾಗಿದ್ದ ಧ್ವಜಗಳನ್ನು ಖಾದಿ ಉದ್ದಿಮೆಯಿಂದಲೇ ತಯಾರಿಸುವಂತಾಗಿದ್ದರೆ, ಲಕ್ಷಾಂತರ ಕುಟುಂಬಗಳಿಗೆ ನೆರವಾಗಬಹುದಿತ್ತು. ಡಿಸೆಂಬರ್ 2021ರಲ್ಲೇ ಜಾರಿಗೊಳಿಸಿದ ತಿದ್ದುಪಡಿಯಲ್ಲಿ ಯಂತ್ರದಿಂದ ತಯಾರಿಸಿದ, ಪಾಲಿಯೆಸ್ಟರ್ ಧ್ವಜಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಖಾದಿ ಧ್ವಜಗಳಿಗೆ ಬೇಡಿಕೆಯೂ ಕುಸಿಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆಯೇ ಪ್ರತಿವರ್ಷ ಮೂರು ನಾಲ್ಕು ಕೋಟಿ ಧ್ವಜಗಳನ್ನು ತಯಾರಿಸುತ್ತಿದ್ದ ಈ ಉದ್ದಿಮೆ ಇಂದು ಬಡಪಾಯಿಯಾಗಿದ್ದು, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಖಾದಿ ಉದ್ಯಮಕ್ಕೆ ಮತ್ತು ಕೈಮಗ್ಗ ಹಾಗೂ ಗ್ರಾಮೀಣ ಉದ್ಯೋಗವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ನಷ್ಟ ಉಂಟಾಗುತ್ತದೆ ಎಂಬ ಆಕ್ಷೇಪಗಳ ನಡುವೆಯೇ, ನವ ನವೀನ ತ್ರಿವರ್ಣ ಧ್ವಜಗಳು ದೇಶಾದ್ಯಂತ ಮನೆಮನೆಗಳ ಮೇಲೆ ಹಾರಲಿವೆ.
ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಸ್ಥಳೀಯ ಸ್ವದೇಶಿ ಉದ್ದಿಮೆಗಳನ್ನು ಉತ್ತೇಜಿಸುವ ಮೂಲ ಆರ್ಥಿಕ ನೀತಿಯನ್ನು ಪ್ರತಿಪಾದಿಸಿಕೊಂಡೇ ಬಂದಿರುವ ಕೇಂದ್ರ ಸರ್ಕಾರವು, ಈ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ, ಸ್ಥಳೀಯ ಖಾದಿ ಮತ್ತು ಗ್ರಾಮೀಣ ಉದ್ದಿಮೆಗಳಿಗೆ ನೆರವಾಗಲು ಯೋಚಿಸಬಹುದಿತ್ತು. ಇದೇ ವೇಳೆ ಅನೇಕ ಮಹಿಳಾ ಸಂಘಗಳು, ಗುಂಪುಗಳಿಗೆ ಧ್ವಜ ತಯಾರಿಕೆ ಮತ್ತು ವಿತರಣೆಯ ಜವಾಬ್ದಾರಿಯನ್ನು ನೀಡಿರುವುದರಿಂದ, ಖಾದಿ ಉದ್ಯೋಗಕ್ಕೆ ಅಗಾಧ ಪೆಟ್ಟು ಬಿದ್ದರೂ, ಕೊಂಚ ಮಟ್ಟಿಗೆ ಸ್ಥಳೀಯ ಗ್ರಾಮೀಣ ಉದ್ದಿಮೆಗಳಿಗೆ ನೆರವಾಗಬಹುದು. ಮುಳುಗುತ್ತಿರುವ ಖಾದಿ ಗ್ರಾಮೋದ್ಯೋಗ ವಲಯವನ್ನು ಪುನರುಜ್ಜೀವನಗೊಳಿಸಲು ಈ ಅವಕಾಶವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಬಹುದಿತ್ತು. ಆದರೆ ಸಿಂಥೆಟಿಕ್ ಬಾವುಟಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಇದು ಸ್ವದೇಶಿ ನೀತಿಗೆ ವ್ಯತಿರಿಕ್ತವಾಗಿದೆ. ಸಿಂಥೆಟಿಕ್ ಬಾವುಟದ ಬಳಕೆ ಮತ್ತು ಬಾವುಟವನ್ನು ಚೀನಾದಿಂದ ಆಮದು ಮಾಡಿಕೊಳ್ಳುವ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಲವು ಸಂಘಟನೆಗಳು ಧ್ವಜಸತ್ಯಾಗ್ರಹ ನಡೆಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತಿರುವುದು ನ್ಯಾಯಯುತವಾಗಿಯೇ ಇದೆ.
ಆಗಸ್ಟ್ 13ರಿಂದ ಮೂರು ದಿನಗಳ ಕಾಲ ಭಾರತದ ಪ್ರತಿಯೊಂದು ಮನೆಯೂ ಧ್ವಜದೊಂದಿಗೆ ಕಂಗೊಳಿಸುತ್ತದೆ. ಇದು ಭಾರತೀಯತೆಯನ್ನು ಮತ್ತು ದೇಶಾಭಿಮಾನವನ್ನು ವ್ಯಕ್ತಪಡಿಸುವ ಸಂಕೇತವಾಗಿ ಮಾತ್ರವೇ ಅಲ್ಲದೆ, ಪ್ರತಿಯೊಬ್ಬ ಪ್ರಜೆಯೂ ತನ್ನ ನಾಡಿನೊಡನೆ ಗುರುತಿಸಿಕೊಳ್ಳುವ ಒಂದು ಮಾರ್ಗವಾಗಿ ಕಾಣುತ್ತದೆ. ಆದರೆ ಮನೆಯ ಮೇಲೆ, ನಿಸರ್ಗದ ನಿಯಮದಂತೆ ಪಟಪಟಿಸುವ ತ್ರಿವರ್ಣ ಧ್ವಜದ ಹಿಂದಿರುವ ಆಶಯಗಳು, ಉನ್ನತ ಧ್ಯೇಯಾದರ್ಶಗಳು ಮನೆಯೊಳಗೆ ಸಂಭ್ರಮಿಸುವ ಪ್ರತಿಯೊಬ್ಬ ಪ್ರಜೆಯ ಎದೆಯಾಳದಲ್ಲೂ ಬೇರೂರಿವೆಯೇ ಎಂಬ ಪ್ರಶ್ನೆಗೆ, ಪ್ರತಿಯೊಬ್ಬ ಪ್ರಜೆಯೂ ಉತ್ತರ ಕಂಡುಕೊಳ್ಳಬೇಕಿದೆ. ಈ ಧ್ವಜವನ್ನು ತಮ್ಮ ಮನೆಯ ಮೇಲೆ ಹಾರಿಸುವ ಪ್ರತಿಯೊಬ್ಬ ವ್ಯಕ್ತಿಯ ಮನದಾಳದಲ್ಲೂ ಈ ಧ್ಯೇಯಗಳು ಇದ್ದಾಗ ಮಾತ್ರವೇ ಈ ಅಭಿಯಾನವೂ ಸಾರ್ಥಕತೆ ಪಡೆದುಕೊಳ್ಳುತ್ತದೆ. ಭಾರತದ ಧ್ವಜದಲ್ಲಿರುವ ತ್ಯಾಗ, ಬಲಿದಾನ, ಶೌರ್ಯ, ಆತ್ಯಸ್ಥೈರ್ಯ, ಶಾಂತಿ, ಸೌಹಾರ್ದತೆ, ಮನುಜ ಸಂವೇದನೆ, ಸಮನ್ವಯತೆ, ಪ್ರಗತಿ, ಅಭ್ಯುದಯ ಮತ್ತು ಬಹುಸಂಸ್ಕೃತಿಯ ಆಶಯಗಳು ಇವೆಲ್ಲವೂ ಸಾಂಕೇತಿಕವಾಗಿಯಾದರೂ ಜನಮಾನಸದಲ್ಲಿ, ಆಶಯಗಳ ರೂಪದಲ್ಲಿ, ಬೇರೂರಬೇಕಿದೆ.
ಸಾವಿರಾರು ಸ್ವಾತಂತ್ರ್ಯ ಸಂಗ್ರಾಮಿಗಳ ತ್ಯಾಗ ಬಲಿದಾನಗಳಿಂದ, ಎರಡು ಶತಮಾನಗಳ ದಾಸ್ಯದ ಸಂಕೋಲೆಗಳನ್ನು ಕಳಚಿ, ವಿಮೋಚನೆ ಪಡೆದ ಭಾರತ ಇಂದು ತನ್ನ 75 ವಸಂತಗಳನ್ನು ಪೂರೈಸುತ್ತಿದ್ದು, ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ಸಂದರ್ಭವನ್ನು ಸ್ಮರಿಸುವಾಗ, ಸವೆದ ಹಾದಿಯನ್ನು, ಇಟ್ಟ ಹೆಜ್ಜೆಗಳನ್ನು, ಎದುರಿಸಿದ ಕವಲುಹಾದಿಗಳನ್ನೂ, ನಿವಾರಿಸಿದ ಅಡೆತಡೆಗಳನ್ನೂ ಸ್ಮರಿಸುವುದು ಮುಖ್ಯವಾಗುತ್ತದೆ. ನೆರೆರಾಷ್ಟ್ರ ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೆ ಬರುವುದಿಲ್ಲ, ಭಾರತ ಇಂದು ವಿಶ್ವದ ಪ್ರಗತಿಶೀಲ ರಾಷ್ಟ್ರಗಳ ಮುಂಚೂಣಿಯಲ್ಲಿದೆ ಎಂದು ಹೆಮ್ಮೆಯಿಂದ ಹೇಳುವುದೇ ಆದರೆ, ಅದಕ್ಕೆ ಕಾರಣ ಸ್ವಾತಂತ್ರ್ಯಾನಂತರದಲ್ಲಿ ಆರು ದಶಕಗಳ ಕಾಲ ಅನುಸರಿಸಲಾದ ಆರ್ಥಿಕ ನೀತಿಗಳೇ ಎನ್ನುವುದನ್ನು ಗಮನಿಸಬೇಕಿದೆ. ಹಾಗೆಯೇ ಆ ಹೆಜ್ಜೆ ಗುರುತುಗಳನ್ನು ಕಳೆದ ಆರು ದಶಕಗಳಲ್ಲಿ ದೇಶದ ದುಡಿಯುವ ವರ್ಗಗಳ ಬೆವರಿನಲ್ಲಿ ಕಾಣಬೇಕಾಗುತ್ತದೆ. ಈ ಶ್ರಮಜೀವಿಗಳ ಬೆವರಿನ ಶ್ರಮವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ದೇಶದ ಸಂವಿಧಾನ ನೀಡಿರುವ ಒಂದು ಸೌಹಾರ್ದಯುತ ಸಮನ್ವಯದ ಬುನಾದಿಯನ್ನೂ ಸ್ಮರಿಸಬೇಕಾಗುತ್ತದೆ.
ಈ ಅಭಿಯಾನವ ಸದಾಶಯ-ಸದುದ್ದೇಶಗಳು ಜನರಲ್ಲಿ ಐಕ್ಯತೆ ಮತ್ತು ಐಕಮತ್ಯದ ಭಾವನೆಯನ್ನು ಪ್ರಾಮಾಣಿಕವಾಗಿ ಉದ್ದೀಪನಗೊಳಿಸುವುದೇ ಆಗಿದೆ. ಹಾಗಾಗಿ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಕಾಣುವುದೇ ಅಲ್ಲದೆ, ವಾಣಿಜ್ಯಾಸಕ್ತಿಯಾಗಲೀ, ರಾಜಕೀಯ ಹಿತಾಸಕ್ತಿಗಳಾಗಲೀ ಮುನ್ನೆಲೆಗೆ ಬರದಂತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಮನೆಮನೆಗೆ ಧ್ವಜವನ್ನು ಹಂಚುವ ಸಂದರ್ಭದಲ್ಲಿ ಧ್ವಜದ ತಯಾರಿಕೆಗೆ ತಗಲುವ ವೆಚ್ಚವನ್ನು ಸರಿದೂಗಿಸಲು ಹಣ ಸಂಗ್ರಹ ಮಾಡದಂತೆ ಸರ್ಕಾರಗಳು ನಿಯಮ ಜಾರಿಗೊಳಿಸಬೇಕಿದೆ. ಸರ್ಕಾರದ ವತಿಯಿಂದ, ಸಂಘಸಂಸ್ಥೆಗಳಿಂದ ತ್ರಿವರ್ಣ ಧ್ವಜವನ್ನು ಪ್ರತಿಮನೆಗೂ ಉಚಿತವಾಗಿ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕಿದೆ. ತ್ರಿವರ್ಣ ಧ್ವಜ ಮಾರಾಟದ ವಸ್ತುವಾಗುವ ಬದಲು, ಐಕ್ಯತೆಯ ಸದ್ಭಾವನೆಯನ್ನು ಹಂಚಿಕೊಳ್ಳುವ ಒಂದು ಸಾಧನವಾದರೆ, ಅಭಿಯಾನವೂ ಸಾರ್ಥಕವಾಗುತ್ತದೆ.
ತ್ರಿವರ್ಣ ಧ್ವಜವು ಸಾಂಕೇತಿಕವಾಗಿ ಪ್ರತಿನಿಧಿಸುವ ಧ್ಯೇಯಗಳ ಹಿಂದೆ ಭಾರತದ ಸಂವಿಧಾನವು ಪ್ರತಿಪಾದಿಸುವ ಉದಾತ್ತ ಚಿಂತನೆಗಳೂ ಮುಖ್ಯವಾಗುತ್ತದೆ. ಬಹುಸಂಸ್ಕೃತಿಯ ಭಾರತದಲ್ಲಿನ ಬಹು ಸಾಂಸ್ಕೃತಿಕ ವೈವಿಧ್ಯತೆಗಳನ್ನು, ನೂರಾರು ಜಾತಿಗಳನ್ನು, ಸಾವಿರಾರು ಭಾಷೆಗಳನ್ನು, ಹತ್ತಾರು ಮತಧರ್ಮಗಳನ್ನು ಸಮನ್ವಯದ ಹಾದಿಯಲ್ಲಿ ಕೊಂಡೊಯ್ಯುವ ಭಾರತದ ಸಂವಿಧಾನವನ್ನು ರಕ್ಷಿಸಲು ಪಣ ತೊಡುವುದರೊಂದಿಗೇ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕಿದೆ. ಧ್ವಜದ ಮಧ್ಯಭಾಗದಲ್ಲಿರುವ ಅಶೋಕ ಚಕ್ರವು ಮೂಲತಃ ಇದೇ ಉದಾತ್ತ ಧ್ಯೇಯಗಳನ್ನೇ ಪ್ರತಿನಿಧಿಸುತ್ತದೆ. ಹಾಗಾಗಿ ರಾಷ್ಟ್ರಧ್ವಜದ ಹಿಂದಿನ ಧ್ಯೇಯೋದ್ದೇಶಗಳೊಂದಿಗೆ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ ಉದಾತ್ತ ಧ್ಯೇಯಗಳನ್ನೂ ಜನಸಾಮಾನ್ಯರಲ್ಲಿ ಬಿತ್ತಲು ಪ್ರತಿಯೊಂದು ಧ್ವಜದ ಜೊತೆಯಲ್ಲಿ ಸಂವಿಧಾನದ ಪೀಠಿಕೆಯ ಮುದ್ರಿತ ಪ್ರತಿಯನ್ನು ಹಂಚುವುದರ ಮೂಲಕ, ಭಾರತದ ಪ್ರತಿಯೊಬ್ಬ ಪ್ರಜೆಯಲ್ಲೂ ಸಾಂವಿಧಾನಿಕ ಶ್ರದ್ಧೆಯನ್ನು ಮೂಡಿಸಲು ನೆರವಾಗಬಹುದು. ರಾಷ್ಟ್ರಧ್ವಜ ನಮ್ಮ ಐಕ್ಯತೆಯ ಸಂಕೇತವಾದಂತೆಯೇ ಈ ದೇಶದ ಸಂವಿಧಾನ ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತೆಯ ಬುನಾದಿಯೂ ಆಗಿದೆ. ಈ ಉನ್ನತಾದರ್ಶದ ಧ್ಯೇಯಗಳು ಮನಮನದಲ್ಲಿದ್ದರೆ, ಮನೆಮನೆಯ ಮೇಲಿನ ತ್ರಿವರ್ಣ ಧ್ವಜ ಅರ್ಥಪೂರ್ಣವಾಗಿ ಪಟಪಟಿಸುತ್ತದೆ.
ಮನೆಮನೆಯ ಮೇಲೆ ರಾಷ್ಟ್ರಧ್ವಜ ಹಾರಲಿ-ಮನಮನದಲಿ ಸಂವಿಧಾನ ಉಳಿಯಲಿ ಎಂಬ ಘೋಷಣೆಯೊಂದಿಗೆ ಅಮೃತ ಮಹೋತ್ಸವ ಸಾಕಾರಗೊಳ್ಳಲಿ.