ಸಂಗ್ರಹ : ಶಶಿಕುಮಾರ್,ಕೆ
ಸಮ ಸಮಾಜದ ಕನಸೊತ್ತು ಮೊದಲ ಹೆಜ್ಜೆ ಗುರುತು ಹಾಕಿ ಇಂದು ಸಾಮಾಜಿಕ ಸುಧಾರಣೆಗೆ ಕಾರಣ ಮೂಲರಾದ ಛತ್ರಪತಿ ಶಾಹು ಮಹಾರಾಜ್ ರವರ ಜನ್ಮ ಜಯಂತಿಯ ಶುಭಾಶಯಗಳು.
ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.
ಇದನ್ನೂ ಓದಿ:ದಮನಿತರ ಎಚ್ಚರದ ಪ್ರಜ್ಞೆ: ಸಾಮಾಜಿಕ ಪರಿವರ್ತನೆಯ ಹರಿಕಾರ ಶಾಹು ಮಹಾರಾಜರು
ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್. ಸಾಕುತಾಯಿ ಆನಂದಿಬಾಯಿ. ತಾತ ಕಾಗಲ್ ಗ್ರಾಮದ ಪ್ರಸಿದ್ದ ವ್ಯಕ್ತಿ ಯಶವಂತರಾವ್ ಘಾಟ್ಗೆ. ಪತ್ನಿ ಲಕ್ಷೀಬಾಯಿ. ಮಕ್ಕಳು ರಾಧಾಬಾಯಿ, ೩ನೇ ರಾಜಾರಾಮ್, ಶ್ರೀಮಾನ್ ಮಹಾರಾಜಕುಮಾರ್ ಶಿವಾಜಿ ಮತ್ತು ರಾಜಕುಮಾರಿ ಅವುಬಾಯಿ. ಇವರು ವಿದ್ಯಾಭ್ಯಾಸವನ್ನು ರಾಜಕೋಟೆಯ ರಾಜಕುಮಾರ್ ಕಾಲೇಜಿನಲ್ಲಿ ಮಾಡಿದರು.
ಇವರು ಮೂಲತಃ ಕುಣುಬಿ (ಕುರುಬ) ಸಮುಧಾಯಕ್ಕೆ ಸೇರಿದವರಾಗಿರುತ್ತಾರೆ. ಕೊಲ್ಲಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ.
ಛತ್ರಪತಿ ಶಾಹು ಮಹಾರಾಜ್ರ ಕೊಡುಗೆ
“ಶೂದ್ರರಿಗೆ 50% ಮೀಸಲಾತಿ” ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯೆಂಬ ಯೋಜನೆಯನ್ನು ಕಂಡುಹಿಡಿದ ಕೀರ್ತಿ ಶಾಹು ಮಹಾರಾಜರದು.
ಮೀಸಲಾತಿಯ ಜನಕ “ಛತ್ರಪತಿ ಶಾಹು ಮಹಾರಾಜ್”.
ಶಾಹು ಮಹಾರಾಜರು ಅಸ್ಪೃಶ್ಯರಿಗೋಸ್ಕರ 18 ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸುತ್ತಾರೆ.
1908ರಲ್ಲಿ ವಿಧ್ಯಾಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ.
1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳನ್ನು ಸ್ಥಾಪಿಸುತ್ತಾರೆ.
1918 ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು “ಮೂಕ ನಾಯಕ್” ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.
1918 ರಲ್ಲಿ ಮಹಾತ್ಮ ಜೋತಿಬಾಫುಲೆ ರವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು “ಶಾಹು ಸತ್ಯ ಶೋಧಕ ಸಮಾಜ”ವನ್ನು ಸ್ಥಾಪನೆ ಮಾಡುತ್ತಾರೆ
ವಿಧವಾ ಪುನರ್ ವಿವಾಹ ಪದ್ದತಿ ಜಾರಿಗೆ ತಂದರು.
1916 ರಲ್ಲಿ ಅಸ್ಪ್ರಶ್ಯತಾ ಆಚರಣೆ ವಿರುದ್ದ ಕಾನೂನು ಜಾರಿ ಮಾಡಿದರು.
ಶಾಹು ಸತ್ಯಶೋಧಕ ಸಮಾಜವನ್ನು ಪ್ರಾರಂಭ ಮಾಡಿ ಸಾಮಾಜಿಕ ಪರಿವರ್ತನಾ ಚಳುವಳಿಗೆ ನಾಂದಿ ಹಾಡಿದರು.
1918 ರಲ್ಲಿ ಮಹರ್ ವತನ್ ಪದ್ದತಿಯನ್ನು ನಿಷೇಧಿಸಿ, ಅಸ್ಪ್ರಶ್ಯರಿಗೆ ವಂಶಾವಳಿಯಾಗಿ ಬಂದಿದ್ದ ಜೀತ ಪದ್ದತಿಯನ್ನು ನಿಷೇಧಿಸಲಾಯಿತು.
1919ರ ಜುಲೈ 12 ರಂದು ಅಂತರಜಾತಿ ವಿವಾಹ ಕಾಯ್ದೆಯನ್ನು ಜಾರಿಗೆ ತಂದರು.
1920 ಜುಲೈ 12 ರಂದು ದೇವದಾಸಿ ಪದ್ದತಿ ನಿರ್ಮೂಲನಾ ಕಾನೂನು ಜಾರಿಗೆ ಬಂತು.
1920 ಮೇ 3೦ ರಂದು ನಾಗಪುರದಲ್ಲಿ ಡಿಪ್ರೆಸ್ಡ್ ಕಾಸ್ಟ್ ಅಧಿವೇಶನವನ್ನು ತಾವೇ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಧನ ಸಹಾಯವನ್ನು ಮಾಡಿದವರು.
ಶಾಹು ಮಹಾರಾಜ್ ಅವರು ಹುಟ್ಟಿದ ದಿನದ ನೆನಪಿಗಾಗಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೀಗೆ ಬರೆದಿದ್ದಾರೆ…
ದೇಶದಲ್ಲಿಯೇ ಮೊದಲ ಬಾರಿ 1902ರಲ್ಲಿ ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ಜಾತಿಯವರಿಗೆ ಶೇಕಡಾ 50ರಷ್ಟನ್ನು ಮೀಸಲಿಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡವರು ಕೊಲ್ಹಾಪುರದ ಅರಸ ಶಾಹು ಮಹಾರಾಜ್. ಅವರಿಗೆ ಆಗ 28 ವರ್ಷ. ಈ ಮೀಸಲಾತಿ ಜಾರಿಗೆ ಬಂದು 20 ವರ್ಷಗಳ ನಂತರ ಶಾಹು ಮಹಾರಾಜ್ ನಿಧನರಾದರು. ಈ ಅವಧಿಯಲ್ಲಿ ಸರ್ಕಾರಿ ಉದ್ಯೋಗದಲ್ಲಿ ಅಬ್ರಾಹ್ಮಣರ ಪ್ರಮಾಣ ಶೇಕಡಾ 5.63 ರಿಂದ ಶೇಕಡಾ 62.11ಕ್ಕೆ ಮತ್ತು ಖಾಸಗಿ ಕ್ಷೇತ್ರದಲ್ಲಿ ಅಬ್ರಾಹ್ಮಣ ನೌಕರರ ಪ್ರಮಾಣ ಶೇಕಡಾ 13.71ರಿಂದ ಶೇಕಡಾ 71.71ಕ್ಕೆ ಏರಿತ್ತು.
ಉದ್ಯೋಗ ಪಡೆಯಲು ಹಿಂದುಳಿದ ಜಾತಿಗಳಲ್ಲಿ ಅರ್ಹರ ಸಂಖ್ಯೆ ಕಡಿಮೆ ಎಂದು ಗೊತ್ತಾದಾಗ ಶಾಹು ಮಹಾರಾಜ್, ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಕಾಯ್ದೆಯನ್ನು 1917ರಲ್ಲಿ ಜಾರಿಗೆ ತಂದಿದ್ದರು. ಈ ಕಾಯ್ದೆ ಜಾರಿಗೆ ತಂದಿದ್ದಾಗ ಸಂಸ್ಥಾನದಲ್ಲಿ 1296 ವಿದ್ಯಾರ್ಥಿಗಳನ್ನೊಳಗೊಂಡ 27 ಪ್ರಾಥಮಿಕ ಶಾಲೆಗಳಿದ್ದರೆ, ಶಾಹು ಮಹಾರಾಜ್ ನಿಧನರಾದಾಗ ಶಾಲೆಗಳ ಸಂಖ್ಯೆ 420ಕ್ಕೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ 22000ಕ್ಕೆ ಏರಿತ್ತು. ಇವೆಲ್ಲದರ ಜೊತೆಗೆ 1917ರಲ್ಲಿ ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಕಾಯ್ದೆ . 1919ರಲ್ಲಿ ಅಂತರಜಾತಿ-ಅಂತರಧರ್ಮ ವಿವಾಹ ರಕ್ಷಣೆ ಕಾಯ್ದೆ, ಮಹಿಳಾ ದೌರ್ಜನ್ಯ ವಿರೋಧಿ ಕಾಯ್ದೆ, ಮತ್ತು ಅಸ್ಪೃಶ್ಯತಾ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿದ್ದವರು ಶಾಹು ಮಹಾರಾಜ್.