ಉದಯಪುರ: ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಸ್ಥಳೀಯ ಟೇಲರ್ ಅನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ತಾನದ ಉದಯಪುರದಲ್ಲಿ ನಡೆದಿದೆ.
10 ದಿನಗಳ ಹಿಂದೆ ಟೇಲರ್ ಕನ್ಹಯ್ಯಾ ಲಾಲ್ ತೇಲಿ ಎಂಬುವರು ಈ ಪೋಸ್ಟ್ ಮಾಡಿದ್ದು ಅಂದಿನಿಂದ ಬೆದರಿಕೆಗಳು ಬರುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೂಡ ದಾಖಲಿಸಿದ್ದರು. ಹಗಲು ಹೊತ್ತಿನಲ್ಲಿ ಕನ್ಹಯ್ಯಾ ಅವರ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹಲವು ಬಾರಿ ಹಲ್ಲೆ ನಡೆಸಿ ಕತ್ತು ಸೀಳಿದ್ದಾರೆ. ಈ ಸಂಪೂರ್ಣ ದಾಳಿಯ ವೀಡಿಯೋ ಆನ್‌ಲೈನ್‌ನಲ್ಲಿ ದುಷ್ಕರ್ಮಿಗಳು ಪೋಸ್ಟ್ ಮಾಡಿದ್ದಾರೆ.
40 ವರ್ಷದ ಕನ್ಹಯ್ಯಾಲಾಲ್ ತೇಲಿ ಅವರು ಧನ್ಮಂಡಿಯಲ್ಲಿರುವ ಭೂತಮಹಲ್ ಬಳಿ ಸುಪ್ರೀಂ ಟೈಲರ್ಸ್ ಹೆಸರಿನ ಅಂಗಡಿಯನ್ನು ಹೊಂದಿದ್ದಾರೆ. ಮಂಗಳವಾರ ಮಧ್ಯಾಹ್ನ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಅಂಗಡಿಗೆ ನುಗ್ಗಿದ್ದಾರೆ. ಕನ್ಹಯ್ಯಾಲಾಲ್‌ಗೆ ಏನೂ ಅಂತ ಅರ್ಥವಾಗುವಷ್ಟರಲ್ಲಿ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಒಂದರ ನಂತರ ಒಂದರಂತೆ, ಅವರು ಅರ್ಧ ಡಜನ್‌ಗಿಂತಲೂ ಹೆಚ್ಚು ಬಾರಿ ದಾಳಿ ಮಾಡಿದರು.
ಕೃತ್ಯದ ಹೊಣೆಯನ್ನು ಹೊತ್ತು ವಿಡಿಯೊ ಮಾಡಿದ್ದ ಇಬ್ಬರು ಹಂತಕರನ್ನು ಬಂಧಿಸಲಾಗಿದೆ. ದುಷ್ಕರ್ಮಿಗಳನ್ನು ರಿಯಾಝ್ ಮತ್ತು ಮಹಮ್ಮದ್ ಎಂದು ಗುರುತಿಸಲಾಗಿದೆ.
ಹತ್ಯೆಯ ಬೆನ್ನಲ್ಲೇ ಉದಯಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದು, ಶಾಂತಿ ಕಾಪಾಡಿಕೊಳ್ಳಲು ನಾಗರಿಕರಿಗೆ ಮನವಿ ಮಾಡಿದ್ದಾರೆ. ಘಟನೆಯ ಸಂಬಂಧಿತ ಯಾವುದೇ ವಿಡಿಯೊವನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದ್ದಾರೆ.
“ಉದಯಪುರದಲ್ಲಿ ಯುವಕನೊಬ್ಬನ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಈ ಘಟನೆಯಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಎಲ್ಲರಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಮತ್ತು ಕೃತ್ಯದ ವೀಡಿಯೊವನ್ನು ಹಂಚಿಕೊಳ್ಳಬೇಡಿ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
‘ಭೀಕರ ಹತ್ಯೆ ನಡೆದಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.