ಹಣಕಾಸಿನ ನೆರವಿಲ್ಲದ ಲಾಕ್‌ಡೌನ್ ಘೋಷಣೆ – ಕಾರ್ಮಿಕ ವರ್ಗದ ಬದುಕಿನ ಮೇಲೆ ಬರೆ: ಸಿಐಟಿಯು ಟೀಕೆ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಎರಡನೇ ಅಲೆಯನ್ನು ತಡೆಯುವ ಭಾಗವಾಗಿ ನಾಳೆ ರಾತ್ರಿಯಿಂದ ಮೇ 10 ರವರೆಗೆ ಪುನಃ ಹದಿನೈದು ದಿನಗಳ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.  ಆದರೆ ಇದರಿಂದ ರಾಜ್ಯದಲ್ಲಿ ನಿತ್ಯ ದುಡಿಮೆಯನ್ನೇ ಅವಲಂಬಿಸಿರುವ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಸೇರಿ  ಕೋಟ್ಯಾಂತರ ದುಡಿಯುವ ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆಯು ರಾಜ್ಯ ಸರರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದೆ.

ಈ ಬಗ್ಗೆ ವಿವರವಾದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಐಟಿಯು ರಾಜ್ಯ ಸಮಿತಿಯು ತಜ್ಞರ ಸಲಹೆಗಳನ್ನು ತಿರಸ್ಕರಿಸಿದ್ದು, ಯಾವುದೇ ಆಲೋಚನೆಗಳಿಲ್ಲದೆ ಆರೋಗ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿದ್ದು, ಮೊದಲನೇ ಅಲೆಯ ಸಂದರ್ಭದಲ್ಲಿ ನಿರ್ಮಿಸಲಾದ ಅರೋಗ್ಯ ಮೂಲ ಸೌಕರ್ಯಗಳನ್ನು ರದ್ದುಪಡಿಸಿದ್ದು, ರಾಜ್ಯದ ಹಿತವನ್ನು ಮರೆತು ಚುನಾವಣೆಗಳಲ್ಲಿ ಇಡೀ ರಾಜ್ಯ ಸರ್ಕಾರ ಮುಳುಗಿದ್ದು ಮುಂತಾದ ಬೇಜವಾಬ್ದಾರಿ ನಡೆಗಳಿಂದ ರಾಜ್ಯದ ಜನತೆಯು ಕಷ್ಟ ಅನುಭವಿಸಬೇಕಾಗಿ ಬಂದಿದೆ. ಇವತ್ತಿನ ಈ ಸಂಕಷ್ಟ ಪರಿಸ್ಥಿತಿಗೆ ರಾಜ್ಯ ಸರ್ಕಾರದ ದುರಾಡಳಿತವೇ ಕಾರಣವಾಗಿದೆ ಎಂದು ಸಿಐಟಿಯು  ಟೀಕಿಸುತ್ತಿದೆ.

ಇದನ್ನು ಓದಿ: ನಾಳೆಯಿಂದ ಕರ್ನಾಟಕ್‌ ʼಲಾಕ್ʼ : ಸಂಪುಟ ಸಭೆ ತೀರ್ಮಾನ

ಪ್ರತಿನಿತ್ಯ ಸಾವಿರಾರು ಕುಟುಂಬಗಳು ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಅಂತಹವರು ಚಿಕಿತ್ಸೆಗಾಗಿ, ಆಕ್ಸಿಜನ್‌ಗಳಿಗಾಗಿ, ತಮ್ಮ ಕುಟುಂಬದವರು, ಬಂಧುಗಳ ಜೀವಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಇಡೀ ತಮ್ಮ ಶ್ರಮ ಮತ್ತು ಹಣವನ್ನು ವಿನಿಯೋಗುತ್ತಿದ್ದಾರೆ. ಇಂತಹ ಸಂಕಟದ ಸನ್ನಿವೇಶದಲ್ಲಿ ತೀವ್ರ ತೊಂದರೆಗೊಳಗಾದ ಸಾಮಾನ್ಯ ಜನರಿಗೆ ಆರ್ಥಿಕ ಮತ್ತು ಹಣಕಾಸಿನ ನೆರವನ್ನು ಪ್ರಕಟಿಸಬೇಕಾದುದ್ದು ಒಂದು ಜವಾಬ್ದಾರಿ ಸರ್ಕಾರದ  ಕೆಲಸವಾಗಿತ್ತು. ಆದರೆ ರಾಜ್ಯದ ಮುಖ್ಯಮಂತ್ರಿಗಳು ಇಂತಹ ಯಾವುದೇ ಪ್ಯಾಕೇಜುಗಳನ್ನು ಘೋಷಿಸದೇ ಕೊರೊನಾ  ಎರಡನೇ ಅಲೆಯನ್ನು ಕೇವಲ ಲಾಕ್‌ಡೌನ್ ಮೂಲಕ ನಿಯಂತ್ರಣ ಮಾಡಲು ಹೊರಟಿರುವುದು ಹಾಸ್ಯಸ್ಪದವಾಗಿದೆ.

ರಾಜ್ಯದಲ್ಲಿ ಬೆಂಗಳೂರು ಒಳಗೊಂಡು ಸುಮಾರು 7-8 ಲಕ್ಷಕ್ಕೂ ಹೆಚ್ಚಿನ ಮಹಿಳೆಯರೇ ಪ್ರಧಾನವಾಗಿ ಕೆಲಸ ಮಾಡುವ ಗಾರ್ಮೆಂಟ್ಸ್‌ ಕೈಗಾರಿಕೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಆದರೆ ಲಕ್ಷಾಂತರ ಸಂಖ್ಯೆಯ ಕಾರ್ಮಿಕರದ್ದು ಈ ಲಾಕ್‌ಡೌನ್ ಸಮಯದಲ್ಲಿ ಬದುಕಲು ಬೇಕಾದ ಯಾವುದೇ ಆರ್ಥಿಕ ನೆರವು ಪ್ರಕಟಿಸಿಲ್ಲ ಎಂದು ಸಂಘಟನೆಯು ತೀವ್ರವಾಗಿ ಟೀಕಿಸಿದೆ.

ಈ ಲಾಕ್‌ಡೌನ್ ಸಮಯದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ವಲಯದ ಚಟುವಟಿಕೆಗಳನ್ನು ಮುಂದುವರೆಸಲು ಅವಕಾಶ ನೀಡಲಾಗಿದೆ. ಆದರೆ ಬಿಎಂಟಿಸಿ, ಕೆ.ಎಸ್.ಆರ್.ಟಿಸಿ ಮತ್ತು ಮೆಟ್ರೊ ಸಂಚಾರವನ್ನು ಬಂದ್ ಮಾಡಲಾಗಿದೆ. ಹಾಗಿದ್ದರೆ ಅವುಗಳಲ್ಲಿ ಕೆಲಸ ಮಾಡುವ ಸಹಸ್ರಾರು ಕಾರ್ಮಿಕರು ಸಂಚಾರ ಮಾಡಬೇಕಾದ ವಿಧಾನಗಳೇನು? ಈ ಎರಡನೇ ಅಲೆಯಲ್ಲೇ ಬಹುತೇಕ ಇಡೀ ಕುಟುಂಬಗಳೇ ಸೋಂಕಿಗೆ ಒಳಗಾಗುತ್ತಿವೆ ಹೀಗಿದ್ದಾಗ ಅಂತಹ ಕಾರ್ಮಿಕರು ಕೆಲಸಕ್ಕೆ ಹೋಗಲು ಹೇಗೆ ಸಾಧ್ಯ? ಅಂತಹ ಕಾರ್ಮಿಕರಿಗೆ ವೇತನ ಸಹಿತ ರಜೆಗಳನ್ನು ಮಾಲಿಕರು ಮತ್ತು ಸರ್ಕಾರ ಘೋಷಿಸಿಲ್ಲ. ಇಂತಹ ಎಲ್ಲ ಕಾರ್ಮಿಕರು ಸ್ವಂತ ವಾಹನಗಳಲ್ಲಿ ಸಂಚರಿಸುವಾಗ ಪೊಲೀಸ್ ಇಲಾಖೆಯಿಂದ ಲಾಠಿ ಏಟು, ಕಿರುಕುಳ, ದಂಡ ಮೊದಲಾದವುಗಳು ನಿತ್ಯದ ಸಮಸ್ಯೆಗಳಾಗಲಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಮೌನವಹಿಸಿದ್ದಾರೆ.

ಇದನ್ನು ಓದಿ: ಎರಡನೇ ಅಲೆಗೆ ಚುನಾವಣಾ ಆಯೋಗವೇ ನೇರ ಹೊಣೆ, ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕಾಗಬಹುದು : ಮದರಾಸು ಹೈ ಕೋರ್ಟು

ಈ ಲಾಕ್‌ಡೌನ್ ನಿಂದಾಗಿ ಅತಿ ಹೆಚ್ಚಾಗಿ ಸಂಕಷ್ಟಕ್ಕೀಡಾಗುವವರು ಅಸಂಘಟಿತ ವಲಯದ ಕಾರ್ಮಿಕರು. ದಿನನಿತ್ಯದ ದುಡಿಮೆ ಮಾಡುವ ಮನೆಗೆಲಸ, ಹಮಾಲಿ, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಟೈಲರ್‌ಗಳು ಮತ್ತು ಆಟೋ, ಟ್ಯಾಕ್ಸಿ ಖಾಸಗಿ ವಾಹನ ಚಾಲಕರು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬದುಕು ಸಾಗಿಸುವ ಇವರುಗಳಿಗೆ ರಾಜ್ಯ ಸರ್ಕಾರ ಯಾವುದೇ ಹಣಕಾಸಿನ ನೆರವನ್ನು ಪ್ರಕಟಿಸಿಲ್ಲ. ಅಲ್ಲದೆ ಬೆಂಗಳೂರು ನಗರ ಮತ್ತು ರಾಜ್ಯದ್ಯಾಂತ ಕಡಿಮೆ ದರದಲ್ಲಿ ಊಟ ತಿಂಡಿ ಸಿಗುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಈಗ ಬಂದ್ ಆಗಿವೆ.  ಇದರಿಂದಾಗಿ ಲಕ್ಷಾಂತರ ಶ್ರಮಜೀವಿಗಳು ಆಹಾರಕ್ಕಾಗಿ ಕಷ್ಟಪಡುವಂತಾಗಿದೆ.

ಇದರ ಜೊತೆಯಲ್ಲೇ ಈ ಕೊರೊನಾ ಸಂಕಷ್ಟದ ಸಮಯದಲ್ಲಿ ಅಂಗನವಾಡಿ ನೌಕರರು, ಮುನ್ಸಿಫಲ್, ಗ್ರಾಮ ಪಂಚಾಯ್ತಿ, ಆಶಾ, ಬಿಸಿಯೂಟ, ಆರೋಗ್ಯ ಕಾರ್ಯಕರ್ತರುಗಳು ಕೋವಿಡ್ ವಿರುದ್ದ ಮತ್ತು ನಿಯಂತ್ರಣಕ್ಕಾಗಿ ತಮ್ಮ ಜೀವಗಳನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಬದುಕು ಮತ್ತು ಅವರ ಜೀವ ರಕ್ಷಣೆಗೆ ಬೇಕಾದ ಯಾವುದೇ ಆರ್ಥಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಿಲ್ಲ. ಈ ಮುಂಚೂಣಿ(ಫ್ರಂಟ್ ಲೈನ್ ವರ್ಕರ್) ಕಾರ್ಮಿಕರಿಗೆ ಆರೋಗ್ಯ ವಿಮೆ ರಕ್ಷಣೆಯನ್ನು ಒದಗಿಸುತ್ತಿಲ್ಲ.

ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೂ ಉದ್ಯೋಗ ಹಾಗು ವೇತನವನ್ನು ರಕ್ಷಿಸುವ ಯಾವುದೇ ಪ್ರಕಟಣೆಗಳನ್ನು ರಾಜ್ಯ ಸರ್ಕಾರವು ಮಾಡಿಲ್ಲ.

ಇದನ್ನು ಓದಿ: ಉಚಿತ ಕೊರೊನಾ ಲಸಿಕೆ ಘೋಷಿಸಿದ ಕರ್ನಾಟಕ ಸರ್ಕಾರ

ಕೋವಿಡ್ ನಿಯಂತ್ರಣಕ್ಕಾಗಿ ಮಾಡಲಾಗಿರುವ ಈ ನಿರ್ಬಂಧಗಳಲ್ಲಿ ಕಾರ್ಖಾನೆಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತ ಮುಂತಾದ ಕ್ರಮಗಳನ್ನು ಕೈಗೊಳ್ಳಬಾರದೆಂಬ ಯಾವ ಸೂಚನೆಗಳು ಇಲ್ಲ. ರಾಜಧಾನಿ ಬೆಂಗಳೂರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸ್ವಂತ ಊರುಗಳಿಗೆ ಹಿಂದಿರುಗುವ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ರಾಜ್ಯದ ಗ್ರಾಮೀಣ ಪ್ರದೇಶಗಳಿಗೂ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ವಿಶ್ವಾಸ ನೀಡುವಂತಹ ಹಣಕಾಸಿನ ನೆರವು, ಉದ್ಯೋಗ ಭದ್ರತೆಯ ಕ್ರಮಗಳನ್ನು ರಾಜ್ಯ ಸರ್ಕಾರವು ಪ್ರಕಟಣೆ ಮಾಡುವುದು ಅನಿವಾರ್ಯವಾಗಿದೆ. ಆರ್ಥಿಕವಾಗಿ ಬಲಿಷ್ಟವಾಗಿರುವವರಿಗೆ ಸಂಪೂರ್ಣ ರಕ್ಷಣೆ, ನಾಡಿನ ಬಡಜನರಿಗೆ ರೋಗದಿಂದ ಮಾತ್ರವಲ್ಲದೆ ಸರ್ಕಾರದ ತೀರ್ಮಾನಗಳು ಹೊರೆ ಎಂಬುದು ಸರಿಯಾದ ಪ್ರಜಾಸತಾತ್ಮಕ ನಡೆಯಾಗಿರುವುರಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕಾಗಿದೆ.

ಇದನ್ನು ಓದಿ: ಆಹಾರ ಭದ್ರತೆಯ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸಬೇಕು

ಕೋವಿಡ್ ವಿರುದ್ಧದ ಸಮರದಲ್ಲಿ ಬಹುಸಂಖ್ಯೆಯ ಜನರ ವಿಶ್ವಾಸವನ್ನು ಗೆಲ್ಲಲಾರದ ಯಾವ ತೀರ್ಮಾನವು ರಾಜ್ಯದ ಅಭಿವೃದ್ಧಿಗೆ ದಕ್ಕೆಯಾಗಿರುತ್ತದೆ. ಸರ್ಕಾರ ಜನಪರ ಕಾಳಜಿಯನ್ನು ಕೈಬಿಟ್ಟಿರುವ ಸಂಕೇತವೇ ಈ ಲಾಕ್‌ಡೌನ್ ಪ್ರಕ್ರಿಯೆ ಎಂದು ಸಿಐಟಿಯು  ಖಂಡಿಸುತ್ತದೆ.

ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಕೊರೊನಾ ಲಾಕ್‌ಡೌನ್ ಘೋಷಿಸಿದೆ ಬೆನ್ನಲ್ಲೆ ರಾಜ್ಯದ ಕೋಟ್ಯಾಂತರ ಶ್ರಮಜೀವಿಗಳ ಬದುಕನ್ನು ರಕ್ಷಿಸಬೇಕಾದ ಹೊಣೆಯನ್ನು ಹೊತ್ತುಕೊಂಡು ಹಣಕಾಸಿನ ನೆರವು, ಉಚಿತ ರೇಷನ್, ಊಟ ಮತ್ತು ವೈಧ್ಯಕೀಯ ನೆರವು ಮೊದಲಾದ ಪರಿಹಾರಗಳನ್ನು ಒಳಗೊಂಡು ಕೊರೊನಾ ಎರಡನೇ ಅಲೆಯ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು ಕೂಡಲೇ ಘೋಷಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *