ಹಂಸಲೇಖರ ಸಾಮಾಜಿಕ ಅಂತರಂಗ

ಯೋಗೇಶ್ ಮಾಸ್ಟರ್

ಹಂಸಲೇಖ ಅವರ ಬಗ್ಗೆ ಎರಡು ಮಾತು ಬರೆಯಲು ನನಗೆ ಎರಡು ಅರ್ಹತೆಗಳಿವೆ. ಹಂಸಲೇಖ ನನ್ನ ಅಂತರಂಗದ ಮಿತ್ರರೆಂಬುದು ಒಂದಾದರೆ ಮತ್ತು ಅವರನ್ನು ಹಂಸಲೇಖ ಆಗಿ ಈ ನಾಡು ನೋಡುವುದಕ್ಕಿಂತ ಮುಂಚಿತವಾಗಿ ಅವರನ್ನು ಗಂಗರಾಜುವಾಗಿ ಅವರ ಕೌಟುಂಬಿಕ ಸಂಬಂಧದ ಎಳೆಯಿಂದಲೇ ಬಲ್ಲವನು ಎಂಬುದು ಎರಡನೆಯದು. ಆದರೆ ಈಗ ನಾನು ಅವರ ಜೀವನ ಚರಿತ್ರೆಯನ್ನು ಬರೆಯುತ್ತಿಲ್ಲವಾದ್ದರಿಂದ ಸದ್ಯಕ್ಕೆ ವಿವಾದಕ್ಕೆ ಎಡೆ ಮಾಡಿರುವ ಸಂಗತಿಯ ಬಗ್ಗೆ ಮಾತ್ರ ಹೇಳುತ್ತೇನೆ.

ಮೈಸೂರಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಅವರ ವಿಡಿಯೋ ಭಾಗವನ್ನು ಪೂರ್ತಿಯಾಗಿ ನಾನು ನೋಡಿದ ಮೇಲೆ ಇದನ್ನು ಬರೆಯುತ್ತಿದ್ದೇನೆ. ಹಾಗೆ ಹೇಳಲು ಅವರಿಗೆ ಅರ್ಹತೆ ಇದೆ ಎಂಬುದು ಸ್ಪಷ್ಟ. ಅವರು ದಲಿತರ ಬಗ್ಗೆ ಏನು ಹೇಳಿದ್ದರೋ ಅದನ್ನು ತಾವು ಮಾಡಿರುವವರು ಎಂಬುದೇ ಮೊದಲನೇ ಅರ್ಹತೆ.

ಹಂಸಲೇಖ ಪುರುಷ ಸೂಕ್ತದಲ್ಲಿ ಉಲ್ಲೇಖಿಸಿರುವಂತೆ ತಲೆಯಿಂದ ಹುಟ್ಟಿದವರಲ್ಲದಿದ್ದರೂ ದಲಿತರಲ್ಲ. ಮತ್ತೆ ಏನು? ಎಂದು ಈ ದೇಶದ ಶಾಪಗ್ರಸ್ತ ದೃಷ್ಟಿಯಲ್ಲಿ ನೋಡುವುದು ಅಥವಾ ಕೇಳುವುದು ಅವರ ಸೀಮಾತೀತ ಸೃಜನಶೀಲತೆಗೆ, ಪ್ರತಿಭೆಗೆ, ಕಲೆಗೆ, ಸಾಮಾಜಿಕ ಕಳಕಳಿಗೆ ಮಾಡುವ ದ್ರೋಹವಾದ್ದರಿಂದ ಜಾತಿಯ ವಿಷಯವನ್ನು ಲಂಬಿಸುವುದಿಲ್ಲ. (ಹಂಸಲೇಖ ಜಾತಿ ಎಂದು ಗೂಗಲಿನಲ್ಲಿ ಹುಡುಕಿದವರ ಮಾಹಿತಿಗೆ ಇದು.) ಆದರೆ ಅವರಿಗೆ ಸ್ಪರ್ಶ್ಯ – ಅಸ್ಪೃಶ್ಯದ ಬಗ್ಗೆ ಕಿಂಚಿತ್ತೂ ಒಲವಿಲ್ಲ ಮತ್ತು ಮನವಿಲ್ಲ. ರಂಗಭೂಮಿಯಲ್ಲಿ ಭಾವನಾತ್ಮಕ ಸಂಬಂಧಗಳಿಂದ ವ್ಯಕ್ತಿಗಳು ಕೂಡಿದ್ದು ಕುಟುಂಬವಾಗಿ ಬಾಳಿದ್ದವರು, ಸಂಬಂಧಗಳನ್ನು ರೂಪಿಸಿಕೊಂಡವರು ಮತ್ತು ಒಬ್ಬರಿಗೊಬ್ಬರಿಗೆ ಆದವರು.

ತಮ್ಮ ಪ್ರತಿಭೆ ಮತ್ತು ಪ್ರಯೋಗಶೀಲತೆಯಿಂದ ಕೀರ್ತಿ ಮತ್ತು ಸಂಪತ್ತನ್ನು ಪಡೆದಾದ ಮೇಲೂ ಅವರ ಅಂತರಂಗದ ಆಪ್ತರ ಜೊತೆಗೆ ಅವರ ಒಡನಾಟ ಇದ್ದೇ ಇತ್ತು. ಆಗೆಲ್ಲಾ ಅವರ ಕಾಳಜಿ ಇದ್ದದ್ದು ಇನ್ನೂ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರದಿರುವ ದಲಿತರ ಮಕ್ಕಳ ಮೇಲೆ. ಎಷ್ಟೆಷ್ಟೋ ಅಲೆದಾಡಿ, ಒದ್ದಾಡಿ ಇನ್ನೂ ಅಕ್ಷರಸ್ಥರಾಗದಿರುವ ದಲಿತ ಮಕ್ಕಳ ಮೊದಲ ಪೀಳಿಗೆಗಳನ್ನು ಗುರುತಿಸಿ ಅವರನ್ನು ಕರೆತಂದು ತಮ್ಮ ಮನೆಗೇ ಹೊಂದಿಕೊಂಡಂತೆ ಮಾಡಿದ್ದ ದೇಸಿ ಶಾಲೆಯಲ್ಲಿ ಅಕ್ಷರಶಃ ನೆಲೆಗಟ್ಟಿಕೊಟ್ಟರು. ಎಷ್ಟೋ ಕಾಲ ತಾವಷ್ಟೇ ಅಲ್ಲದೇ ತಮ್ಮ ಮನೆಯವರೆಲ್ಲಾ ಅವರ ಸೇವೆ ಮಾಡುವಂತೆ ಪ್ರೇರೇಪಿಸಿದ್ದರು. ಆ ಮಕ್ಕಳಿಗೆ ಉಣ್ಣಲು, ಉಡಲು, ಕಲಿಯಲು, ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ಆತ್ಮಸ್ಥೈರ್ಯವನ್ನು ರೂಪಿಸಲು ಅವರು ಕೆಲಸ ಮಾಡಿರುವುದಕ್ಕೆ ನನ್ನಂತೆಯೇ ಬೇಕಾದಷ್ಟು ಜನರು ಸಾಕ್ಷಿ. ಉನ್ನತ ಮಟ್ಟದ ಶಿಕ್ಷಣ ಮಾತ್ರವಲ್ಲದೇ, ಸಮಾಜದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳು ಹೇಗೆ ಕಾಣುತ್ತಾರೋ ಹಾಗೆ ಕಾಣಲೂ ಕೂಡಾ ವೇಷಭೂಷಣದ ಬಗ್ಗೆ ಅತೀವ ಆಸಕ್ತಿಯಿಂದ ಹಂಸಲೇಖ ಕೆಲಸ ಮಾಡಿದ್ದರು. ಅದರ ಬಗ್ಗೆ ಸುದೀರ್ಘವಾದ ಮತ್ತೊಂದು ಲೇಖನವನ್ನೇ ಬರೆಯುವೆ. ಆದರೆ ಇಲ್ಲಿ ನಾನು ಹೇಳುತ್ತಿರುವುದೇನೆಂದರೆ, ದಲಿತರನ್ನು ಬಲಿತವರು ತಮ್ಮ ಮನೆಗೆ ಕರೆತಂದು ಅವರನ್ನು ತಮ್ಮಂತೆಯೇ ಕಂಡು, ಉಪಚರಿಸುವುದರ ಬಗ್ಗೆ ಕಾಣುವುದರ ಬಗ್ಗೆ ಮಾತಾಡಲು ಅವರಿಗೆ ಅರ್ಹತೆ ಇದೆ ಎಂಬುದು. ಅವರು ಅದನ್ನು ಮಾಡಿದ್ದಾರೆ.

ಕೀಳರಿಮೆಯಿಂದ ತಮ್ಮನ್ನು ತಾವೇ ಹಿಂದಿಕ್ಕಿಕ್ಕೊಳ್ಳುತ್ತಿದ್ದ ದಲಿತ ಕುಟುಂಬದವರ ಮಕ್ಕಳು ಅವರ ದೇಸೀ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದು ಇಂದು ಆತ್ಮಾಭಿಮಾನದಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಬಾಳುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನರ ಸಂಪರ್ಕವೂ ನನಗಿದೆ.

ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಒಂದು ಕಾಲದಲ್ಲಿ ಹಂಸಲೇಖ ಈ ದಲಿತ ಮಕ್ಕಳಿಗೆಂದು ಒದ್ದಾಡಿದ್ದು, ಹೆಣಗಾಡಿದ್ದು ನಮ್ಮ ಅನುಭವದ ಭಾಗಗಳೂ ಆಗಿದ್ದವು. ಇಷ್ಟರವರೆಗೂ ಇಷ್ಟಾಯಿತು, ನಾಳೆ ಆ ಮಕ್ಕಳಿಗೇನು ಮಾಡುವುದು? ಅವರ ಬಸ್ ಪಾಸಿಗೇನು? ಊಟಕ್ಕೇನು? ಅವರಿಗಾಗಿ ಶಾಲಾ ಬಸ್ಸಿಗೇನು ಮಾಡುವುದು? ಅವರ ಬಟ್ಟೆಯ ವಿನ್ಯಾಸ ಹೇಗಿರಬೇಕು? ಹೀಗೆ; ಅವರನ್ನು ಯಾವುದೇ ಸಾಮಾಜಿಕ ಸ್ಥಾನಮಾನದಲ್ಲಿ ಉನ್ನತಿಯನ್ನು ಸಾಧಿಸಿರುವ ಕುಟುಂಬದ ಮಗುವಿಗೆ ಸರಿಸಮಾನವಾಗಿ ಈ ದಲಿತ ಮಗುವೂ ನಿಲ್ಲಲು ಏನು ಮಾಡಬೇಕೆಂಬುದೇ ಅವರ ಒದ್ದಾಟವಾಗಿತ್ತು, ಪ್ರಯತ್ನವಾಗಿತ್ತು. ಅದಕ್ಕಾಗಿಯೇ ಹೆಣಗಾಡುತ್ತಿದ್ದರು. ಆಮೇಲೆ ಸಿಕ್ಕಂತಹ ಒಂದಷ್ಟು ನೆರವುಗಳೇನೋ ಇದ್ದಾವೆ. ಆದರೆ ತಮ್ಮ ಪ್ರಾಮಾಣಿಕ ಒಲವು ನಿಲುವುಗಳಿಂದ ದಲಿತರನ್ನು ಅವರ ಊರುಕೇರಿಗಳಿಂದ ತಂದು ತಮ್ಮಲ್ಲಿಟ್ಟುಕೊಂಡು ಮಾಡಿದ ಸೇವೆಯಲ್ಲಿ ಸಾಮಾಜಿಕ ಕಳಕಳಿ ಇತ್ತು ಮತ್ತು ವೈಯಕ್ತಿಕ ಬದ್ಧತೆ ಇತ್ತು.

ಆ ದೇಸಿ ಶಾಲೆಯ ಆರಂಭದ ಕಾಲದಲ್ಲಿ ನಾನು, ನಿರ್ದೇಶಕ ಬಿ.ಎಂ.ಗಿರಿರಾಜ್ ಕೂಡಾ ಆ ಮಕ್ಕಳಿಗೆ ಕಲಿಸಿದವರೇ ಆಗಿದ್ದೇವೆ. ಹಾಗಾಗಿ ಹಂಸಲೇಖ ತಾವು ಆಡಿರುವ ಮಾತಿಗೆ ತಾವು ಎಷ್ಟು ಬದ್ಧರು ಎಂಬುದನ್ನೂ, ಈ ಸಾಮಾಜಿಕ ಕಳಕಳಿಯಲ್ಲಿ ಅವರ ಅಂತರಂಗ ಏನೆಂಬುದನ್ನೂ ನಾವು ಸ್ಪಷ್ಟವಾಗಿಯೇ ಬಲ್ಲೆವು.

ಅವರು ಜಾನಪದ ಚರಿತ್ರೆಯನ್ನು ಆಧರಿಸಿಕೊಂಡು ಬಿಳಿಗಿರಿ ರಂಗ ಮತ್ತು ಸೊಲಿಗರ ಹೆಣ್ಣುಮಗಳ ಸಂಬಂಧದ ಬಗ್ಗೆ ಹೇಳಿದ್ದಾಗಲಿ, ಪೇಜಾವರರ ನಡೆಯನ್ನು ಸಾಮಾಜಿಕ ವಿಮರ್ಶೆಗೆ ಒಳಪಡಿಸಿದ್ದಾಗಲಿ ಬೀಸು ಹೇಳಿಕೆಯಲ್ಲ, ಚಪ್ಪಾಳೆಗಿಟ್ಟಿಸಲು ಅಲ್ಲ, ಸುದ್ದಿವೀರನಾಗಲೇನೂ ಅಲ್ಲ. (ಅವರ ಎತ್ತರಕ್ಕೆ ಇಂತಾ ಗಿಮಿಕ್ ಗಳ ಅಗತ್ಯವೇ ಇಲ್ಲ) ಅದರ ಬಗ್ಗೆ ಅವರಿಗೆ ಸೂಕ್ಷ್ಮವಾದ ಅಧ್ಯಯನವೂ ಇದೆ, ಅರಿವೂ ಇದೆ, ಅರ್ಹತೆಯೂ ಇದೆ ಎಂದು ಇಲ್ಲಿ ಹೇಳಬೇಕಾಗಿರುವುದು.

ಅವರ ವೈಚಾರಿಕತೆ, ಅವರ ನಾಸ್ತಿಕತೆ ಅದೇನೇ ಇದ್ದರೂ ಕಲೆಯಲ್ಲಿ ಸಹಜವಾಗಿ ಒಳಗೊಳ್ಳುವ ಧಾರ್ಮಿಕತೆ, ದೈವಿಕತೆ ಇತ್ಯಾದಿಗಳ ಬಗ್ಗೆ ಅವರ ನಡೆ ಮತ್ತು ಧೋರಣೆಗಳನ್ನು ವಿವರಿಸುವ ಅಗತ್ಯವೇನೂ ಈಗಿಲ್ಲ.

ತಮ್ಮ ಮಾತಿನ ಬಗ್ಗೆ ಕ್ಷಮೆ ಕೇಳುವ ವಿಡಿಯೋ ಕೂಡಾ ನೋಡಿದೆ. ಈ ಕ್ಷಮೆಯೂ ಕೂಡಾ ಅವರ ಮಾಗಿರುವ ಮನಸಿನ ಫಲವಾಗಿಯೇ ಕಂಡಿದೆ. ತಮ್ಮ ಹೆಂಡತಿಯ ಮೇಲಿನ ಒಲವನ್ನು ಸಹಜವಾಗಿ ಮುಂದಿಡುತ್ತಾ, ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಸಭಾ ಮರ್ಯಾದೆಯ ಪಾಠವನ್ನು ತಮಗೇ ಮಾಡಿಕೊಳ್ಳುತ್ತಾರೆ. ತಾತ್ವಿಕವಾಗಿ, ಸಾಮಾಜಿಕವಾಗಿ ಅದನ್ನು ಸಮರ್ಥಿಸಿಕೊಳ್ಳುವ ಎಲ್ಲಾ ಸಾಮರ್ಥ್ಯಗಳಿದ್ದರೂ ಸರಳವಾಗಿ ಬಾಗಿದ್ದಾರೆ.

ಅದು ಅವರ ಒಲವು. ಅದನ್ನು ನಾನು ಪ್ರಶ್ನಿಸುವುದೂ ಇಲ್ಲ, ವಿಮರ್ಶಿಸುವುದೂ ಇಲ್ಲ. ನಮ್ಮ ದೃಷ್ಟಿಯಿಂದಲೇ ಎಲ್ಲವನ್ನೂ ನಿರೀಕ್ಷಿಸುವುದು ತರವಲ್ಲ.

ಜಾತ್ಯತೀತ ಮನೋಭಾವವನ್ನೂ, ವೈಚಾರಿಕತೆಯನ್ನೂ, ಪ್ರಗತಿಪರತೆಯನ್ನು. ಮುಕ್ತ ಮನೋಭಾವವನ್ನು ಹೊಂದಿರುವುದನ್ನೇ ಗಂಜಿಗಿರಾಕಿಯಾಗಿರುವುದು ಎನ್ನುತ್ತಾ, ಈಗೇಕೆ ಹಂಸಲೇಖ ಗಂಜಿಗಿರಾಕಿಯಾದ ಎಂದು ಕ್ಲಬ್ ಹೌಸ್ ಗಳಲ್ಲಿ ವ್ಯರ್ಥ ಚರ್ಚೆಮಾಡುವವರಲ್ಲಿ ವಿನಂತಿ. ಅವರ ಕೆಲಸ, ಆಶಯ, ಆಸಕ್ತಿಗಳಲ್ಲಿ ಕೆಲವು ತುಣುಕುಗಳನ್ನಾದರೂ ಮಾಡಿದರೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಒಂದಿಷ್ಟು ಬೆಸೆಯುವ ಕೆಲಸಗಳನ್ನು ಮಾಡಿದಂತಾಗುತ್ತದೆ. ರಚನಾತ್ಮಕವಾದ ಕೆಲಸಗಳಲ್ಲಿ ತೊಡಗುವ ಮೂಲಕವೇ ಹಂಸಲೇಖ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ತಮ್ಮ ಋಣ ಸಂದಾಯ ಮಾಡಿದ್ದಾರೆ. ಇನ್ನು ಅವರನ್ನು ಕೇವಲವಾಗಿ ಆಡಿಕೊಳ್ಳುತ್ತಾ, ಲೇವಡಿ ಮಾಡುತ್ತಾ, ನಮ್ಮ ನಾಲಿಗೆಯಿಂದ ನಮ್ಮ ಕುಲವನ್ನು ತಬ್ಬುವ ಬದಲು ನಮ್ಮ ಋಣ ಸಂದಾಯದ ಬಗ್ಗೆ ಗಮನ ಕೊಡೋಣ. ಅಷ್ಟೇ ಸದ್ಯಕ್ಕೆ ಹೇಳಲಿಕ್ಕಿರುವುದು.

ಒಟ್ಟಾರೆ ಅಸಾಧಾರಣ ಪ್ರತಿಭಾವಂತರೂ, ಸೃಜನಶೀಲರೂ ಆಗಿರುವ ಹಂಸಲೇಖ ನಮ್ಮ ಕನ್ನಡ ಸಾಂಸ್ಕೃತಿಕ ಲೋಕದ ಅಚ್ಚರಿ ಮತ್ತು ಹೆಮ್ಮೆ, ಜೊತೆಗೆ ನನ್ನ ಪ್ರೀತಿಪಾತ್ರರು.

Donate Janashakthi Media

Leave a Reply

Your email address will not be published. Required fields are marked *