ಗುರುರಾಜ ದೇಸಾಯಿ
ಹಂಪಿ ಕನ್ನಡ ವಿವಿಯಲ್ಲಿ ಏ.16ರಂದು ನಡೆದ ಕಾರ್ಯಕ್ರಮದಲ್ಲಿ, ಸಂಶೋಧನಾರ್ಥಿಗಳ ಪ್ರೋತ್ಸಾಹಧನಕ್ಕೆ ಮನವಿ ಮಾಡಲು ಮುಂದಾಗಿದ್ದ ಪಿಎಚ್.ಡಿ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸುವ ಕುರಿತು ವಿವಿ ಆಡಳಿತ ಮಂಡಳಿ ನೋಟಿಸ್ ನೀಡಿದೆ. ಆ ಮೂಲಕ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡಿದೆ.
ಅಭಿವೃದ್ಧಿ ಅಧ್ಯಯನ ವಿಭಾಗದ ಪಿಎಚ್.ಡಿ ವಿದ್ಯಾರ್ಥಿ ಎ.ಕೆ.ದೊಡ್ಡಬಸಪ್ಪ ಅವರಿಗೆ ಕಾಯಂ ನೋಂದಣಿ ರದ್ದುಗೊಳಿಸಿ ವಿವಿಯಿಂದ ನಿಮ್ಮನೇಕೆ ಬಿಡುಗಡೆಗೊಳಿಸಬಾರದು ಎಂದು ಕಾರಣ ಕೇಳಿ ನೋಟಿಸ್ ನೀಡಿದ್ದು, ಮೂರು ದಿನಗಳಲ್ಲಿ ಸಮಜಾಯಿಷಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಸಚಿವ ಪ್ರೊ. ಸುಬ್ಬಣ್ಣ ರೈ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಕುಲಸಚಿವರ ಈ ನಡೆಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿವಿಯ ವಿದ್ಯಾರ್ಥಿಗಳು ವ್ಯಾಪಕ ಆಕ್ರೋಶ ಹೊರಹಾಕಿದ್ದು, ನಮ್ಮ ಕಷ್ಟವನ್ನು ತೋಡಿಕೊಂಡರೆ ವಿವಿಯಿಂದ ಹೊರದಬ್ಬುವ ಕೊಡುಗೆ ನೀಡುತ್ತೀರಾ? ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಸಿಎಂಗೆ ಮನವಿ ನೀಡುವುದು ಅಪರಾಧವೇ : 2018 ರಿಂದಲೂ ಹಂಪಿ ವಿವಿಯಲ್ಲಿ ಅಧ್ಯಯನ ನಡೆಸುತ್ತಿರುವ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಿಲ್ಲ. ಅಂದಿನಿಂದ ಇಂದಿನವರೆಗೆ ಫೆಲೋಶಿಪ್ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ, ಮನವಿ ಇತ್ಯಾದಿ ವಿಧಾನಗಳ ಮೂಲಕ ಗಮನ ಸೆಳೆಯುತ್ತಲೆ ಬರುತ್ತಿದ್ದಾರೆ. ಆದರೆ ಫೆಲೋಶಿಪ್ ಮಾತ್ರ ವಿದ್ಯಾರ್ಥಿಗಳಿಗೆ ಸಿಕ್ಕಿರಲಿಲ್ಲ. ಇದು ಸಹಜವಾಗಿಯೇ ವಿದ್ಯಾರ್ಥಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ನಮ್ಮ ಆವರಣದಲ್ಲಿಯೇ ಮುಖ್ಯಮಂತ್ರಿಗಳು ಬರುತ್ತಿದ್ದಾರೆ, ಮತ್ತೊಮ್ಮೆ ಮನವಿ ಮಾಡೋಣ ಎಂದು ಆಸೆಗಣ್ಣಿನಿಂದ ವಿದ್ಯಾರ್ಥಿಗಳು ಮನವಿ ನೀಡಿದ್ದಾರೆ. ಆದರೆ ವಿವಿ ನೀಡಿರುವ ನೋಟಿಸ್‌ನಲ್ಲಿ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸುಳ್ಳು ಹೇಳಲಾಗಿದೆ. ಅವರು ಮನವಿ ನೀಡಿದ್ದು ಸಿಎಂ ವೇದಿಕೆ ಹತ್ತುವ ಮುಂಚೆ. ಆದರೆ ಇಲ್ಲ ಘಟನೆಯನ್ನು ತಿರುಚುವ ಮೂಲಕ ವಿದ್ಯಾರ್ಥಿಗಳ ಹಕ್ಕನ್ನು ದಮನಿಸುವ ಕೆಲಸ ಮಾಡಲಾಗಿದೆ. ಮುಖ್ಯಮಂತ್ರಿಗೆ ಮನವಿ ನೀಡುವುದುನ್ನು ಅಪರಾಧ ಎಂದು ಬಿಂಬಿಸಿ ವಿದ್ಯಾರ್ಥಿಯ ನೋಂದಣಿಯನ್ನು ರದ್ದು ಮಾಡಲಾಗುತ್ತದೆ. ಜ್ಞಾನದ ಕಣಜವನ್ನೆ ತಲೆಯ ಮೇಲೆ ಹೊತ್ತುಕೊಂಡಿರುವ ಕುಲಸಚಿವರಿಗೆ “ನೋಂದಣಿ ರದ್ದು” ಎಂಬ ಪದ ಬಳಸಲು ಮನಸ್ಸಾದರೂ ಹೇಗೇ ಬಂತು? ಅಜ್ಞಾನವನ್ನು ಪ್ರದರ್ಶಿಸುವುದರ ಜೊತೆಗೆ ದಲಿತ ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೆ ಕೊಡಲಿ ಹಾಕಿದ್ದಾರೆ. ಸಿಎಂಗೆ ಮನವಿ ಮಾಡಿದರೆ, ನ್ಯಾಯ ಕೇಳಿದರೆ ಶಿಕ್ಷಣದಿಂದ ಹೊರದಬ್ಬುವ ಹೊಸ ಕಾಯ್ದೆಯನ್ನು ಈಗ ಹಂಪಿ ವಿವಿ ಪರಿಚಯಿಸಿದೆ.
ಸೇಡಿನ ಕ್ರಮಕ್ಕೆ ಮುಂದಾಯ್ತಾ ವಿವಿ : ಎ.ಕೆ.ದೊಡ್ಡಬಸಪ್ಪ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆಯ ನಾಯಕ. ಕಳೆದ ನಾಲ್ಕು ವರ್ಷದಿಂದ ಸಂಶೋಧನಾ ವಿದ್ಯಾರ್ಥಿಗಳ ಫೆಲೊಶಿಪ್ ವಿತರಣೆಗೆ ಹೋರಾಡುತ್ತಾ ಬಂದಿದ್ದಾರೆ. ಜೊತೆಗೆ ಅವರು ಈಗ ಹಂಪಿ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಹಾಗಾಗಿ ಹೋರಾಟಕ್ಕೆ ಚುರುಕು ತುಂಬುವ ಕೆಲಸ ಮಾಡಿದ್ದಾರೆ. ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಸ್ನಾತಕ್ಕೋತ್ತರ ಪದವಿ ಮಾಡುವಾಗಲು ಅಲ್ಲಿನ ಅನ್ಯಾಯಗಳ ವಿರುದ್ಧ ಹೋರಾಡುತ್ತಾ ಬಂದಿದ್ದಾರೆ. ಹಾಸ್ಟೇಲ್ ನಲ್ಲಿನ ಗುಣಮಟ್ಟದ ಊಟ ನೀಡದಿದ್ದಾಗ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಸಹಿಸದ ಉಪನ್ಯಾಸಕ ಮೋಹನ್ ದಾಸ್ ಎನ್ನುವವರು ಹಲ್ಲೆ ನಡೆಸಿ, “ವಿವಿಯೊಳಗೆ ಕಾಲಿಟ್ಟರೆ ಕಾಲು ಕಡಿಯುವೆ, ಕೈ ಕತ್ತರಿಸುವೆ” ಎಂದು ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದರು. ಇದರ ವಿರುದ್ದ ಬಸವರಾಜ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮೋಹನ್ ದಾಸ್ ಪ್ರತಿದೂರು ದಾಖಲಿಸಿದ್ದರು. ಇದನ್ನೆ ಈಗ ಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಯ ವರ್ತನೆ ಸರಿ ಇಲ್ಲ ಎಂದು ಸೇಡಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ.
ಕುಲಸಚಿವರ ಉದ್ಧಟತನ : ತನ್ನದೆ ವಿವಿ ಯಲ್ಲಿ, ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ವಿದ್ಯಾರ್ಥಿ ಕಾರ್ಯಕ್ಕೆ ಬೆನ್ನು ತಟ್ಟಬೇಕಿದ್ದ ಕುಲಸಚಿವರು, ಕತ್ತು ಹಿಡುದು ಹೊರಹಾಕುತ್ತಿರುವುದು ವಿಪರ್ಯಾಸವೇ ಸರಿ. ಕುಲಸಚಿವರನ್ನು ಜನಶಕ್ತಿ ಮೀಡಿಯಾ ಸಂಪರ್ಕಿಸಿದಾಗ.” ಅವರು ಕೊಟ್ಟ ನೋಟಿಸ್”ನ್ನು ಸರ್ಥಿಸಿ ಕೊಳ್ಳುತ್ತಿದ್ದಾರೆ. “ವಿ.ವಿ ನಡೆಸುವ ಕಾರ್ಯಕ್ರಮಗಳಲ್ಲಿ ಅಡ್ಡಿಯಾಗುವಂತೆ ಪದೇ ಪದೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹೊರಗಿನ ಸಂಘಟನೆಗಳ ಜತೆ ಮುಷ್ಕರ ನಡೆಸಿ ಶೈಕ್ಷಣಿಕ ವಾತಾವರಣ ಕಲುಷಿತಗೊಳಿಸುವ ದುರ್ನಡತೆ ತೋರಿದ್ದಾರೆ” ಅದಕ್ಕಾಗಿ ನೋಟಿಸ್ ಕೊಡಲಾಗಿದೆ ಎಂದು ಹೇಳುತ್ತಾರೆ. ಸಿಗಬೇಕಾದ ಫೆಲೋಶಿಪ್ ಕೇಳುವುದು ಹಕ್ಕಲ್ಲವೇ? ಅವರಿಗೆ ಫೆಲೋಶಿಪ್ ಕೊಡಿಸಲು ನಿಮ್ಮಂದ ನಡೆಸಿದ ಪ್ರಯತ್ನವೇನು? ನೀವು ಪ್ರಯತ್ನ ಮಾಡಿದ್ದರೆ, ಅವರು ಯಾಕೆ ಮುಖ್ಯ ಮಂತ್ರಿಯ ಬಳಿ ಅಳಲು ತೋಡಿಕೊಳ್ಳುತ್ತಿದ್ದರು? ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ ಉತ್ತರಿಸದೆ ಫೋನ್ ಕಟ್ ಮಾಡಿದರು. ಮಕ್ಕಳ ಬಗ್ಗೆ ಕಾಳಜಿ ವಹಿಸುವ ಸ್ಥಾನದಲ್ಲಿರುವ ಕುಲಸಚಿವರು ದುರ್ನನಡೆತೆ ತೋರುವ ಮೂಲಕ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಲು ಮುಂದಾಗಿದ್ದಾರೆ.
ನಮ್ಮ ಹಕ್ಕು ಕೇಳಿದ್ದೇವೆ : ನಮಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದು, ಅದಕ್ಕಾಗಿ ನಮ್ಮ ಕಷ್ಟವನ್ನು ಹೇಳಿ ಕೊಳ್ಳುವುದು ನಮ್ಮ ಹಕ್ಕು ಎಂದು ದೊಡ್ಡಬಸಪ್ಪ, ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ್ದಾರೆ. 40 ತಿಂಗಳಿಂದ ಫೆಲೋಶಿಪ್ ಇಲ್ಲದ ಕಾರಣ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಮನೆಯಲ್ಲಿದ ಒಡವೆಗಳನ್ನು ಒತ್ತೆ ಇಟ್ಟು ಶೈಕ್ಷಣಿಕ ನಿರ್ವಹಣೆ ಮಾಡಿದ್ದಾರೆ. ನಾವೇನು ಹೆಚ್ಚಿನ ಹಣ ಕೇಳುತ್ತಿಲ್ಲ. ನಮಗೆ ಕೊಡಬೇಕಾದ ಫೆಲೋಶಿಪ್ ನೀಡಿ ಎಂದರೆ ನನ್ನ ನೋಂದಣಿಯನ್ನೆ ರದ್ದು ಮಾಡುವುದಾಗಿ ನೋಟೀಸ್ ನೀಡಿದ್ದಾರೆ. ಹಕ್ಕನ್ನು ಕೇಳುವುದು ತಪ್ಪಾ? ನಮ್ಮ ಜೊತೆ ನಿಲ್ಲಬೇಕಿದ್ದ ವಿವಿ ಆಡಳಿತ ಮಂಡಳಿ ಯಾರದೋ ಮಾತು ಕೇಳಿ ನಮ್ಮ ಶೈಕ್ಷಣಿಕ ಭವಿಷ್ಯವನ್ನು ಹಾಳು ಮಾಡುತ್ತಿದೆ. ನಾನು ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ದೊಡ್ಡಬಸಪ್ಪ ತಿಳಿಸಿದ್ದಾರೆ.
ಕನ್ನಡ ವಿವಿ ಆಡಳಿತ ಮಂಡಳಿಯ ನಡೆ ಶಿಕ್ಷಣ ವಿರೋಧಿಯಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ಬಾಕಿ ಉಳಿಸಿಕೊಂಡಿರುವ ಫೆಲೋಶಿಪ್ ನೀಡುವ ಬದಲು, ಫೆಲೇಶಿಪ್ ನೀಡಿ ಎಂದವರ ನೋಂದಣಿಯನ್ನು ರದ್ದು ಮಾಡಲು ಮುಂದಾಗಿರುವುದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ. ಸಂಶೋಧನಾ ವಿದ್ಯಾರ್ಥಿ ಎ.ಕೆ. ಬಸವರಾಜ್ ರವರಿಗೆ ನೋಡಿರುವ ನೋಟಿಸ್ ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಅವರ ಪಿಎಚ್‌ಡಿ ನೋಂದಣಿಯನ್ನು ರದ್ದು ಮಾಡುವುದಿಲ್ಲ ಎಂದು ಘೋಷಿಸಬೇಕು. ಹಾಗೂ ವಿದ್ಯಾರ್ಥಿಗಳಿಗೆ 40 ತಿಂಗಳ ಫೆಲೋಶಿಪ್ ನೀಡಬೇಕು ಎಂದು ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ ತಿಳಿಸಿದ್ದಾರೆ.
ಕನ್ನಡ ವಿವಿ ಆಡಳಿತ ಮಂಡಳಿ ಹಾಗೂ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಕ್ಯಾಂಪಸ್‌ಗಳಲ್ಲಿನ ಪ್ರಜಾಪ್ರಭುತ್ವವನ್ನು ಉಳಿಸಲು ಮುಂದಾಗಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆನ್ನೆಲುಬಾಗಿರುವ ಫೆಲೋಶಿಪ್‌ನ್ನು ಕೂಡಲೇ ಬಿಡುಗಡೆ ಮಾಡಲು ಮುಂದಾಗಬೇಕಿದೆ.