ಹಲವು ಪ್ರಶ್ನೆಗಳನ್ನೆತ್ತಿರುವ ಸಮಿತಿ

ದೇಶದ ಸರ್ವೋಚ್ಚ ನ್ಯಾಯಾಲಯ ಕೃಷಿ ಕಾಯ್ದೆಗಳಿಗೆ ವಿರೋಧಕ್ಕೆ ಸಂಬಂಧಪಟ್ಟಂತೆ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ದೇಶದ ಹಿತದೃಷ್ಟಿಯಿಂದ ಸುಪ್ರಿಂ ಕೋರ್ಟಿಗೆ  ಒಂದು ರಾಜಕೀಯ ಧೋರಣೆಯ ವಿಷಯದಲ್ಲಿ ಮಧ್ಯಪ್ರವೇಶಿಸಲೇ ಬೇಕು ಎಂದು ಅನಿಸಿದ್ದರೆ ಅದು ನೇಮಿಸುವ ಸಮಿತಿಯ ತಟಸ್ಥತೆ, ಪರಿಣತಿವಿಶ್ವಾಸಾರ್ಹತೆ ಮತ್ತು ಗೌರವಾರ್ಹತೆಯ ಬಗ್ಗೆ  ವಿಶೇಷ ಗಮನ ಕೊಡಬೇಕಾಗಿತ್ತು. ಎಂದು ಬಹಳಷ್ಟು ಮಂದಿ ಅಭಿಪ್ರಾಯ ಪಡುತ್ತಿದ್ದಾರೆ.

ಒಂದು ಸಮಿತಿಯನ್ನು ಕೃಷಿ ಕಾಯ್ದೆಗಳಿಗೆ ಸಂಬಂಧಪಟ್ಟ ರೈತರ ದೂರುಗಳನ್ನು ಮತ್ತು ಸರಕಾರದ ಅಭಿಪ್ರಾಯಗಳನ್ನು ಕೇಳುವ ಉದ್ದೇಶಕ್ಕಾಗಿ ಹಾಗೂ ಶಿಫಾರಸುಗಳನ್ನು ಮಾಡಲು ರಚಿಸಲಾಗಿದೆಎಂದು ಜನವರಿ 12 ರಂದು ಸುಪ್ರಿಂ ಕೋರ್ಟ್ ನೀಡಿರುವ ಆದೇಶದ ಮೂರನೇ ಅಂಶದಲ್ಲಿ ಹೇಳಲಾಗಿದೆ

ಎಲ್ಲ ರೈತ ಸಂಘಗಳ ಪ್ರತಿನಿಧಿಗಳು, ಅವರು ಪ್ರತಿಭಟನೆಗಳನ್ನು ನಡೆಸುತ್ತಿರಲಿ ಅಥವ ಇಲ್ಲದಿರಲಿ, ಮತ್ತು ಅವರು ಕಾಯ್ದೆಗಳನ್ನು ಬೆಂಬಲಿಸುತ್ತಿರಲಿ ಅಥವ ವಿರೋಧಿಸುತ್ತಿರಲಿ, ಸಮಿತಿಯ ಕಲಾಪಗಳಲ್ಲಿ ಭಾಗವಹಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆಎಂದು ಆದೇಶ ವಿಧಿಸುತ್ತದೆ.

 “ಸಮಿತಿ ಸರಕಾರ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಇತರ ಸಂಬಂಧಪಟ್ಟವರು ಹೇಳುವುದನ್ನು ಕೇಳಿಕೊಂಡು, ತನ್ನ ಶಿಫಾರಸುಗಳಿರುವ ಒಂದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಇದನ್ನು ಅದು ಕಾರ್ಯಾರಂಭ ಮಾಡಿದ ದಿನದಿಂದ ಎರಡು ತಿಂಗಳ ಒಳಗೆ ಮಾಡಲಾಗುತ್ತದೆ. ಇಂದಿನಿಂದ ಹತ್ತು ದಿನಗಳ ಒಳಗೆ ಕಾರ್ಯಾರಂಭವಾಗುತ್ತದೆಎಂದೂ ಆದೇಶ ಹೇಳಿದೆ

ಸಮಿತಿಯಲ್ಲಿ ಯಾರಿದ್ದಾರೆ? 

ಆದೇಶ ನಮೂದಿಸಿರುವ ನಾಲ್ಕು ಹೆಸರುಗಳು ಹೀಗಿವೆ

(1) ಶ್ರೀ ಭುಪಿಂದರ್ ಸಿಂಗ್ ಮಾನ್ , ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಕಿಸಾನ್ ಯೂನಿಯನ್ ಮತ್ತು ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ

(2) ಡಾ. ಪ್ರಮೋದ್ ಕುಮಾರ್ ಜೋಷಿ, ಕೃಷಿ ಅರ್ಥಶಾಸ್ತ್ರಜ್ಞರು, ಅಂತರ್ರಾಷ್ಟ್ರೀಯ ಆಹಾರ ಧೋರಣೆ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾ ನಿರ್ದೇಶಕರು

(3) ಶ್ರೀ ಅಶೋಕ ಗುಲಾಟಿ, ಕೃಷಿ ಅರ್ಥಶಾಸ್ತ್ರಜ್ಞರುಕೃಷಿ ವೆಚ್ಚಗಳು ಮತ್ತು ಬೆಲೆಗಳು ಆಯೋಗದ ಮಾಜಿ ಅಧ್ಯಕ್ಷರು

(4) ಶ್ರೀ ಅನಿಲ್ ಘನ್ವತ್, ಅಧ್ಯಕ್ಷರು , ಶೇತ್ಕರಿ ಸಂಘಟನ.

(ಭುಪಿಂದರ್ ಸಿಂಗ್‍ ಮಾನ್‍  ತಾವು ಈ ಸಮಿತಿಯಲ್ಲಿ ಇರುವುದಿಲ್ಲ ಎಂದು ತಿಳಿಸಿರುವುದಾಗಿ ಈಗ ವರದಿಯಾಗಿದೆ)

 ಕೃಷಿ ಅರ್ಥಶಾಸ್ತ್ರಜ್ಞರಾದ ಅಶೋಕ ಗುಲಾಟಿ ಕೃಷಿಯಲ್ಲಿ ನವಉದಾರೀಕರಣ ನೀತಿಗಳ ಪ್ರತಿಪಾದಕರೆಂದೇ ಪರಿಚಿತರಾಗಿರುವವರು. ಮೂರು ಕಾಯ್ದೆಗಳ ಪೂರ್ವಭಾವಿಯಾಗಿ ಸುಗ್ರೀವಾಜ್ಷೆ ಹೊರಡಿಸುವ ಮೊದಲೇ ಮೇ 2020ರಲ್ಲೇ ಮೋದಿ ಸರಕಾರ ದೇಶದ ಕೃಷಿಮಾರುಕಟ್ಟೆ ವ್ಯವಸ್ಥೆಯಲ್ಲಿ ಕೊನೆಗೂ ಸುಧಾರಣೆಗಳನ್ನು ತರಲು ಮುಂದಾಗಿರುವುದಕ್ಕೆ ಅಭಿನಂದನೆಗೆ ಅರ್ಹರು ಎಂದವರು.

ಕೃಷಿ ಮಸೂದೆಗಳು ಕಾಯ್ದೆಗಳಾದ ನಂತರ ಅವನ್ನು ಬೆಂಬಲಿಸುತ್ತ, ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುವಲ್ಲಿ ಮತ್ತು ಖರೀದಿಸುವವರಿಗೆ ಅವನ್ನು ಖರೀದಿಸಿ ದಾಸ್ತಾನು ಮಾಡುವಲ್ಲಿ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯ ಒದಗಿಸುವುದು ಕಾಯ್ದೆಗಳ ಆರ್ಥಿಕ ತರ್ಕ ಎಂದು ಅವರು ಇಂಡಿಯನ್ ಎಕ್ಸ್ ಪ್ರೆಸ್‍ ನಲ್ಲಿ ಬರೆದ ಲೇಖನದಲ್ಲಿ ಹೇಳಿದ್ದರು. ಸರಕಾರ ವಿಚಲಿತಗೊಳ್ಳಬಾರದು, ವಿಪಕ್ಷಗಳಿಗೆ ತಪ್ಪು ಮಾರ್ಗದರ್ಶನವಾಗಿದೆ ಎಂಬುದು ಅವರ ಲೇಖನದ ಶೀರ್ಷಿಕೆಯಾಗಿತ್ತು. (ರೈತರು ಮಾರುವ ವೇಳೆಯಲ್ಲಿ ಸಾಯುತ್ತಾರೆ,  ಉಳಿದೆಲ್ಲ ಜನತೆ ಖರೀದಿಸುವಾಗ ಸಾಯುತ್ತಾರೆ ಎಂಬ ಒಬ್ಬ ರೈತ ಕಾರ್ಯಕರ್ತರ ಉದ್ಗಾರದೊಂದಿಗೆ ಹೋಲಿಸಿ ನೋಡಿ!)

ನವಂಬರ್ನಲ್ಲಿ ರೈತರ ಪ್ರತಿಭಟನೆಗಳು ಆರಂಭವಾದ ಮೇಲೂ ಅವರುಬೃಹತ್ ಪ್ರಮಾಣದಲ್ಲಿ ತಪ್ಪು ಮಾಹಿತಿ ಪಸರಿಸುವ ಪ್ರಚಾರದಿಂದಾಗಿ ರೈತರು ಕೃಷಿಯನ್ನು ಕಾರ್ಪೊರೇಟ್ಗಳು ವಹಿಸಿಕೊಳ್ಳುತ್ತವೆ, ಕನಿಷ್ಟ ಬೆಂಬಲ ಬೆಲೆಗಳಿಗೆ ರಕ್ಷಣೆ ಹೋಗುತ್ತದೆ ಎಂದೆಲ್ಲ ತಪ್ಪಾಗಿ ಹೇಳುತ್ತಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಇವರು ಹೇಳಿದ್ದಾರೆ. ಪ್ರತಿಭಟನೆಗಳು ತೀವ್ರವಾದ ನಂತರ ಮತ್ತೊಂದು ಸಂದರ್ಶನದಲ್ಲಿ ಸರಕಾರ ಕಾಯ್ದೆಗಳನ್ನು ಆರು ತಿಂಗಳು ಅಮಾನತಿನಲ್ಲಿಡಬೇಕು, ರೈತರಿಗೆ ಪರಿಹಾರ ಕೊಡಬೇಕು, ಆದರೆ ಕಾಯ್ದೆಗಳನ್ನು ರದ್ದು ಮಾಡಬಾರದು ಎಂದಿದ್ದರು

ಇನ್ನೊಬ್ಬ ತಜ್ಞರಾದ ಪ್ರಮೋದ್ ಕುಮಾರ್ ಜೋಷಿ ಮಂಡಿ ವ್ಯವಸ್ಥೆಯನ್ನು ಬದಿಗೊತ್ತುವುದು ಮತ್ತು ಆವಶ್ಯಕ ಸರಕುಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವುದು, ರೈತರಿಗೆ ಹೆಚ್ಚಿನ ಪ್ರತಿಫಲಗಳನ್ನು ಕೊಡುತ್ತದೆ, ಖಾಸಗಿ ಮಾರುಕಟ್ಟೆಗಳು ಈಗಾಗಲೇ ಬೆಳೆದಿರುವಲ್ಲಿ ಇದು ವಿಭಿನ್ನ ಬೆಳೆಗಳಿಗೆ ಪ್ರೋತ್ಸಾಹ ಕೊಡುತ್ತದೆ, ಹಾಗೆ ಬೆಳೆಯದಿದ್ದಲ್ಲಿ ಇನ್ನು ಮುಂದೆ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ ಎನ್ನುತ್ತ ಬೆಂಬಲಿಸಿದ್ದರು

  ಕಾಯ್ದೆಗಳು ಬೇಸಾಯವನ್ನು ಲಾಭದಾಯಕಗೊಳಿಸುತ್ತವೆ, ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ಕೊನೆಗೊಳ್ಳುತ್ತದೆ ಎಂಬ ರೈತರ ಭೀತಿ ಆಧಾರಹೀನ ಎಂದೂ ಅವರು ಹೇಳಿದ್ದಾರೆ.

ಅಷ್ಟೇ ಅಲ್ಲ, ರೈತರ ಬೇಡಿಕೆಗಳ ಕುರಿತ ಮಾತುಕತೆಗಳಲ್ಲಿ ಸರಕಾರ ಸಕಾರಾತ್ಮಕವಾಗಿ ವರ್ತಿಸುತ್ತಿದ್ದರೂ, ರೈತ ಪ್ರತಿನಿಧಿಗಳಿಂದಾಗಿ ಪರಿಹಾರ ಸಾಧ್ಯವಾಗಿಲ್ಲ, ಅವರು ತಮ್ಮ ಬೇಡಿಕೆಗಳನ್ನು ಬದಲಿಸುತ್ತಲೇ ಇದ್ದಾರೆ; ಕಾಯ್ದೆಗಳನ್ನು ರೂಪಿಸುವ ಮೊದಲು ಸಮಾಲೋಚನೆಗಳನ್ನು ನಡೆಸಿಲ್ಲ ಎಂಬುದೂ ಸರಿಯಲ್ಲ ಎಂದೆಲ್ಲ ಹೇಳಿರುವತಜ್ಞರು ಇವರು!

 “ಭಾರತ ಸಂಘವಾಗಿ ನಿಮಗೆ ಸಮಸ್ಯೆಯನ್ನು ಪರಿಹರಿಸಲು ಆಗಿಲ್ಲನೀವು ಸಾಕಷ್ಟು ಸಮಾಲೋಚನೆಗಳನ್ನು ನಡೆಸದೆ ಒಂದು ಕಾನೂನು ಮಾಡಿದ್ದೀರಿ, ಅದರಿಂದಾಗಿ ಒಂದು ಮುಷ್ಕರ ಆಗಿದೆಆದ್ದರಿಂದ ನೀವು ಮುಷ್ಕರವನ್ನು ಪರಿಹರಿಸಬೇಕುಎಂದು ಸ್ವತಃ ಸುಪ್ರಿಂಕೋರ್ಟ್ ಸರಕಾರವನ್ನು ವಿಚಾರಣೆಯ ವೇಳೆಯಲ್ಲಿ ತರಾಟೆಗೆ ತಗೊಂಡಿರುವ ಹಿನ್ನೆಲೆಯಲ್ಲಿ ತಜ್ಞರ ಮಾತುಗಳನ್ನು ಗಮನಿಸಬೇಕಾಗಿದೆ

ರೈತರ ಬೇಡಿಕೆಗಳಲ್ಲಿ ಒಂದಾದ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಗೆ ಕಾನೂನಿನ ರಕ್ಷಣೆ ಕೊಡುವುದು ಸಾಧ್ಯವಾಗದು, ಜಗತ್ತಿನ ಎಲ್ಲೂ ಇಂತಹ ವ್ಯವಸ್ಥೆ ಇಲ್ಲ ಎಂದು ಇವರು ಇತ್ತೀಚೆಗೆ ಹೇಳಿರುವುದಾಗಿಯೂ ವರದಿಯಾಗಿದೆ. ಇದರಿಂದಾಗಿ ಕನಿಷ್ಟ ಬೆಂಬಲ ಬೆಲೆ ಸಿಗದವರು ಕೋರ್ಟಿಗೆ ಹೋಗುತ್ತಾರೆ, ಅಂತಹ ಬೆಲೆ ಕೊಡದಿರುವವರು ಶಿಕ್ಷಗೆ ಒಳಗಾಗುತ್ತಾರೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಕಾಯ್ದೆಗಳು ಬೇಸಾಯವನ್ನು ಲಾಭದಾಯಕಗೊಳಿಸುತ್ತವೆ, ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ಕೊನೆಗೊಳ್ಳುತ್ತದೆ ಎಂಬ ರೈತರ ಭೀತಿ ಆಧಾರಹೀನ ಎಂಬ ಅವರ ಮಾತಿನ ಅರ್ಥ ಏನು ಎಂಬ ಪ್ರಶ್ನೆ ಸಹಜವೇ

ಸಮಿತಿಯಲ್ಲಿ ಇರುವ ಇಬ್ಬರು ರೈತ ಪ್ರತಿನಿಧಿಗಳೂ ಕೂಡ ಕೃಷಿ ಕಾಯ್ದೆಗಳನ್ನು ಬೆಂಬಲಿಸುವವರೇ!

ಅನಿಲ್ ಘನ್ವತ್ ಅವರ ಶೇತ್ಕರಿ ಸಂಘಟನ ಅಕ್ಟೋಬರಿನಲ್ಲಿ ಕಾಯ್ದೆಗಳನ್ನು ಬೆಂಬಲಿಸಿ ಮತಪ್ರದರ್ಶನವನ್ನೂ ನಡೆಸಿತ್ತು. ರೈತರೊಂದಿಗೆ ಸಮಾಲೋಚನೆ ನಡೆಸಿ ಕೆಲವು ತಿದ್ದುಪಡಿಗಳನ್ನು ತರಬಹುದು, ಆದರೆ ಇವನ್ನು ರದ್ದು ಮಾಡುವ ಅಗತ್ಯವಿಲ್ಲ, ಇವು ರೈತರಿಗೆ ಹೊಸ ಅವಕಾಶಗಳನ್ನು ತೆರೆದಿವೆ ಎಂದು ಇವರು ಕಳೆದ ತಿಂಗಳು ಹೇಳಿದ್ದಾರೆ

ಮೋದಿ ಸರಕಾರದ ಮಂತ್ರಿಗಳು ಹೇಳುವಂತೆ ಪ್ರತಿಭಟನೆಗಳು ಎರಡು ರಾಜ್ಯಗಳಲ್ಲಿ ಮಾತ್ರ ನಡೆಯುತ್ತಿವೆ ಎಂದು ಹೇಳುತ್ತಿರುವ ರೈತ ಮುಖಂಡರಿವರು. ಕಳೆದ ತಿಂಗಳು ಕೃಷಿ ಮಂತ್ರಿಗಳನ್ನು ಭೇಟಿ ಮಾಡಿದ ನಂತರ “40 ವರ್ಷಗಳಲ್ಲಿ ಮೊದಲ ಬಾರಿಗೆ ರೈತರಿಗೆ ಮುಕ್ತ ಮಾರುಕಟ್ಟೆಯಿಂದ ಪ್ರಯೋಜನ ಪಡೆಯುವ ಅವಕಾಶ ಸಿಕ್ಕಿದೆಎಂದಿದ್ದರು

ರಾಜ್ಯ ಸಭಾ ಸದಸ್ಯರೂ ಆಗಿದ್ದ ಸಮಿತಿಯ ಮತ್ತೊಬ್ಬ ರೈತ ಮುಖಂಡ ಭುಪಿಂದರ್ ಸಿಂಗ್ ಮಾನ್ ದೇಶದ 400ಕ್ಕೂ ಹೆಚ್ಚು ರೈತ ಸಂಘಟನೆಗಳು ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟಕ್ಕೆ ವೇದಿಕೆಯನ್ನು ರಚಿಸಿಕೊಂಡಾಗ ,ಅದಕ್ಕೆ ಪ್ರತಿಯಾಗಿ ಹರಿಯಾಣ, ಮಹಾರಾಷ್ಟ್ರ, ಬಿಹಾರ, ತಮಿಳುನಾಡಿನ ಕೆಲವು ರೈತ ಗುಂಪುಗಳೊಂದಿಗೆ ಇನ್ನೊಂದು ಸಂಘಟನೆಯನ್ನು ರಚಿಸಿಕೊಂಡ ರೈತ ಮುಖಂಡ ಕೃಷಿಯನ್ನು ಸ್ಪರ್ಧಾತ್ಮಕಗೊಳಿಸಲು ಸುಧಾರಣೆಗಳು ಬೇಕು, ಆದರೆ ರೈತರಿಗೆ ರಕ್ಷಣೆಯ ಅಗತ್ಯವಿದೆ ಎಂದರೂ, ಕೆಲವು ರೈತ ಮುಖಂಡರೊಂದಿಗೆ ಕೃಷಿ ಮಂತ್ರಿಗಳನ್ನು ಭೇಟಿ ಮಾಡಿ ಕಾಯ್ದೆಗಳನ್ನು ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೆ ತರಬೇಕು ಎಂದು ಆಗ್ರಹಿಸುವ ಮನವಿ ಪತ್ರವನ್ನು ಸಲ್ಲಿಸಿದ್ದರು

2008ರಲ್ಲಿ ಇವರು ಮತ್ತು ಆಗ ಇದೇ ಶೇತ್ಕರಿ ಸಂಘಟನದ ಮುಖಂಡರಾಗಿದ್ದ ಶರದ್ ಜೋಷಿಯವರು ಕಾರ್ಪೊರೇಟ್ಗಳು ಪಂಜಾಬ್ ಮತ್ತು ಹರ್ಯಾಣದಿಂದ ಗೋದಿ ಖರೀದಿಸಬಾರದು ಎಂದು ನಿಷೇಧಿಸುವ ಆಗಿನ ಸರಕಾರದ ನಿರ್ಧಾರವನ್ನು ವಿರೋಧಿಸಿ ಮತಪ್ರದರ್ಶನ ನಡೆಸಿದ್ದರು!(ಭುಪಿಂದರ್‍ ಸಿಂಗ್‍ ಮಾನ್‍ ಈಗ ಹರಡಿರುವ ಭಾವನೆಯಿಂದಾಗಿ ತನಗೆ ಈ ಸಮಿತಿಯಲ್ಲಿ ಇರಲು ಸಾಧ್ಯವಾಗುವದಿಲ್ಲ, ತಾನು ತನ್ನ ರೈತರು ಮತ್ತು ಪಂಜಾಬಿನೊಂದಿಗೆ ಇರಬಯಸುತ್ತೇನೆ ಎಂದು ಹೇಳಿರುವದಾಗಿ ಈಗ ವರದಿಯಾಗಿದೆ) 

ಒಟ್ಟಿನಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ ಟಿಪ್ಪಣಿ ಮಾಡಿರುವಂತೆ, ಮೊದಲು ಸರಕಾರವೇ ಇಂತಹ ಸಮಿತಿಯ ರಚನೆಯ ಪ್ರಸ್ತಾಪ ಇಟ್ಟಾಗ ಅದನ್ನು ವಿರೋಧಿಸುತ್ತ ರೈತ ಸಂಘಟನೆಗಳು ವ್ಯಕ್ತಪಡಿಸಿದ್ದ ಒಂದು ಸಂದೇಹ ಸಮಿತಿಯ ರಚನೆಯಲ್ಲಿ ನಿಜವಾಗಿದೆ.

ಅವರಲ್ಲಿ ವಿಶ್ವಾಸವಿಡಿ!- ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ವಿಶ್ವಾಸಾರ್ಹತೆಗೌರವಾರ್ಹತೆಯ ಪ್ರಶ್ನೆ

ದೇಶದ ಹಿತದೃಷ್ಟಿಯಿಂದ ಸುಪ್ರಿಂ ಕೋರ್ಟ್ಗೆ ಒಂದು ರಾಜಕೀಯ ಧೋರಣೆಯ ವಿಷಯದಲ್ಲಿ ಮಧ್ಯಪ್ರವೇಶಿಸಲೇ ಬೇಕು ಎಂದು ಅನಿಸಿದ್ದರೆ ಅದು ನೇಮಿಸುವ ಸಮಿತಿಯ ತಟಸ್ಥತೆ, ಪರಿಣತಿ ಮತ್ತು ವಿಶ್ವಾಸಾರ್ಹತೆ ಮತ್ತು ಗೌರವಾರ್ಹತೆಯ ಬಗ್ಗೆ ವಿಶೇಷ ಗಮನ ಕೊಡಬೇಕಾಗಿತ್ತು. ಎಂದು ಬಹಳಷ್ಟು ಮಂದಿ ಅಭಿಪ್ರಾಯ ಪಡುತ್ತಿದ್ದಾರೆ.

ರೈತರಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವಾದಿಗಳಲ್ಲೂ ಹೆಸರುಗಳು ಹಲವು ಪ್ರಶ್ನೆಗಳನ್ನು ಎತ್ತಿವೆ

*ಪ್ರತಿಭಟನಾಕಾರರ ನಿಲುವನ್ನು ವಿರೋಧಿಸುವವರೇ ನೇಮಕಗೊಂಡಿರುವುದು ಕೇವಲ ಕಾಕತಾಳೀಯವೇ?

* ಪ್ರತಿಭಟಿಸುತ್ತಿರುವ ರೈತರ ಆತಂಕಗಳ ಬಗ್ಗ್ಟೆ ತುಸುವಾದರೂ ಸಹಾನುಭೂತಿ ಇರುವ ಒಬ್ಬರಾದರೂ ಪರಿಣಿತರ ಹೆಸರು ಸಿಗಲಿಲ್ಲವೇ

* ಸುಪ್ರಿಂ ಕೋರ್ಟಿಗೆ ಹೆಸರುಗಳನ್ನು ಸೂಚಿಸಿದವರು ಯಾರು ?

* ಇವರು ಕೆಲಸಕ್ಕೆ ಅರ್ಹ ಹೆಸರುಗಳೇ ಎಂದು ಸುಪ್ರಿಂ ಕೋರ್ಟ್ ಸ್ವತಂತ್ರವಾಗಿ ಪರಿಶೀಲನೆ ನಡೆಸಿದೆಯೇ

ಕೇಂದ್ರ ಸರಕಾರ ಏನನ್ನು ಬಯಸುತ್ತಿದೆಯೋ ಅದೇ ಆಗುತ್ತಿದೆ ಎಂದು ಬಗ್ಗೆ ಪ್ರತಿಕ್ರಿಯಿಸುತ್ತ ಅಖಿಲ ಬಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಹೇಳಿದ್ದಾರೆ, ಕೋರ್ಟಿಗೆ ಹೋಗಿ ಇಂತಹ ಸಮಿತಿಯನ್ನು ರಚಿಸಲಾಗುವುದು ಎಂದು ಸರಕಾರಕ್ಕೆ ಗೊತ್ತಿತ್ತು ಎಂದು ಅವರು ಹೇಳುತ್ತಾರೆ

ರೈತರ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಸ್ವಾಮಿನಾಥನ್ ಆಯೋಗದ ಬಹು ಮುಖ್ಯ ಕೆಲಸ ಮತ್ತು ಶಿಫಾರಸುಗಳೊಂದಿಗೆ ಈ ಸಮಿತಿಯ ಸದಸ್ಯರಲ್ಲಿ ಯಾರಿಗಾದರೂ  ಏನಾದರೂ ಸಂಬಂಧವಿದೆಯೇ? ರೈತರ ಆತಂಕಗಳಿಗೆ ಸ್ಪಂದಿಸುವ ಯಾವುದಾದರೂ ಪರಿಣತಿ ಇವರಲ್ಲಿದೆಯೇ? ರೈತರ ಆತ್ಮಹತ್ಯೆಗಳಿಗೆ ಕಾರಣವಾದ ಸುಧಾರಣೆಗಳ ನಕಾರಾತ್ಮಕ ಆಯಾಮಗಳ ಬಗ್ಗೆ ಇವರು ತುಸುವಾದರೂ ಅಧ್ಯಯನ ಮಾಡಿದ್ದಾರೆಯೆ? ಎಂದು ಹಿರಿಯ ಸಿಪಿಐ(ಎಂ) ಮುಖಂಡರಾದ ಬೃಂದಾ ಕಾರಟ್ ಪ್ರಶ್ನಿಸುತ್ತಾರೆ(ಎನ್ಡಿಟಿವಿ, ಜನವರಿ 13)

ಎಲ್ಲ ರೈತ ಸಂಘಗಳ ಪ್ರತಿನಿಧಿಗಳು, ಅವರು ಪ್ರತಿಭಟನೆಗಳನ್ನು ನಡೆಸುತ್ತಿರಲಿ ಅಥವ ಇಲ್ಲದಿರಲಿ, ಮತ್ತು ಅವರು ಕಾಯ್ದೆಗಳನ್ನು ಬೆಂಬಲಿಸುತ್ತಿರಲಿ ಅಥವ ವಿರೋಧಿಸುತ್ತಿರಲಿ, ಸಮಿತಿಯ ಕಲಾಪಗಳಲ್ಲಿ ಭಾಗವಹಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆಎಂದು ಮೇಲೆ ಹೇಳಿರುವಂತೆ ಸುಪ್ರಿಂ ಕೋರ್ಟ್ ಆದೇಶ ವಿಧಿಸಿದೆ

ಆದರೆ ತಟಸ್ಥತೆಯ ಸೋಗು ಕೂಡ ಇಲ್ಲದ ಇಂತಹ ಸಮಿತಿಯ ಎದುರು ರೈತರು ಯಾಕಾದರೂ ಹೋದಾರು? ನಿಜವಾಗಿಯೂ ಆದೇಶದ ಪರಿಪಾಲನೆ ಸಾಧ್ಯವೇ?

ಇದು ಮಿಲಿಯನ್‍ ಡಾಲರ್ ಪ್ರಶ್ನೆ!

ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ
Donate Janashakthi Media

Leave a Reply

Your email address will not be published. Required fields are marked *