ಸ್ವಾತಂತ್ರ್ಯ ಸೇನಾನಿ ಹೆಚ್‌ ಎಸ್‌ ದೊರೆಸ್ವಾಮಿ ಅವರಿಗೆ ಗಣ್ಯರ ನುಡಿನಮನ

ಬೆಂಗಳೂರು: ಅವಿರತ ಹೋರಾಟಗಾರ, ಗಾಂಧಿವಾದಿ, ಸ್ವಾತಂತ್ರ್ಯ ಚಳುವಳಿಯ ಧೀಮಂತ ನಾಯಕ ಹೆಚ್‌.ಎಸ್‌. ದೊರೆಸ್ವಾಮಿ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, “ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ” ಎಂದು ಸಂತಾಪ‌ ಸೂಚಿಸಿದ್ದಾರೆ.

ಇದನ್ನು ಓದಿ: ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್‌ ಎಸ್‌ ದೊರೆಸ್ವಾಮಿ ನಿಧನ

ಮಾಜಿ ಪ್ರಧಾನಿ, ಜೆಡಿಎಸ್‌ ಪಕ್ಷದ ಅಧ್ಯಕ್ಷ ಹೆಚ್‌ ಡಿ ದೇವೇಗೌಡ ಅವರು ʻʻಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಶತಾಯುಷಿಗಳಾದ ಶ್ರೀ ಹೆಚ್. ಎಸ್. ದೊರೆಸ್ವಾಮಿಯವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು. ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ದುಡಿದ ಒಬ್ಬ ಮಹಾನ್ ಸಾಮಾಜಿಕ ಹೋರಾಟಗಾರರನ್ನು ಕಳೆದುಕೊಂಡು ನಮ್ಮ ರಾಜ್ಯ ಇಂದು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿ ದೊರೆಯಲಿ.ʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, “ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ಎಚ್.ಎಸ್. ದೊರೆಸ್ವಾಮಿಯವರ ನಿಧನ ನನಗೆ ಆಘಾತ ಉಂಟುಮಾಡಿದೆ.‌ ಮನೆ ಹಿರಿಯನನ್ನು ಕಳೆದುಕೊಂಡ ದುಃಖ ನನ್ನದಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ನಮ್ಮನ್ನು ಅಗಲಿ ಹೋದ ಅವರು ನಮ್ಮೆಲ್ಲರ ಆತ್ಮ ಸಾಕ್ಷಿಯಾಗಿದ್ದರು. ತಪ್ಪು ಕಂಡಾಗ ಎಚ್ಚರಿಸಿ, ಸರಿ ಕಂಡಾಗ ಬೆಂಬಲಿಸುತ್ತಿದ್ದ ಮಾರ್ಗದರ್ಶಕರಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಜಗ್ಗದೆ, ಕುಗ್ಗದೆ ಅನ್ಯಾಯ-ಅಕ್ರಮ‌ ಕಂಡಾಗ ಬೀದಿಗಿಳಿಯುತ್ತಿದ್ದ ಅವರು ಎಲ್ಲರ ಪಾಲಿನ ಸ್ಪೂರ್ತಿಯಾಗಿದ್ದರು” ಎಂದು ನುಡಿ ನಮನ ಅರ್ಪಿಸಿದ್ದಾರೆ.

ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರು “ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಪೂರ್ತಿ.ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಪೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ” ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌‌ ಸೆಂಥಿಲ್ ಅವರು, “ಕೆಲವು ಆತ್ಮಗಳು ನಾಶ ಹೊಂದುವುದಿಲ್ಲ. ನಿಮ್ಮ ಮಾರ್ಗದರ್ಶಕ ಬೆಳಕಿನೊಂದಿಗೆ ನಾವು ಮುಂದುವರಿಯುತ್ತೇವೆ, ಲಾಲ್‌ಸಲಾಮ್‌” ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು “ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ, ಬದುಕಿನ ಕೊನೆಯ ದಿನಗಳವರೆಗೂ ಮುಂಚೂಣಿಯಲ್ಲಿ ನಿಂತು ಜನಪರ ಧ್ವನಿಯಾಗುತ್ತಿದ್ದ ಶತಾಯುಷಿ, ಸ್ವತಂತ್ರ ಹೋರಾಟಗಾರ, ನಿಸ್ಟೂರವಾದಿ ದೊರೆಸ್ವಾಮಿಯವರ ನಿಧನವು ಈ ನಾಡಿಗೆ ತುಂಬಲಾರದ ನಷ್ಟ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ನೋವಿನಲ್ಲಿ ನಾವೂ ಬಾಗಿಗಳಾಗಿದ್ದೇವೆ” ಎಂದು ನಮನವನ್ನು ಸಲ್ಲಿಸಿದ್ದಾರೆ.

ಜೆಎನ್‌ಯು ಮಾಜಿ ಪ್ರೊಫೆಸರ್‌ ಪುರುಷೋತ್ತಮ ಬಿಳಿಮಲೆ ಅವರು, “ಡಾ. ಎಚ್.ಎಸ್. ದೊರೆಸ್ವಾಮಿ ಶತಮಾನದ ವ್ಯಕ್ತಿ. 20 ನೇ ಶತಮಾನವಿಡೀ ಬದುಕಿ, 21 ನೇ ಶತಮಾನದ ಮೊದಲೆರಡು ದಶಕಗಳನ್ನೂ ಕಂಡು ನಮಗೆಲ್ಲರಿಗೂ ಸ್ಫೂರ್ತಿಯ ಕೇಂದ್ರವಾಗಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸರಕಾರದ ಈಚಿನ ಭೂ ಕಬಳಿಕೆಯ ವಿರುದ್ಧದ ಹೋರಾಟದವರೆಗೂ ಅವರ ಚಟುವಟಿಕೆಗಳ ವ್ಯಾಪ್ತಿ ಹಬ್ಬಿತ್ತು. ಪತ್ರಕರ್ತರಾಗಿಯೂ ಅವರು ಪ್ರಸಿದ್ಧರು. ಗಾಂಧೀ ಹತ್ಯೆಯ ಕೆಲವು ದಿನಗಳ ಮೊದಲು ಗೋಡ್ಸೆ ಬೆಂಗಳೂರಿಗೆ ಬಂದದ್ದನ್ನು ಅವರು ದಾಖಲಿಸಿದ್ದರು’’ ಎಂದು ತಿಳಿಸಿದ್ದಾರೆ.

“ಕರ್ನಾಟಕ ಏಕೀಕರಣಕ್ಕೂ ಅವರು ದುಡಿದಿದ್ದರು. ಇಂದಿರಾಗಾಂಧೀ ಕಾಲದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ್ದ ಅವರು, ಈಚೆಗೆ ವೇಗವಾಗಿ ಬೆಳೆಯುತ್ತಿರುವ ಫ್ಯಾಸಿಸಂನ ವಿರುದ್ಧವೂ ಧ್ವನಿ ಎತ್ತುತ್ತಿದ್ದರು. ʼಗಾಂಧೀ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ಹೊರತು ವೈರತ್ವ ಇರಲಿಲ್ಲʼ ಎಂಬ ಅವರ ಮಾತು ನನಗೆ ವೈಯಕ್ತಿಕವಾಗಿ ಬಹಳ ಖುಷಿ ನೀಡಿತ್ತು. ಒಳ್ಳೆಯವರನ್ನೆಲ್ಲಾ ಟ್ರೋಲ್‌ ಮಾಡುವುದನ್ನೇ ಕೆಲಸ ಮಾಡಿಕೊಂಡಿರುವವರ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ‘ನಿಮ್ಮ ಬಗ್ಗೆ ಹೀಗೆ ಬರೆದಿದ್ದಾರಲ್ಲಾ?ʼ ಎಂದರೆ ಅಜ್ಜ ನಕ್ಕುಬಿಡುತ್ತಿದ್ದರು! ಬದುಕಿದರೆ ದೊರೆಸ್ವಾಮಿಯವರ ಹಾಗೆ ಬದುಕಬೇಕು!ನಮನಗಳು ಸಾರ್” ಎಂದು ಪುರುಷೋತ್ತಮ ಬಿಳಿಮಲೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ರನಟ ಪ್ರಕಾಶ್‌ ರಾಜ್‌ ಅವರು ದೊರೆಯೆ…. ಗುರುವೆ.. ನನ್ನ ನೆಲದ ಸಿರಿಯೆ….ನಮ್ಮೆಲ್ಲರ ಸ್ಪೂರ್ತಿಯ ಚಿಲುಮೆಯೆ .. ನಮಗಾಗಿ ಹೋರಾಡಿದ ಯೋಧನೆ… ನೀವಿಲ್ಲದೆ ಅನಾಥರಾಗಿದ್ದೇವೆ…  ಎಂದು ನಮನವನ್ನು ಅರ್ಪಿಸಿದ್ದಾರೆ.

ಸಿಐಟಿಯು ಸಂಘಟನೆಯ ರಾಜ್ಯ ಅಧ್ಯಕ್ಷೆ ಎಸ್‌ ವರಲಕ್ಷ್ಮಿ ಅವರು, “ಸರಳ,ಸ್ವಾಭಿಮಾನಿ ಮತ್ತು ಹೋರಾಟವನ್ನೇ ಉಸಿರಾಗಿಸಿಕೊಂಡ ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿಯವರು” ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ʻʻಶತಾಯುಷಿ, ಹಿರಿಯ ಸಾಮಾಜಿಕ ಚಿಂತಕ ದೊರೆಸ್ವಾಮಿಯವರು ಅಗಲಿಕೆಯ ಸುದ್ದಿ ಕೇಳಿ ದುಃಖವಾಗಿದೆ. ಶ್ರೀಯುತರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಲೇಖಕಿ ಚೇತನಾ ತೀರ್ಥಹಳ್ಳಿ ಅವರು, “ನಮ್ಮ ಪ್ರೀತಿಯ ‘ಆಂದೋಲನಜೀವಿ’, ಅದಮ್ಯ ಚೇತನ ದೊರೆಸ್ವಾಮಿಯವರು ತಮ್ಮ ಶತಮಾನದ ಬದುಕು ಮುಗಿಸಿದ್ದಾರೆ. ಸದಾ ಶಾಂತಿಯನ್ನೇ ಹಂಚಿದ ದೊರೆಸ್ವಾಮಿಯವರ ಆತ್ಮಕ್ಕೆ ಶಾಂತಿ ದೊರೆಯದೆ ಇರುವುದೆ? ಅದರಲ್ಲೂ ಇವತ್ತು ಬುದ್ಧ ಹುಣ್ಣಿಮೆ!” ಎಂದು ಹೇಳಿದ್ದಾರೆ.

ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು, “ಬೆಳಕು ಆರಿತು” ಎಂದು ಹೇಳಿದ್ದಾರೆ.

ಲೇಖಕ ಹೆಚ್‌ ವಿ ವಾಸು ಅವರು ʻʻ ಕೋವಿಡ್‌ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಕೆಲವರೊಂದಿಗೆ ಫೋನ್‌ ಮಾಡಿ ಮಾಡಿದ್ದರು. ಆ ಸಂದರ್ಭದಲ್ಲಿ ಇದು ನನಗೊಬ್ಬನಿಗೆ ಆಗಿರುವುದಲ್ಲ, ಇಡೀ ದೇಶಕ್ಕೆ ಆಗಿದೆ. ಎದುರಿಸಬೇಕಷ್ಟೇ ಎಂದು ಹೇಳತೊಡಗಿದ್ದಕ್ಕೂ ಕಾರಣವಿತ್ತು. ತಾನು ಧೃತಿಗೆಡದೇ ಮಿಕ್ಕವರಲ್ಲಿ ಧೈರ್ಯ ತುಂಬುವ ಕರ್ತವ್ಯ ಪ್ರಜ್ಞೆಯೂ ಜೊತೆಯಾಗಿ ಆ ಮಾತುಗಳು ಬಂದಿದ್ದವು. ಅವರ ಕುಟುಂಬದವರಿಗೂ, ಹೋರಾಟದ ಸಂಗಾತಿಗಳಿಗೂ ಧೈರ್ಯ ತುಂಬಲು ಶುರು ಮಾಡಿದ್ದರು. ಆದರೆ ಬಹುಶಃ ದೇಹ ಸಹಕರಿಸಲಿಲ್ಲ. ಎಂದು ಬರೆದುಕೊಂಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *