ಗ್ಯಾನ್‌ವಾಪಿ ಪ್ರಕರಣ: ಪೂಜೆ ಸಲ್ಲಿಕೆಗೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಅರ್ಹ ಎಂದ ವಾರಣಾಸಿ ನ್ಯಾಯಾಲಯ

ವಾರಣಾಸಿ: ಇಲ್ಲಿನ ಗ್ಯಾನ್‌ವಾಪಿ ಮಸೀದಿಯಲ್ಲಿ ದೇವತೆಗಳ ಕುರುಹು ಇದ್ದು, ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಐವರು ಮಹಿಳೆಯರು ಸಲ್ಲಿಸಿದ ಅರ್ಜಿ ವಿಚಾರಣೆಗೆ ಯೋಗ್ಯವೋ ಅಲ್ಲವೋ ಎಂಬ ಬಗ್ಗೆ ತೀರ್ಪು ಪ್ರಕಟಿಸಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದೆ ಹಾಗೂ ಮಸೀದಿ ಪರ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.

ಗ್ಯಾನ್‌ವಾಪಿ ಮಸೀದಿ ಆವರಣದ ಗೋಡೆಯಲ್ಲಿ ದೇವತೆಯ ಕುರುಹುಗಳಿವೆ. ಅದಕ್ಕೆ ಶೃಂಗಾರ ಗೌರಿ ಪೂಜೆಗೆ ಅವಕಾಶ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಅರ್ಹವಾಗಿದೆ’ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಆದೇಶಿಸಿದ್ದಾರೆ ಮತ್ತು ಮುಂದಿನ ವಿಚಾರಣೆಯನ್ನು ಸೆಪ್ಟಂಬರ್‌ 22ಕ್ಕೆ ಮುಂದೂಡಿದ್ದಾರೆ.

ಗ್ಯಾನ್‌ವಾಪಿ ಮಸೀದಿಯಲ್ಲಿ ಪ್ರತಿದಿನ ಪೂಜೆಗೆ ಅನುಮತಿ ನೀಡುವಂತೆ ಸಲ್ಲಿಸಿದ ಅರ್ಜಿ ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಸಮಿತಿಯು ಮನವಿಯನ್ನು ಸಲ್ಲಿಸಿತು. ಈ ಮನವಿಯನ್ನು ತಿರಸ್ಕರಿಸಲಾಗಿದೆ. ಮಸೀದಿ ಪರವಾಗಿ ಪ್ರತಿನಿಧಿಸಿರುವ ಅಂಜುಮನ್ ಇಂತೆಜಾಮಿಯಾ ಸಮಿತಿಯು ಹೈಕೋರ್ಟ್‌ ಮೆಟ್ಟಿಲೇರುವುದಾಗಿ ಹೇಳಿದೆ.

ನ್ಯಾಯಾಧೀಶರು, ಪ್ರಕರಣದ ತೀರ್ಪನ್ನು ಸೆಪ್ಟಂಬರ್‌ 12 ರವರೆಗೆ ಕಾಯ್ದಿರಿಸಿ, ಆಗಸ್ಟ್‌ 24ರಂದು ವಿಚಾರಣೆಯನ್ನು ಪೂರ್ಣಗೊಳಿಸಿದ್ದರು. ಇದಕ್ಕೂ ಮೊದಲು, ಮಸೀದಿಯ ಆವರಣದಲ್ಲಿ ವಿಡಿಯೊಗ್ರಫಿ ಸಮೀಕ್ಷೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು. ಈಗಾಗಲೇ ಸಮೀಕ್ಷೆಯ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.

ಗ್ಯಾನ್‌ನವಾಪಿ ಮಸೀದಿ ಆವರಣದೊಳಗೆ ಪೂಜೆ ಸಲ್ಲಿಸುವ ಹಕ್ಕು ತಮಗೆ ಇದೆ ಎಂದು ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಿವಿಲ್‌ ನ್ಯಾಯಾಲಯವು ವಕೀಲ ಕಮಿಷನರ್‌ ಅವರನ್ನು ನೇಮಿಸಿ ಮಸೀದಿ ಸಮೀಕ್ಷೆಗೆ ಆದೇಶಿಸಿತ್ತು. ನಂತರ ಅವರು ವಿಡಿಯೊ ಸರ್ವೆ ನಡೆಸಿ ಸಿವಿಲ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಆಗಸ್ಟ್‌ 24ರ ವಿಚಾರಣೆ ಅವಧಿಯಲ್ಲಿ ಮಸೀದಿ ಪರವಾಗಿ ವಾದಿಸಿದ ವಕೀಲ ಶಮೀಮ್‌ ಅಹಮದ್‌ ಗ್ಯಾನ್‌ವಾಪಿ ಮಸೀದಿ ವಕ್ಫ್‌ ಆಸ್ತಿಯಾಗಿದ್ದು ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಇಲ್ಲ ಎಂದಿದ್ದರು. ಮತ್ತೊಂದೆಡೆ ವಕೀಲ ಮದನ್‌ ಮೋಹನ್‌ ಯಾದವ್‌ “ಗ್ಯಾನ್‌ವಾಪಿ ಮಸೀದಿಯಲ್ಲ ಅದೊಂದು ದೇವಾಲಯದ ಭಾಗ ಎಂದಿದ್ದರು. 1991ರ ಪೂಜಾ ಸ್ಥಳ ಕಾಯಿದೆ ಈ ಪ್ರಕರಣಕ್ಕೆ ಅನ್ವಯವಾಗದುʼʼ ಎಂದಿದ್ದರು.

ನ್ಯಾಯಾಲಯದ ತೀರ್ಪಿಗೂ ಮುನ್ನ ಮಾತನಾಡಿದ್ದ ವಕೀಲ ವಿಷ್ಣು ಶಂಕರ್ ಜೈನ್, 1991ರ ಆರಾಧನಾ ಕಾಯಿದೆ ನಮ್ಮ ಪರವಾಗಿದೆ. ತೀರ್ಪು ನಮ್ಮ ಪ್ರಕಾರ ಬಂದರೆ, ನಾವು ಎಎಸ್ಐ ಸರ್ವೇ, ಶಿವಲಿಂಗದ ಕಾರ್ಬಲ್ ಡೇಟಿಂಗ್ ಗೆ ಅನುಮತಿ ಕೇಳಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದರು.

ಒಂದು ದಿನದ ಹಿಂದೆ, ವಾರಣಾಸಿಯ ಆಡಳಿತವು ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ವಿಧಿಸಿದ್ದು ಎರಡೂ ಸಮುದಾಯಗಳ ಜನರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿತ್ತು. ಕೋಮು ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರು ಕಳೆದ ತಿಂಗಳು ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು.

ದೇಶದ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ, ಅಂದರೆ 1947ರ ಆಗಸ್ಟ್‌ 15ರಲ್ಲಿ ಇದ್ದಂತೆ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಅಂತಹ ಪೂಜಾ ಸ್ಥಳಗಳ ಸ್ವರೂಪದ ಬಗ್ಗೆ ವಿವಾದ ಎಬ್ಬಿಸುವ ಪ್ರಕರಣಗಳನ್ನು ನ್ಯಾಯಾಲಯಗಳು ಪುರಸ್ಕರಿಸದಂತೆ 1992ರ ಬಾಬರೀ ಮಸೀದಿ-ರಾಮ ಜನ್ಮಭೂಮಿ ವಿವಾದ ಸಂದರ್ಭದಲ್ಲಿ ಬಂದ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿಗಳು) ಕಾಯಿದೆ ಹೇಳುತ್ತಿದ್ದು ಅದರಂತೆ ಅಂಜುಮನ್ ಇಂತೆಜಾಮಿಯಾ ಸಮಿತಿ ಸಿಪಿಸಿ ಆದೇಶ VII ನಿಯಮ 11ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದವು.

ಈ ಪ್ರಕರಣದಲ್ಲಿ ಅತೀವ ಸೂಕ್ಷ್ಮತೆಯ ಪ್ರಶ್ನೆಯಾಗಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಸಿವಿಲ್‌ ನ್ಯಾಯಾಲಯದ ಮುಂದಿದ್ದ ಮೊಕದ್ದಮೆಯನ್ನು ಕಳೆದ ಮೇ 20ರಂದು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

Donate Janashakthi Media

Leave a Reply

Your email address will not be published. Required fields are marked *