ಶ್ರೀನಗರ: ಸಂವಿಧಾನಾತ್ಮಕವಾಗಿ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ ಇಂದಿಗೆ ಎರಡು ವರ್ಷಗಳು. ಆಗಸ್ಟ್ 5, 2019 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅದರ ವಿಭಜನೆಯನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡುವುದಾಗಿ ಪ್ರಸ್ತಾಪವನ್ನು ಮಂಡಿಸಿದ್ದರು.
ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಸಿದಂತೆ ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಅನ್ವಯ ವಿಶೇಷ ಸ್ಥಾನಮಾನ ರದ್ದು ಮಾಡುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿತ್ತು.
ಇಂದು ಈ ಹಿನ್ನೆಲೆಯಲ್ಲಿ ಪಿಎಜಿಡಿ ಅಧ್ಯಕ್ಷರೂ ಆಗಿರುವ ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಮೈತ್ರಿಕೂಟದ ಅಂಗಪಕ್ಷಗಳ ಸಭೆ ನಡೆಯಿತು.
ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರದ ಸ್ವರೂಪ ನಾಶ: ಮೋದಿ-ಷಾ ಜೋಡಿಯ ಆಟದ ಹುನ್ನಾರ
ಪೀಪಲ್ಸ್ ಅಲಯೆನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ‘ಸಂವಿಧಾನ ಬದ್ಧವಾಗಿ ಜಮ್ಮು–ಕಾಶ್ಮೀರಕ್ಕೆ ಇದ್ದಂತಹ ವಿಶೇಷ ಸ್ಥಾನಮಾನದ ಅಧಿಕಾರ ಮರಳಿಸುವಂತೆ ಸಂಸತ್ತು ಹಾಗೂ ದೇಶದ ಜನತೆಯ ಬಳಿಗೆ ಹೋಗುವುದಾಗಿ’ ಹೇಳಿದೆ. ಇಂದಿನ ಸಭೆಯಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಿಪಿಐ(ಎಂ) ನಾಯಕ ಮೊಹಮ್ಮದ್ ಯೂಸೂಫ್ ತಾರಿಗಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾರಿಗಾಮಿ “ನಮ್ಮ ಕಾನೂನುಬದ್ಧ ಹಕ್ಕುಗಳ ಮರುಸ್ಥಾಪನೆಗಾಗಿ ನಮ್ಮ ಹೋರಾಟವನ್ನು ಮುಂದುವರಿಸುವ ನಮ್ಮ ನಿರ್ಧಾರವಾಗಿದೆ” ಎಂದು ಹೇಳಿದರು.
ವಿಶೇಷ ಹಕ್ಕುಗಳ ರದ್ದತಿಯ ಸಂದರ್ಭದಲ್ಲಿ ಅವರು ಭರವಸೆ ನೀಡಿದಂತೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಮತ್ತು ಹಿಂಸೆ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿಕೊಂಡರು. ಆದರೆ, ಅದು ಆಗಸ್ಟ್ 5, 2019 ರಿಂದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇತ್ತೀಚೆಗೆ ಸಂಸತ್ತಿನ ಮೇಲ್ಮನೆ ಅಧಿವೇಶನದ ಸಂದರ್ಭದಲ್ಲಿ ನೀಡಿದ ಹೇಳಿಕೆ ಸಾಕ್ಷಿಕರಿಸುತ್ತದೆʼʼ ಎಂದು ತಾರಿಗಾಮಿ ಹೇಳಿದರು.
ಇದನ್ನು ಓದಿ: ಸರ್ವಪಕ್ಷ ಸಭೆ : “ಹಲವು ಪ್ರಶ್ನೆಗಳನ್ನೆತ್ತಿದೆವು- ಯಾವುದೇ ಉತ್ತರ ಸಿಗಲಿಲ್ಲ” -ತರಿಗಾಮಿ
ಸಭೆಯಲ್ಲಿ ಮಾತನಾಡಿದ ವಿವಿಧ ಪಕ್ಷದ ಪ್ರಮುಖರು ‘2019ರ ಆಗಸ್ಟ್ 5ರಂದು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು’ ಎಂದರು. ಸಂವಿಧಾನ ನೀಡಿರುವ ಹಕ್ಕುಗಳನ್ನು ಮರಳಿ ಪಡೆಯುವ ಶಪಥ ಮಾಡಿದ್ದೇವೆ. ಅಲ್ಲದೇ, ನಮ್ಮ ಹೋರಾಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿರುವ ಬಗ್ಗೆ ಮಾಹಿತಿ ಇದೆ.
ಪಿಎಜಿಡಿ ಎಂಬುದು ಆರು ಪ್ರಮುಖ ರಾಜಕೀಯ ಪಕ್ಷಗಳ ಮೈತ್ರಿಕೂಟ. ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯುವ ಸಲುವಾಗಿ ಹೋರಾಟ ನಡೆಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಮೈತ್ರಿಕೂಟ ರಚಿಸಲಾಗಿದೆ.
ವಿಶೇಷ ಸ್ಥಾನಮಾನ ರದ್ದತಿಯೊಂದಿಗೆ ರಾಜ್ಯದ ಪ್ರಮುಖರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಅವರನ್ನು 2020 ರಲ್ಲಿ ಬಿಡುಗಡೆಗೊಳಿಸಲಾಯಿತು. ನಂತರ ಮೈತ್ರಿ ಸಭೆಗಳನ್ನು ನಡೆಸಿ ಪ್ರಮುಖ ಪಕ್ಷಗಳು ಗುಪ್ಕರ್ ಒಕ್ಕೂಟ ರಚಿಸಿಕೊಂಡವು. ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಿರುವ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುವ ನಿರ್ಣಯವನ್ನು ಅಂಗೀಕರಿಸಿದರು. ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿದೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರತಿಸ್ಪರ್ಧಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಒಂದಾಗಿದೆ.