ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಹಯೋಗ ಇರಬೇಕೇ ಹೊರತು ವಿವಾದವಲ್ಲ-ಕೇರಳ ಶಿಕ್ಷಣ ಮಂತ್ರಿ

ಕೇರಳ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಮಾದರಿಯನ್ನು ಸ್ಥಾಪಿಸಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ವಿಷಯಕ್ಕೆ ಬಂದಾಗ, ಸಹಯೋಗ ಮತ್ತು ವಿಚಾರ ವಿನಿಮಯವು ರಾಜ್ಯಗಳ ನಡುವೆ ಮಾತ್ರವಲ್ಲ, ರಾಜ್ಯಗಳು ಮತ್ತು ದೇಶಗಳ ನಡುವೆಯೂ ನಡೆಯಬೇಕು. ಈ ವಿಷಯದಲ್ಲಿ ನಮಗೆ ಬೇಕಿರುವುದು ವಿವಾದವಲ್ಲ, ಒಡನಾಡಿ ಭಾವ ಎಂದು ಕೇರಳ ಶಿಕ್ಷಣ ಮಂತ್ರಿ ವಿ.ಶಿವನ್‍ ಕುಟ್ಟಿ ಹೇಳಿದ್ದಾರೆ. ಅವರು ದಿಲ್ಲಿಯ ಶಾಸಕಿ ಮತ್ತು ಆಮ್‍ ಆದ್ಮಿ ಪಾರ್ಟಿಯ ಮುಖಂಡರಾದ ಆತಿಶಿಯವರು ಒಂದು ಟ್ವೀಟಿಗೆ ಸಂಬಂಧಪಟ್ಟಂತೆ ಸ್ಪಷ್ಟೀಕರಣ ನೀಡುತ್ತ ಹೀಗಂದಿದ್ದಾರೆ.

“ಕೇರಳದ ಅಧಿಕಾರಿಗಳಿಗೆ ಕಲ್ಕಾಜಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಆತಿಥ್ಯ ನೀಡುವುದು ಅದ್ಭುತವಾಗಿದೆ. ಅವರು ತಮ್ಮ ರಾಜ್ಯದಲ್ಲಿ ನಮ್ಮ ಶಿಕ್ಷಣ ಮಾದರಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಜಾರಿಗೆ ತರಲು ಉತ್ಸುಕರಾಗಿದ್ದರು. ಇದು  ಕೇಜ್ರಿವಾಲ್ ಸರ್ಕಾರದ ರಾಷ್ಟ್ರ ನಿರ್ಮಾಣದ ಕಲ್ಪನೆ. ಸಹಯೋಗದಿಂದ ಅಭಿವೃದ್ಧಿ” ಎಂದು ಆತಿಶಿಯವರು ತಮ್ಮ ಟ್ವೀಟಿನಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಕೇರಳದ  ಶಿಕ್ಷಣ ಮಂತ್ರಿಗಳು  “ಕೇರಳದ ಶಿಕ್ಷಣ ಇಲಾಖೆ ;ದಿಲ್ಲಿ ಮಾದರಿ’ಯಿಂದ ಕಲಿಯಲು ಯಾವುದೇ ಅಧಿಕಾರಿಯನ್ನು ಕಳುಹಿಸಿಲ್ಲ. ಅದೇ ವೇಳೆಗೆ, ಕಳೆದ ತಿಂಗಳು ‘ಕೇರಳ ಮಾದರಿ’ಯನ್ನು ಅಧ್ಯಯನ ಮಾಡಲು ದಿಲ್ಲಿಯಿಂದ  ಭೇಟಿ ನೀಡಿದ್ದ ಅಧಿಕಾರಿಗಳಿಗೆ  ಸಕಲ ನೆರವನ್ನು ನೀಡಲಾಗಿದೆ.  “ಎಎಪಿ ಶಾಸಕರು ಯಾವ ‘ಅಧಿಕಾರಿಗಳನ್ನು’ ಸ್ವಾಗತಿಸಿದ್ದಾರೆ ಎಂದು ನಾವು ತಿಳಿಯ ಬಯಸುತ್ತೇವೆ” ಎಂದು ಟ್ವೀಟ್ ಮಾಡಿದ್ದರು.

ಎಎಪಿ ಶಾಸಕಿಯವರು ‘ಸ್ವಾಗತಿಸಿದ್ದು’ ಕೇರಳದ ಎರಡು ಖಾಸಗಿ ಸಿ.ಬಿ.ಎಸ್‍.ಇ. ಶಾಲೆಗಳ ಪ್ರಿನ್ಸಿಪಾಲ್‍ ಮತ್ತು ಮ್ಯಾನೇಜರನ್ನು ಎಂದು ಆ ಮೇಲೆ ತಿಳಿದು ಬಂತು. ಇವರು ರಾಜ್ಯದ ಸಿ.ಬಿ.ಎಸ್‍.ಇ ಶಾಲಾ ಸಂಘಟನೆಗಳ  ಪದಾಧಿಕಾರಿಗಳು ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಶಿವನ್‍ ಕುಟ್ಟಿಯವರು ಈ ಕೆಳಗಿನ ಸ್ಪಷ್ಟೀಕರಣ ನೀಡಿದ್ದಾರೆ:

“ಪ್ರಸ್ತುತ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ನಿಮ್ಮ ಟ್ವೀಟ್‌ನಲ್ಲಿ ‘ಕೇರಳದಿಂದ ಅಧಿಕಾರಿಗಳು’ ಎಂಬ ಪದಗುಚ್ಛವನ್ನು ಬಳಸಲಾಗಿದೆ, ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಅಧಿಕಾರಿಗಳನ್ನು ಕೇರಳ ಸರ್ಕಾರದಿಂದ ಕಳುಹಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ತಪ್ಪಿನ ಅರಿವಾಗಿ ಆಮ್ ಆದ್ಮಿ ಪಕ್ಷದ ಕೇರಳ ಘಟಕ ವಿಷಾದ ವ್ಯಕ್ತಪಡಿಸಿದೆ (ಪೋಸ್ಟ್ ಜೊತೆಗೆ ಸ್ಕ್ರೀನ್ ಶಾಟ್ ಲಗತ್ತಿಸಲಾಗಿದೆ).

ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ವಿಷಯಕ್ಕೆ ಬಂದಾಗ, ಸಹಯೋಗ ಮತ್ತು ವಿಚಾರ ವಿನಿಮಯವು ರಾಜ್ಯಗಳ ನಡುವೆ ಮಾತ್ರವಲ್ಲ, ರಾಜ್ಯಗಳು ಮತ್ತು ದೇಶಗಳ ನಡುವೆಯೂ ನಡೆಯಬೇಕು ಎಂದು ಕೇರಳ ನಂಬುತ್ತದೆ.

ಕೇರಳದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಸಂಘವು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇಲ್ಲಿ ಆ ಜವಾಬ್ದಾರಿಯನ್ನು ವಹಿಸಲಾಗಿರುವುದು ಜನತೆಯ ಸರಕಾರಕ್ಕೆ .

ಕೇರಳ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಮಾದರಿಯನ್ನು ಸ್ಥಾಪಿಸಿದೆ. ಈ ಬಗ್ಗೆ ಹೊಸದಿಲ್ಲಿಯ ನಿಯೋಗಕ್ಕೂ ಸ್ಪಷ್ಟನೆ ನೀಡಲಾಗಿದೆ. ಈ ವಿಷಯದಲ್ಲಿ ನಮಗೆ ಬೇಕಿರುವುದು ವಿವಾದವಲ್ಲ, ಒಡನಾಡಿ ಭಾವ ಎಂದು ನಾನು ದೃಢವಾಗಿ ನಂಬುತ್ತೇನೆ.”

ಈ ಸಂದರ್ಭದಲ್ಲಿ  2016-17ರಲ್ಲಿ ನೀತಿ ಆಯೋಗದ ‘ಶಾಲಾಶಿಕ್ಷಣ ಗುಣಮಟ್ಟ ಸೂಚ್ಯಂಕ’(ಎಸ್‍.ಇ.ಕ್ಯು.ಐ.)ದ ಈ ಪಟ್ಟಿಯನ್ನು ಸಿಪಿಐ(ಎಂ) ಮುಖಂಡರೊಬ್ಬರು ನೆನಪಿಸಿದ್ದಾರೆ; ಇದರ ಪ್ರಕಾರ ಕೇರಳ 82.29% ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ.

Donate Janashakthi Media

Leave a Reply

Your email address will not be published. Required fields are marked *