ಮಂಗಳೂರು: ಮಂಗಳೂರಿನ ಕುಡುಪು ಬಳಿ ನಡೆದ ಗುಂಪು ಹತ್ಯೆ ಪ್ರಕರಣದ ತನಿಖೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಆಸಕ್ತಿ ಕಳೆದು ಕೊಂಡಿರುವುದು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತಿದೆ. ಪ್ರಕರಣದ ಪ್ರಧಾನ ಆರೋಪಿ ರವೀಂದ್ರ ನಾಯಕ್ ನನ್ನು ಇನ್ನೂ ಬಂಧಿಸದಿರುವುದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಕೈ ಬಿಟ್ಟಿರುವುದು, ಪ್ರಕರಣ ಮುಚ್ಚಿ ಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಮೇಲೆ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ತನಿಖೆಯ ಜವಾಬ್ದಾರಿಯನ್ನು ಅದೇ ಕಳಂಕಿತ ಅಧಿಕಾರಿಗೆ ಹೊರಿಸಿರುವುದು ಸರಕಾರದ ಆತಂಕಾರಿ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಇದನ್ನು ಓದಿ :-₹50 ಸಾವಿರ ಲಂಚ ಪಡೆಯುತ್ತಿದ್ದ ದಾವಲಮಲಿಕ್ ಇಮಾಮಸಾಬ್ ಮುರುಡಿ ಬಂಧನ
ಕಡುಪು ಮಾಬ್ ಲಿಂಚಿಂಗ್ ಪ್ರಕರಣ ಬಹಿರಂಗ ಗೊಂಡು ಜನಾಕ್ರೋಶ ವ್ಯಕ್ತಗೊಂಡಾಗ ಜಿಲ್ಲಾ ಉಸ್ತುವಾರಿ ಸಚಿವರು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಮಾತುಗಳನ್ನು ಆಡಿದ್ದರು. ಆದರೆ, ಸುಹಾಸ್ ಶೆಟ್ಟಿ ಹತ್ಯೆಯ ತರುವಾಯ ರಾಜ್ಯ ಸರಕಾರ ಈ ಭರವಸೆಯನ್ನು ಮಾತ್ರ ಅಲ್ಲದೆ, ಅಶ್ರಫ್ ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ಮಾತಾಡುವುದನ್ನೆ ಕೈ ಬಿಟ್ಟಿದೆ. ಇದು ಅಶ್ರಫ್ ಗುಂಪು ಹತ್ಯೆ ಪ್ರಕರಣದ ತನಿಖೆ ಹಳಿ ತಪ್ಪುವ, ಹತ್ಯೆಯ ಭಾಗಿದಾರರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಭೀತಿಗೆ ಕಾರಣವಾಗಿದೆ. ಮೃತ ಅಶ್ರಫ್ ನ ಸಂತ್ರಸ್ತ ಕುಟುಂಬವೂ ಈ ಆತಂಕ ಸೃಷ್ಟಿಮಾಡಿದೆ ಎಂದು ತಿಳಿಸಿದ್ದಾರೆ.
ಕುಡುಪು ಮಾಬ್ ಲಿಂಚಿಂಗ್ ಪ್ರಕರಣ ಮುಚ್ಚಿ ಹಾಕುವ ಒಳ ಸಂಚಿನ ಭಾಗವಾಗಿಯೆ ಪ್ರಕರಣದಲ್ಲಿ ಪಾಲ್ಗೊಂಡ ಮಂಜುನಾಥ್ ಎಂಬಾತನಿಂದಲೆ ದೂರು ಬರೆಸಿಕೊಂಡು ಯುಡಿಆರ್ ದಾಖಲಿಸಲಾಗಿತ್ತು. ಪ್ರಕರಣ ಬಹಿರಂಗಗೊಂಡು ರಾಜ್ಯ ಮಟ್ಟದಲ್ಲಿ ಸುದ್ದಿಯಾದ ತರುವಾಯ ಕೊಲೆ ಮೊಕದ್ದಮೆ ದಾಖಲಿಸುವ ಅನಿವಾರ್ಯತೆ ಎದುರಾದಾಗಲು, ಸು ಮಟೊ ದೂರು ದಾಖಲಿಸಿಕೊಳ್ಳುವ ಬದಲಿಗೆ ಮಾಬ್ ಲಿಂಚಿಂಗ್ ನಡೆಸಿದ ಗುಂಪಿನ ಆತ್ಮೀಯ ಒಡನಾಟ ಹೊಂದಿರುವ ವ್ಯಕ್ತಿಯನ್ನೆ ಪೊಲೀಸ್ ಇಲಾಖೆ ದೂರುದಾರನಾಗಿ ಆಯ್ಕೆ ಮಾಡಿಕೊಂಡಿತು. ಹಾಗೂ, ಠಾಣೆಗೆ ಕರೆಸಿ ಬರೆಸಿಕೊಂಡ ದೂರಿನಲ್ಲಿ “ಅಪರಿಚಿತ ಪಾಕಿಸ್ತಾನ ಎಂದು ಕೂಗುತ್ತಾ ಬರುತ್ತಿದ್ದ” ಎಂಬ ವಾಕ್ಯವನ್ನು ದುರುದ್ದೇಶದಿಂದಲೆ ಸೇರ್ಪಡೆಗೊಳಿಸಲಾಗಿತ್ತು. ಹಾಗಿರುತ್ತಾ , ಮಂಗಳೂರು ಕಮಿಷನರೇಟ್ ಪೊಲೀಸರಿಂದ ಅಮಾಯಕ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ನ್ಯಾಯ ದೊರಕಲು ಹೇಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ :-ಮಾತುಗಾರಿಕೆ ಸಂಸತ್ತಿನಲ್ಲಿ ವಿಷಯವಾರು ಚರ್ಚೆಗೆ ಬದಲಿಯಾಗುವುದು ಸಾಧ್ಯವಿಲ್ಲ- ಎಂ.ಎ.ಬೇಬಿ
ರಾಜ್ಯದ ಕಾಂಗ್ರೆಸ್ ಸರಕಾರ ಪ್ರಕರಣದ ಕುರಿತು ತನ್ನ ನಿರಾಸಕ್ತಿ ತೊರೆಯಬೇಕು. ಕುಡುಪು ಗುಂಪು ಹತ್ಯೆ ಪ್ರಕರಣದ ತನಿಖೆಗಾಗಿ ತಕ್ಷಣವೆ, ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು, ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಪ್ರಕರಣದ ತನಿಖೆಯನ್ನೂ ಈ ತಂಡದ ವ್ಯಾಪ್ತಿಗೆ ತರಬೇಕು. ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಕಳಂಕ ಹೊತ್ತಿರುವ ಪೊಲೀಸ್ ಕಮೀಷನರ್ ಅಗ್ರವಾಲ್ ರನ್ನು ತಕ್ಷಣ ಅಮಾನತುಗೊಳಿಸಬೇಕು, ಗುಂಪು ಹತ್ಯೆ ಪ್ರಕರಣದ ಪ್ರಧಾನ ಪಾತ್ರಧಾರಿ, ಪ್ರಭಾವಿ ಬಿಜೆಪಿ ಮುಖಂಡ ರವೀಂದ್ರ ನಾಯಕ್ ಹಾಗೂ ಉಳಿದ ಭಾಗೀದಾರರನ್ನು ತಕ್ಷಣ ಬಂಧಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ. ಈ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳದಿದ್ದಲ್ಲಿ ವಾರಾಂತ್ಯದಲ್ಲಿ ಜಿಲ್ಲಾ ಪ್ರವಾಸದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.