ಅಹಮದಾಬಾದ್: ಮೋದಿ ಉಪನಾಮದ ಟೀಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಮಾಡಿದ ಮನವಿಯನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ತೀರ್ಪನ್ನು ಪ್ರಕಟಿಸುವಾಗ ನ್ಯಾಯಾಲಯವು, “ಸೆಷನ್ಸ್ ನ್ಯಾಯಾಲಯದ ಆದೇಶವು ಸರಿಯಾಗಿದ್ದು, ನ್ಯಾಯಯುತ ಮತ್ತು ಕಾನೂನುಬದ್ಧವಾಗಿದೆ” ಎಂದು ಹೇಳಿದೆ.
ಟ್ರಯಲ್ ಕೋರ್ಟ್ ಶಿಕ್ಷೆಯ ಆದೇಶ ಸರಿಯಾಗಿದೆ, ಹೇಳಿದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದ್ದು, ಅರ್ಜಿಯನ್ನು ವಜಾಗೊಳಿಸಿದೆ. ರಾಹುಲ್ ಗಾಂಧಿ ವಿರುದ್ಧ ಕನಿಷ್ಠ 10 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಕೋರ್ಟ್ ಈ ವೇಳೆ ಉಲ್ಲೇಖಿಸಿದೆ.
ಇದನ್ನೂ ಓದಿ: ಮೋದಿ ಸರ್‌ನೇಮ್ ವಿವಾದ : ಜೈಲು ಶಿಕ್ಷೆ ಪ್ರಶ್ನಿಸಿ ರಾಹುಲ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ
ಈ ತೀರ್ಪಿನಿಂದಾಗಿ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಅಥವಾ ಸಂಸದರಾಗಿ ತಮ್ಮ ಸ್ಥಾನಮಾನವನ್ನು ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಮೇ ತಿಂಗಳಲ್ಲಿ ನ್ಯಾಯಾಲಯವು ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಮಧ್ಯಂತರ ರಕ್ಷಣೆಯನ್ನು ನಿರಾಕರಿಸಿತ್ತು ಮತ್ತು ಅವರ ಮನವಿಯನ್ನು ಪರಿಗಣನೆಯಲ್ಲಿ ಕಾಯ್ದಿರಿಸಿತ್ತು.
ಮೋದಿ ಉಪನಾಮ ಪ್ರಕರಣ
ಮಾರ್ಚ್ 23 ರಂದು ಸೂರತ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೆಚ್.ಹೆಚ್. ವರ್ಮಾ ಅವರು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ನ್ಯಾಯಾಲಯದ ಆದೇಶದ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.
ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ ನಂತರ, ರಾಹುಲ್ ಗಾಂಧಿಯವರ ವಕೀಲ ಕಿರಿತ್ ಪನ್ವಾಲಾ ಅವರು ತೀರ್ಪಿನ ವಿರುದ್ಧ ಸೂರತ್ ಹೆಚ್ಚುವರಿ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಆರ್.ಪಿ. ಮೊಗೇರಾ ಅವರ ಮುಂದೆ ಮೇಲ್ಮನವಿ ಸಲ್ಲಿಸಲು ಅರ್ಜಿ ಸಲ್ಲಿಸಿದರು.
ಇದನ್ನೂ ಓದಿ: ಮೋದಿ ಹೆಸರನ್ನು ಟೀಕಿಸಿದ ರಾಹುಲ್ ಗಾಂಧಿಗೆ 2 ವರ್ಷ ಜೈಲು; ತೀರ್ಪು ನೀಡಿದ ಕೋರ್ಟಿನಿಂದಲೇ ಜಾಮೀನು
“ಎಲ್ಲಾ ಕಳ್ಳರು ‘ಮೋದಿ’ ಎಂಬ ಸರ್‌ನೇಮ್ ಹೇಗೆ ಇಟ್ಟಕೊಂಡಿದ್ದಾರೆ?” ಎಂಬ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ಮೇಲೆ ಈ ಪ್ರಕರಣ ದಾಖಲಿಸಲಾಗಿತ್ತು. 2019 ರ ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದ ಕೋಲಾರದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.
ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, “ಹೈಕೋಟ್‌ನ ಇಂದಿನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಯೊಬ್ಬರೂ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಳ್ಳಬೇಕು. ಅದುವೆ ನಿಜವಾದ ಅರ್ಥದಲ್ಲಿ ಸತ್ಯಮೇವ ಜಯತೆ” ಎಂದು ಹೇಳಿದ್ದಾರೆ.