49 ವರ್ಷಗಳ ಹೋರಾಟ ಜಯದ ಹಾದಿಯಲ್ಲಿ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನಿಯಮಿತ ಖಾಯಂ ನಾಗರಿಕ ಸೇವಾ ನೌಕರರಿಗೆ ಸಮಾನವಾಗಿ ಹಾಗೂ 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನ ನೀಡಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 2024ರ ಅಕ್ಟೋಬರ್ 30 ರಂದು ನೀಡಿದ ಈ ತೀರ್ಪು ಅಂಗನವಾಡಿ ಸಿಬ್ಬಂದಿ ಮತ್ತು ಇತರ ಸರ್ಕಾರಿ ನೌಕರರ ನಡುವಿನ ಪರಿಹಾರ ಮತ್ತು ಪ್ರಯೋಜನಗಳಲ್ಲಿ ದೀರ್ಘಕಾಲದ ಅಸಮಾನತೆಯನ್ನು ಸರಿಪಡಿಸಲು ಸಹಕಾರಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ 49 ವರ್ಷಗಳ ಹೋರಾಟವು ಜಯದ ಹಾದಿಯಲ್ಲಿ ನಡೆದಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಮಹತ್ವದ ತೀರ್ಪೊಂದರಲ್ಲಿ, ಗುಜರಾತ್ ಹೈಕೋರ್ಟ್ ಅಂಗನವಾಡಿ ಕಾರ್ಯಕರ್ತೆಯರು (AWWs) ಮತ್ತು ಸಹಾಯಕಿಯರ (AWHs) ಉದ್ಯೋಗದ ಸ್ಥಿತಿಯನ್ನು ಹೆಚ್ಚಿಸುವ ಪರವಾಗಿ ತೀರ್ಪು ನೀಡಿದೆ. 2024ರ ಅಕ್ಟೋಬರ್ 30 ರಂದು ನೀಡಿದ ಈ ತೀರ್ಪಿನಲ್ಲಿ, ಅವರನ್ನು ನಿಯಮಿತ ಖಾಯಂ ನಾಗರಿಕ ಸೇವಾ ನೌಕರರಿಗೆ ಸಮಾನವಾಗಿ ಪರಿಗಣಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಲು ಕೋರ್ಟ್ ನಿರ್ದೇಶಿಸಿದೆ.
ಕರ್ತವ್ಯ ಮತ್ತು ಸಂಭಾವನೆಯಲ್ಲಿನ ಸಂಪೂರ್ಣ ವ್ಯತಿರಿಕ್ತತೆಯನ್ನು ಎತ್ತಿ ತೋರಿಸಿದ ನ್ಯಾಯಾಲಯವು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕ್ರಮವಾಗಿ ರೂ 10,000 ಮತ್ತು ರೂ 5,000 ಮಾಸಿಕ ಗೌರವಧನವನ್ನು ಪಡೆಯುತ್ತಾರೆ, ಇದು ಇತರ ಸಿವಿಲ್ ಹುದ್ದೆಗಳ ವೇತನಕ್ಕೆ ಹೋಲಿಸಿದರೆ ತೆಳುವಾಗಿದೆ ಎಂದಿದೆ. ಆರು ತಿಂಗಳೊಳಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರನ್ನು ಸರ್ಕಾರಿ ಸೇವೆಗೆ ವಿಲೀನಗೊಳಿಸುವ ನೀತಿಯನ್ನು ರೂಪಿಸಲು ಕಡ್ಡಾಯಗೊಳಿಸಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕೋರ್ಟ್ ತನ್ನ ತೀರ್ಪಿನಲ್ಲಿ ನಿರ್ದೇಶಿಸಿದೆ. ಇದರಲ್ಲಿ ಖಾಯಂ ನಾಗರಿಕ ಸೇವಕರಿಗೆ ಸಮಾನವಾದ ಪ್ರಯೋಜನಗಳನ್ನು ಕಾಯಂಗೊಳಿಸುವಿಕೆ ಮತ್ತು ಹಂಚಿಕೆ ಒಳಗೊಂಡಿರುತ್ತದೆ.
ಕೇಂದ್ರ ಸರ್ಕಾರದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ICDS) ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸರಣಿ ಅರ್ಜಿಗಳ ನಂತರ ನ್ಯಾಯಾಲಯವು ಈ ತೀರ್ಪು ನೀಡಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಂದು ದಶಕಕ್ಕೂ ಹೆಚ್ಚು ಕಾಲ ತಮ್ಮ ಕರ್ತವ್ಯಗಳನ್ನು ಪೂರೈಸಿದ್ದರೂ, ಆಗಾಗ್ಗೆ ದಿನಕ್ಕೆ ಆರು ಗಂಟೆಗಳನ್ನು ಮೀರಿದ್ದರೂ, ಅವರಿಗೆ ಕಡಿಮೆ ಗೌರವಧನವನ್ನು ನೀಡಲಾಗುತ್ತದೆ, ತಾವು ನಿಯಮಿತ ಪ್ರಕ್ರಿಯೆಯ ಮೂಲಕ ನೇಮಕಗೊಂಡರೂ ಸರ್ಕಾರಿ ನೌಕರರೆಂದು ಗುರುತಿಸಲ್ಪಡದ ಕಾರಣ ಇದು ಅಮಾನವೀಯ ಪದ್ಧತಿಯಾಗಿದೆ ಎಂದು ಅಂಗನವಾಡಿ ನೌಕರರು ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು.
ಈ ತೀರ್ಪನ್ನು ಕೊಡಲು ಪರಿಗಣಿಸಿದ ಮುಖ್ಯಾಂಶಗಳು
ಮೇಲ್ವಿಚಾರಕಿ ಹುದ್ದೆ ನೇಮಕಾತಿಗೆ ಮುಂಬಡ್ತಿ, ನೇಮಕಾತಿ ಪ್ರಕ್ರಿಯೆಗಳು, ಮೇಲ್ವಿಚಾರಣೆ ಮತ್ತು ಶಿಸ್ತಿನ ಕ್ರಮಗಳು ಮತ್ತು ಸಂವಿಧಾನಬದ್ದ ಕರ್ತವ್ಯಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಗುಜರಾತ್ ರಾಜ್ಯವು ಉನ್ನತ ಪಂಚಾಯತ್ ಸೇವೆ, ನೇಮಕಾತಿ ನಿಯಮಗಳು 2013ರಲ್ಲಿ ಮುಖ್ಯ ಸೇವಿಕಾ (ಮೇಲ್ವಚಾರಕಿ) C ಗುಂಪಿನ ಹುದ್ದೆಗಳನ್ನು ರೂಪಿಸಿದೆ. 13-11-2009 ಮತ್ತು 25-11-2019 ಆಯ್ಕೆಯ ನಿಯಮಾವಳಿಗಳು ಸಂವಿಧಾನದ ಆರ್ಟಿಕಲ್ 14 ಮತ್ತು 16 ವಿಧಿಯ ಪ್ರಕಾರ ನಾಗರಿಕ ಸೇವಾ ನಿಯಮಾವಳಿಗಳಂತೆಯೇ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದನ್ನು ಪ್ರತಿಪಾದಿಸಿದೆ.
ಅಂಗನವಾಡಿ ಮೇಲ್ವಿಚಾರಕಿಯ ಹುದ್ದೆಗೆ ನೇಮಕಗೊಳ್ಳುವ ಪ್ರಕ್ರಿಯೆಯಲ್ಲಿನ ಅರ್ಹತೆಗಳಲ್ಲಿ, ಅವರು ಅಂಗನವಾಡಿ ಕಾರ್ಯಕರ್ತೆಯಾಗಿರಬೇಕು, 45 ವರ್ಷದೊಳಗಿರಬೇಕು, SSLC ಅಥವಾ PUC ಉತ್ತೀರ್ಣರಾಗಿರಬೇಕು ಮತ್ತು 10 ವರ್ಷ ಅಂಗನವಾಡಿ ಕಾರ್ಯಕರ್ತೆಯ ಸೇವೆಯ ಅನುಭವ ಹೊಂದಿರಬೇಕು ಎಂಬುದೂ ಸೇರಿದಂತೆ ಇನ್ನಿತರ ಷರತ್ತುಗಳಿವೆ. ಈ ಷರತ್ತುಗಳಲ್ಲಿ ಕೊನೆಯಲ್ಲಿರುವ ಷರತ್ತು ಮೇಲ್ವಿಚಾರಕಿಯಾಗಿ ನೇಮಕಗೊಳ್ಳುವ ಪ್ರಮುಖ ಅರ್ಹತೆ ಅಂಗನವಾಡಿ ಕಾರ್ಯಕರ್ತೆಯಾಗಿ 10 ವರ್ಷದ ಸೇವಾನುಭವ ಮುಖ್ಯವಾಗಿರುವುದರಿಂದ ಗುಜರಾತ್ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯ ಹುದ್ದೆಯನ್ನು ಪ್ರಮುಖ ಎಂದು ಪರಿಗಣಿಸಿದೆ.
ಮಂಜೂರಾದ ಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆಯರನ್ನು C ಮತ್ತು D ಗುಂಪಿಗೆ ಸೇರಿಸಬೇಕಾದರೆ ಹುದ್ದೆಗಳು ಇರಬೇಕಲ್ಲವೇ? ಈ ಅಂಶಕ್ಕೆ ಸಂಬಂಧಿಸಿ ಸುಪ್ರಿಂ ಕೋರ್ಟ್ ಗ್ರಾಚ್ಯುಟಿಯನ್ನು ಇವರಿಗೆ ಕೊಡಬೇಕು ಎಂದು ನೀಡಿದ ತೀರ್ಪಿನಲ್ಲಿ 2013ರ ಆಹಾರ ಭದ್ರತಾ ಕಾಯ್ದೆಯ ಕರ್ತವ್ಯಗಳನ್ನು ಅಂಗನವಾಡಿ ಕೇಂದ್ರದ ಮುಖಾಂತರ ಪೂರೈಸುತ್ತಿರುವುದರಿಂದ “ಅಂಗನವಾಡಿ ಕೇಂದ್ರಗಳು ಶಾಸನಬದ್ದ”ವಾಗಿ ಗುರ್ತಿಸಲ್ಪಟ್ಟಿರುವುದರಿಂದ, “ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ಹುದ್ದೆಗಳು ಶಾಸನಬದ್ದ ಹುದ್ದೆಗಳಾಗಿವೆ” ಎಂಬುದಾಗಿ ಈಗಾಗಲೇ ವ್ಯಾಖ್ಯಾನಿಸಲಾಗಿದೆ. ಮಾತ್ರವಲ್ಲದೇ ಪಾಲನೆ ಮತ್ತು ಪೋಷಣೆಯನ್ನು ಸಂವಿಧಾನಬದ್ದವಾಗಿ ಅಂಗನವಾಡಿ ಕೇಂದ್ರಗಳ ಮುಖಾಂತರ ಪೂರೈಸಲಾಗುತ್ತದೆ.
ಆಯ್ಕೆಯ ನಿಯಮಾವಳಿಗಳು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಳ ಮುಖಾಂತರವೇ ಭರ್ತಿ ಮಾಡಲಾಗುತ್ತದೆ. ಗುಜರಾತ್ ಸರ್ಕಾರದ ಅಧೀನದಲ್ಲಿರುವ ಐಸಿಡಿಎಸ್ ಯೋಜನೆಯ ಜಿಲ್ಲಾ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ(PO), ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಯ್ಕೆ ಸಮಿತಿಯ ಸದಸ್ಯರುಗಳಾಗಿರುತ್ತಾರೆ.
ಆಯ್ಕೆ ಸಮಿತಿಯು ಸರ್ಕಾರದಡಿಯಲ್ಲಿರುವ ಗ್ರಾಮ ಪಂಚಾಯ್ತಿ, ಹಾಲು ಉತ್ಪಾದಕರ ಒಕ್ಕೂಟಗಳು, ನ್ಯಾಯಬೆಲೆ ಅಂಗಡಿಗಳು, ಪ್ರಾಥಮಿಕ ಶಾಲೆಗಳು ಮತ್ತು ಸಹಕಾರ ಸಂಘಗಳ ಮುಖಾಂತರ ಅರ್ಹ ಅಭ್ಯರ್ಥಿಗಳು ಬೇಕೆಂದು ಜಾಹಿರಾತುಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿ ಕೊಡಲಾಗುತ್ತದೆ.
ಅರ್ಹತೆಯ ಮಾನದಂಡಗಳು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅರ್ಹತೆಯ ಮಾನದಂಡಗಳು ಹೀಗಿವೆ: SSLC, PUC, ಡಿಪ್ಲೋಮೊ ಕೋರ್ಸ್ ಉತ್ತೀರ್ಣನಾಗಿದ್ದರೆ ಗರಿಷ್ಠ 20 ಅಂಕ, ಅಭ್ಯರ್ಥಿ ಪದವೀಧರರಾಗಿದ್ದರೆ ಶೇ. 30 ಅಂಕ ನೀಡಬಹುದು. ಅಭ್ಯರ್ಥಿ ಸ್ನಾತಕೋತ್ತರ ಪಧವೀಧರರಾಗಿದ್ದರೆ ಗರಿಷ್ಠ 30 ಅಂಕಗಳನ್ನು ಅನುಪಾತದ ಆಧಾರದಲ್ಲಿ ನೀಡಬಹುದು. SC, ST, SEBC ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮತ್ತು ಮೀಸಲಾತಿ ವರ್ಗಗಳಿಗೆ ಹೆಚ್ಚುವರಿ 10 ಅಂಕಗಳು, ವಿಧೆವೆಯರಿಗೆ 10 ಅಂಕಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು.
ಹೀಗೆ ಆಯ್ಕೆಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಆಯ್ಕೆಯ ಪ್ರಕ್ರಿಯೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸಮಾನಾಂತರವಾಗಿದ್ದರೆ, ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ವ ನಿರ್ಧಾರಿತವಾಗಿದೆ. ಈ ಆಯ್ಕೆ ಪ್ರಕ್ರಿಯೆ ವ್ಯಕ್ತಿ ನಿಷ್ಠತೆ ಇಲ್ಲದಿರುವುದರಿಂದ ಮೆರಿಟ್ ಮೇಲೆ ಅವಕಾಶವನ್ನು ಕಲ್ಟಿಸಿರುವುದು.
25-11-2019 ರ ಗುಜರಾತ್ ರಾಜ್ಯ ಸರ್ಕಾರದ ನಿರ್ಣಯದಂತೆ GR ಇಂಟರ್ ಅಲಿಯಾವು, ಈ ಆಯ್ಕೆ ಪ್ರಕ್ರಿಯೆಯ ಉದ್ದಕ್ಕೂ ಸಂವಿಧಾನದ 14 ಮತ್ತು 15ನೇ ವಿಧಿಗಳ ಆದೇಶವನ್ನು ಸೂಕ್ಷ್ಮವಾಗಿ ಅನುಸರಿಸಲಾಗಿದೆ.
ಇದನ್ನೂ ಓದಿ : ಭಾರತದಾದ್ಯಂತ 11.70 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ: ಕೇಂದ್ರ ಸರ್ಕಾರ
ಉದ್ಯೋಗದಾತ ಮತ್ತು ಉದ್ಯೋಗಿಗಳ ಸಂಬಧವಿದೆಯೇ?
ಅಂಗನವಾಡಿ ನೌಕರರು ಮತ್ತು ಸರ್ಕಾರದ ನಡುವೆ ಉದ್ಯೋಗದಾತ ಮತ್ತು ಉದ್ಯೋಗಿಗಳ ಸಂಬಧವಿದೆಯೇ? ಈಗಾಗಲೇ ವಿವರಿಸಿದಂತೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು ಆಹಾರ ಭದ್ರತಾ ಕಾಯ್ದೆ 2013 ಮತ್ತು 2009 ಕಡ್ಡಾಯ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಶಾಸನಬದ್ದ ಕರ್ತವ್ಯವನ್ನು ಪೂರೈಸಲಾಗುತ್ತದೆ ಎಂಬುದನ್ನು ಘೋಷಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಕಾಯ್ದೆಗಳ ಪರವಾಗಿ ಮತ್ತು ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಅಂಗನವಾಡಿ ನೌಕರರ ಆಯ್ಕೆಯ ಮಾನದಂಡಗಳು, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ ಇತ್ಯಾದಿಗಳನ್ನು ನಿಗದಿಪಡಿಸಿ ಸಂಯೋಜಿಸುವ ವಿಧಾನ, ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯದ ಅಧಿಕಾರಿಗಳು ಕೈಗೊಳ್ಳುತ್ತಾರೆ. ಆಯ್ಕೆ ಪ್ರಕ್ರಿಯೆ ವಿರುದ್ದ ಯಾವುದೇ ಕುಂದು ಕೊರತೆ ಇದ್ದಲ್ಲಿ ರಾಜ್ಯದ ನಿರ್ಧಿಷ್ಟ ಅಧಿಕಾರಿಗಳ ಮೇಲ್ಮನವಿ ಸಂಸ್ಥೆಯನ್ನು ರಚಿಸುತ್ತಾರೆ.
ಅಂಗನವಾಡಿ ನೌಕರರ ಸಂಪೂರ್ಣ ಕೆಲಸದ ಮೇಲ್ವಿಚಾರಣೆಯನ್ನು ಸಿಡಿಪಿಒ ರವರು ಮಾಡುತ್ತಾರೆ. ಮೇಲ್ವಿಚಾರಣೆಗೆ ಯಾವುದೇ ಮದ್ಯಂತರ ಏಜೆನ್ಸಿಯನ್ನು ನೇಮಕ ಮಾಡಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 90:10 ರ ಅನುಪಾತದಲ್ಲಿ ಗೌರವಧನವನ್ನು ಪಾವತಿಸಲಾಗುತ್ತದೆ (ಈಗ ಕರ್ನಾಟಕದಲ್ಲಿ ಬೇರೆ ರೀತಿಯಲ್ಲಿದೆ). ರಾಜ್ಯವು ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರದ ಆಯ್ಕೆ, ಸೇವಾ ಷರತ್ತಗಳು, ಕರ್ತವ್ಯಗಳನ್ನು ನಿರ್ವಹಿಸುವುದು, ವಜಾಗೊಳಿಸುವ ಶಿಕ್ಷೆ ವಿಧಿಸುವ ಅಧಿಕಾರ ರಾಜ್ಯಕ್ಕೆ ನೀಡಲಾಗಿದೆ. ಈ ಅಂಶಗಳ ಆಧಾರದಲ್ಲಿ ಯಜಮಾನ ಮತ್ತು ಸೇವಕ ಸಂಬಂಧವೂ ಅಸ್ತಿತ್ವದಲ್ಲಿದೆ.
ಈ ಮೇಲಿನ ಎಲ್ಲಾ ಅಂಶಗಳ ಆಧಾರದಲ್ಲಿ ಕ್ಲೆರಿಕಲ್ ಅಥವಾ ಅರೆ ಮೇಲ್ವಿಚಾರಣಾ ಹುದ್ದೆಗಳು ಮಾಡುವ ಕೆಲಸಕ್ಕೆ ಹೋಲುತ್ತದೆ ಎಂಬುದನ್ನು ನ್ಯಾಯಲಯ ಗುರುತಿಸಿದೆ. ಆದ್ದರಿಂದ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿಯಮಿತ ಖಾಯಂ ಉದ್ಯೋಗಿಗಳಿಗೆ ನೀಡುವ ಸಮಾನ ವೇತನ ಮತ್ತು ಇತರೆ ಸೌಲಭ್ಯಗಳನ್ನು ಪಾವತಿಸುವ ಯೋಜನೆಯನ್ನು ಸೂಕ್ತ ಎಂದು ಕಾಣುವ ಇತರೆ ಇಲಾಖೆಗಳೊಂದಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆಯನ್ನು ರೂಪಿಸಬೇಕು.
ಗುಜರಾತ್ ರಾಜ್ಯ ಸರ್ಕಾರವು 19-10-2019 ರ ಸುತ್ತೋಲೆ ಪ್ರಕಾರ ಕೆಲವು ವರ್ಗದ ನೌಕರರಿಗೆ ಕನಿಷ್ಠ ವೇತನದಡಿಯಲ್ಲಿ ದಿನಕ್ಕೆ 4 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ ಹಂಗಾಮಿ ನೌಕರರಿಗೆ ಕನಿಷ್ಠ ವೇತನ 14,800 ರೂ. ಪಾವತಿಸಲಾಗುತ್ತದೆ. ಭಾರತೀಯ ದಕ್ ತಾರ್ ಮಜ್ದೂರ್ ಮಂಚ್ Vs P&T ಇಲಾಖೆಯಡಿಯಲ್ಲಿ ದೈನಂದಿನ ದರದ ಸಾಂಧರ್ಬಿಕ ಕಾರ್ಮಿಕರ ಕೇಸಿನ ವಾದ “ಗ್ವೌರವಾನ್ವಿತ ಸರ್ವೋಚ್ಛ ನ್ಯಾಯಲಯವು” ತಾತ್ಕಾಲಿಕ ಉದ್ಯೋಗಿಯು ಅನುಗುಣವಾದ ನಿಯಮಿತ ಕೇಡರ್‌ನಲ್ಲಿರುವ ಉದ್ಯೋಗಿಗೆ ಕನಿಷ್ಠ ವೇತನವನ್ನು ಪಾವತಿಸಲು ಅರ್ಹನಾಗಿರುತ್ತಾನೆ. ಆದ್ದರಿಂದ ಇವರಿಗೂ ಸಮಾನ ವೇತನ ನೀಡಲು ಸೂಚಿಸಿದೆ.
ಈ ಎಲ್ಲಾ ಅಂಶಗಳ ಆಧಾರದಲ್ಲಿ ಗುಜರಾತ್ ಸಿವಿಲ್ ಸೇವೆಗಳ (ವರ್ಗೀಕರಣ ಮತ್ತು ನೇಮಕಾತಿ) ಸಾಮಾನ್ಯ ನಿಯಮಗಳು 1967ರ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು 3 ಮತ್ತು 4ನೇ ದರ್ಜೆಯ ನೌಕರರಂತೆ ಖಾಯಂಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 6 ತಿಂಗಳುಗಳಿಗೆ ಜಂಟಿ ನೀತಿಯನ್ನು ರೂಪಿಸಬೇಕು ಎಂದು ಗುಜರಾತ್ ಹೈಕೋರ್ಟ್ ನ ಏಕ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ನಿಖಿಲ್ ಕರಿಯಲ್ ಅವರು ತೀರ್ಪು ಕೊಟ್ಟಿದ್ದಾರೆ. ಜಂಟಿ ನೀತಿ ರೂಪಿಸಿ ಖಾಯಂಗೊಳಿಸುವ ತನಕ ಕನಿಷ್ಠ ವೇತನವನ್ನು ಪಡೆಯಲು ಅರ್ಹರಿದ್ದಾರೆ ಎಂದು ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ.
ಐಸಿಡಿಎಸ್ ಯೋಜನೆ
ಪಾಲನೆ ಮತ್ತು ಪೋಷಣೆ ಸಂವಿಧಾನಬದ್ದ ನಿರ್ದೇಶನ. ಈ ನಿರ್ದೇಶನವನ್ನು ಕೇಂದ್ರ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಹಾಗೂ ಮಗುವಿಗೆ 6 ವರ್ಷ ತುಂಬುವತನಕ ಮಗು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ, ಗರ್ಬಿಣಿ ತಾಯಿಯ ಆರೋಗ್ಯ, ಬಾಣಂತಿಯ ಮಗುವಿಗೆ ಹಾಲುಣಿಸುವ ವಿಧಾನ ಮತ್ತು ಅದರ ಆರೋಗ್ಯ ಸೇವೆ ಎಲ್ಲವೂ ಐಸಿಡಿಎಸ್ ಯೋಜನೆಯಡಿಯ ಮುಖಾಂತರ ನಡೆಸಲಾಗುತ್ತದೆ. ಈ ಮಕ್ಕಳಿಗೆ ಮತ್ತು ತಾಯಂದಿರಿಗೆ ಕೊಡುವ ಪೌಷ್ಠಿಕ ಆಹಾರ 2013ರಲ್ಲಿ ಬಂದ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಪಾಲನೆ ಮತ್ತು ಪೋಷಣೆಯನ್ನು ಮಾಡಲಾಗುತ್ತದೆ. 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಪ್ರಕಾರ 6 ವರ್ಷದೊಳಗಿನ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಲಾಗುತ್ತದೆ.
1974 ಮಕ್ಕಳ ರಾಷ್ಟ್ರೀಯ ನೀತಿಯಡಿ ಐಸಿಡಿಎಸ್ ಪ್ರಾರಂಭವಾಗಿ ಎರಡು ಕಾನೂನುಗಳಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರೂ ಕೂಡಾ, ಸರ್ಕಾರಗಳು ಈ ಯೋಜನೆಯನ್ನು 50 ವರ್ಷಗಳಿಂದ ಯೋಜನೆಯನ್ನಾಗಿಯೇ ಉಳಿಸಿ, ಇದರ ಆಧಾರಸ್ತಂಭಗಳಂತೆ ದುಡಿಯುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಗೌರವಧನದ ಆಧಾರದಲ್ಲಿ ದುಡಿಸುತ್ತಿವೆ.
ಕಾನೂನಾತ್ಮಾಕವಾದ ಸಾಮೂಹಿಕ ಚೌಕಾಸಿಯ ಹಕ್ಕು ಇಲ್ಲ
ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟ (ಸಿಐಟಿಯು)ದ ಅಡಿಯಲ್ಲಿ ಸಂಘಟಿತರಾಗಿ, ದೇಶದಾದ್ಯಾಂತ ನಿರಂತರವಾದ ಹಲವಾರು ಚಳುವಳಿಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಯಾವುದೇ ಕಾರ್ಮಿಕ ಕಾನೂನುಗಳು ಹಾಗೂ ಸೇವಾ ನಿಯಮಾವಳಿಗಳು ಇವರಿಗೆ ಇಲ್ಲದಿದ್ದರಿಂದ ಸರ್ಕಾರಗಳ ಬಳಿ ಕಾನೂನಾತ್ಮಾಕವಾದ ಸಾಮೂಹಿಕ ಚೌಕಾಸಿಯ ಹಕ್ಕು ಇಲ್ಲ. ಕೆಲವು ಸವಲತ್ತುಗಳನ್ನು ಪಡೆಯಲು ಹತ್ತಾರು ದಿನಗಳ ಕಾಲ ಮುಷ್ಕರಗಳನ್ನು ನಡೆಸಿ, ಹೆಚ್ಚು ಮಹಿಳೆಯರು ಒಂದಡೆ ಅಣಿ ನೆರೆಯುವ ಮುಖಾಂತರವೇ ಒಂದಷ್ಟು ಗೌರವಧನ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಎಷ್ಟೇ ಹೋರಾಟಗಳನ್ನು ನಡೆಸಿದರೂ ಪ್ರಭುತ್ವ ಆಯ್ಯೋ ಪಾಪ ಎನ್ನುವ ಭಾವನೆಗಳಿಂದಲೇ 500-1000 ರೂ. ಗೌರವಧನವನ್ನು ಹೆಚ್ಚಳ ಮಾಡುವ ಪದ್ಧತಿಯಿದೆ.
ಅಂದು ಸುಪ್ರಿಂ ಕೋರ್ಟ್ , ಇಂದು ಹೈಕೋರ್ಟ್ ತೀರ್ಪುಗಳು
ಗುಜರಾತ್ ಹೈಕೋರ್ಟ್ ನಲ್ಲಿ ವಿವಾದ ಎತ್ತಿದ್ದು 2016ರಲ್ಲಿ. ತೀರ್ಪು ಬಂದಿದ್ದು 2-8-2024 ರಂದು. ಅಂದರೆ 8 ವರ್ಷಗಳ ನಂತರ ಇಂತಹ ಐತಿಹಾಸಿಕ ತೀರ್ಪು ಬಂದಿದೆ. ಈ ತೀರ್ಪನ್ನು ಅಪ್ಲೋಡ್ ಮಾಡಿದ 6 ತಿಂಗಳೊಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ನೀತಿಯನ್ನು ರಚಿಸಬೇಕು ಎಂದು ಹೇಳಿದೆ. ಅಪ್ಲೋಡ್ ಮಾಡಿದ್ದು 30 ಅಕ್ಟೋಬರ್ 2024. ಅಂದರೆ ಈಗಾಗಲೇ ಒಂದು ತಿಂಗಳಾಯಿತು.
ಮಾನವನ ಸೂಚ್ಯಂಕದ ಮೌಲ್ಯಮಾಪನದಲ್ಲಿ ಭಾರತವನ್ನು ಗುರ್ತಿಸಬೇಕಾದರೆ ಈ ಮಹಿಳೆಯ ದುಡಿಮೆಯಿಂದ ಬರುವ ಫಲಿತಾಂಶ ಅಂದರೆ, ಮರಣ ದರ, ಅಪೌಷ್ಠಿಕತೆ, ಜನನ ದರ, ರಕ್ತಹೀನತೆ, ಮುಂತಾದ ಅಂಶಗಳ ಆಧಾರದಲ್ಲಿಯೇ ಗುರ್ತಿಸುವುದು. ಈ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ಹಿಂದೆ “ಅಂಗನವಾಡಿ ಕರ್ಮಚಾರಿ ಯೂನಿಯನ್ (ಸಿಐಟಿಯು ಸಂಯೋಜಿತ)” ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಕೊಡಬೇಕೆಂದು ಕಾನೂನಿನ ಹೋರಾಟ ಮಾಡಿ, 2022 ಏಪ್ರಿಲ್ 25 ರಂದು ಸುಪ್ರಿಂ ಕೋರ್ಟ್ ನ ಮುಖಾಂತರ ಗೆಲುವು ಸಾಧಿಸಿತ್ತು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 1972 ಗ್ರಾಚ್ಯುಟಿ ಪಾವತಿ ಕಾಯ್ದೆಯಡಿ ಅರ್ಹರೆಂದು ಸುಪ್ರಿಂ ಕೋರ್ಟ್ ತೀರ್ಪು ಕೊಟ್ಟು 2 ವರ್ಷಗಳಾಯಿತು. ಇದು ಗುಜರಾತ್ ನಲ್ಲಿ ಜಾರಿಯಾಯಿತು, ಕರ್ನಾಟಕದಲ್ಲಿ ಆದೇಶ ಆಗಿದೆಯಾದರೂ ಇನ್ನೂ ಜಾರಿಯಾಗಲಿಲ್ಲ. ಉಳಿದ ರಾಜ್ಯಗಳಲ್ಲಿ ಎಲ್ಲಿಯೂ ಕೂಡಾ ಈ ಆದೇಶವನ್ನು ಜಾರಿ ಮಾಡಲಿಲ್ಲ. ಹಾಗೆಯೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರಿಂ ಕೋರ್ಟ್ ಹಲವು ಬಾರಿ ತೀರ್ಪುಗಳನ್ನು ಕೊಟ್ಟಿದೆ. ಆದರೆ ಪ್ರಭುತ್ವಗಳೆ ಇದರ ಮೊದಲ ಉಲ್ಲಂಘನೆ ಮಾಡುತ್ತಿದ್ದಾರೆ. ಹಲವಾರು ದೂರುಗಳಲ್ಲಿ “ತೀರ್ಪಿನ ಉಲ್ಲಂಘನೆ” ಎಂದು ಕೋರ್ಟ್ ಗಳಿಗೂ ಹೋದ ನೂರಾರು ಉದಾಹರಣೆಗಳಿವೆ. ಆದರೆ ಜಾರಿ ತುಂಬಾ ಕಡಿಮೆ.
ಚಳುವಳಿಗಳಿಗೆ ದಾರಿದೀಪವಾದ ತೀರ್ಪು
50 ವರ್ಷಗಳ ಇತಿಹಾಸವಿರುವ ಐಸಿಡಿಎಸ್ ಯೋಜನೆಯನ್ನು ಇನ್ನೂ ಕಾಯ್ದೆ ರೂಪಿಸದೇ ಯೋಜನೆಯನ್ನಾಗಿಯೇ ಇಟ್ಟಿರುವುದು ಸರ್ಕಾರಗಳ ತಾರತಮ್ಯ ಮತ್ತು ಅದರ ಪರಿಕಲ್ಪನೆಗಳ ಮನಸ್ಥಿತಿಯನ್ನು ತೋರಿಸುತ್ತದೆ. ದೇಶಾದಾದ್ಯಾಂತ ಅಂಗನವಾಡಿ ನೌಕರರ ಪ್ರಬಲ ಚಳುವಳಿಗಳು ನಿರಂತರವಾಗಿ ನಡೆಯುತ್ತಲೇ ಇದೆ. ಈ ಚಳುವಳಿಗಳ ಪರಿಣಾಮ “ಯಾವ ಸರ್ಕಾರಗಳು ಅಂಗನವಾಡಿ ನೌಕರರನ್ನು ಕಡೆಗಣಿಸಲ್ಪಟ್ಟದ್ದಾವೆಯೋ” ಅಂತಹ ಸರ್ಕಾರಗಳೇ ಈಗ ಅಂಗನವಾಡಿ ನೌಕರರ ಸಂಘಗಳ ಬಳಿ “ಸಾಮೂಹಿಕ ಚೌಕಾಸಿ” ಮಾಡುವ ಹಂತಕ್ಕೆ ತಲುಪುವಂತಾಗಿದೆ.
ಈ ಚಳುವಳಿಗಳ ಕಾರಣದಿಂದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಇವರ ಬಗ್ಗೆ ಯೋಚಿಸುವಂತೆ ಮಾಡಲು ಸಾಧ್ಯವಾಗಿದೆ. ಸುಪ್ರಿಂ ಕೋರ್ಟ್ ತೀರ್ಪು ಮತ್ತು ಗುಜರಾತ್ ಹೈಕೋರ್ಟ್ ತೀರ್ಪುಗಳು ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ ಚಳುವಳಿಗಳು ಮತ್ತು ಅವರು ಎತ್ತಿರುವ ಬೇಡಿಕೆಗಳು “ನ್ಯಾಯಯುತ”ವಾಗಿದೆ ಎಂಬುದನ್ನು ದೃಡಪಡಿಸಿವೆ. ಈಗ ಗುಜರಾತ್ ಏಕಸದಸ್ಯ ಪೀಠ ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕೆಂದು ಕೊಟ್ಟಿರುವ ಈ ತೀರ್ಪು, ಅಂಗನವಾಡಿ ನೌಕರರ ಚಳುವಳಿಗಳಿಗೆ ಮುಂದಿನ ದಿನಗಳಲ್ಲಿ ದಾರಿದೀಪವಾಗಿದೆ ಎಂಬುದನ್ನು ತೋರಿಸಿದೆ. ಇದು ಆಳುವ ವರ್ಗಕ್ಕೆ ಸೂಚನೆ ಕೊಟ್ಟಿದೆ. ಈ ತೀರ್ಪುಗಳನ್ನು ಜಾರಿ ಮಾಡಿಸಲು ಮತ್ತಷ್ಟು ಶ್ರಮಿಸಬೇಕಿದೆ.
ಇದನ್ನೂ ನೋಡಿ : ಒಂದು ದೇಶ ಒಂದು ಚುನಾವಣೆ : ಸಮಸ್ಯೆ ಸವಾಲುಗಳು – ಬಿ.ಎಲ್ ಶಂಕರ್ Janashakthi Media