ಗುಜರಾತ್ ಚುನಾವಣೆ: ಡಿ.1 ಮತ್ತು 5ರಂದು ಎರಡು ಹಂತದ ಮತದಾನ-ಡಿ.8ಕ್ಕೆ ಫಲಿತಾಂಶ

ನವದೆಹಲಿ: ಗುಜರಾತ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಣೆಯನ್ನು ಹೊರಡಿಸಿದ್ದು, ಡಿಸೆಂಬರ್‌ 1ರಂದು ಮೊದಲ ಹಂತ ಹಾಗೂ ಡಿಸೆಂಬರ್‌ 5ಕ್ಕೆ ಎರಡನೇ ಹಂತದ ಮತದಾನ ಹಾಗೂ ಡಿಸೆಂಬರ್‌ 8ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಿಸಿದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು. ಸುದ್ದಿಗೋಷ್ಠಿ ಆರಂಭದಲ್ಲಿಯೇ, ಮೊರ್ಬಿ ದುರಂತಕ್ಕೆ ಸಂತಾಪ ಸೂಚಿಸಿದರು. 182 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲಿಯೇ ಗುಜರಾತ್‌ನಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಿದೆ.

ಗುಜರಾತ್‌ನಲ್ಲಿ ಒಟ್ಟು 4,90,89,765 ಮತದಾರರು ಇದ್ದಾರೆ. ಇದರಲ್ಲಿ ಪುರುಷರು 2,53,36,610 ಪುರುಷ ಮತದಾರರಾಗಿದ್ದರೆ, 2,37,51,738 ಮಹಿಳಾ ಮತದಾರರಾಗಿದ್ದಾರೆ ಎಂದಿದ್ದಾರೆ. ಗುಜರಾತ್‌ನ ಒಟ್ಟು 182 ಕ್ಷೇತ್ರಗಳ ಪೈಕಿ 142 ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, 13 ಕ್ಷೇತ್ರ ಎಸ್‌ಸಿ ಹಾಗೂ 27 ಎಸ್‌ಟಿ ಮತಕ್ಷೇತ್ರಗಳಾಗಿವೆ.

ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000ಕ್ಕಿಂತ ಹೆಚ್ಚು ಸೇರಿದಂತೆ 51,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ. ಮತದಾರರಿಗೆ ಯಾವುದೇ ಸಮಸ್ಯೆಯಾಗದಿರಲೆಂದು 182 ಕ್ಷೇತ್ರಗಳಲ್ಲಿ ಒಟ್ಟು 51,782 ಮತಗಟ್ಟೆಗಳು ಸ್ಥಾಪಿಸಲಾಗುತ್ತಿದೆ. ಉತ್ತಮ ಮತದಾನದ ಅನುಭವಕ್ಕಾಗಿ, 1274 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಮತದಾನ ಮತ್ತು ಭದ್ರತಾ ಸಿಬ್ಬಂದಿ ನಿರ್ವಹಿಸುತ್ತಾರೆ.

ಹಾಲಿ ಇರುವ ಸರ್ಕಾರದ ಅವಧಿ 2023ರ ಫೆಬ್ರವರಿ 18 ರಂದು ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಗುಜರಾತ್‌ ಚುನಾವಣೆಯ ವೇಳಾಪಟ್ಟಿ:

ಮೊದಲ ಹಂತದಲ್ಲಿ ಒಟ್ಟು 89 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದರೆ, 2ನೇ ಹಂತದಲ್ಲಿ 93 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದ 89  ಕ್ಷೇತ್ರಗಳಿಗೆ ನವೆಂಬರ್‌ 5ರಂದು ಅಧಿಸೂಚನೆ ಹೊರಬೀಳಲಿದೆ. ನವೆಂಬರ್‌ 14ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನವೆಂಬರ್‌ 15 ರಂದು ನಾಮಪತ್ರ ಪರಿಶೀಲನೆಯಾಗಲಿದ್ದು,  ನ.17ಕ್ಕೆ ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್‌ 1ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.

2ನೇ ಹಂತದಲ್ಲಿ 93 ಕ್ಷೇತ್ರಗಳಿಗೆ ನವೆಂಬರ್‌ 10ರಂದು ಅಧಿಸೂಚನೆ ಹೊರಬೀಳಲಿದ್ದು, ನ.17ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನವೆಂಬರ್‌ 18ರಂದು ನಾಮಪತ್ರ ಪರಿಶೀಲನೆಯಾಗಲಿದೆ. ನ.21ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್‌ 5 ರಂದು ಮತದಾನ ನಡೆಯಲಿದೆ.

ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್​ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ. ಬಿಜೆಪಿ ಪ್ರಾಬಲ್ಯವಿರುವ ಗುಜರಾತ್‌ನಲ್ಲಿ ಹಾಲಿ ಆಡಳಿತಾರೂಢ ಪಕ್ಷಕ್ಕೆ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಾರ್ಟಿಯಿಂದ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಲಿದೆ.

ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು 160 ಕಂಪನಿಗಳ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಗುಜರಾತ್‌ಗೆ ಕಳುಹಿಸಿದೆ. ಸಿಬ್ಬಂದಿಯ ಸುಲಭ ಸಾರಿಗೆಗಾಗಿ ವಿಶೇಷ ರೈಲುಗಳನ್ನು ಕಾಯ್ದಿರಿಸಲಾಗಿದೆ.

ಕಳೆದ ತಿಂಗಳು ಅಕ್ಟೋಬರ್‌ 14ರಂದು ಕೇಂದ್ರ ಚುನಾವಣಾ ಆಯೋಗವು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಘೋಷಣೆ ಮಾಡಿತು. ಅಲ್ಲದೆ, ನವೆಂಬರ್‌ 12ರಂದು ಒಂದು ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶವನ್ನು ಹೊರಬೀಳಲಿದೆ ಎಂದು ತಿಳಿಸಿತು. ಅಕ್ಟೋಬರ್‌ 14ರಂದೇ ಗುಜರಾತ್‌ ವಿಧಾನಸಭೆಗೂ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎನ್ನಲಾಗುತ್ತಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗ ಕೆಲವು ಸಮರ್ಥನೆಗಳನ್ನು ನೀಡಿ ಸರಾಸರಿ ಮೂರು ವಾರಗಳ ನಂತರ, ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ, ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಒಂದೇ ದಿನದಂದು ನಡೆಯಲಿದೆ.

ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ರಾಜ್ಯ ವಿಧಾನಸಭಾ ಚುನಾವಣಾ ಘೋಷಣೆ ಮಾಡಿರುವುದು 20 ದಿನಗಳ ಅಂತರದಲ್ಲಿ. ಹಿಮಾಚಲ ಪ್ರದೇಶದಲ್ಲಿ ಒಂದು ಹಂತದಲ್ಲಿ ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದ ಮತದಾನ ಹಾಗೂ ಫಲಿತಾಂಶದ ಅಂತರ 26 ದಿನಗಳು. ಗುಜರಾತ್‌ ಮತದಾನ ಹಾಗೂ ಫಲಿತಾಂಶದ ಅಂತರ 3 ದಿನಗಳಾಗಿವೆ.

Donate Janashakthi Media

Leave a Reply

Your email address will not be published. Required fields are marked *