ಹೊಸ ಜಿಎಸ್‌ಟಿ ಹೇರಿಕೆ-ಏರಿಕೆಗಳು ಕಾರ್ಪೊರೇಟ್‌ಗಳನ್ನು ತುಷ್ಟೀಕರಿಸಲಿಕ್ಕಾಗಿ

ಡಾ.ಟಿ.ಎಂ.ಥಾಮಸ್ ಐಸಾಕ್
ಅನು: ಕೆ.ಎಂ.ನಾಗರಾಜ್

ಆಹಾರ ವಸ್ತುಗಳ ಮೇಲೂ ಜಿಎಸ್‌ಟಿ ಹೇರುವ ಕ್ರಮಕ್ಕೆ ಸಾರ್ವತ್ರಿಕ ಟೀಕೆಗಳು ಬಂದಾಗ ಕೇಂದ್ರ ಹಣಕಾಸು ಸಚಿವರು ಅದನ್ನು ಸಮರ್ಥಿಸಿಕೊಳ್ಳಲು ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ. ಅವುಗಳಲ್ಲಿರುವ ಸತ್ಯಾಂಶಗಳೆಷ್ಟು?

ವಾಸ್ತವವಾಗಿ, ಕಾರ್ಪೊರೇಟ್‌ಗಳು ಮತ್ತು ಕೇಂದ್ರ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಕ್ರಮವನ್ನು ವಿರೋಧಿಸುತ್ತವೆ. ಬದಲಿಗೆ, ತೆರಿಗೆಯ ಹೊರೆಯನ್ನು ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ವರ್ಗಾಯಿಸಲು ಬಯಸುತ್ತವೆ. ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಕಡಿಮೆ ಮಾಡಬೇಕು ಮತ್ತು ಜನಸಾಮಾನ್ಯರು ದಿನ ನಿತ್ಯವೂ ಬಳಸುವ ಅಗತ್ಯ ವಸ್ತುಗಳ ಮೇಲಿನ ತೆರಿಗೆಯ ಹೊರೆಯನ್ನು ಹೆಚ್ಚಿಸಬೇಕು -ಇದು ಹೊಸ ಜಿಎಸ್‍ಟಿ ದರಗಳ ಹಿಂದಿರುವ ಅವರ ಬಯಕೆ. ಇದಕ್ಕಿಂತಲೂ ಹೆಚ್ಚು ಪ್ರತಿಗಾಮಿ ನಿಲುಮೆ ಮತ್ತೊಂದಿರಲು ಸಾಧ್ಯವಿಲ್ಲ.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು “ಮುಂಚಿತವಾಗಿ ಪ್ಯಾಕ್ ಮಾಡಿದ ಮತ್ತು ಲೇಬಲ್ ಹಚ್ಚಿದ” ಬೇಳೆಕಾಳುಗಳು, ಧಾನ್ಯಗಳು, ಹಿಟ್ಟುಗಳು ಮತ್ತು ಮೊಸರು ಮುಂತಾದ ವಸ್ತುಗಳಿಗೆ 18.7.2022 ರಿಂದ ಜಿಎಸ್‌ಟಿ ಅನ್ವಯವಾಗುತ್ತದೆ ಎಂಬುದನ್ನು ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ. ಈ ಮೊದಲು ಒಂದು ಬ್ರ‍್ಯಾಂಡ್ ಹೆಸರಿನಲ್ಲಿದ್ದ ಮತ್ತು ಒಂದು ಕಂಟೇನರ್‌ನಲ್ಲಿ ಪ್ಯಾಕ್ ಮಾಡಿದ ಇಂತಹ ವಸ್ತುಗಳಿಗೆ ಮಾತ್ರ 5% ಜಿಎಸ್‌ಟಿ ವಿಧಿಸಲಾಗಿತ್ತು.

ಬ್ರ‍್ಯಾಂಡೆಡ್– ಅನ್‌ಬ್ರ‍್ಯಾಂಡೆಡ್ ವರ್ಗೀಕರಣ

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಈ ಅಸ್ಪಷ್ಟ ಹೇಳಿಕೆಯನ್ನು ನಾವು ಸ್ಪಷ್ಟಗೊಳಿಸಿಕೊಳ್ಳೋಣ. ಮೊದಲನೆಯದು, ಸುದೀರ್ಘ ಚರ್ಚೆಗಳ ನಂತರ ಜಿಎಸ್‌ಟಿಯನ್ನು(ಸರಕುಗಳು ಮತ್ತು ಸೇವೆಗಳ ತೆರಿಗೆ) ಮೂಲತಃ ರೂಪಿಸಿದಾಗ, ಆಹಾರ ಧಾನ್ಯಗಳು ಮತ್ತು ನಿತ್ಯ ಬಳಕೆಯ ಹಲವು ಅಗತ್ಯ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿತು. ಈ ವಸ್ತುಗಳನ್ನು ಒಂದು ನೋಂದಾಯಿತ ಬ್ರ‍್ಯಾಂಡ್ ಹೆಸರಿನಲ್ಲಿ ಮಾರಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು. ಹಾಗಾಗಿ, ಚಿಲ್ಲರೆ ವ್ಯಾಪಾರಿಗಳು ಅಥವಾ ಸಣ್ಣ ಕಂಪನಿಗಳು ಧಾನ್ಯಗಳನ್ನು ಅಥವಾ ಹಿಟ್ಟನ್ನು ಪ್ಯಾಕ್ ಮಾಡಿದ ಅಥವಾ ಲೇಬಲ್ ಹಚ್ಚಿದ ರೂಪದಲ್ಲಿ ಮಾರಿದಾಗ ಈ ವಸ್ತುಗಳಿಗೆ ತೆರಿಗೆ ಇರಲಿಲ್ಲ. ಆದರೆ, ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ನೋಂದಾಯಿತ ಬ್ರ‍್ಯಾಂಡ್ ಹೆಸರಿನಲ್ಲಿ ಮಾರುತ್ತಿದ್ದ ಈ ವಸ್ತುಗಳಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಬ್ರ‍್ಯಾಂಡೆಡ್ ಉತ್ಪನ್ನಗಳ ಹೆಚ್ಚಿನ ಬೆಲೆಗಳನ್ನು ತೆರಲಾರದ ಜನಸಾಮಾನ್ಯರು ಧಾನ್ಯಗಳನ್ನು ಅಥವಾ ಹಿಟ್ಟನ್ನು ಪ್ಯಾಕ್ ಮಾಡಿದ ಅಥವಾ ಲೇಬಲ್ ಹಚ್ಚಿದ ರೂಪದಲ್ಲಿ ಮಾರುತ್ತಿದ್ದ ಚಿಲ್ಲರೆ ವ್ಯಾಪಾರಿಗಳಿಂದ ಅಥವಾ ಸಣ್ಣ ಕಂಪನಿಗಳಿಂದ ಈ ವಸ್ತುಗಳನ್ನು ಕೊಳ್ಳುತ್ತಿದ್ದರು. ಹೀಗಾಗಿ, ಹಾಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲಿ ಸಾಮಾನ್ಯ ಗ್ರಾಹಕರು ಮತ್ತು ಸಣ್ಣ ಕಂಪನಿಗಳು ತೆರಿಗೆ ಮುಕ್ತವಾಗಿದ್ದರು ಮತ್ತು ದೊಡ್ಡ ಹೆಸರಿನ ಬ್ರ‍್ಯಾಂಡ್‌ಗಳು ತೆರಿಗೆ ಬಲೆಯಲ್ಲಿದ್ದವು.

ಮನೆ-ಮನೆ  ಜಿಎಸ್‌ಟಿ

“ಇನ್ನು ಮುಂದೆ ಇದು ಕೂಡ ನಮ್ಮೊಂದಿಗೇ ಊಟ ಮಾಡುತ್ತದೆ”
ವ್ಯಂಗ್ಯಚಿತ್ರ: ಅಲಂಕಾರ್ ಗೋಸ್ವಾಮಿ

ಪ್ಯಾಕೇಜ್ ಗೊಂದಲ ಮತ್ತು ಜಾಣತಂತ್ರ

ಎರಡನೆಯದು, ಕೇಂದ್ರ ಹಣಕಾಸು ಸಚಿವರು ಇತ್ತೀಚೆಗೆ ಘೋಷಿಸಿದ ಬದಲಾವಣೆಗಳು ಪರಿಸ್ಥಿತಿಯನ್ನು ಉಲ್ಟಾ-ಪಲ್ಟಾ ಮಾಡಿವೆ. ಬ್ರ‍್ಯಾಂಡೆಡ್ ವಸ್ತುಗಳು ಮತ್ತು ಅನ್‌ಬ್ರ‍್ಯಾಂಡೆಡ್ ವಸ್ತುಗಳ ನಡುವಿನ ವ್ಯತ್ಯಾಸವನ್ನು ಅವರು ಅಳಿಸಿಹಾಕಿದ್ದಾರೆ. “ಮೊದಲೇ ಪ್ಯಾಕ್ ಮಾಡಿದ್ದ ಮತ್ತು ಲೇಬಲ್ ಹಚ್ಚಿದ್ದ” ರೂಪದಲ್ಲಿರುವ ಎಲ್ಲಾ ವಸ್ತುಗಳ ಮೇಲೂ ಜಿಎಸ್‌ಟಿಯನ್ನು 18.7.2022 ರಿಂದ ವಿಧಿಸಲಾಗುವುದು. ಹೊಸ ವ್ಯವಸ್ಥೆಯಲ್ಲಿ ಬ್ರ‍್ಯಾಂಡಿಂಗ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ, ಚಿಲ್ಲರೆ ಅಂಗಡಿಯ ಅಥವಾ ಸಣ್ಣ ಕಂಪನಿಯ ಅಥವಾ ಒಂದು ಪ್ರತಿಷ್ಠಿತ ಬ್ರ‍್ಯಾಂಡ್‌ನ ಅದೇ ಒಂದು ಸರಕಿನ “ಮೊದಲೇ ಪ್ಯಾಕ್ ಮಾಡಿದ್ದ ಮತ್ತು ಲೇಬಲ್ ಹಚ್ಚಿದ್ದ” ರೂಪದಲ್ಲಿರುವ ಸರಕಿಗೂ ಈಗ ಏಕರೂಪದ ತೆರಿಗೆ ವಿಧಿಸಲಾಗುವುದು.

ಕಾನೂನು ಮಾಪನಶಾಸ್ತ್ರ ಅಧಿನಿಯಮದ ಪ್ರಕಾರ, ಖರೀದಿದಾರ ಹಾಜರಿಲ್ಲದ, ಮೊಹರು ಹಾಕಿರಲಿ ಅಥವಾ ಇಲ್ಲದಿರಲಿ, ಒಂದು ಪೂರ್ವ-ನಿರ್ಧರಿತ ಪ್ರಮಾಣವನ್ನು ಒಂದು ಪ್ಯಾಕೇಜ್‌ನಲ್ಲಿ ಇರಿಸಿದ ಉತ್ಪನ್ನವು “ಮೊದಲೇ ಪ್ಯಾಕ್ ಮಾಡಿದ್ದ ಸರಕು” (pre-packed commodity) ಎನಿಸಿಕೊಳ್ಳುತ್ತದೆ. ಈ ಸರಕುಗಳನ್ನು ಈಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಈ ಸ್ವರೂಪದಲ್ಲೇ. ಅವುಗಳಿಗೆ ಶೇ.5 ತೆರಿಗೆಯನ್ನು ವಿಧಿಸಲಾಗುವುದು.

ತೆರಿಗೆ ವಂಚನೆ ಸಲೀಸು

ಶೇ.5 ತೆರಿಗೆ ವಿಧಿಸುವ ಈ ಕ್ರಮದ ಹಿಂದಿರುವ ತರ್ಕಾಧಾರವಾದರೂ ಏನು? ಮತ್ತೊಮ್ಮೆ, ಹಣಕಾಸು ಸಚಿವರ ಟ್ವೀಟ್‌ಅನ್ನೇ ನಾವು ಉಲ್ಲೇಖಿಸೋಣ: “ಜಿಎಸ್‌ಟಿಯನ್ನು ಜಾರಿಗೆ ತಂದಾಗ, ಬ್ರ‍್ಯಾಂಡೆಡ್ ಧಾನ್ಯಗಳಿಗೆ, ಬೇಳೆಕಾಳುಗಳಿಗೆ ಮತ್ತು ಹಿಟ್ಟಿಗೆ 5% ಜಿಎಸ್ಟಿ ದರವನ್ನು ಅನ್ವಯಿಸಲಾಯಿತು. ನಂತರ, ಈ ಕ್ರಮವನ್ನು ನೋಂದಾಯಿತ ಬ್ರ‍್ಯಾಂಡ್ ಹೆಸರಿನಡಿಯಲ್ಲಿ ಅಥವಾ ಪೂರೈಕೆದಾರನು ಜಾರಿಗೊಳಿಸಬಹುದಾದ ಹಕ್ಕನ್ನು ನಿರ್ಬಂಧಪಡಿಸಲಾಗದ ಬ್ರ‍್ಯಾಂಡ್ ಹೆಸರಿನಡಿಯಲ್ಲಿ ಮಾರಾಟ ಮಾಡುವ ವಸ್ತುಗಳಿಗೆ ಮಾತ್ರ ತೆರಿಗೆ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಯಿತು. ಆದಾಗ್ಯೂ, ಈ ನಿಬಂಧನೆಯನ್ನು ಪ್ರತಿಷ್ಠಿತ ತಯಾರಕರು ಮತ್ತು ಬ್ರ‍್ಯಾಂಡ್ ಮಾಲೀಕರು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡದ್ದನ್ನು ಬಹಳ ಬೇಗನೇ ಗಮನಿಸಲಾಯಿತು ಮತ್ತು ಕ್ರಮೇಣ ಈ ವಸ್ತುಗಳಿಂದ ಜಿಎಸ್‌ಟಿ ಆದಾಯವು ಗಮನಾರ್ಹವಾಗಿ ಕುಸಿಯಿತು”.

ಅಪಾರ ಸಂಪನ್ಮೂಲಗಳನ್ನು ಖರ್ಚು ಮಾಡಿ ಒಂದು ಬ್ರ‍್ಯಾಂಡ್ ಮೌಲ್ಯವನ್ನು ಸೃಷ್ಟಿಸಿದ ಕಂಪನಿಯು ಶೇ.5 ತೆರಿಗೆ ತೆರಬೇಕಾದ ಕಾರಣದಿಂದ ತನ್ನ ಬ್ರ‍್ಯಾಂಡ್ ಹೆಸರನ್ನು ಕಳೆದುಕೊಳ್ಳುವುದು/ಬಿಟ್ಟುಕೊಡುವುದು ವಿರಳವೇ. ನಂತರದಲ್ಲಿ ಮಾಡಿದ ಒಂದು ತಿದ್ದುಪಡಿ-ನಿಬಂಧನೆಯ ಪ್ರಕಾರ, ಬ್ರ‍್ಯಾಂಡ್ ಎಂಬುದನ್ನು “ನೋಂದಾಯಿತ ಬ್ರಾಂಡ್ ಅಥವಾ ಅಥವಾ ಪೂರೈಕೆದಾರನು ಜಾರಿಗೊಳಿಸಬಹುದಾದ ಹಕ್ಕನ್ನು ನಿರ್ಬಂಧಪಡಿಸಲಾಗದ ಬ್ರ‍್ಯಾಂಡ್” ಎಂದು ವ್ಯಾಖ್ಯಾನಿಸಲಾಯಿತು. ನಂತರ ಅವುಗಳನ್ನು, ಈ ಸಂಬಂಧವಾಗಿ, ತೆರಿಗೆಯಿಂದ ಹೊರಗಿಡಲಾಯಿತು.

ದೊಡ್ಡ ದೊಡ್ಡ ಕಂಪನಿಗಳು ತಾವು “ಜಾರಿಗೊಳಿಸಬಹುದಾದ ಹಕ್ಕನ್ನು” ತ್ಯಜಿಸುತ್ತಿದ್ದೇವೆ ಎಂಬ ಒಂದು ವಿವರಣಾತ್ಮಕ ಟಿಪ್ಪಣಿಯನ್ನು ಕಂಟೇನರ್ ಮೇಲೆ ಮುದ್ರಿಸಿದವು. ಇದು ತೆರಿಗೆ ತಪ್ಪಿಸುವ ಸ್ಪಷ್ಟ ಪ್ರಯತ್ನವೇ. ಆದ್ದರಿಂದ, ಈ ತಿದ್ದುಪಡಿಯನ್ನು ಮಾರ್ಪಡಿಸುವುದೇ ಒಂದು ಆದರ್ಶಪ್ರಾಯ ಪ್ರತಿಕ್ರಿಯೆಯಾಗಿರಬೇಕಿತ್ತು. ಆದರೆ ಈ ಸರಳ ಮಾರ್ಗದ ಬದಲಾಗಿ ಯಾರೋ ಒಬ್ಬ ಮಹಾನುಭಾವರು, ಬ್ರ‍್ಯಾಂಡೆಡ್ ಮತ್ತು ಅನ್‌ಬ್ರ‍್ಯಾಂಡೆಡ್ ವರ್ಗೀಕರಣವನ್ನು ತ್ಯಜಿಸುವ ಅದ್ಭುತ ಕಲ್ಪನೆಯನ್ನು ಬಳಕೆ ಮಾಡಿದರು. ನಿಜಕ್ಕೂ ಇದು ಕಾರ್ಪೊರೇಟ್‌ಗಳಿಗೆ ಸಹಾಯ ಮಾಡುವ ಜಾಣ್ಮೆಯ ತಂತ್ರವೇ.

25 ಕೆ.ಜಿ.ಗಿಂತ ಹೆಚ್ಚಿನ ಪ್ಯಾಕೇಜ್‌ಗಳು ಮತ್ತು ಕಾರ್ಪೊರೇಟ್‌ಪರ ಪಕ್ಷಪಾತ

ಈ ಆದೇಶವನ್ನು ಮತ್ತೊಂದು ಉಪ-ವಾಕ್ಯದೊಂದಿಗೆ ಓದಿದಾಗ, ಕಾರ್ಪೊರೇಟ್ ತುಷ್ಟೀಕರಣದ ಪೂರ್ಣ ಪ್ರಮಾಣ ಎಷ್ಟು ಎಂಬುದು ಎದ್ದು ಕಾಣುತ್ತದೆ. ಪ್ಯಾಕೇಜ್ಡ್ ಸರಕುಗಳ ನಿಯಮಗಳ ಅಡಿಯಲ್ಲಿ 25 ಕೆ.ಜಿ.ಗಿಂತ ಹೆಚ್ಚಿನ ಪ್ಯಾಕೇಜ್‌ಗಳಿಗೆ ಅವು ಒಳಗೊಂಡ ವಿವರಗಳ ಬಗ್ಗೆ ಘೋಷಣೆ ಮಾಡುವುದರಿಂದ ನಿರ್ದಿಷ್ಟ ವಿನಾಯಿತಿ ನೀಡಲಾಗಿದೆ. ಆದ್ದರಿಂದ ಅವು ಜಿಎಸ್‌ಟಿಯನ್ನು ಆಕರ್ಷಿಸುವುದಿಲ್ಲ ಎಂದು ಭಾವಿಸುವುದು ಉಚಿತವೇ. ಹಾಗಾಗಿ, ಬ್ರ‍್ಯಾಂಡೆಡ್ ಪೂರೈಕೆದಾರರು ತೆರಿಗೆ ಬಲೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ಯಾಕೇಜಿನ ತೂಕವನ್ನು 26 ಕೆಜಿಗೆ ಹೆಚ್ಚಿಸಬೇಕಾಗುತ್ತದೆ. ಈ ರೀತಿಯ ತೆರಿಗೆ ವಂಚನೆಯು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ದೊಡ್ಡ ಪ್ಯಾಕೇಜ್‌ಗಳಿಗೆ ನೀಡಲಾದ ಈ ವಿನಾಯಿತಿಯ ಬಗ್ಗೆ ಕೇಂದ್ರ ಹಣಕಾಸು ಸಚಿವರ ಸರಣಿ ಟ್ವೀಟ್‌ಗಳಲ್ಲಿ ಉಲ್ಲೇಖವಿಲ್ಲ.

ಈ ಹೊಸ ತಿದ್ದುಪಡಿಗಳು ಸ್ಪಷ್ಟವಾಗಿ ಕಾರ್ಪೊರೇಟ್ ಹಿತಾಸಕ್ತಿ-ಪರ ಪಕ್ಷಪಾತವನ್ನು ತೋರಿಸುತ್ತವೆ. ತೆರಿಗೆಯನ್ನು ಅವರು ದೊಡ್ಡ ಪ್ರಮಾಣದಲ್ಲಿ ತಪ್ಪಿಸಬಹುದು. ಈ ವಿಷಯದಲ್ಲಿ ಹಣಕಾಸು ಸಚಿವರು ತಪ್ಪೊಪ್ಪಿಕೊಂಡಿದ್ದಾರೆ: “ಬ್ರ‍್ಯಾಂಡೆಡ್ ಸರಕುಗಳ ಮೇಲೆ ತೆರಿಗೆ ಪಾವತಿಸುತ್ತಿದ್ದ ಪೂರೈಕೆದಾರರು ಮತ್ತು ವ್ಯಾಪಾರಿ ಸಂಘಗಳು ತೆರಿಗೆಯನ್ನು ವಿರೋಧಿಸಿದವು. ದುರುಪಯೋಗವನ್ನು ತಡೆಯುವ ಸಲುವಾಗಿ ಪ್ಯಾಕೇಜ್ ಮಾಡಿದ ಎಲ್ಲಾ ಸರಕುಗಳ ಮೇಲೆ ಜಿಎಸ್‌ಟಿಯನ್ನು ಏಕರೂಪವಾಗಿ ವಿಧಿಸುವಂತೆ ಅವರು ಸರ್ಕಾರಕ್ಕೆ ಪತ್ರ ಬರೆದರು. ತೆರಿಗೆಯ ಈ ವ್ಯಾಪಕ ವಂಚನೆಯನ್ನು ರಾಜ್ಯಗಳೂ ಸಹ ಗಮನಿಸಿದ್ದವು.”

ಐಷಾರಾಮಿ ವಸ್ತುಗಳ ತೆರಿಗೆ ಕಡಿತ

ತೆರಿಗೆ ದರಗಳನ್ನು ಆರಂಭದಲ್ಲಿ ನಿರ್ಧರಿಸುವ ಸಮಯದಲ್ಲಿ, ಜಿಎಸ್‌ಟಿ ಕೌನ್ಸಿಲ್‌ನಲ್ಲಿ ನಡೆದ ವಿಸ್ತೃತ ಚರ್ಚೆಗಳು ಕೇಂದ್ರ ಮತ್ತು ರಾಜ್ಯಗಳ ಜಿಎಸ್‌ಟಿ-ಪೂರ್ವ ತೆರಿಗೆಗಳನ್ನು ವಿವರವಾಗಿ ಪರಿಶೀಲಿಸಿದ್ದವು ಮತ್ತು ಸರಕುಗಳ ಪ್ರತಿಯೊಂದರ ಮೇಲಿನ ಅಂದಿನ ಒಟ್ಟು ಹೊರೆಯನ್ನು ಪರಿಶೀಲಿಸಿದ್ದವು ಮತ್ತು ಹೊಸ ಜಿಎಸ್‌ಟಿ ದರಗಳು ಅಂದು ಕೇಂದ್ರ ಮತ್ತು ರಾಜ್ಯಗಳು ವಿಧಿಸುತ್ತಿದ್ದ ಒಟ್ಟು ಸಂಯೋಜಿತ ತೆರಿಗೆಗಳಿಗಿಂತ ಕಡಿಮೆ ಇರುವಂತೆ ಖಚಿತಪಡಿಸಿಕೊಳ್ಳಲು ಕಾಳಜಿ ವಹಿಸಲಾಗಿತ್ತು.

ಆಗ ಈ ಇಡೀ ಕಸರತ್ತಿನ ಅತಿ ದೊಡ್ಡ ಫಲಾನುಭವಿಗಳೆಂದರೆ ಗೃಹೋಪಯೋಗಿ ಬಾಳಿಕೆ ವಸ್ತುಗಳು. ಅವುಗಳ ಮೇಲೆ ಆಗ ಶೇ.30 ರಿಂದ ಶೇ.45ರ ವರೆಗಿನ ತೆರಿಗೆ ಇತ್ತು. ಅವುಗಳನ್ನು ಏಕಮಾತ್ರ ಶೇ.28ಕ್ಕೆ ಇಳಿಸಲಾಯಿತು. ಈ ದರವನ್ನು ಜಿಎಸ್‌ಟಿ ಅಡಿಯಲ್ಲಿ ಅತಿ ಹೆಚ್ಚಿನ ತೆರಿಗೆ ದರವೆಂದು ನಿರ್ಧರಿಸಲಾಯಿತು. ಜಿಎಸ್‌ಟಿಯ ಪ್ರಮುಖ ದರಗಳೆಂದರೆ 5, 12, 18 ಮತ್ತು 28. ಇದಲ್ಲದೆ ಶೂನ್ಯ ದರದ ಸರಕುಗಳು, ಚಿನ್ನಕ್ಕೆ ಶೇ.3 ಮತ್ತು ಪ್ರಶಸ್ತ ಲೋಹಗಳಿಗೆ ಶೇ.0.25 ತೆರಿಗೆಯನ್ನು ನಿಗದಿಪಡಿಸಲಾಗಿತ್ತು. ಒಂದು ವಿಸ್ತೃತವಾದ ಚರ್ಚಾ ಕಸರತ್ತಿನ ಮೂಲಕ ತೆರಿಗೆ ದರವು ಆದಾಯ- ತಟಸ್ಥವಾಗಿರುತ್ತದೆ (ಅಂದರೆ, ಹೊಸ ಜಿಎಸ್‌ಟಿ ದರಗಳಿಂದ ಬರುವ ಆದಾಯವು ಜಿಎಸ್‌ಟಿ-ಪೂರ್ವ ಪರಿಸ್ಥಿತಿಗೆ ಹೋಲಿಸಿದರೆ ಆದಾಯ ಸ್ವೀಕೃತಿಗಳಲ್ಲಿ ಕೊರತೆಯಾಗುವುದಿಲ್ಲ). ಎಂಬ ಭರವಸೆ ನೀಡಲಾಗಿತ್ತು.

ಜಿಎಸ್‌ಟಿಯ ಕೆಳಮುಖ ಪರಿಷ್ಕರಣೆ

ದುರದೃಷ್ಟವಶಾತ್, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ವಿಶೇಷವಾಗಿ ಶೇ.28ರ ಸ್ಲ್ಯಾಬ್ ಅಡಿಯಲ್ಲಿ ಬರುವ ಸರಕುಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಲು ಮುಂದಾಯಿತು. ಈ ಕಡಿತಗಳು ಕೇಂದ್ರ ಮತ್ತು ರಾಜ್ಯಗಳ ಆದಾಯದ ಮೇಲೆ ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ಅಂದಾಜು ಪ್ರಕ್ರಿಯೆ ನಡೆಸಿರಲಿಲ್ಲ. ಮೇಲಾಗಿ, ಚುನಾವಣೆಗಳು ಸಮೀಪದಲ್ಲಿದ್ದ ಸಮಯದಲ್ಲಿ ಯಾವ ರಾಜ್ಯದ ಹಣಕಾಸು ಮಂತ್ರಿಯೂ ಅದನ್ನು ಆಕ್ಷೇಪಿಸಲಾಗಲಿಲ್ಲ. ಬದಲಾಗಿ, ಅವರು ದರ ಇಳಿಕೆಯ ಸ್ಪರ್ದೆಯಲ್ಲಿ ತೊಡಗಿದರು. ಪರಿಣಾಮವಾಗಿ, ಶೇ.28ರ ತೆರಿಗೆಯನ್ನು ರದ್ದುಪಡಿಸಲಾಯಿತು. ಈ ಅಡ್ ಹಾಕ್ ನಿರ್ಧಾರದಿಂದಾಗಿ ಹೊಸ ದರಗಳು ಇನ್ನು ಮುಂದೆ ಆದಾಯ-ತಟಸ್ಥವಾಗಿ ಉಳಿಯದಾದವು.

ಶೇ.28ರ ತೆರಿಗೆಯನ್ನು ರದ್ದುಪಡಿಸಿದ ಕ್ರಮವು ಜಿಎಸ್ಟಿ ಆದಾಯದ ಇಳಿಕೆಗೆ ಮೂಲ ಕಾರಣವಾಗಿತ್ತು. ಈಗ ಪ್ರತಿಯೊಬ್ಬರಿಗೂ ಈ ತಪ್ಪಿನ ಅರಿವಾಗಿದೆ ಮತ್ತು ಮೇಲ್ಮುಖ ದರ ಪರಿಷ್ಕರಣೆ ಅನಿವಾರ್ಯ ಎಂಬುದು ಮನವರಿಕೆಯಾಗಿದೆ. ಶೇ.28ರ ತೆರಿಗೆ ದರವನ್ನು ಪೂರ್ವ ಸ್ಥಿತಿಗೆ ತರಬೇಕೆಂಬುದು ಸ್ಪಷ್ಟವಾಗಿದೆ. ನಾವು ಈಗಾಗಲೇ ಗಮನಿಸಿರುವಂತೆ, ಜಿಎಸ್‌ಟಿಯನ್ನು ರೂಪಿಸುವ ಸಮಯದಲ್ಲಿ ಗೃಹೋಪಯೋಗಿ ಬಾಳಿಕೆ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಲಾಗಿತ್ತು ಮತ್ತು ಚುನಾವಣಾ ಸಮಯದ ಉನ್ಮಾದದಲ್ಲಿ ಅವುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಇಳಿಸಲಾಗಿತ್ತು.

ಜಿಎಸ್‌ಟಿ ಸಂರಚನೆಯಲ್ಲಿ ಪುರೋಗಾಮಿತ್ವ

ಒಂದು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವ ಉದ್ದೇಶಕ್ಕಾಗಿ ತೆರಿಗೆ ದರಗಳನ್ನು ಸೂಕ್ತವಾಗಿ ಹೊಂದಿಸಿಕೊಳ್ಳಬೇಕಾಗುತ್ತದೆ. ಆದರೆ ಕಾರ್ಪೊರೇಟ್‌ಗಳು ಮತ್ತು ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಯಾವ ಸಲಹೆಯನ್ನೂ ಸ್ವೀಕರಿಸಲು ತಯಾರಿಲ್ಲ. ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಕ್ರಮವನ್ನು ಅವರು ವಿರೋಧಿಸುತ್ತಾರೆ. ಬದಲಿಗೆ, ತೆರಿಗೆಯ ಹೊರೆಯನ್ನು ಅವರು ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ವರ್ಗಾಯಿಸಲು ಬಯಸುತ್ತಾರೆ. ಪ್ರಸ್ತುತ ಬಹು-ದರಗಳ ಜಿಎಸ್‌ಟಿಯನ್ನು ಒಂದು ಇಲ್ಲವೇ ಕಡಿಮೆ ಸಂಖ್ಯೆಯ ದರಗಳಲ್ಲಿ ವಿಲೀನಗೊಳಿಸುವ ಕಾರ್ಪೊರೇಟ್ ಕೂಗಿಗೆ ಅವರ ಈ ನಿಲುಮೆಯು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.

ಏಕಮಾತ್ರ ದರದತ್ತ ಸಾಗಿದರೆ, ಪುರೋಗಾಮಿತ್ವದಲ್ಲಿ ಅಲ್ಪ ಸ್ವಲ್ಪ ಹೊರನೋಟದ ಹೋಲಿಕೆ ಹೊಂದಿರುವ ಜಿಎಸ್‌ಟಿಯು ಅದನ್ನೂ ಕಳೆದುಕೊಳ್ಳುತ್ತದೆ. ಹೇಳಿ ಕೇಳಿ ಪರೋಕ್ಷ ತೆರಿಗೆಗಳು (ಜಿಎಸ್ಟಿ) ತಿರೋಗಾಮಿಯಾಗಿರುತ್ತವೆ (ಅಂದರೆ, ತೆರಿಗೆ ದರಗಳು ಹೆಚ್ಚಿದಂತೆ ಕೆಳ ಹಂತದಲ್ಲಿರುವವರಿಗೆ ಹೆಚ್ಚು ತೆರಿಗೆಗಳು ಮತ್ತು ಮೇಲಣ ಹಂತಗಳಲ್ಲಿರುವವರಿಗೆ ಕಡಿಮೆ ತೆರಿಗೆಗಳು). ಗೃಹೋಪಯೋಗಿ ಬಾಳಿಕೆ ವಸ್ತುಗಳು ಮತ್ತು ನಗರವಾಸಿ ಗ್ರಾಹಕ ಉತ್ಪನ್ನಗಳ ಮೇಲಿನ ತೆರಿಗೆ ದರಗಳು ತೀವ್ರ ಕುಸಿತವನ್ನು ಕಂಡಿವೆ. ಒಂದು ವೇಳೆ ಗರಿಷ್ಠ ಶೇ.18ರ ಮಿತಿಯ ಬೇಡಿಕೆಯನ್ನು ಒಪ್ಪಿದರೆ ಈ ಉತ್ಪನ್ನಗಳನ್ನು ಬಳಸುವವರು ಮತ್ತಷ್ಟು ಲಾಭ ಪಡೆಯುತ್ತಾರೆ.

ದರ ಪರಿಷ್ಕರಣೆ – ಯಾರಿಗೆ ಲಾಭ, ಯಾರಿಗೆ ನಷ್ಟ

ಧಾನ್ಯಗಳು ಮತ್ತು ಮೊಸರಿನ ಮೇಲಿನ ತೆರಿಗೆಯನ್ನು ಶೇ.5 ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಹಲವು ವಸ್ತುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಸೋಲಾರ್ ವಾಟರ್ ಹೀಟರ್, ಚರ್ಮದ ಉತ್ಪನ್ನಗಳು, ₹1000 ಕ್ಕಿಂತ ಕಡಿಮೆ ಬಾಡಿಗೆಯ ಹೋಟೆಲ್ ರೂಂಗಳು, ₹500ಕ್ಕಿಂತ ಹೆಚ್ಚಿನ ಶುಲ್ಕದ ಆಸ್ಪತ್ರೆ ರೂಂಗಳು ಮತ್ತು ಗುತ್ತಿಗೆ ಸೇವೆಗಳ ಮೇಲೆ ಜಿಎಸ್‍ಟಿ ದರವನ್ನು ಶೇ.5 ರಿಂದ ಶೇ.12ಕ್ಕೆ ಏರಿಸಲಾಗಿದೆ. ಎಲ್‌ಇಡಿ ಬಲ್ಬ್ ಗಳು, ಶಾಯಿ, ಬ್ಲೇಡ್‌ಗಳು, ಪಂಪ್‌ಗಳು, ಸೈಕಲ್‌ಗಳು ಮತ್ತು ವಿವಿಧ ರೀತಿಯ ಯಂತ್ರಗಳು ಮತ್ತು ಇತರ ಅನೇಕ ಸರಕುಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.18ಕ್ಕೆ ಏರಿಸಲಾಗಿದೆ.

ವ್ಯಂಗ್ಯಚಿತ್ರ: ಪಿ.ಮಹಮ್ಮದ್

ಭೋಗ ವಸ್ತುಗಳ ತೆರಿಗೆಯ ಬಗ್ಗೆ ಹೇಳುವುದಾದರೆ, ಒಂದೇ ಒಂದು ಭೋಗ ವಸ್ತುವಿನ ತೆರಿಗೆಯನ್ನೂ ಶೇ.18ರಿಂದ ಶೇ.28ಕ್ಕೆ ಏರಿಸಲಿಲ್ಲ. ಆದ್ದರಿಂದ, ಉದ್ದೇಶ ಬಹಳ ಸ್ಪಷ್ಟವಾಗಿದೆ – ಭಾರತ ಸರ್ಕಾರವು ಶೇ.28ರ ಪದರವನ್ನು(slab) ತೆಗೆದುಹಾಕಲು ಬಯಸುತ್ತದೆ. ಅಂದರೆ, ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಕಡಿಮೆ ಮಾಡಲು ಬಯಸುತ್ತದೆ ಮತ್ತು ಜನಸಾಮಾನ್ಯರು ದಿನ ನಿತ್ಯವೂ ಬಳಸುವ ಅಗತ್ಯ ವಸ್ತುಗಳ ಮೇಲಿನ ತೆರಿಗೆಯ ಹೊರೆಯನ್ನು ಹೆಚ್ಚಿಸಲು ಬಯಸುತ್ತದೆ. ಇದಕ್ಕಿಂತಲೂ ಹೆಚ್ಚು ಪ್ರತಿಗಾಮಿ ನಿಲುಮೆ ಮತ್ತೊಂದಿರಲು ಸಾಧ್ಯವಿಲ್ಲ.

ಬೆಟ್ಟಕ್ಕೆ ಮಣ್ಣು ಹೊರುವ ಕೆಲಸ

ದರ ಬಾಹುಳ್ಯ ಸಮಸ್ಯೆಯನ್ನು ಉತ್ಪ್ರೇಕ್ಷಿಸಲಾಗಿದೆ. ಜಿಎಸ್‌ಟಿ ಬರುವ ಮೊದಲು ಇದ್ದ ದರಗಳ ಪಟ್ಟಿಯನ್ನು ನೋಡಿದಾಗ ಮಾತ್ರ ತೆರಿಗೆ ವ್ಯವಸ್ಥೆಯನ್ನು ಎಷ್ಟರ ಮಟ್ಟಿಗೆ ಸರಳೀಕರಿಸಲಾಗಿದೆ ಎಂಬುದು ಗೊತ್ತಾಗುತ್ತದೆ. ದೇಶದಲ್ಲಿರುವ ಸಾಮುದಾಯಿಕ ಬಡತನ ಮತ್ತು ಆದಾಯ ಅಸಮಾನತೆಗಳು ಗರಿಷ್ಠ ಮಟ್ಟದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ರೊಟ್ಟಿ/ಮುದ್ದೆಯ ಹಿಟ್ಟು ಮತ್ತು ಒಂದು ಐಷಾರಾಮಿ ಕಾರು/ವಾಹನ ಇವುಗಳಿಗೆ ಸಮರೂಪ ತೆರಿಗೆ ದರ ಸೂಚಿಸುವುದು ಶುದ್ಧ ಅವಿವೇಕ ಆಗುತ್ತದೆ. ಕನಿಷ್ಠ ಪಕ್ಷ, ಸಮಾನತೆಯ ಆದರ್ಶವನ್ನು ಪರಿಗಣಿಸಬೇಕಾಗುತ್ತದೆ. ವ್ಯವಹಾರ ಸುಗಮತೆ ಎಷ್ಟು ಮುಖ್ಯವೋ ಸಮಾನತೆಯ ಆದರ್ಶವೂ ಅಷ್ಟೇ ಮುಖ್ಯ. ಸರಳೀಕರಣವು ಅತಿಯಾದಾಗ, ಬೆಟ್ಟಕ್ಕೆ ಮಣ್ಣು ಹೊರುವ ಕೆಲಸವಾಗುತ್ತದೆ.

ತೆರಿಗೆ ಪರಿಷ್ಕರಣೆಯ ಬಗ್ಗೆ ರಾಜ್ಯಗಳ ಭಿನ್ನ ಮತ

ತೆರಿಗೆ ಹೆಚ್ಚಳಕ್ಕೆ ಕೇಂದ್ರ ಹಣಕಾಸು ಸಚಿವರು ನೀಡಿದ ಮತ್ತೊಂದು ಸಮರ್ಥನೆಯೆಂದರೆ, “ಜಿಎಸ್‌ಟಿ ಜಾರಿಗೆ ಬರುವ ಮೊದಲು ರಾಜ್ಯಗಳು ಆಹಾರ ಧಾನ್ಯಗಳಿಂದ ಗಮನಾರ್ಹ ಆದಾಯವನ್ನು ಸಂಗ್ರಹಿಸುತ್ತಿದ್ದವು. ಪಂಜಾಬ್ ರಾಜ್ಯದಲ್ಲೇ 2,000 ಕೋಟಿ ರೂ.ಗಳಿಗೂ ಹೆಚ್ಚು ಆಹಾರ ಧಾನ್ಯಗಳ ಖರೀದಿ ತೆರಿಗೆ ಸಂಗ್ರಹಿಸಲಾಗಿತ್ತು. ಉತ್ತರ ಪ್ರದೇಶವು 700 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದು ನಿಜ. ರಫ್ತು ಮಾಡುವ ರಾಜ್ಯವಾಗಿದ್ದ ಪಂಜಾಬಿನಲ್ಲಿ ಧಾನ್ಯಗಳ ಮೇಲಿನ ತೆರಿಗೆಯು ಅಧಿಕವಾಗಿತ್ತು ಮತ್ತು ಕೆಲವು ರಾಜ್ಯಗಳು, ವಿಶೇಷವಾಗಿ, ಬ್ರ‍್ಯಾಂಡೆಡ್ ಆಹಾರ ಧಾನ್ಯಗಳು ಮತ್ತು ಧಾನ್ಯ ಉತ್ಪನ್ನಗಳ ಮೇಲೆ ಕಡಿಮೆ ತೆರಿಗೆ ಇತ್ತು. ಆದರೆ ಇದು ಭವಿಷ್ಯದಲ್ಲಿ ಎಲ್ಲ ರಾಜ್ಯಗಳಿಗೂ ಸಂಗತವಾಗುವುದಿಲ್ಲ. ಹಾಗೆ ನೋಡಿದರೆ, ಹಿಂದೆ ದೇಶದಲ್ಲಿ ಧಾನ್ಯಗಳಿಗೆ ತೆರಿಗೆ ವಿನಾಯಿತಿ ಇತ್ತು.

ಜೊತೆಗೆ, ಜಿಎಸ್ಟಿ ದರ ಪರಿಷ್ಕರಣೆಯನ್ನು ಎಲ್ಲಾ ರಾಜ್ಯಗಳೂ ಒಪ್ಪಿಕೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. “ಇದು ಜಿಎಸ್‌ಟಿ ಮಂಡಳಿಯ ಸರ್ವಾನುಮತದ ನಿರ್ಧಾರವಾಗಿತ್ತು. ಜೂನ್ 28, 2022 ರಂದು ಚಂಡೀಗಢದಲ್ಲಿ ನಡೆದ 47ನೇ ಸಭೆಯಲ್ಲಿ ತೆರಿಗೆ ದರ ಸುಧಾರಣೆ ಕುರಿತ ಸಚಿವರ ಸಮಿತಿಯು(ಜಿಒಎಂ) ಈ ವಿಷಯವನ್ನು ಮಂಡಿಸಿದಾಗ ಎಲ್ಲಾ ರಾಜ್ಯಗಳೂ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಾಜರಿದ್ದವು. ಈ ನಿರ್ಧಾರಕ್ಕೆ ಬಿಜೆಪಿಯೇತರ ರಾಜ್ಯಗಳೂ (ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ತಮಿಳು ನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳ) ಸೇರಿದಂತೆ ಎಲ್ಲಾ ರಾಜ್ಯಗಳೂ ಸಹಮತ ವ್ಯಕ್ತಪಡಿಸಿವೆ. ಜಿಎಸ್‌ಟಿ ಮಂಡಳಿಯ ಈ ನಿರ್ಧಾರವು ಮತ್ತೊಮ್ಮೆ ಒಮ್ಮತದಿಂದ ಕೂಡಿತ್ತು” ಎಂದು ಹೇಳಿದ್ದಾರೆ.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆಯು ನಿಜವಲ್ಲ. ಅಗತ್ಯ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಬಗ್ಗೆ ಕೇರಳದ ಹಣಕಾಸು ಸಚಿವರು ತಮ್ಮ ಅಸಮ್ಮತಿಯನ್ನು ಪತ್ರ ಮುಖೇನ ಸಚಿವರ ಸಮಿತಿಗೆ ತಿಳಿಸಿದ್ದರು. ಕೆಲವು ರಾಜ್ಯಗಳು ಪರಿಷತ್ತಿನ ಸಭೆಯಲ್ಲೇ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದವು. ಆದರೆ ಅಭಿಮತಗಳ ಎಣಿಕೆ ನಡೆಯಲಿಲ್ಲ. ಇದು ಪರಿಷತ್ತಿನ ರೂಢಿಯೂ ಹೌದು. ಲಾಟರಿ ತೆರಿಗೆ ದರ ಪರಿಷ್ಕರಣೆಯ ಸಮಯದಲ್ಲಿ ಮಾತ್ರ ಕೇರಳವು ಮತ ವಿಭಜನೆಯನ್ನು ಒತ್ತಾಯಿಸಿತ್ತು. ಆದ್ದರಿಂದ, ಎಲ್ಲಾ ರಾಜ್ಯಗಳೂ ಈ ನಿರ್ಧಾರವನ್ನು ಒಪ್ಪಿಕೊಂಡಿವೆ ಎಂದು ಹೇಳುವುದು ತರವಲ್ಲ.

ಹಣದುಬ್ಬರದ ಬೆಂಕಿಗೆ ತುಪ್ಪ ಸುರಿದ ತೆರಿಗೆ ಹೆಚ್ಚಳ

ಕೊನೆಯದಾಗಿ, ದೇಶವು ಒಂದು ಭೀಕರ ಹಣದುಬ್ಬರದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಜಿಎಸ್‌ಟಿ ದರ ಏರಿಸುವ ನಿರ್ಧಾರವು ನೋವಿನ ಸಂಗತಿಯಾಗಿದೆ. ಚಿಲ್ಲರೆ ಹಣದುಬ್ಬರವು ಶೇ.7ಕ್ಕಿಂತಲೂ ಅಧಿಕವಾಗಿದೆ. ಸಗಟು ಬೆಲೆ ಸೂಚ್ಯಂಕವು ಶೇ.15ರಷ್ಟು ಏರಿಕೆಯನ್ನು ದಾಖಲಿಸಿದೆ. ಸಗಟು ಬೆಲೆ ಸೂಚ್ಯಂಕದಲ್ಲಿ ಶೇ.24ರಷ್ಟು ಪ್ರಾಮುಖ್ಯತೆ(weightage) ಹೊಂದಿರುವ ಆಹಾರ ಪದಾರ್ಥಗಳು ಜೂನ್ ತಿಂಗಳಲ್ಲಿ ಶೇ.16.9ರಷ್ಟು ಏರಿಕೆಯಾಗಿವೆ. ಹಾಗಾಗಿ, ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ದೇಶದ ಹಣದುಬ್ಬರದ ಪ್ರಮುಖ ಕಾರಣ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಪರಿಸ್ಥಿತಿಯಲ್ಲಿ ಧಾನ್ಯಗಳ ಮೇಲೆ ಶೇ.5ರ ತೆರಿಗೆ ಹೇರಿರುವ ಕ್ರಮವು ಹಣದುಬ್ಬರದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಆದ್ದರಿಂದ ಈ ತೆರಿಗೆ ದರ ಏರಿಕೆಯು ಒಂದು ಪ್ರತಿಗಾಮಿ ಕ್ರಮವಾಗುತ್ತದೆ ಮತ್ತು ತೆರಿಗೆ ಸೋರಿಕೆಗೂ ಕಾರಣವಾಗುತ್ತದೆ.

ನನ್ನ ರಬ್ಬರ್, ಪೆನ್ಸಿಲ್ ಮತ್ತು ಮ್ಯಾಗಿ ತುಟ್ಟಿಯಾಗಿವೆ, ಮೋದೀ ಜೀ,
ಎಂಬ ಒಂದು ಹೆಣ್ಣು ಮಗುವಿನ ಪತ್ರಕ್ಕೆ  ಪ್ರಧಾನಿಗಳ ಉತ್ತರ ಏನಿರಬಹುದು?

“ಮನಸ್ಸಿಟ್ಟು ಓದು, ‘ಮನ್‍ ಕೀಬಾತ್’ ಕೇಳು
– ನಿನ್ನ ಡಿ.ಪಿ. ಮೇಲೆ ತ್ರಿವರ್ಣವನ್ನು ಖಂಡಿತಾ ಹಾಕ್ಕೋ…”!
ವ್ಯಂಗ್ಯಚಿತ್ರ: ಇರ್ಫಾನ್‍, ನ್ಯೂಸ್‍ ಕ್ಲಿಕ್

Donate Janashakthi Media

Leave a Reply

Your email address will not be published. Required fields are marked *